ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಲವಾರು ಕಾರಣಕ್ಕೆ ದೇಶವಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರಾಗಿದೆ. ಭಟ್ಕಳದ ಈಗಿನ ಸ್ಥಿತಿಗೂ ಅದು ಉದಯವಾದ ಆರಂಭದ ದಿನಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಉತ್ತರ ಕನ್ನಡ ಜಿಲ್ಲೆ ಮತ್ತು ಕನ್ನಡ ಭಾಷೆಗೆ ಅತ್ಯುಷ್ಕೃಷ್ಟ ಕೊಡುಗೆ ಇದೇ ಭಟ್ಕಳ ನೆಲದಿಂದ ಬಂದಿದೆ ಎಂದರೆ ಆಶ್ಚರ್ಯವಾಗುತ್ತದೆ. ಅದಕ್ಕೆ ಸಾಕ್ಷಿಗಳು ಈಗಲೂ ಇವೆ. ಭಟ್ಕಳಕ್ಕೆ ತನ್ನದೇ ಹೆಸರು ಕೊಟ್ಟ ಮತ್ತು ಕನ್ನಡ ವ್ಯಾಕರಣಕ್ಕೆ ವಿಶೇಷ ಕೊಡುಗೆ ಕೊಟ್ಟ ಇತಿಹಾಸ ತಿಳಿದರೆ ಮೈ ರೋಮಾಂಚನವಾಗುತ್ತದೆ.

ನಾಲ್ಕು ಶತಮಾನದ ಹಿಂದಿನ ಮಾತು. ಕ್ರಿ.ಶ. 1604ರ ತನಕ ಕನ್ನಡವನ್ನು ಒಂದು ಪಾಮರ ಭಾಷೆ ಎಂದು ಭಾವಿಸಲಾಗುತ್ತಿತ್ತು. ‘ಸರ್ವ ವಿಷಯೋಚಿತ’ಎಂದುಕೊಂಡ ಸಂಸ್ಕೃತಕ್ಕೆ ರಾಜಮರ್ಯಾದೆ ಇದ್ದ ಕಾಲ ಅದು. ಅಂದಿನ ವಿದ್ವಾಂಸರ ಆಡುನುಡಿ ಕೂಡ ಸಂಸ್ಕೃತವೇ ಆಗಿತ್ತು.

ಕನ್ನಡದಲ್ಲಿ ಸಾಹಿತ್ಯ ಇದೆ, ಶಾಸ್ತ್ರ ಇದೆ, ಪ್ರತಿಭೆ ಇದೆ ಎಂದು ವಿದ್ವತ್ ಜನರಲ್ಲಿ ವಾದಕ್ಕೆ ಇಳಿದು ಅದಕ್ಕೆ ಒಂದು ಸ್ಥಾನ ಕಲ್ಪಿಸಿಕೊಟ್ಟ ಕೀರ್ತಿ ಭಟ್ಕಳದ ಜೈನ ಮುನಿಗೆ ಸಲ್ಲುತ್ತದೆ. ಮುನಿ ಪರಂಪರೆಯಲ್ಲಿ ಹನ್ನೊಂದನೆಯವರಾಗಿ ದೀಕ್ಷೆ ಸ್ವೀಕರಿಸಿದ ‘ಶ್ರೀಮದ್ ಭಟ್ಟಾಕಳಂಕರೇ’ ಆ ಯತಿ ಶ್ರೇಷ್ಠರು.

ತರ್ಕ, ನ್ಯಾಯ, ಜ್ಯೋತಿಷ್ಯ, ಗಣಿತ, ವೈದ್ಯ, ಪುರಾಣ, ವೇದ, ಸ್ಮೃತಿ, ಶಿಲ್ಪ, ಭರತ ಹಾಗೂ ಶಬ್ದ ಈ ಹನ್ನೊಂದು ಶಾಸ್ತ್ರಗಳಲ್ಲಿ ಭಟ್ಟಾಕಳಂಕರು ಪ್ರಾವಿಣ್ಯತೆ ಪಡೆದಿದ್ದರು. ಸಂಸ್ಕೃತ ಹಾಗೂ ಕನ್ನಡ ಎರಡರಲ್ಲೂ ಸಮಾನ ಪ್ರಭುತ್ವ ಸಾಧಿಸಿದ್ದರು.

ಇವರು  ‘ಕರ್ನಾಟಕ ಶಬ್ದಾನುಶಾಸನಂ’ ಎಂಬ ಗ್ರಂಥದಲ್ಲಿ ‘ಚಿಂತಾಮಣಿ’  ಎಂಬ ಭಾಗ ರಚಿಸಿ ಕನ್ನಡ ವ್ಯಾಕರಣ ಪ್ರತಿಪಾದಿಸಿದರು. ನಾಗವರ್ಮನ ‘ಶಬ್ದ ಸ್ಮೃತಿ’ ಹಾಗೂ ‘ಭಾಷಾ ಭೂಷಣ’ ದಿಂದ ಅಥವಾ ಕೇಶಿರಾಜನ ‘ಶಬ್ದಮಣಿ ದರ್ಪಣ’ ದಿಂದ ಸಾಧಿಸಲಾಗದ ಸ್ಥಾನ ‘ಶಬ್ದಾನುಶಾಸನ’ ದಿಂದ ಕನ್ನಡಕ್ಕೆ ಲಭಿಸಿತು. ಅದರಿಂದ ಕನ್ನಡ ರೂಪವೇ ಬದಲಾಯಿತು. ಎಲ್ಲರೂ ಕನ್ನಡ ಅಭ್ಯಸಿಸುವಂತಾಯಿತು.

ಭಟ್ಕಳಕ್ಕೆ ಹೆಸರು ಹೇಗೆ ಬಂತು?

ಭಟ್ಟಾಕಳಂಕರ ಅವರು ಹುಟ್ಟಿದ್ದು ಇಂದಿನ ಭಟ್ಕಳ ತಾಲೂಕಿನ ‘ಮಾರುಕೇರಿ’ ಯಲ್ಲಿ. ಅದು ಅಂದು ಸಂಗೀತಪುರ ಅಥವಾ ಹಾಡುವಳ್ಳಿಯ ರಾಜಧಾನಿಯ ಭಾಗವಾಗಿತ್ತು. ಅಲ್ಲಿ ವಿಜಯನಗರದ ಸಾಳ್ವ ವಂಶಜರ ಆಳ್ವಿಕೆ ಇತ್ತು. ಭಟ್ಟಾಕಳಂಕರ ಪ್ರಾರಂಭಿಕ ಶಿಕ್ಷಣ ಹಾಡುವಳ್ಳಿಯ ಜೈನ ಮಠದಲ್ಲಿ ನಡೆಯಿತು.

ಶ್ವೇತಪುರದ (ಬಿಳಗಿ) ಇಮ್ಮಡಿ ಘಂಟೇಂದ್ರ ಪಟ್ಟವೇರಿದ ಮರುವರ್ಷ ಅಂದರೆ, ಕ್ರಿ.ಶ. 1579ರಲ್ಲಿ ಆತನ ಮೂಲ ಊರಾದ ಮಾರುಕೇರಿಯಲ್ಲಿ ದೊಡ್ಡದಾದ ಭೂಕುಸಿತ ಉಂಟಾಗಿ ಒಂದು ಈಶ್ವರ ಗುಡಿ ಹಾಗೂ ಅದರಲ್ಲಿಯ ಅರ್ಚಕರು, ಭಕ್ತಾದಿಗಳು ರಾತ್ರಿ ಪೂಜೆ ನಡೆಯುತ್ತಿರುವಾಗಲೇ ಮಣ್ಣಿನಲ್ಲಿ ಹೂತು ಹೋದರು. ಸಮೀಪದ  ಮನೆಗಳು, ಊರುಕೇರಿ ಎಲ್ಲವೂ ಕುಸಿದು ಬಿದ್ದವು.

ಇದರಿಂದ ವಿಚಲಿತನಾದ ಇಮ್ಮಡಿ ಘಂಟೇಂದ್ರನು, ರಾಜಗುರುಗಳಾದ ಶ್ರೀಮದ್ ಭಟ್ಟಾಕಳಂಕರ ನಿರ್ದೇಶನದಂತೆ ಆ ಭಾಗದ ಜನರ ಪುನರ್ವಸತಿಗಾಗಿ ಸಮೀಪದಲ್ಲಿ ಒಂದು ಊರನ್ನು ಕಟ್ಟಿಸಿದನು. ಅದಕ್ಕೆ ಶ್ರೀಮದ್ ಭಟ್ಟಾಕಳಂಕರ ಹೆಸರನ್ನು ಇಟ್ಟನು. ಅದೇ ಇಂದಿನ ಭಟ್ಟಕಳವಾಗಿದೆ. (ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕು).

ಈ ಸಂಗತಿ ಸಿದ್ದಾಪುರ ತಾಲೂಕಿನ ಬಿಳಗಿಯ ರತ್ನತ್ರಯ ಬಸದಿಯ ಶಿಲಾಲೇಖನದಲ್ಲಿ ಉಲ್ಲೇಖಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ 12 ಕಿ.ಮೀ. ದೂರದಲ್ಲಿ ಬಿಳಗಿ ಗ್ರಾಮವಿದೆ. ಅಸಲಿಗೆ ಭಟ್ಟಕಳದ ಮೂಲ ಹೆಸರು ‘ಚೆನ್ನ ಪಟ್ಟಣ’ ಎಂದಿತ್ತು.

ಕ್ರಿ.ಶ. 1608ರಲ್ಲಿ ಆಕಳಂಕ ಮುನಿಗಳು ಕಾಲವಶರಾದ ನಂತರ ಈ ಪೀಠಕ್ಕೆ ಭಟ್ಟಾಕಳಂಕರೇ ಉತ್ತರಾಧಿಕಾರಿಯಾದರು. ಮುಂದೆ ನಲ್ವತ್ತೆಂಟು ವರ್ಷ ಬಾಳಿ ಕ್ರಿ.ಶ. 1655ರ ಅಕ್ಟೋಬರ್ 28 ರಂದು ಸ್ವಾಧಿಯಲ್ಲಿ (ಶಿರಸಿ) ಸ್ವರ್ಗಸ್ಥರಾದರು. ಅವರ ಸಮಾಧಿ ಇಂದಿಗೂ ಶಿರಸಿಯ ಸ್ವಾಧಿಯ ಕಲ್ಲಗುಡಿ ಬೇಣದಲ್ಲಿ ಕಾಣಬಹುದು ಎಂದು ‘ಬಿಳಗಿ ಸಂಸ್ಥಾನ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಆಧಾರ :
* ‘ಶ್ವೇತಪುರ- ಶ್ರೀ ಪದ್ಮಾಕರ ಮಡಗಾಂವಕರ, ಬಿಳಗಿ
* ‘ಬಿಳಗಿ ಸಂಸ್ಥಾನ’ – ಶ್ರೀ ಪದ್ಮಾಕರ ಮಡಗಾಂವಕರ, ಬಿಳಗಿ
* ರತ್ನತ್ರಯ ಬಸದಿಯಲ್ಲಿಯ ಶ್ರೀಮದ್ ಭಟ್ಟಾಕಳಂಕ ಶಿಲಾಶಾಸನ ಕ್ರಿ.ಶ. 1592
* ಭಟ್ಟಾಕಳಂಕರು ಬರೆದಿರುವ ಶಾಸನದ ಕುರಿತು ಪಂಜೆ ಮಂಗೇಶರಾಯ ಬರೆದಿರುವ ಕೈಬರಹದ ಲೇಖನ (1922) ಹಾಗೂ ಶಾಸನದ ಕುರಿತಾಗಿ ತಮ್ಮ ಕೃತಿಯಲ್ಲಿ ಬರೆದಿರುವ ಲೇಖನ.

ಲೇಖನ, ಚಿತ್ರಗಳು, ವಿಡಿಯೋ :
ದರ್ಶನ ಹರಿಕಾಂತ, ಶಿಕ್ಷಕರು, ಬಿಳಗಿ.