ಕೋವಿಡ್ 19 ಕೊರೊನಾಗೆ ಭಾರತ ದೇಶವೇ ಸಂಕಷ್ಟ ಸಿಲುಕಿರುವಾಗ ತೆಲುಗು ಚಲನಚಿತ್ರ ಸೆಲೆಬ್ರಿಟಿಗಳು ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯ ಸರ್ಕಾರಗಳಿಗೆ ಧಾರಾಳವಾಗಿ ದೇಣಿಗೆ ನೀಡಲು ಮುಂದಾಗಿದ್ದಾರೆ.

ಇದರೊಂದಿಗೆ ಇತರ ಚಿತ್ರರಂಗದ ತಾರೆಯರಿಗೂ ಮಾದರಿಯಾಗಿದ್ದಾರೆ. ಕೇವಲ ಸಿನಿಮಾದಲ್ಲಿ ಹೀರೊಗಳಾಗಿ ಡೈಲಾಗ್ ಹೊಡೆಯದೆ ನಿಜ ಜೀವನದಲ್ಲಿಯೂ ಜನರ ನೆರವಿಗೆ ದಾವಿಸಿ ಲಕ್ಷಾಂತರ ರೂ. ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

ನಟರಾದ ರಾಮ್ ಚರಣ್ ಮತ್ತು ನಿತಿನ್, ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್,  ಅನಿಲ್ ರವಿಪುಡಿ ಮತ್ತು ಕೊರಟಾಲ ಶಿವ ಮತ್ತು ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಅವರು ಸೇರಿದಂತೆ ತೆಲುಗು ಚಿತ್ರೋದ್ಯಮವೇ ದಾನಕ್ಕೆ ನಿಂತಿದೆ.

ಪ್ರಧಾನಮಂತ್ರಿ ರಿಲೀಪ್ ಫಂಡ್ ಗೆ ಒಂದು ಕೋಟಿ ರೂ., ಹಾಗೂ ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಿಎಂ ರಿಲೀಫ್ ಫಂಡ್‌ಗಳಿಗೆ ತಲಾ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ಪವನ್ ಕಲ್ಯಾಣ್ ಗುರುವಾರ ಟ್ವೀಟ್ ಮಾಡಿದ್ದಾರೆ.

ನಟ ರಾಮ್ ಚರಣ್ ಕೂಡ ಕೇಂದ್ರ ಸರ್ಕಾರ ಮತ್ತು ತೆಲುಗು ರಾಜ್ಯಗಳಿಗೆ 70 ಲಕ್ಷ ರೂ. ಕೊಡುವುದಾಗಿ ಟ್ವೀಟ್ ಮಾಡಿದ್ದಾರೆ. “ಪವನ್ ಕಲ್ಯಾಣ ಅವರ ನಿರ್ಧಾರ ಸ್ಪೂರ್ತಿದಾಯಕವಾಗಿದೆ.  ಸರ್ಕಾರಗಳ ಶ್ಲಾಘನೀಯ ಪ್ರಯತ್ನಗಳಿಗೆ ನೆರವಾಗಲು ನಾನೂ ಕೊಡುಗೆಯನ್ನು ನೀಡಲು ಬಯಸುತ್ತೇನೆ… ನೀವೆಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರುತ್ತೀರಿ ಎಂದು ಭಾವಿಸುತ್ತೇವೆ! ”ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ.

ನಟ, ಸೂಪರ್ ಸ್ಟಾರ್ ಮಹೇಶ ಬಾಬು ಅವರು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಸಿಎಂ ರಿಲೀಪ್ ಫಂಡ್ ಗೆ ಒಂದು ಕೋಟಿ ರೂ. ದೇಣಿಗೆ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.

ಎರಡೂ ತೆಲುಗು ರಾಜ್ಯಗಳಿಗೆ ತಲಾ 10 ಲಕ್ಷ ರೂ. ದೇಣಿಗೆ ನೀಡಲು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ಧರಿಸಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ ಮತ್ತು ಕೊರಟಾಲ ಶಿವ ಕೂಡ ತಲಾ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದ್ದಾರೆ.

ನಟ ನಿತಿನ್ ಅವರು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸಿಎಂ ರಿಲೀಪ್ ಫಂಡ್ ಗೆ ತಲಾ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಟ್ವಿಟ್ ಮಾಡಿದ್ದಾರೆ.