ಕಾರವಾರ: ಗೋವಾದಲ್ಲಿ ಲಾಕ್ ಡೌನ್ ಬಹುತೇಕ ತೆರವುಗೊಂಡಿದ್ದು ಕದಂಬ ಬಸ್ ಗಳು ಸೋಮವಾರದಿಂದ ಕರ್ನಾಟಕಕ್ಕೆ ಬರಲಿವೆ.

ಕರ್ನಾಟಕದ ಕಾರವಾರ ಮತ್ತು ಗೋಕರ್ಣಕ್ಕೆ ಬಸ್ ಗಳು ಸಂಚಾರ ಆರಂಭಿಸಲಿವೆ. ಜತೆಯಲ್ಲಿಯೇ ಮಹಾರಾಷ್ಟ್ರಕ್ಕೂ ಬಸ್ ಗಳು ಸಂಚರಿಸುವ ಸಾಧ್ಯತೆ ಇದೆ ಎಂದು ಕದಂಬ ಸಾರಿಗೆ ಸಂಸ್ಥೆ ಕಾರ್ಯದರ್ಶಿ ಸಂಜಯ ಘಾಟೆ ತಿಳಿಸಿದ್ದಾರೆ ಎಂದು ಗೋವಾದ ದಿ ಗೋವಾ ಪೋಸ್ಟ್ ಟ್ವಿಟ್ ಮಾಡಿದೆ.

ಲಾಕ್ ಡೌನ್ ತೆರವು ಬಳಿಕ ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳು ಗೋವಾಗೆ ಹೋಗಿ ಬರುತ್ತಿದ್ದರೂ, ಗೋವಾ ಕಂದಂಬ ಸಂಸ್ಥೆ ಹೊರ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಿರಲಿಲ್ಲ. ಈಗ ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಬಸ್ ಸಂಚಾರ ಆರಂಭವಾಗುವ ಬಗ್ಗೆ ಗೋವಾ ಮೂಲಗಳು ಖಚಿತಪಡಿಸಿದೆ.

ಸದ್ಯ ಬಸ್ ಗಳು ಯಾವ ವೇಳೆಗೆ ಹೊರಡಲಿವೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಟ್ವಿಟ್ ನಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯಿಂದ ಗೋವಾಗೆ ಹೋಗಿ ಬರುವವರಿಗೆ ತುಂಬಾ ಅನುಕೂಲ ಆಗಲಿದೆ.

ಇನ್ನೊಂದೆಡೆ ಗೋವಾಗೆ ಹೋಗಿ ಬರುವವರಿಗೆ ಜಿಲ್ಲೆಯಲ್ಲಿ ಯಾವುದೇ ಕ್ವಾರಂಟೈನ್ ಇರುವುದಿಲ್ಲ. ಹಾಗಾಗಿ ಜನರು ಮುಕ್ತವಾಗಿ ಬಸ್ ಗಳಲ್ಲಿ ಸಂಚರಿಸಬಹುದು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಗೋವಾಗೆ ಕಾರ್ಮಿಕರ ವಲಸೆಯೂ ಹೆಚ್ಚಾಗಿದ್ದು, ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ.