ಕೆಲಸದ ಒತ್ತಡ, ಆಧುನಿಕ ಜೀವನ ಶೈಲಿಯಿಂದ ತಲೆನೋವಿನ ಸಮಸ್ಯೆ ಕಾಡುತ್ತದೆ. ಇತ್ತೀಚಿಗೆ ಮೈಗ್ರೇನ್ ತಲೆನೋವು ಬರುವುದು ಎಲ್ಲರಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಮೈಗ್ರೇನ್ ತಲೆನೋವು ಬಂದ ವ್ಯಕ್ತಿಯು ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಮಾತ್ರೆ ತೆಗೆದುಕೊಂಡರೂ ಆ ಕ್ಷಣಕ್ಕೆ ಮಾತ್ರ ಸಮಸ್ಯೆ ನಿವಾರಣೆ ಮಾಡಬಲ್ಲದು. ಮೈಗ್ರೇನ್ ತಲೆನೋವನ್ನು ಶಾಶ್ವತವಾಗಿ ಹೊಡೆದೋಡಿಸಲು ಯೋಗಾಸನದ ಮರ್ಜರಿ ಆಸನ ಬಹಳ ಪರಿಣಾಮಕಾರಿ. ಯೋಗದ ಮೂಲಕ ನಮ್ಮ ದೇಹ ಮತ್ತು ಮನಸ್ಸು ಕೂಡ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.

ಮಾಡುವ ವಿಧಾನ:

1) ಮೊದಲು ವಜ್ರಾಸನ ಸ್ಥಿತಿಯಲ್ಲಿ ಕುಳಿತುಕೊಳ್ಳಿ. (ಕೆಳಗೆ ಕೊಟ್ಟಿರುವ ವಿಡಿಯೊ ನೋಡಿ)

2) ನಿಮ್ಮ ಎರಡು ಕೈಗಳನ್ನು ಮುಂದಕ್ಕೆ ಚಾಚಿ ಹಸ್ತವನ್ನು ನೆಲದ ಮೇಲೆ ಇರಿಸಿ. ಮಂಡಿಯ ಮೇಲೆ ಬೆಕ್ಕಿನ ರೀತಿಯಲ್ಲಿ ನಿಂತುಕೊಳ್ಳಿ.

3) ನಿಮ್ಮ ಬೆನ್ನುಮೂಳೆಯು ಭೂಮಿಗೆ ಸಮಾನಾಂತರವಾಗಿರಲಿ. ಹಸ್ತ, ಮಂಡಿ ಹಾಗೂ ಪಾದಗಳು ಒಂದು ಸರಳ ರೇಖೆಯಲ್ಲಿರಲಿ, ದೃಷ್ಠಿ ನೇರವಾಗಿರಲಿ.

4) ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ತಲೆಯನ್ನು ಮೇಲಕ್ಕೆ ಎತ್ತಿ. ಮೇಲಕ್ಕೆ ನೋಡುತ್ತಾ ಬೆನ್ನು ಮತ್ತು ಹೊಟ್ಟೆಯ ಭಾಗವನ್ನು ನೆಲದಕಡೆಗೆ ಒತ್ತಿ.

5) ಉಸಿರನ್ನು ಹೊರಹಾಕುತ್ತ (ರೇಚಕ) ತಲೆಯನ್ನು ಕೆಳಗೆ ಭಾಗಿಸಿ. ಬೆನ್ನು ಮೂಳೆಯನ್ನು ಬಿಲ್ಲಿನ ಹಾಗೆ ಬಾಗಿಸುತ್ತಾ ಗದ್ದ ಎದೆಗೆ ತಾಗಿಸಲು ಪ್ರಯತ್ನಿಸಿ. ಈ ಅಭ್ಯಾಸವನ್ನು 5 ಅಥವಾ 10 ಬಾರಿ ಅಭ್ಯಾಸ ಮಾಡಿ.

(ನೆನಪಿಡಿ- ಆಸನದ ಅಭ್ಯಾಸ ಮಾಡುತ್ತಿರುವಾಗ ಕಾಲು, ಕೈಗಳನ್ನು ಯಾವುದೇ ಕಾರಣಕ್ಕೂ ಸರಿಸಬಾರದು)

ಇದನ್ನೂ ಓದಿ: ಆಸ್ತಮಾ ನಿವಾರಣೆಗೆ ರಾಮಬಾಣ ಅರ್ಧ ಮತ್ಸೇಂದ್ರಾಸನ

ಇದನ್ನೂ ಓದಿ: ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ವಕ್ರಾಸನ

ಪ್ರಯೋಜನಗಳು

1) ಮೈಗ್ರೇನ್ ಸಮಸ್ಯೆ ನಿವಾರಿಸುತ್ತದೆ.

2) ಬೆನ್ನುಮೂಳೆಯ ಸಾಮರ್ಥ್ಯ ಹೆಚ್ಚಿಸುತ್ತದೆ.

3) ಕೆಳ ಮತ್ತು ಮೇಲ್ಭಾಗದ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ.

4) ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ.

5) ಹಸ್ತ, ಮಣಿಕಟ್ಟು, ಕೈಗಳು ಮತ್ತು ಭುಜಗಳನ್ನು ಬಲಗೊಳಿಸುತ್ತದೆ.

6) ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.

ಇದನ್ನೂ ಓದಿ: ಸರ್ವ ರೋಗಕ್ಕೂ ಮದ್ದು ಪದ್ಮಾಸನ

ಸೂಚನೆ:

ತಲೆ, ಕುತ್ತಿಗೆ ಮತ್ತು ಮಂಡಿಯ ನೋವಿರುವವರು ಈ ಆಸನ ಮಾಡಬಾರದು.