ಕೊರೊನಾ ಬಂದ ಮೇಲೆ ಆಸ್ತಮಾ ರೋಗಿಗಳ ಸಮಸ್ಯೆ ಅಪಾಯಕಾರಿಯಾಗುತ್ತಿದೆ. ಉಸಿರಾಟ ಸಮಸ್ಯೆ, ಅಲರ್ಜಿ, ಉರಿಯೂತ, ಊದಿಕೊಳ್ಳುವುದು, ಶ್ವಾಸಕೋಶದ ಸಮಸ್ಯೆಗಳೆಲ್ಲವು ಆಸ್ತಮಾದಲ್ಲಿ ಸಾಮಾನ್ಯವಾಗಿದೆ.

ಆಸ್ತಮಾ ಸಮಸ್ಯೆ ಇದ್ದವರು ಪಶ್ಚಾತಾಪ ಪಡದೆ, ನೀವು ಪಡೆದುಕೊಳ್ಳುತ್ತಿರುವ ಚಿಕಿತ್ಸೆಯ ಜತೆಯಲ್ಲಿಯೇ ಯೋಗದ ಮೂಲಕ ಅದನ್ನು ನಿವಾರಣೆ ಮಾಡಿಕೊಳ್ಳಬಹುದು. ಅರ್ಧ ಮತ್ಸೇಂದ್ರಾಸನ ಅಭ್ಯಾಸ ಆಸ್ತಮಾ ರೋಗ ನಿವಾರಣೆಗೆ ಅತ್ಯಂತ ಪರಿಣಾಮಕಾರಿಯಾಗಿದೆ.

ಅರ್ಧ ಮತ್ಸೇಂದ್ರಾಸನ ಎಂಬ ಪದದಲ್ಲಿ ಅರ್ಧ, ಮತ್ಸೇ, ಇಂದ್ರ ಎಂಬ ಮೂರು ಪದಗಳು ಸೇರಿವೆ. ಅರ್ಧ ಎಂದರೆ ಅರ್ಧ, ಮತ್ಸೇ ಅಂದರೆ ಮೀನು, ಇಂದ್ರ ಎಂದರೆ ಪ್ರಜ್ಞೆ  ಎಂಬ ಅರ್ಥವನ್ನು ಸೂಚಿಸುತ್ತದೆ.

ಮಾಡುವ ವಿಧಾನ:

1) ನಿಮ್ಮ ಬೆನ್ನು ಮತ್ತು ಕತ್ತನ್ನು ನೇರವಾಗಿಸಿ ಕಾಲನ್ನು ಮುಂದೆ ಚಾಚಿ ಕುಳಿತುಕೊಳ್ಳಿ.

2) ಎಡಗಾಲನ್ನು ಮಡಚಿ, ನಿಮ್ಮ ಎಡಗಾಲಿನ ಹಿಮ್ಮಡಿಯನ್ನು ಬಲ ಪ್ರಷ್ಠದ ಬದಿಗೆ ಇರಿಸಿ.

3) ಬಲಪಾದವನ್ನು ಎಡ ಮಂಡಿಯ ಹೊರಗೆ ಇರಿಸಿ. ಈಗ ನಿಮ್ಮ ಎಡ ಮೋಣಕೈಯನ್ನು ಬಲ ಮಂಡಿಯ ಹೊರಗೆ ಇರಿಸುತ್ತಾ ಎಡಗೈ ಹಸ್ತದಿಂದ ಬಲ ಪಾದವನ್ನು ಹಿಡಿದುಕೊಳ್ಳಿ ಹಾಗೆ ಬಲಗೈ ಹಿಂದೆ ಇಡಿ.

4) ಉಸಿರನ್ನು ಹೊರ ಹಾಕುತ್ತಾ (ರೇಚಕ) ನಿಮ್ಮ ಹೊಟ್ಟೆ, ಕತ್ತು ಮತ್ತು ಭುಜದ ಭಾಗವನ್ನು ಹಿಂದಕ್ಕೆ ತಿರುಗಿಸಿ ಬೆನ್ನು ನೇರವಾಗಿರಲಿ. ಅದೇ ದಿಕ್ಕಿನಲ್ಲಿ ನೋಡುತ್ತಾ 30 ಸೆಕೆಂಡುಗಳ ಕಾಲ ಇರಿ.

5) ಈಗ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಒಂದೊಂದೇ ಅಂಗಗಳನ್ನು ಬಿಡುಗಡೆಗೊಳಿಸಿ ಮೊದಲನೆಯ ಸ್ಥಿತಿಗೆ ಬಂದು ಇನ್ನೊಂದು ಬದಿಗೆ ಪುನರಾವರ್ತಿಸಿ.

ಪ್ರಯೋಜನಗಳು:

1) ಆಸ್ತಮ ಕಾಯಿಲೆ ನಿವಾರಣೆಗೆ ರಾಮಬಾಣ ಇದ್ದಂತೆ.

2) ಋತುಚಕ್ರದ ಸಮಸ್ಯೆ ನಿವಾರಿಸುತ್ತದೆ.

3) ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ.

4) ಲಿವರ್ ಮತ್ತು ಮೂತ್ರಪಿಂಡಕ್ಕೆ ಅತ್ಯಂತ ಉತ್ತಮವಾದ ಆಸನ.

5) ದೇಹವನ್ನು ಸಡಿಲಗೊಳಿಸಲು ಸಹಾಯವಾಗುತ್ತದೆ.

6) ಬೆನ್ನುಮೂಳೆ ಯನ್ನು ಉದ್ದಿಪನಗೊಳಿಸಿ ಅದನ್ನು ಶಕ್ತಿಯುತ ಗೊಳಿಸುತ್ತದೆ.

ಎಚ್ಚರಿಕೆ:

ನೀವು ಯಾವುದೇ ರೀತಿಯ ಬೆನ್ನುಮೂಳೆಯ ಅಥವಾ ಹೊಟ್ಟೆಯ ಭಾಗದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಈ ಆಸನ ಮಾಡಬಾರದು.