ಕ್ರಿಕೆಟ್ ಮೈದಾನಲ್ಲಿ ಬೌಂಡರಿ ದಾಟಿ ಬಂದ ಬಾಲ್ ಅನ್ನು ಟಾಲಿವುಡ್ ಹೀರೊ ಮಹೇಶ ಬಾಬು ಕ್ಯಾಚ್ ಹಿಡಿಬೇಕು ಎನ್ನುವಾಗ ಸುಂದರ ಯುವತಿಯೊಬ್ಬಳು ಕ್ಯಾಚ್ ಹಿಡಿದೂ ಡಾನ್ಸ್ ಮಾಡುತ್ತಾಳೆ. ತಕ್ಷಣ ಮಹೇಶ ಬಾಬು ಆಕೆಯ ಬಳಿ ಬಂದು ಚಪ್ಪಾಳೆ ತಟ್ಟಿ ನಮ್ಮ ಚಿತ್ರದಲ್ಲಿ ಹಿರೋಯಿನ್ ಆಗುತ್ತೀರಾ ಎಂದು ಕೇಳುವಷ್ಟರಲ್ಲಿ ಪುಟ್ಟ ಮಗುವೊಂದು ಮಮ್ಮಿ ಎಂದು ಓಡಿ ಬರುತ್ತದೆ. ಆಗ ಇಡೀ ಕ್ರಿಕೆಟ್ ಮೈದಾನವೇ ಮಮ್ಮಿ…! ಎಂದು ಉದ್ಘರಿಸುತ್ತದೆ. ಹಳದಿ ಮತ್ತು ಚಂದನದ ಗುಣಗಳ… ಸಂತೂರ್… ತ್ವಚೆ ಇನ್ನಷ್ಟು ಅರಳಿದೆ…. ಎಂದು ಹಾಡು ಬರುತ್ತದೆ. ಆ ಸುಂದರಿಯನ್ನು ಬಾಲಕಿ ಪ್ರಿಯಾ ಮೋಹನ್ ಎಂದು ಪರಿಚಯಿಸುತ್ತಾಳೆ.

ಅದೇ ಸುಂದರ ಸಂತೂರ್ ಮಮ್ಮಿ ಈಗ ಹಿರೋಯಿನ್ ಆಗಿ ಬಿಟ್ಟಿದ್ದಾರೆ. ಶೂಟಿಂಗ್ ಹಂತದಲ್ಲಿಯೇ ಭಾರೀ ಕುತೂಹಲ ಸೃಷ್ಟಿಸಿರುವ ಸಿನಿಮಾವೊಂದಕ್ಕೆ ಅವರು ನಟಿಯಾಗಿ ಆ್ಯಕ್ಟ್ ಮಾಡಿದ್ದು ಕ್ಯೂಟ್ ಆಗಿ ಗಮನಸೆಳೆಯುತ್ತಿದ್ದಾರೆ. ಆ ಚಿತ್ರದ ಪೋಸ್ಟರ್ ಗಳು ಸಹ ಈಗಾಗಲೇ ಬಿಡುಗಡೆಯಾಗಿದ್ದು, ಸಾಕಷ್ಟು ಕ್ರೇಜ್ ಸೃಷ್ಟಿಸಿದೆ.

ಕನ್ನಡದ ಯಶಸ್ವಿ ನಿರ್ದೇಶಕರಲ್ಲಿಒಬ್ಬರಾದ ಸಹನಾ ಮೂರ್ತಿ ಅವರು ಸಂತೂರ್ ಮಮ್ಮಿಯನ್ನು ಕನ್ನಡಕ್ಕೆ ಕರೆ ತಂದು ಹಿರೋಯಿನ್ ಮಾಡಿದ್ದಾರೆ. ಅಸಲಿಗೆ ಸಂತೂರ್ ಮಮ್ಮಿ ನಿಜವಾಗಲೂ ಮಮ್ಮಿ ಅಲ್ಲ. ಕೇವಲ 22 ವರ್ಷದ ಸುಂದರ ತರುಣಿ ಅಕಾಂಕ್ಷಾ ಶರ್ಮಾ. ದೆಹಲಿಯಲ್ಲಿ ನೆಲಸಿರುವ ಅಕಾಂಕ್ಷ ಮೂಲತಃ ಹರಿಯಾಣದವರು.

ಕನ್ನಡದ ಬಹು ನಿರೀಕ್ಷಿತ ತ್ರಿವಿಕ್ರಮ ಚಿತ್ರದಲ್ಲಿ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ ಅವರ ಚಿತ್ರಕ್ಕೆ ನಾಯಕಿಯಾಗುವ ಮೂಲಕ ತಮ್ಮ ಸಿನಿಮಾ ಕರಿಯರ್ ನಲ್ಲಿ ಮೊದಲ ಬಾರಿಗೆ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅಕಾಂಕ್ಷ ಶರ್ಮಾ ಅವರು ಇದೇ ಏಪ್ರಿಲ್ 14ಕ್ಕೆ ತಮ್ಮ ಜನ್ಮ ದಿನವನ್ನೂಆಚರಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿ ಸಾಕಷ್ಟು ಹೊಸತನ ಮತ್ತು ಭಿನ್ನ ಪ್ರಯೋಗಗಳನ್ನು ಕೈಗೊಂಡಿರುವ ನಿರ್ದೇಶಕ ಸಹನಾ ಮೂರ್ತಿ ಅವರು ಹಿರೋಯಿನ್ ಆಯ್ಕೆಯಲ್ಲಿಯೂ ಸಾಕಷ್ಟು ಕ್ರೇಜ್ ಹುಟ್ಟಿಸಿದ್ದಾರೆ. ಚಿತ್ರ ಸಾಕಷ್ಟು ಕುತೂಹಲಕರವಾಗಿದ್ದು ಎಲ್ಲ ವರ್ಗದ ಪ್ರೀತಿಯ ಎಳೆಯನ್ನು ಚಿತ್ರದಲ್ಲಿತೋರಿಸಲಾಗಿದೆ. ಇದೊಂದು ಪ್ರೇಮ ಕತೆಯಾಗಿದ್ದು, ಅಕಾಂಕ್ಷ ಶರ್ಮಾ ಅವರ ನಟನೆಯೂ ಚೆನ್ನಾಗಿದೆ ಎಂದು ನಿರ್ದೇಶಕ ಸಹನಾ ಮೂರ್ತಿ ಅವರು ತಿಳಿಸಿದ್ದಾರೆ. ಚಿತ್ರದಲ್ಲಿ ನಟಿಸುವುದಕ್ಕಾಗಿಯೇ ಅಕಾಂಕ್ಷಾ ಕನ್ನಡ ಭಾಷೆ ತರಬೇತಿಯನ್ನೂ ಪಡೆದಿದ್ದಾರೆ.

ಅಕಾಂಕ್ಷಾ ಶರ್ಮಾ ಅವರು ಏಪ್ರಿಲ್ 14, 1997 ರಂದು ಹರಿಯಾಣದ ಬಹದ್ದೂರ್ಗರ್ ದಲ್ಲಿ ಜನಿಸಿದರು. ಆಕೆಗೆ ಒಬ್ಬ ಸಹೋದರನಿದ್ದಾನೆ, ಅವರ ಹೆಸರು ಧ್ರುವ ಶರ್ಮಾ. ಅಕಾಂಕ್ಷಾ ಶರ್ಮಾ ತನ್ನ ಶಿಕ್ಷಣವನ್ನು ಹರಿಯಾಣದ ಬಹದುರ್ಗರ್ ನ ಬಾಲ ಭಾರತಿ ಶಾಲೆಯಲ್ಲಿ ಮತ್ತು ನವದೆಹಲಿಯ ದ್ವಾರಕಾದ ಕ್ವೀನ್ಸ್ ವ್ಯಾಲಿ ಶಾಲೆಯಲ್ಲಿ ಮಾಡಿದ್ದಾರೆ.

ಬೆಳ್ಳಿ ಪರದೆಗೆ ಕಾಲಿಡುವ ಮೊದಲು, ಅವರು ಹಲವಾರು ವಾಣಿಜ್ಯ ಜಾಹೀರಾತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಸಂತೂರ್ ಸೋಪ್ ಜಾಹೀರಾತು’ ಅವರನ್ನು ‘ಸಂತೂರ್ ಗರ್ಲ್’ “ಸಂತೂರ್ ಮಮ್ಮಿ’ ಎಂದು ಜನಪ್ರಿಯವಾಗಿ ಕರೆಯುವಂತೆ ಮಾಡಿದೆ. ನಾನ್ ವೆಜ್ ಇಷ್ಟಪಡುವ ಹುಡುಗಿ ಅಕಾಂಕ್ಷಾ ಡಾನ್ಸ್, ಹಾಡು, ಪ್ರವಾಸದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.