ಫೇಸ್ ಬುಕ್, ವಾಟ್ಸ್ ಆ್ಯಪ್ ಗಳಲ್ಲಿ ಹರಿದಾಡುತ್ತಿರುವ ಈ ಹಸಿ ಸುಳ್ಳಿನ ಕತೆ ಇಲ್ಲಿದೆ. ಇಟಲಿಯಲ್ಲಿ COVID-19 ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವೈದ್ಯ ದಂಪತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ವಾಸ್ತವದಲ್ಲಿ ಈ ಚಿತ್ರ ಇಟಿಲಿಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ. ಆ ಚಿತ್ರದ ಹಿನ್ನೆಲೆಯೇ ಬೇರೆ ಇದೆ. ದಿ ಸ್ಟೇಟ್ ನೆಟ್ವರ್ಕ್ ಈ ಚಿತ್ರದ ಸತ್ಯವನ್ನು ಪತ್ತೆ ಮಾಡಿದೆ. ಅದರ ಪೂರ್ಣ ವಿವರ ಇಲ್ಲಿದೆ.

ಎರಡು ವಾರಗಳ ಹಿಂದೆ ಸ್ಪೇನ್‌ನ ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೊ ಇದು. ಆ ಚಿತ್ರಕ್ಕೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ರೀತಿ ಕತೆ ಬರೆಯಲಾಗಿದೆ. ‘ಇವರು ಇಟಲಿಯ ವೈದ್ಯ ದಂಪತಿಗಳಾಗಿದ್ದು, ಇಬ್ಬರೂ ಹಗಲಿರುಳು ಶ್ರಮಿಸಿ 134 ರೋಗಿಗಳನ್ನು ಉಳಿಸಿದ್ದಾರೆ. ಆದರೆ, 8 ದಿನಗಳಲ್ಲೇ ಸ್ವತಃ ಕೋವಿಡ್ 19 ಸೋಂಕಿಗೆ ಒಳಗಾದರು. ಅವರನ್ನು ವಿಶೇಷ ಚಿಕಿತ್ಸಾ ಕೊಠಡಿಗೆ ವರ್ಗಾಯಿಸಲಾಯಿತು. ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದು, ಇಬ್ಬರೂ ಅಪ್ಪಿಕೊಂಡು ನಿಂತರು. ಅರ್ಧ ಗಂಟೆಯ ನಂತರ ಇಬ್ಬರೂ ಸಾವನ್ನಪ್ಪಿದ್ದಾರೆ’ ಎಂದು ಪೋಸ್ಟ್ ಮಾಡಲಾಗಿದೆ.

ಫೇಸ್ ಬುಕ್ ನಲ್ಲಿ ವೈರಲ್ ಆಗಿರುವ ಪೋಸ್ಟ್.

ಅದರ ಸತ್ಯಾಂಶ ಶೋಧನೆ ಮಾಡಲು ಚಿತ್ರವನ್ನು ರಿವರ್ಸ್ ಸರ್ಚ್ ನಡೆಸಿದೆವು. ಅದರಲ್ಲಿ ಕಂಡ ಸಾಕ್ಷಿಗಳ ಪ್ರಕಾರ ಮಾರ್ಚ್ 12 ರಂದು ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಚಿತ್ರವನ್ನು ಕ್ಲಿಕ್ ಮಾಡಲಾಗಿದೆ ಎಂದು ಕಂಡುಬಂದಿದೆ. ಅಂತರರಾಷ್ಟ್ರೀಯ ಛಾಯಾಚಿತ್ರ ಸಂಸ್ಥೆ, ಅಸೋಸಿಯೇಟೆಡ್ ಪ್ರೆಸ್ ಪಿಕ್ಚರ್ (ಎಪಿ) ಈ ಚಿತ್ರವನ್ನು ಪ್ರಕಟಿಸಿದೆ. ಫೋಟೋ ಜರ್ನಲಿಸ್ಟ್ ಎಮಿಲಿಯೊ ಮೊರೆನಾಟ್ಟಿ ಈ ಚಿತ್ರವನ್ನು ತೆಗೆದಿದ್ದಾರೆ.

ಕೊರೊನಾ ವೈರಸ್: ಭಯ ಹುಟ್ಟಿಸುತ್ತಿರುವ 10 ಸುಳ್ಳುಗಳು

ಮೂಲ ಫೋಟೊ

ಮಾರ್ಚ್ ಮೊದಲ ವಾರದಲ್ಲಿ COVID-19 ಏಕಾಏಕಿ ಅಪಾಯಕಾರಿಯಾದ್ದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುರೋಪಿನಿಂದ ವಿಮಾನ ಪ್ರಯಾಣ ನಿಷೇಧ ಮಾಡಿದರು. ಮಾರ್ಚ್ 12, 2020 ರ ಗುರುವಾರ ಸ್ಪೇನ್‌ನ ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ “ಒಂದೆರಡು ಕಿಸ್’ ಎನ್ನುವ ಶೀರ್ಷಿಕೆಯಡಿ ಫೋಟೊಗ್ರಾಪರ್ ಚಿತ್ರ ಸೆರೆ ಹಿಡಿದಿದ್ದರು. ಅದರಲ್ಲಿ ಮೇಲಿನ ಚಿತ್ರವೂ ಒಂದು. ಏಷ್ಯಾದ ಅತಿದೊಡ್ಡ ಫ್ಯಾಕ್ಟ್ ಚೆಕ್ ಸುದ್ದಿ ಸಂಸ್ಥೆ ಭೂಮ್ ಲೈವ್ ಸಹ ಇದು ಸುಳ್ಳು ಸುದ್ದಿ ಎಂದು ಪ್ರಕಟಿಸಿದೆ.

ಮೀನಿಗೂ ಕೊರೊನಾ: ಸುಳ್ಳು ಸುದ್ದಿಯ ಅಸಲಿ ಕತೆ ಓದಿ