ವಡಗಟ್ಟ ಚೆಕ್ ಪೋಸ್ಟ್‍ನಿಂದ ಅತ್ತಿವೇರಿ ಪಕ್ಷಿ ಧಾಮದಲ್ಲಿ ಪಕ್ಷಿ ವೀಕ್ಷಣೆ ಹೊರಟ ನಮಗೆ ಅಲ್ಲಿನ ವ್ಯವಸ್ಥೆ, ಪರಿಸ್ಥಿತಿಗಳ ಅರಿವಿರಲಿಲ್ಲ. ಕಾಡು ಅಲೆಯಬೇಕು ಎನ್ನುವ ಹುಚ್ಚು ಹಠದಲ್ಲಿ ಸ್ನೇಹಿತರ ಸಂಘ ಸೇರಿ ಹೊರಟ ನಮಗೆ ಅರಣ್ಯದೊಳಗಿನ ಅದೊಂದು ಊರಿನಲ್ಲಿ ಪಾಂಡವರ ಗೆರೆ ನೋಡಿ ಮೈ ರೋಮಾಂಚನವಾಯಿತು.

ನಮ್ಮ ಜನರು ಇಂದಿಗೂ ಪಾಂಡವರ ರಕ್ಷಣೆಯಲ್ಲಿ ಇದ್ದಾರೆ ಎನ್ನುವುದನ್ನು ತಿಳಿಯುವುದೇ ಒಂದು ಕುತೂಹಲ ಸಂಗತಿ. ಪಶ್ಚಿಮ ಘಟ್ಟಗಳ ಸಾಲಿಗೆ ಹೊಂದಿಕೊಂಡಿರುವ ಕೆಲ ಪ್ರದೇಶಗಳಲ್ಲಿ ಪಾಂಡವರು ವನವಾಸಕ್ಕೆ ಬಂದಿದ್ದರು ಎನ್ನುವ ಕತೆಗಳು ಕೇಳಿದ್ದು ನಿಜ. ಆದರೆ, ಈಗಲೂ ಅಂಥದ್ದೇ ನಂಬಿಕೆ ಎದುರಾಗಿದ್ದು ಮಾತ್ರ ನನ್ನೊಳಗಿನ ಆಶ್ಚರ್ಯ.

ದಟ್ಟಾರಣ್ಯದಲ್ಲಿ ಅಪರಿಚಿತ ಪ್ರವಾಸಿಗರಿಗೆ ದಾರಿ ತೋರಿಸುವ ಮೂರು ಶ್ವಾನಗಳು

ಗ್ರಾಮ ಅರಣ್ಯ ಸಮಿತಿಯೊಂದಿಗೆ ವಿಚಾರ ವಿನಿಮಯ

ಕುಂತಿ ಪುತ್ರರು ವನವಾಸಕ್ಕೆ ಹೊರಟಾಗ ಪಕ್ಷಿ, ಪ್ರಾಣಿ ಸಂಕುಲಗಳು ಅವರನ್ನು ಸ್ವಾಗತಿಸಿದ ರೀತಿಯಲ್ಲಿಯೇ ನಮ್ಮ ಪಕ್ಷಿ ವೀಕ್ಷಣೆಯ ಆರಂಭದ ಹೆಜ್ಜೆಗಳಲ್ಲಿಯೇ ಬೂದು ಕಾಜಾಣ, ಮಧುರಕಂಠ, ಕೆಮ್ಮೀಸೆ ಪೀಕಳಾರ, ನದಿ ರೀವ, ಜೊಂಡು ಉಲಿಯಕ್ಕಿ, ಕವಲು ತೋಕೆ, ಸಣ್ಣ ಕಳ್ಳಿಪೀರ, ಸ್ವರ್ಗದ ಪಕ್ಷಿ ಎದುರಾದವು. ಪಾಂಡವರ ಕಲ್ಪನೆ ಮೂಡಿರದ ಆ ವೇಳೆಯಲ್ಲೇ ಮಹೇಶಣ್ಣ ಸ್ವರ್ಗದ ಪಕ್ಷಿ ಬಗ್ಗೆ ವಿವರಿಸುತ್ತ ನಮ್ಮನ್ನು ಸುತ್ತಾಟಕ್ಕೆ ಕರೆದೊಯ್ದರು.

ಹಾಗೆ ಸುತ್ತಾಡುತ್ತ ಮಧ್ಯಾಹ್ನ ಮುಂಡಗೋಡದ ಬಸವನಕೊಪ್ಪ ಎನ್ನುವ ಗ್ರಾಮಕ್ಕೆ ಪಯಣ ಸಾಗಿತ್ತು. ಇಲ್ಲೇ ಇರುವುದು ಪಾಂಡವರ ಗುಟ್ಟು! ಊರಿನ ಒಂದು ಮನೆಯಲ್ಲಿ ಗ್ರಾಮ ಅರಣ್ಯ ಸಮಿತಿಯೊಂದಿಗೆ ಚರ್ಚೆ ನಡೆಸುತ್ತಿದ್ದೆವು. ಮುಗ್ದ ಜನರ ನಡುವೆ ಪರಿಸರ ಕುರಿತ ಒಂದಷ್ಟು ವಿಚಾರಗಳು ವಿನಮಯವಾದವು. ಮನೆಯ ಹೊರಗೆ ನೆಲದಲ್ಲಿ ಸಗಣಿ ಸಾರಿಸಿ ಅದರ ಮೇಲೆ ಅಟ್ಟ ಮಾಡಿ ಬಿದಿರಿನಿಂದ ಮಾಡಿದ ದೊಡ್ಡ ಬುಟ್ಟಿಗೆ (ಕಣಜ) ಇಟ್ಟಿದ್ದು ಕಾಣಿಸಿತು. ಅದಕ್ಕೆ ಸಗಣಿ ಮೆತ್ತಿ ಅದರೊಳಗೆ ಭತ್ತ ಹಾಕಿದ್ದರು.

ಪಾಂಡವರ ಗೆರೆಗಳು ಇರುವ ಕಣಜ

ಕುತೂಹಲದಿಂದ ಒಂದಷ್ಟು ಫೋಟೊ ತೆಗೆದುಕೊಳ್ಳುವಾಗಲೇ ಏನೋ ವಿಚಿತ್ರ ಕಾಣಿಸಿತು. ಆ ಕಣಜದ ಮೇಲೆ ಒಂದು ಪೂರ್ಣ ಉಬ್ಬು, ಇನ್ನೊಂದು ಅರ್ಧ ಉಬ್ಬು, ಉಬ್ಬುಗಳ ಪಕ್ಕದಲ್ಲೇ ಐದು ಗೆರೆಗಳು ಇದ್ದವು. ಅದರಲ್ಲೊಂದು ವಿಶೇಷ ಅಡಗಿರುವಚಿತೆ ಅನಿಸತೊಡಗಿತು.

ಗ್ರಾಮಸ್ಥರೊಬ್ಬರು ಆ ಕಣಜದ ಬಗ್ಗೆ ವಿವರಿಸಿದರು. ಅದರಲ್ಲಿರುವ ಉಬ್ಬುಗಳಲ್ಲಿ ಒಂದು ಸೂರ್ಯ, ಮತ್ತೊಂದು ಚಂದ್ರ, ಐದು ಗೆರೆಗಳು ಐದು ಜನ ಪಾಂಡವರು ಎಂದರು. ಪಾಂಡವರಿಗೂ ಇದಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆಗೆ ಉತ್ತರ ಸಿಗದೆ ಇದ್ದರೂ ಜನರ ನಂಬಿಕೆ ಬಹಳ ವಿಶೇಷ ಎನಿಸಿತು. ಪಾಂಡವರು ಗೆರೆಗಳ ರೂಪದಲ್ಲಿ ಇನ್ನೂ ಜನರ ಮನಸ್ಸಲ್ಲಿರುವುದು ಭಾರತೀಯ ಪರಂಪರೆಯ ಶ್ರೇಷ್ಠತೆ ಎನಿಸಿತು.

ಗ್ರಾಮ ಅರಣ್ಯ ಸಮಿತಿಯೊಂದಿಗೆ ನಮ್ಮ ತಂಡ

ಊರಿನವರು ಯಾವುದೇ ಲೋಹವನ್ನು ಬಳಸದೆ ಪರಿಸರಸ್ನೇಹಿ ಕಣಜವನ್ನೇ ಉಪಯೋಗಿಸುತ್ತಿರುವುದು ಸದ್ಯದ ಯಾಂತ್ರಿಕ ಬದುಕಿನಲ್ಲಿ ಅವರೆಲ್ಲರೂ ಯಾಕೆ ಅಷ್ಟೊಂದು ಆರೋಗ್ಯ ಸುರಕ್ಷಿತರು ಎನ್ನುವುದು ಅರ್ಥವಾಯಿತು.  ಗ್ರಾಮದ ಹತ್ತಿರದಲ್ಲಿ ಔಷಧಿ ಸಸ್ಯಗಳನ್ನು ಹಾಕುವ ಅವರ ಯೋಜನೆಯೂ ಮಾದರಿ ಎನಿಸಿದ್ದಷ್ಟೇ ಅಲ್ಲ. ಅವರಿಂದ ಕಲಿಯುವುದು ಬಹಳ ಇದೆ ಎನ್ನುವ ಅರಿವು ಸಹ ಆಯಿತು.

ಮಂಜುನಾಥ್ ಅಮಲಗೊಂದಿ
ಪರಿಸರ ಸಮಾಜ ಕಾರ್ಯಕರ್ತರು.
ತುಮಕೂರು ಜಿಲ್ಲೆ.