ಇಂದು ಕನ್ನಡಿಗರ ಅಸ್ಮಿತೆಯಾಗಿ ಎಲ್ಲೆಡೆ ಹಾರಾಡುತ್ತಿರುವ ಕನ್ನಡ ಬಾವುಟ ರಚಿಸಿದವರು ಯಾರೆಂದು ತಿಳಿದಿದೆಯೇ. ಮಾರ್ಚ್ 11 ಆ ಮಹಾತ್ಮರ ಜನ್ಮದಿನ. ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ರಚನೆಯಾದ ಕನ್ನಡ ಬಾವುಟದ ನಿರ್ಮಾತೃಗೆ ಇಂದು ಅಕ್ಷರಗಳ ಮೂಲಕ ನಮನ ಸಲ್ಲಿಸೋಣ. ರಾಜ್ಯೋತ್ಸವ ಸಂದರ್ಭಗಳಲ್ಲಿ ಕನ್ನಡ ಬಾವುಟ ಹಾರಿಸಿ ಎದೆಯುಬ್ಬಿಸಿ ನಡೆದಾಡುವಂತೆ ಮಾಡಿರುವ ಆ ಮಹಾನುಭಾವರ ಬಗ್ಗೆ ತಿಳಿಯೋಣ.

ಸ್ವಾತಂತ್ರ್ಯಾ ನಂತರ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಪ್ರಾಭಲ್ಯ ಬಲಿಷ್ಠವಾಗಿತ್ತು. ಅಂಥ ಸ್ಥಿತಿಯಲ್ಲಿ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯಲು ಕನ್ನಡ ಬಾವುಟವನ್ನು ರಚಿಸಿದವರು ಎಂ. ರಾಮಮೂರ್ತಿ ಅವರು. 1965ರಲ್ಲಿ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಅದನ್ನು ಹುಟ್ಟು ಹಾಕಲಾಯಿತು. ಇಂದು ಅದು ಕನ್ನಡಿಗರ ಅಸ್ಮಿತೆಯಾಗಿದೆ.

ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ, ಕರ್ನಾಟಕದ ಪ್ರತಿ ಸಾರ್ವಜನಿಕ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ವಾಹನಗಳ ಮೇಲೆ ನಾವು ಅದೇ ಕನ್ನಡ ಬಾವುಟವನ್ನು ಹಿಡಿದು ಸಂಭ್ರಮಿಸುತ್ತೇವೆ. ಗೌರವಿಸುತ್ತೇವೆ. ಪ್ರತಿಯೊಬ್ಬ ಕನ್ನಡಿಗರು ಅದನ್ನು ಹೃದಯದಲ್ಲಿಟ್ಟು ಪೂಜಿಸುತ್ತಿದ್ದಾರೆ.

ಬಾವುಟದ ಮೇಲಿನ ಭಾಗವು ಹಳದಿ ಮತ್ತು ಕೆಳಗಿನ ಭಾಗವು ಕೆಂಪು ಬಣ್ಣದ್ದಾಗಿದೆ. ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ.ಇವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ.

ರಾಮಮೂರ್ತಿ ಅವರು…
ಗಾಂಧೀಜಿಯವರ ವಿಚಾರಧಾರೆಗಳಿಂದ ಚಳವಳಿ ಹಾದಿಹಿಡಿದ ಸೀತಾರಾಮಶಾಸ್ತ್ರಿ ಅವರ ಮಗನೇ ರಾಮಮೂರ್ತಿ ಅವರು. ವೈದಿಕ ಮನೆತನದಲ್ಲಿ ಹುಟ್ಟಿದ ರಾಮಮೂರ್ತಿ ಅವರು ಮಾಧ್ಯಮಿಕ ಶಾಲೆಯ ನಂತರ ಬಂದು ಸೇರಿದ್ದು ಬೆಂಗಳೂರಿನ ಗಾಂಧಿನಗರದಲ್ಲಿದ್ದ ಆರ್ಯ ವಿದ್ಯಾಶಾಲೆ.

ತಂದೆಯವರು ಪ್ರಕಟಿಸುತ್ತಿದ್ದ ವೀರಕೇಸರಿ ಪತ್ರಿಕೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯ ಪ್ರಚಾರ, ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರಿಂದ ರಾಮಮೂರ್ತಿಯವರೂ ಆ ಪತ್ರಿಕೆಯಲ್ಲಿ ಆಸಕ್ತರಾಗಿ ತಂದೆಗೆ ಕೈಜೋಡಿಸಿದರು. “ವೀರಕೇಸರಿ’ ಪತ್ರಿಕೆಯು ಕಾರಣಾಂತರದಿಂದ ಪ್ರಕಟಣೆಯನ್ನು ನಿಲ್ಲಿಸಿದ್ದರಿಂದ ರಾಮಮೂರ್ತಿಯವರೇ ‘ವಿನೋದಿನಿ’, ‘ಕಥಾವಾಣಿ’, ‘ವಿನೋದವಾಣಿ’ ಮುಂತಾದ ಪತ್ರಿಕೆಗಳನ್ನು ಹುಟ್ಟುಹಾಕಿದರು.

ಬೆಂಗಳೂರಿನ ಸುತ್ತಮುತ್ತ ಕನ್ನಡೇತರರ ಹಾವಳಿ ಜಾಸ್ತಿಯಾಗಿತ್ತು. ಆಗ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು, ಎಲ್ಲರೂ ಕನ್ನಡವನ್ನು ಓದುವಂತಾಗಲು ಪತ್ತೇದಾರಿ ಕಾದಂಬರಿಗಳ ರಚನೆಗೆ ಮುಂದಾದರು. 1950-60ರ ದಶಕದಲ್ಲಿ ಹಲವಾರು ಪತ್ತೆದಾರಿ ಕಾದಂಬರಿಗಳನ್ನು ರಚಿಸಿದರು. ಹಲವಾರು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದರು.

ರಾಮಮೂರ್ತಿಯವರು ಕೃಷಿಜೀವನವನ್ನು ನಡೆಸಲು ಬಯಸಿ ಬೆಂಗಳೂರು – ಕನಕಪುರ ರಸ್ತೆಯ ತಲಘಟ್ಟಪುರದ ತಮ್ಮ ಜಮೀನಿನಲ್ಲಿ ಬಾವಿ ತೋಡಿಸುತ್ತಿದ್ದರು. ಬಾವಿಯಲ್ಲಿ ನೀರು ಬಂದಿತೆಂಬ ಸಂತಸದಿಂದ ದಿವಾಕರ ಮತ್ತು ಮಂಜುನಾಥ ಎಂಬ ಮಕ್ಕಳಿಬ್ಬರೊಡನೆ ಬಾವಿಗಿಳಿದಾಗ, ಮೇಲಿಂದ ಮಣ್ಣು ಕುಸಿದು ಕೂಲಿಗಳೊಡನೆ ಮೂವರೂ ದುರ್ಮರಣಕ್ಕೀಡಾದರು. ಅದ್ವಿತೀಯ ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಕನ್ನಡ ಸೇನಾನಿ ಎಂಬ ಕನ್ನಡದ ದೀಪ 1967ರ ಡಿಸೆಂಬರ್ 25ರಲ್ಲಿನಂದಿ ಹೋಯಿತು.