ಚೀನಾದಿಂದ ಆರಂಭವಾದ ಕರೋನ ವೈರಸ್ ವಿವಿಧ ದೇಶಗಳಿಗೆ ಹಬ್ಬಿ ಈಗ ಭಾರತದಲ್ಲೂ ಭಯ ಹುಟ್ಟಿಸಿದೆ. ಇದೊಂದು ಭಯಂಕರ ರೋಗವಾದರೂ ಅದಕ್ಕಿಂತ ಒಂದು ಪಟ್ಟು ಹೆಚ್ಚು ಸುಳ್ಳು ಸುದ್ದಿಗಳು ಜನರಲ್ಲಿ ಭಯ ಹೆಚ್ಚಿಸುತ್ತಿವೆ.

ರಾಜ್ಯ ಹಾಗು ಕೇಂದ್ರ ಸರಕಾರಗಳು ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ಹೇಳುತ್ತಿದ್ದರೂ ಅವುಗಳನ್ನು ತಿರುಚಿ ಭಯದಿಂದಲೇ ಜನರಲ್ಲಿ ಚಿಂತೆ ಹುಟ್ಟಿಸುವ ಬೆಳವಣಿಗೆಗಳು ನಡೆಯುತ್ತಿರುವುದು ಇನ್ನೂ ಅಪಾಯಕಾರಿ.

ಈಗ ಚೀನಾದಿಂದ ಬರುವ ಹೋಳಿ ಬಣ್ಣದಲ್ಲಿ ಸಹ ಕರೋನಾ ವೈರಸ್ ಇದೆ ಎನ್ನುವ ಸುದ್ದಿ ಭಾರೀ ವೈರಲ್ ಆಗುತ್ತಿದೆ. “ಈ ಬಾರಿ ಹೋಳಿ ಮಿಲನ್ ಬಣ್ಣದಾಟದಲ್ಲಿ ತಾನು ಪಾಲ್ಗೊಳ್ಳುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಅಂದರೆ ಬಣ್ಣದಲ್ಲಿ ಕರೋನಾ ಇದೆ ಎನ್ನುವುದು ಸತ್ಯವೇ?.

ಹೋಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್

ಪ್ರಧಾನಿ ಅವರು ಟ್ವೀಟ್ ಮಾಡಿದ್ದೇನೆಂದರೆ, “ಕರೋನಾ ವೈರಸ್ ಹರಡುವುದನ್ನು ತಪ್ಪಿಸಲು ಸಾಮೂಹಿಕ ಕೂಟಗಳನ್ನು ಕಡಿಮೆ ಮಾಡಲು ವಿಶ್ವದಾದ್ಯಂತ ತಜ್ಞರಿಂದ ಸಲಹೆಗಳು ಬರುತ್ತಿವೆ. ಇದರಿಂದ ಈ ವರ್ಷ ನಾನು ಯಾವುದೇ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಭಾವಹಿಸುವುದಿಲ್ಲ’ ಎಂದಿದ್ದಾರೆ.

ಕರೋನ ಒಬ್ಬರಿಂದ ಒಬ್ಬರಿಗೆ ಹರಡುವ ವೈರಸ್ ಆಗಿದ್ದರಿಂದ ಗುಂಪಿನಲ್ಲಿ ಸೇರುವುದು ಅಪಾಯ ಎಂದು ಪ್ರಧಾನಿ ಅವರು ಸಲಹೆ ನೀಡಿದ್ದಾರೆ. ಇಂಥದ್ದೇ ಅನೇಕ ಸಲಹೆಗಳನ್ನು ಭಾರತೀಯ ಆರೋಗ್ಯ ಮಂತ್ರಾಲಯ ತಿಳಿಸಿದೆ. ಆ ಸರಳ ಸೂತ್ರಗಳನ್ನು ಪಾಲಿಸಿದರೆ ಕರೋನ ವೈರಸ್ ನಿಂದ ದೂರ ಇರಬಹದು. ಅದಕ್ಕಾಗಿ ಈ ವರದಿ ಪೂರ್ತಿ ಓದಿ.

ಭಾರತ, ಅದರಲ್ಲೂ ಕರ್ನಾಟಕದ ಮಟ್ಟಿಗೆ ಕರೋನ ಇನ್ನೂ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ, ಸಂಶಗಳು ಸಾಕಷ್ಟಿವೆ. ಬೆಳಗಾವಿಯಲ್ಲಿ ಒಂಬತ್ತು ಜನರಿಗೆ ತಪಾಸಣೆ ಮಾಡಿದ್ದಕ್ಕೇ ಅವರಿಗೆ ಕರೋನ ತಗುಲಿದೆ ಎನ್ನುವ ಸುಳ್ಳು ಸುದ್ದಿ ಹಬ್ಬಿತ್ತು. ಇಂಥ ಹಲವು ಸುಳ್ಳು ಸುದ್ದಿಗಳು ಜನರನ್ನು ಭಯ ಬೀಳಿಸುತ್ತಿವೆ.

ಕರೋನ ಸುಳ್ಳು ಸುದ್ದಿ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಪ್ರಕಟಣೆ

ಅದೇನೇ ಇದ್ದರೂ ಎಚ್ಚರಿಕೆ ವಹಿಸುವುದು ಬಿಟ್ಟು ಭಯದಿಂದ ಚಿಂತೆಗೊಳಗಾದರೆ ಅದು ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಸಬಲ್ಲದು. ಧೈರ್ಯಕ್ಕಿಂತ ದೊಡ್ಡ ಔಷಧ ಮತ್ತೊಂದಿಲ್ಲ. ಈಗ ಬಂದಿರುವ ಈ ಮಹಾ ಮಾರಿಯನ್ನು ಎಲ್ಲರೂ ಧೈರ್ಯದಿಂದ ಎದುರಿಸಬೇಕಿದೆ.

ಏನಿದು ಕರೋನ ವೈರಸ್?
ಕರೋನ ವೈರಸ್ ಮೊದಲು ಚೀನಾದಲ್ಲಿ ಕಾಣಿಸಿಕೊಂಡಿತು. ಚೀನಾದ ಊಹಾನ್ ನಗರದ ಮಾಂಸಹಾರಿ ಮಾರುಕಟ್ಟೆಯಿಂದ ಈ ವೈರಸ್ ಹರಡಿದೆ ಎಂದು ಒಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಕಾಡು ಪ್ರಾಣಿಯೊಂದಕ್ಕೆ ಈ ವೈರಸ್ ತಗುಲಿತ್ತು. ಅದನ್ನು ಬಳಸಿಕೊಂಡವರಿಗೆ ಈ ರೋಗಾಣು ಹರಡಿದೆ ಎಂದು ಹೇಳಲಾಗುತ್ತಿದೆ.

ಪ್ರಾಣಿಯಿಂದ ಮನುಷ್ಯನಿಗೆ ಬರುವ ವೈರಸ್ ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕರೋನ ವೈರಸ್ ಮನುಷ್ಯನಿಗೆ ತಗುಲಿದಾಗ, ವಿಪರೀತವಾದ ಶೀತ, ನೆಗಡಿ, ತಲೆನೋವು ಕಾಣಿಸಿಕೊಳ್ಳುತ್ತದೆ. ನಂತರ ನ್ಯುಮೋನಿಯಾ ಆಗಿ ಹೆಚ್ಚಿನ ತೊಂದರೆ ಉಂಟಾಗುವುದು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದ ಸಮಯದಲ್ಲಿ ಇಂತಹ ವೈರಸ್‍ಗಳು ಹರಡುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ತಜ್ಞರು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ. ರಮೇಶ ನಿಶಾಂಕ ಅವರ ಟ್ವೀಟ್

6 ಲಕ್ಷ ಜನರ ಸ್ಕ್ರೀನಿಂಗ್
ಸದ್ಯ ಭಾರತದಲ್ಲಿ ಕರೋನಾ ಬರದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದೇಶದಿಂದ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿಯೇ ಬಿಡಲಾಗುತ್ತದೆ. ಅದಕ್ಕಾಗಿ ದೇಶದ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ವಿದೇಶದಿಂದ ಬಂದವರ ಸ್ಕ್ರೀನಿಂಗ್ (ತಪಾಸಣೆ) ಮಾಡಲಾಗುತ್ತಿದೆ. ಈವರೆಗೆ ಆರು ಲಕ್ಷ ಪ್ರವಾಸಿಗರನ್ನು ಸ್ಕ್ರೀನಿಂಗ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಭೂತಾನ, ನೇಪಾಳ ಭಾಗದಲ್ಲಿಯೂ 10 ಕ್ಕೂ ಹೆಚ್ಚು ಜನರ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಹಾಗಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಸ್ಕ್ರೀನಿಂಗ್ ಮಾಡಿದ ಮಾತ್ರಕ್ಕೆ ಅವರೆಲ್ಲರಲ್ಲೂ ಕರೋನ ಇದೆ ಎಂದಲ್ಲ. ಸ್ಕ್ರೀನಿಂಗ್ ಆದ ಗರಿಷ್ಠ ಜನರಲ್ಲಿ ಕರೋನ ವೈರಸ್ ಕಂಡು ಬಂದಿಲ್ಲ.

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಪ್ರಕಾಶ ಜಾವಡೇಕರ ಅವರ ಟ್ವೀಟ್

ಕರೋನ ವೈರಸ್ ತಗುಲಿದಾಗ ಶೀತ ಅಥವಾ ಜ್ವರ ಪ್ರಮುಖ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗ ಸಮಸ್ಯೆಯು ಎರಡರಿಂದ ನಾಲ್ಕು ದಿನಗಳ ಕಾಲ ಮುಂದುವರಿಯುವುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಈ ವೈರಸ್ ತಗುಲಿದಾಗ ವ್ಯಕ್ತಿಯಲ್ಲಿ ಅತಿಯಾದ ಸೀನು, ಸುರಿಯುವ ಮೂಗು, ಆಯಾಸ, ಕೆಮ್ಮು, ಜ್ವರ, ಗಂಟಲು ನೋವು, ತೀವ್ರವಾದ ಅಸ್ತಮದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು ಏನು?
* ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಮನೆಯ ಒಳಾಂಗಣದಲ್ಲಿ ಆದಷ್ಟು ಸ್ವಚ್ಛತೆ ಕಾಪಾಡಿಕೊಳ್ಳಬೇಕು.
* ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನು ಅಥವಾ ಹ್ಯಾಂಡ್ ವಾಶ್ ಬಳಸಿ ಕೈ ತೊಳೆಯಬೇಕು.
* ಅನಾರೋಗ್ಯದಲ್ಲಿರುವ ಜನರೊಂದಿಗೆ ಹತ್ತಿರದ ಸಂಪರ್ಕವಿಟ್ಟುಕೊಳ್ಳಬೇಡಿ.
* ಕೆಮ್ಮು ಮತ್ತು ಸೀನು ಬಂದರೆ ಟಿಶ್ಯೂ ಅಡ್ಡ ಹಿಡಿಯಿರಿ. ಬಳಿಕ ಟಿಶ್ಯೂ ಬಿಸಾಕಿ, ಕೈಗಳನ್ನು ತೊಳೆಯಿರಿ.
* ಸತ್ತಿರುವ ಯಾವುದೇ ಪ್ರಾಣಿಗಳನ್ನು ಮತ್ತು ಸಾಕಿರುವ ಪ್ರಾಣಿಗಳಿಗೆ ಕಾಯಿಲೆ ಬಂದಿದ್ದರೂ ಸಹ ಬರಿ ಕೈಯಲ್ಲಿ ಮುಟ್ಟಬಾರದು.
* ಜನ ಜಂಗುಳಿಯ ಪ್ರದೇಶದಿಂದ ದೂರವಿರಿ.
* ಸ್ವಚ್ಛತೆ ಇಲ್ಲದೆ ಕಣ್ಣು, ಕಿವಿ, ಮೂಗು ಮುಟ್ಟಿಕೊಳ್ಳಬೇಡಿ.
* ಎಲ್ಲೆಂದರಲ್ಲಿ ಉಗುಳ ಬೇಡಿ.
* ಬೇರೆ ಯಾವುದೇ ಸಂಶಯಗಳಿದ್ದರೂ ಕೇಂದ್ರ ಆರೋಗ್ಯ ಮಂತ್ರಾಲಯದ ಸಹಾಯವಾಣಿ ಸಂಖ್ಯೆ +911123978046 ಗೆ ಯಾವಾಗ ಬೇಕಾದರೂ ಕರೆ ಮಾಡಿ.