ಆಂಧ್ರಪ್ರದೇಶ: ಭೋಗಿ ಹಬ್ಬ (ಸಂಕ್ರಾಂತಿ) ನಿಮಿತ್ಯ ಮನೆಗೆ ಕರೆಯಿಸಿದ ಹೊಸ ‌‌ಅಳಿಯನಿಗಾಗಿ ಅತ್ತೆ-ಮಾವ ಐವತ್ತಲ್ಲಾ, ನೂರಲ್ಲಾ ಬರೋಬ್ಬರಿ 379 ಬಗೆಯ ರುಚಿರುಚಿಯಾದ ತಿಂಡಿ ತಿನಿಸುಗಳನ್ನು ಮಾಡಿಟ್ರು.

ಹೌದು, ಏಲೂರು ನಗರದ ಡೊಂಗಲ ಮಂಟಪದ ಭೀಮರಾವ್ ಮತ್ತು ಚಂದ್ರಲೀಲಾ ದಂಪತಿ ತಮ್ಮ ಮಗಳನ್ನು ಅನಕಾಪಲ್ಲಿಯ ಬುದ್ಧ ಮುರಳಿಧರ್​​​ಗೆ ಕೊಟ್ಟು, 2022ರ ಏಪ್ರಿಲ್‌ನಲ್ಲಿ ಮದುವೆ ಮಾಡಿದ್ದರು. ವಿವಾಹದ ನಂತರದ ಇದೇ ಮೊದಲ ಸಂಕ್ರಾಂತಿ ಆಗಿದ್ದರಿಂದ ಮಗಳು ಮತ್ತು ಅಳಿಯನನ್ನು ಹಬ್ಬಕ್ಕೆ ಕರೆಸಿದ್ರು.

ಆಂಧ್ರದ ಗೋದಾವರಿ ಜಿಲ್ಲೆ ಅಂದ್ರೆ ಸುಮ್ನೇನಾ ಅದು ಸಂಸ್ಕೃತಿ, ಸಂಪ್ರದಾಯಗಳ ತಾಯ್ನಾಡು, ಹೀಗಾಗಿ ಅಲ್ಲಿ ವಿಶೇಷತೆ ಇದ್ದೇ ಇರುತ್ತೆ. ಸಂಕ್ರಮಣ ಸಮಯವೆಂದ್ರೆ, ಅದು ತುಸು ಹೆಚ್ಚೆ ಅನ್ನುವಂತಿರುತ್ತದೆ.

ಹಾಗಂತಲೇ, ಸಂಕ್ರಾಂತಿ ಹಬ್ಬಕ್ಕೆ ಬಂದ ಹೊಸ ಅಳಿಮಯ್ಯನಿಗೆ 379 ಬಗೆಯ ತಿನಿಸುಗಳೊಂದಿಗೆ ಸಮೃದ್ಧ ಭೋಜನ ಉಣಬಡಿಸಿದ್ದಾರೆ ಭೀಮರಾವ್ ಮತ್ತು ಚಂದ್ರಲೀಲಾ ದಂಪತಿ. ಇದೆಲ್ಲಾ ನಡೆದಿದ್ದು ಮೊನ್ನೆ ಭಾನುವಾರ ಸಂಕ್ರಾಂತಿ ಹಬ್ಬದಂದು. ಇತ್ತೀಚಿನ ದಿನಗಳಲ್ಲಿ ನೂರಾರು ವಿಧದ ತಿನಿಸುಗಳನ್ನು ಅಳಿಯನಿಗೆ ತಿನಿಸಿರುವುದು ಹೆಚ್ಚಾಗುತ್ತಿದೆ.

ತಿನಿಸು ಕಂಡು ಬೆರಗಾದ ಅಳಿಯ

ವಿಶಾಲವಾದ ಡೈನಿಂಗ್ ಟೇಬಲ್ ಹಾಗೂ ಸೋಪಾ ಜಾಗವೇ ಇಲ್ಲದಂತೆ ಬಗೆಬಗೆಯ ಭಕ್ಷ್ಯಗಳಿಂದ ತುಂಬಿ ತುಳುಕುತ್ತಿದ್ದವು. ಹೊಸದಾಗಿ ಬಂದ ಅಳಿಯ ಇಲ್ಲಿನ ರೀತಿ ನೀತಿಗಳನ್ನು ನೋಡಿ ಬೆಚ್ಚಿಬಿದ್ದ. ಅಷ್ಟಕ್ಕೂ ಯಾರಪ್ಪಾ ಆ ಅದೃಷ್ಟಶಾಲಿ ಅಳಿಯ ಅಂದ್ರೆ, ಆತನೇ ವಿಶಾಖಪಟ್ಟಣ ಮೂಲದ ಆರ್ಕಿಟೆಕ್ಟ್.

ಅತ್ತೆ ಬಡಿಸಿದ ಅಷ್ಟೂ ತಿನಿಸುಗಳನ್ನು ಬಹಳ ಪ್ರೀತಿಯಿಂದ ತಿನ್ನುವುದು ಕಷ್ಟವಾದರೂ, ಅಳಿಯ ಎಲ್ಲ ಖಾದ್ಯಗಳನ್ನು ಇಷ್ಟಪಟ್ಟು ಸ್ವಲ್ಪ ಸ್ವಲ್ಪ ಸವಿದರು. ಇತ್ತೀಚೆಗೆ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರದ ಉದ್ಯಮಿ ತಟವರ್ತಿ ಬದ್ರಿ ಮತ್ತು ಸಂಧ್ಯಾ ತಮ್ಮ ಅಳಿಯನಿಗೆ 173 ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಿದ್ದರು.