5, 10, 100 ರೂ. ನೋಟುಗಳು ರದ್ದಾಗುತ್ತದೆ ಎನ್ನುವ ಸುದ್ದಿ ಸುಳ್ಳು

5, 10, 100 ರೂ. ನೋಟುಗಳು ರದ್ದಾಗುತ್ತದೆ ಎನ್ನುವ ಸುದ್ದಿ ಸುಳ್ಳು

ಕೋವಿಡ್ 19 ಕೊರೊನಾ, ವ್ಯಾಕ್ಸಿನ್ ಬಗ್ಗೆ ಸುಳ್ಳು ಸುದ್ದಿಗಳು ವ್ಯಾಪಕವಾಗಿರುವ ಸಂದರ್ಭದಲ್ಲಿಯೇ ಹಣ ಕಾಸಿಗೆ ಸಂಬ೦ಧಿಸಿದ ಸುದ್ದಿಯೊಂದು ಜನರಲ್ಲಿ ಗೊಂದಲ ಸೃಷ್ಟಿಸಿದೆ.

ದೇಶದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವ ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) 5, 10, 100 ರೂ. ಮುಖ ಬೆಲೆಯ ಹಳೆಯ ನೋಟುಗಳನ್ನು ಮಾರ್ಚ್ ತಿಂಗಳ ನಂತರ ರದ್ದು ಮಾಡುತ್ತಿದೆ ಎನ್ನುವ ಸಂದೇಶ ವೈರಲ್ ಆಗುತ್ತಿದೆ.

ಅನೇಕ ಸುದ್ದಿ ಸಂಸ್ಥೆಗಳು ಕೂಡ ಇದೇ ರೀತಿಯ ಸುದ್ದಿ ಬಿತ್ತರಿಸಿವೆ. ಈ ಮಾಹಿತಿಯನ್ನು ಆರ್‌ಬಿಐ ಅಧಿಕಾರಿ ಅವರೇ ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ ಎಂದೂ ಸುದ್ದಿಗಳು ಹರಿದಾಡುತ್ತಿವೆ.

ವಾಸ್ತವದಲ್ಲಿ ಇದೊಂದು ಸುಳ್ಳು ಸುದ್ದಿಯಾಗಿದೆ. ಭಾರತದಲ್ಲಿ 5, 10, 100 ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಲಾಗುತ್ತದೆ ಎಂದು ಆರ್‌ಬಿಐ ಇತ್ತೀಚೆಗೆ ಎಲ್ಲಿಯೂ ಹೇಳಿಲ್ಲ.

ಅಲ್ಲದೆ, ಇಂಥ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಡಳಿತ ಸಾಕಷ್ಟು ವಿಚಾರ ಮಾಡಿ ಮಾಡಬೇಕಾಗುತ್ತದೆ. ಆದರೂ ಈ ಸುಳ್ಳು ಸುದ್ದಿ ವಿಷಯವಾಗಿ ನಾವು ಈ ರೀತಿಯ ತನಿಖೆಗಳನ್ನು ನಡೆಸಿದರು.

ನೋಟುಗಳನ್ನು ರದ್ದು ಮಾಡುವುದು ಗಂಭೀರ ವಿಷಯವಾದ್ದರಿಂದ ಈ ಬಗ್ಗೆ ಆರ್‌ಬಿಐ ಪ್ರಕಟಣೆ ಹೊರಡಿಸುತ್ತದೆ. ಅಲ್ಲದೆ, ಅದರ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಮಾಹಿತಿ ನೀಡುತ್ತದೆ.

ಆದರೆ, ಆರ್‌ಬಿಐ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಜನವರಿ ತಿಂಗಳಲ್ಲಿ ನೋಟಿಗೆ ಸಂಬ೦ಧಿಸಿದ ಯಾವುದೇ ಪ್ರಕಟಣೆಯನ್ನು ಆರ್‌ಬಿಐ ಹೊರಡಿಸಿಲ್ಲ ಎನ್ನುವ ಮಾಹಿತಿ ದೊರೆಯಿತು.

ಈ ನಡುವೆಯೇ ಭಾರತದಲ್ಲಿ 5, 10, 100 ಮುಖಬೆಲೆಯ ನೋಟುಗಳನ್ನು ಮಾರ್ಚ್ ನಂತರ ರದ್ದು ಮಾಡಲಾಗುತ್ತದೆ ಎನ್ನುವ ಸುದ್ದಿ ಸುಳ್ಳು. ಕೇಂದ್ರ ಸರಕಾರ ಇಂಥ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಪ್ರೆಸ್ ಇನ್‌ಫಾರ್ಮೆಷನ್ ಬ್ಯುರೊ ಹೇಳಿದೆ. ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದೆ.

ರದ್ದಾದ ನೋಟುಗಳು ಯಾವುದು?

ಭಾರತದಲ್ಲಿ ಮೊದಲಿನಿಂದಲೂ 5, 10, 20, 50, 100, 500, 1000 ಮುಖಬೆಲೆಯ ನೋಟುಗಳು ಇದ್ದರು. 2018ರಲ್ಲಿ ನೋಟ್ ಬ್ಯಾನ್ ಆದಾಗ 1000, 500 ಮುಖ ಬೆಲೆಯ ನೋಟುಗಳು ರದ್ದಾದವು. 200, 2000 ಮುಖಬೆಲೆಯ ಹೊಸ ನೋಟುಗಳು ಬಂದವು. ಜತೆಗೆ ಎಲ್ಲ ನೋಟುಗಳು ಬದಲಾದವು.

ಅದಕ್ಕೂ ಮೊದಲು ಆರ್‌ಬಿಐ ಕೆಲ ನೋಟುಗಳನ್ನು ರದ್ದು ಮಾಡಿತ್ತು. ಅಂದರೆ, ಅದು ಯಾವುದೇ ಮುಖ ಬೆಲೆಯ ಆಧಾರದ ಮೇಲೆ ನೋಟುಗಳನ್ನು ರದ್ದು ಮಾಡಿರಲಿಲ್ಲ. ಇಸವಿಗಳು ಇಲ್ಲದ ನೋಟುಗಳನ್ನು ರದ್ದು ಮಾಡಿದೆ. ಪ್ರತೀ ನೋಟಿನ ಒಂದು ಭಾಗದಲ್ಲಿ ಇಸವಿಗಳನ್ನು ಮುದ್ರಿಸಲಾಗುತ್ತಿದೆ. ಇಸವಿಗಳು ಇಲ್ಲದೆ ಇರುವ ನೋಟುಗಳು ರದ್ದಾಗಿ ಬಹಳ ವರ್ಷಗಳೇ ಆಗಿವೆ.

ತೀರ್ಮಾನ:
ದೇಶದಲ್ಲಿ 5, 10, 100 ಮುಖಬೆಲೆಯ ನೋಟುಗಳು ಮಾರ್ಚ್ 2021ರ ನಂತರ ರದ್ದಾಗಲಿವೆ ಎನ್ನುವ ಮಾಹಿತಿಗೆ ಯಾವುದೇ ಆಧಾರ ಇಲ್ಲ. ಹಾಗಾಗಿ ಅದು ಸುಳ್ಳು ಮಾಹಿತಿ.

Leave a reply

Your email address will not be published. Required fields are marked *