ಮನೆಯಲ್ಲಿ ಮಗು ಹುಟ್ಟಿದರೆ ಮನೆ ಮಂದಿ ಸಿಹಿ ಹಂಚಿ ಸಂಭ್ರಮಿಸುವುದನ್ನು ಕೇಳಿದ್ದೇವೆ. ಅಬ್ಬಬ್ಬ ಅಂದರೆ, ಸ್ನೇಹಿತರಿಗೆ, ಅಕ್ಕ-ಪಕ್ಕದ ಮನೆಯವರಿಗೆ ಸಿಹಿ ಹಂಚಿ ಸಂತೋಷ ಹಂಚಿಕೊಳ್ಳುತ್ತೇವೆ. ಅದರಲ್ಲಿ ಹೆಣ್ಣು ಮಗು ಹುಟ್ಟಿದರೆ ಸಂಭ್ರಮಕ್ಕೆ ಕೊಕ್ಕೆ ಹಾಕುವ ಜನರೂ ಇದ್ದಾರೆ.

ಇಲ್ಲೊಂದು ಗ್ರಾಮ ಹೆಣ್ಣು ಮಕ್ಕಳ ಜನನದಿಂದಲೇ ಬರ, ನೀರಿನ ಸಮಸ್ಯೆಯಿಂದ ಪಾರಾಗಿದೆ. ಈ ಊರಿನಲ್ಲಿ ಹೆಣ್ಣು ಮಗು ಜನಿಸಿದರೆ 111 ಗಿಡಗಳನ್ನು ನೆಡುತ್ತಾರೆ. ರಕ್ಷಾ ಬಂಧನ ದಿನ ಗಿಡ, ಮರಗಳಿಗೇ ರಾಖಿ ಕಟ್ಟಿ ಆಶೀರ್ವಾದ ಬೇಡುತ್ತಾರೆ. ಯಾರಾದರೂ ಮೃತರಾದರೂ 11 ಗಿಡ ನೆಟ್ಟು ಬೆಳೆಸುವ ರೂಢಿ ಈ ಊರಿನಲ್ಲಿದೆ.

ಅಸಲಿಗೆ ಇಂಥದ್ದೊಂದು ಸಂಪ್ರದಾಯ ಹುಟ್ಟು ಹಾಕಿದ್ದು ಗ್ರಾಮ ಪಂಚಾಯಿತಿ ಸದಸ್ಯ. ಒಂದು ಕಾಲದಲ್ಲಿ ಬರದಿಂದ ಕಂಗೆಟ್ಟಿದ್ದ ಗ್ರಾಮ ಇಂದು ಹೆಣ್ಣು ಮಕ್ಕಳ ಜನನದಿಂದಲೇ ಅಭಿವೃದ್ಧಿಯಾಗಿ ಭಾರತವಷ್ಟೇ ಅಲ್ಲ, ಏಷ್ಯಾ ಖಂಡದಾಚೆಗೂ ಪ್ರಸಿದ್ಧಿಯಾಗಿದೆ.

ಈ ಊರು ಇರುವುದು ರಾಜಸ್ಥಾನದಲ್ಲಿ. ಪಿಪ್ಲಾಂತ್ರಿ ಎನ್ನುವುದು ಆ ಊರಿನ ಹೆಸರು. ಇದೊಂದು ಸಣ್ಣ ಹಳ್ಳಿ. ಅದು ಬರದ ನಾಡಾದ್ದರಿಂದ ಅಂತರ್ಜಲ ಪಾತಾಳಕ್ಕೆ ಇಳಿದಿತ್ತು. ಅಂಥ ಊರಿನಲ್ಲಿ ಗಿಡ, ಮರ ಬೆಳೆದು ಹಚ್ಚ ಹಸಿರಾಗಿರುವುದರ ಹಿಂದೆ ಒಂದು ರೋಚಕ ಕತೆಯೇ ಅಡಗಿದೆ.

ಗ್ರಾಮದ ಸರಪಂಚ ಆಗಿದ್ದ ಶ್ಯಾಮ್ ಸುಂದರ ಅವರ ಮುದ್ದಿನ ಮಗಳು ಕಿರಣ್ ಅಕಾಲಿಕ ವಿಧಿವಶರಾದಾಗ ಇಡೀ ಕುಟುಂಬ ಅಧೀರಗೊಂಡಿತು. ಮಗಳ ನೆನಪು ಈ ಭೂಮಿ ಮೇಲೆ ಶಾಶ್ವತ ಇರಬೇಕೆಂಬ ಹಂಬಲ ಶ್ಯಾಮಸುಂದರದ್ದು.ಅದಕ್ಕಾಗಿ ಅವಳ ನೆನಪಲ್ಲಿ ಗಿಡ ನೆಟ್ಟರು. ಮುಂದೆ ಇದನ್ನು ಇಡೀ ಗ್ರಾಮವೇ ಮಾಡುವಂತೆ ಮಾಡಿದರು.

ಅದಕ್ಕಾಗಿ ಕಿರಣ್ ನಿಧಿ ಯೋಜನೆ ರೂಪಗೊಂಡಿತು. ಈ ಯೋಜನೆ ಪ್ರಕಾರ ಊರಿನಲ್ಲಿ ಹೆಣ್ಣು ಮಗು ಜನಿಸಿದರೆ 111 ಗಿಡ ನೆಟ್ಟು 31 ಸಾವಿರ ಮಗುವಿನ ಹೆಸರಲ್ಲಿ ಠೇವಣಿ ಇಡುತ್ತಾರೆ.ಇದರಲ್ಲಿ ಕುಟುಂಬದ ಪಾಲು 10 ಸಾವಿರವಾದರೆ ಬಾಕಿ ಹಣವನ್ನು ಊರಿನವರು ಸಂಗ್ರಹಿಸುತ್ತಾರೆ.

ಠೇವಣಿ ಅವಧಿ ಪೂರ್ಣವಾದಾಗ ಹಣವನ್ನು ಮಗುವಿನ ಶಿಕ್ಷಣ ಅಥವಾ ಮದುವೆಗೆ ಬಳಸಲಾಗುತ್ತದೆ. ಆ 111 ಮರಗಳು ಗ್ರಾಮದ ಆಸ್ತಿ. ಆ ಮರಗಳನ್ನು ತಂಬಾ ಜಾಗೂರಕರಾಗಿ ಜೋಪಾನ ಮಾಡುತ್ತಾರೆ. ಹೆಚ್ಚು ಮರ ಬೆಳೆಸಿದ್ದರಿಂದ ಆ ಊರಿನ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ.

ಶರತ್ತುಗಳು ಅನ್ವಯ
ಹೆಣ್ಣು ಮಗು ಜನಿಸಿದ ಸಂದರ್ಭದಲ್ಲಿ ಮಗುವಿನ ಹೆಸರಿನಲ್ಲಿ ಠೇವಣಿ ಇಡುವಾಗಲೇ ಬಿಗಿ ಶರತ್ತುಗಳನ್ನು ವಿಧಿಸಲಾಗುತ್ತದೆ. ಆ ಕುಟುಂಬ  ಭ್ರೂಣಹತ್ಯೆ ಮಾಡಬಾರದು. 111 ಸಸಿಗಳನ್ನು ಸೂಕ್ತ ರೀತಿಯಲ್ಲಿ ಪೋಷಿಸಬೇಕು. ಆ ಸಸಿಗಳು ಗ್ರಾಮದ ಆಸ್ತಿಯಾಗಬೇಕು. ಮಗುವಿಗೆ ಮುಂದೆ ಆ ಹಣ ದೊರಕುವಂತೆ ಕಾಗದದಲ್ಲಿ ಪಾಲಕರಿಂದ ಬರೆಸಿಕೊಳ್ಳುತ್ತಾರೆ. ಈ ವರೆಗೆ ಗ್ರಾಮದಲ್ಲಿ 3 ಲಕ್ಷಕ್ಕೂ ಹೆಚ್ಚು ಮರಗಳನ್ನು ನೋಡಬಹುದಾಗಿದೆ.

ಭ್ರೂಣಹತ್ಯೆಯ ಅಪಖ್ಯಾತಿಗೆ ಒಳಗಾದ ರಾಜಸ್ಥಾನದಲ್ಲಿ ಪ್ರತಿ ಸಾವಿರ ಪುರುಷರಿಗೆ ಹೆಣ್ಣುಮಕ್ಕಳ ಸಂಖ್ಯೆ 888. ಇಂತಹ ಪರಿಸ್ಥಿತಿಯಲ್ಲಿ ಪಿಪ್ಲಾಂತ್ರಿ ಗ್ರಾಮ ಹೆಣ್ಣುಮಕ್ಕಳಿಗೆ ಆತ್ಮಸ್ತೈರ್ಯ ನೀಡುವುದಲ್ಲದೆ ಪರಿಸರಕ್ಕೂ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ.

ಊರಿನಲ್ಲಿ ಈಗ ಯಾರೂ ಗುಳೆ ಹೋಗದೆ ವ್ಯವಸಾಯ ಮಾಡುತ್ತಿದ್ದಾರೆ. ನಿರ್ಮಲಗ್ರಾಮ ಪುರಸ್ಕಾರ, ಆದರ್ಶಗ್ರಾಮ ಪುರಸ್ಕಾರ ಹೀಗೆ ಹಲವು ಪ್ರಶಸ್ತಿಗಳು ಬಂದಿವೆ. ಗ್ರಾಮದ ಅಧ್ಯಯನಕ್ಕಾಗಿ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು, ಸಂಶೋಧಕರು ಬರುತ್ತಾರೆ.

ಚಿತ್ರ, ಲೇಖನ:
ವಿನೋದ ಪಾಟೀಲ್, ಬೆಳಗಾವಿ.

(ಆಕರಗ್ರಂಥ : ಶಿವರಾಮ ಪೈಲೂರರ ಪಿಪ್ಲಾಂತ್ರಿ ಪುಸ್ತಕ)

ಇದನ್ನೂ ಓದಿ