ಚಿಕನ್ ತಿನ್ನುವುದರಿಂದ covid-19  ಕೊರೊನಾ ವೈರಸ್ ಹರಡುತ್ತದೆ ಎನ್ನುವ ಸುದ್ದಿ ಎಷ್ಟರ ಮಟ್ಟಿಗೆ ಜನರನ್ನು ಭಯಗೊಳಿಸಿದೆ ಎಂದರೆ ಚಿಕನ್ ನೋಡಿದರೇನೆ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇದುವರೆಗೆ ಭಾರತದಲ್ಲಿ ಚಿಕನ್ ಮಾರುವವರಿಗಾಗಲಿ, ಕೋಳಿ ಫಾರ್ಮ್ ಸಿಬ್ಬಂದಿಗಾಗಲಿ ಕೊರೊನಾ ಬಂದ ಉದಾಹರಣೆಗಳಿಲ್ಲ.

ಮಾಂಸದ ಕೋಳಿಯಿಂದ ಕೊರೊನಾ ಹರಡುತ್ತದೆ ಎನ್ನುವುದಕ್ಕೆ ಜಾಗತಿಕವಾಗಿ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಹಾಗಾಗಿ ಭಾರತದಲ್ಲಿ ಮಾಂಸದ ಕೋಳಿಗಳ ಬಳಕೆ ಸುರಕ್ಷಿತವಾಗಿದೆ. ಅದರಿಂದ ವೈರಸ್ ಹರಡುತ್ತದೆ ಎನ್ನುವುದು ಶುದ್ಧ ಸುಳ್ಳು ಎಂದು ಭಾರತ ಸರಕಾರವೇ ಸ್ಪಷ್ಟಪಡಿಸಿದೆ. ಕೇಂದ್ರ ಸರಕಾರದ ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗವೂ ಚಿಕನ್ ನಿಂದ ಕೊರೊನಾ ಹರಡುತ್ತದೆ ಎನ್ನುವ ಸುದ್ದಿ ಸುಳ್ಳು ಎಂದಿದೆ.

ಇದನ್ನೂ ಓದಿ: ಕೊರೊನಾಗೆ ಇದು ಔಷಧವೇ?

ವಿಶ್ವ ಪ್ರಾಣಿ ಆರೋಗ್ಯ ಸಂಘ (ಓಐಇ) ಸಹ ಮಾಂಸದ ಕೋಳಿಯಿಂದ ಕೊರೊನಾ ಹರಡುತ್ತದೆ ಎನ್ನುವುದನ್ನು ಒಪ್ಪಿಲ್ಲ. ಪ್ರಾಣಿಗಳಿಂದ ಮಾನವರಿಗೆ ಕೊರೊನಾ ಹರಡುತ್ತದೆಯೇ ಎನ್ನುವ ಬಗ್ಗೆ ಚೀನಾದ ಪಶುಸಂಗೋಪನೆ ಇಲಾಖೆ, ಓಐಇ ನಿರಂತರ ಸಂಶೋಧನೆ ಅಧ್ಯಯನ ನಡೆಸುತ್ತಲೇ ಇವೆ. ಆದರೆ, ಸಾಕು ಪ್ರಾಣಿಗಳಿಂದ ಮಾನವರಿಗೆ ಕೊರೊನಾ ಬಂದಿದೆ ಎನ್ನುವುದಕ್ಕೆ ನಿಖರ ಪುರಾವೆಗಳು ಇಲ್ಲ ಎಂದು ವಿಶ್ವ ಪ್ರಾಣಿ ಆರೋಗ್ಯ ಸಂಘ ಸ್ಪಷ್ಟಪಡಿಸಿದೆ. ಈ ಸಂಘ ವಿಶ್ವಸಂಸ್ಥೆಗೆ ಪೂರಕವಾಗಿ ಜಾಗತಿಕವಾಗಿ ಕೆಲಸ ಮಾಡುತ್ತದೆ.

ಈವರೆಗಿನ ಸಂಶೋಧನೆಗಳಲ್ಲಿ ಕೊರೊನಾ ವೈರಸ್ ಮಾನವನಿಂದ ಮಾನವನಿಗೆ ಹರಡುತ್ತಿದೆ.  ಹೊರತು ಸಾಕು ಪ್ರಾಣಿಗಳಿಂದ ಬಂದಿರುವ ಬಗ್ಗೆ ಪುರಾವೆಗಳು ದೃಢಪಡಿಸಿಲ್ಲ. ಆದರೆ, ಚೀನಾದಲ್ಲಿ ಮಾನವರಿಂದ ಸಾಕು ನಾಯಿಗಳಿಗೆ ಸೋಂಕು ತಗುಲಿದ ಬಗ್ಗೆ ವರದಿಯಾಗಿದೆ. ಕೋಳಿಗಳಿಂದ ಸೋಂಕು ಹರಡಿದೆ ಎನ್ನುವುದಕ್ಕೆ ಎಲ್ಲಿಯೂ ಸಾಕ್ಷಿಗಳು ಕಂಡು ಬಂದಿಲ್ಲ.

ಇದನ್ನೂ ಓದಿ: ಕೊರೊನಾಗೆ ಇದು ಔಷಧವೇ?

ಈ ಹಿಂದೆ 2002-03ರಲ್ಲಿ ಬಂದ ಸಾರ್ಸ್, 2012-13ರಲ್ಲಿ ಬಂದ ಎಂಇಆರ್ ಎಸ್ ಎನ್ನುವ ವೈರಸ್ ಸಹ ಕೋಳಿಗಳನ್ನು ಒಳಗೊಂಡಿರಲಿಲ್ಲ. ಈ ಎಲ್ಲ ವಾದಗಳ ಆಧಾರದ ಮೇಲೆ ಭಾರತದಲ್ಲಿ ಮಾಂಸದ ಕೋಳಿಗಳ ಬಳಕೆ ಸುರಕ್ಷಿತವಾಗಿದೆ ಎಂದು ಒಪ್ಪಬಹುದು ಎಂದು ಭಾರತದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್: ಹೋಳಿ ಬಣ್ಣ, ಪ್ರಧಾನಿ ಟ್ವೀಟ್ ಮತ್ತು ಮುನ್ನೆಚ್ಚರಿಕೆ ಕ್ರಮಗಳು

ಇತ್ತೀಚೆಗೆ ಕೊರೊನಾ ಭಯದಿಂದಲೇ ಕೋಳಿಗಳ ಬೆಲೆ ದಿಢೀರ್ ಪಾತಾಳಕ್ಕೆ ಇಳಿದು ಕುಕ್ಕುಟೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಕೆಲವರು ಉಚಿತವಾಗಿ ಕೋಳಿಗಳನ್ನು ವಿತರಿಸುತ್ತಿದ್ದರೆ, ಇನ್ನುಕೆಲವರು ಗುಂಡಿ ತೆಗೆದು ಸಾಯಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಕೋಳಿ ಸೇವನೆ ನಿಂತಿಲ್ಲ. ಕಡಿಮೆಯಾಗಿದೆ ಅಷ್ಟೆ. ಹೋಟೆಲ್ ಗಳಲ್ಲಿ ಈಗಲೂ ಚಿಕನ್ ಖಾದ್ಯ ಮಾರಾಟವಾಗುತ್ತಿವೆ.

ಭಾರತದ ಆಹಾರ ಪದ್ಧತಿ ಸುರಕ್ಷಿತ
ಭಾರತದಲ್ಲಿ ಆಹಾರ ಪದ್ಧತಿ ಇಂಥ ವೈರಸ್ ಗಳಿಂದ ಸುರಕ್ಷಿತವಾಗಿದೆ. ಚೀನಾ ಸೇರಿ ಕೆಲ ದೇಶಗಳಲ್ಲಿ ಅಪೂರ್ಣ ಬೇಯಿಸಿದ ಮಾಂಸಾಹಾರ ಸೇವಿಸುವ ರೂಢಿ ಇದೆ. ಆದರೆ, ಭಾರತದಲ್ಲಿ ಪ್ರತಿ ಆಹಾರವನ್ನು 100 ಡಿಗ್ರಿ ಸೆಲ್ಸಿಯಸ್ ಮೇಲ್ಪಟ್ಟು ಉಷ್ಣದಲ್ಲಿ ಬೇಯಿಸಲಾಗುತ್ತದೆ. ಅಷ್ಟು ಬಿಸಿಯಲ್ಲಿ ವೈರಸ್ ಗಳು ಸತ್ತು ಹೋಗುತ್ತವೆ.
ಹಾಗಾಗಿ ಭಾರತದಲ್ಲಿ ಆಹಾರದಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ಪಶು ವೈದ್ಯರು. ಅಲ್ಲದೆ, ಆ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಯಾವುದೇ ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನುವಂತೆ ಸಲಹೆ ನೀಡಿದೆ.
ಕೋಳಿಗಳಿಂದಲೇ ಕೊರೊನಾ ಬರುವಂತಿದ್ದರೆ ಕೋಳಿ ಫಾರ್ಮ್ ಗಳಲ್ಲಿ ಕೆಲಸ ಮಾಡುವವರು, ಚಿಕನ್ ಸೆಂಟರ್ ಗಳಲ್ಲಿ ಕೆಲಸ ಮಾಡುವವರು ಕೊರೊನಾ ವೈರಸ್ ಸಮಸ್ಯೆ ಸಿಲುಕಬೇಕಿತ್ತು ಎನ್ನುವ ವಾದವೂ ಇದೆ. ಹಾಗಾಗಿ, ಆರೋಗ್ಯಯುತ ಕೋಳಿಗಳ ಮಾಂಸ ಸೇವನೆಯಿಂದ ಯಾವುದೇ ಅಪಾಯ ಇಲ್ಲ ಎಂದು ಭಾರತದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರದ ಸಲಹೆಗಳೇನು?
ಮಾಂಸದ ಕೋಳಿ ಸೇವನೆಯಿಂದ ಕೊರೊನಾ ಬರುತ್ತದೆ ಎನ್ನುವುದಕ್ಕೆ ಪುರಾವೆಗಳಿಲ್ಲ.
ಆರೋಗ್ಯವಾದ ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು.
ಸಹಜವಾಗಿ ಆಹಾರ ತಯಾರಿಕೆ, ಬಳಕೆಯಲ್ಲಿ ಸ್ವಚ್ಛತೆ ಕಾಪಾಡಬೇಕು.
ಮಾಂಸದ ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು.