ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕರ್ನಾಟಕ, ಮಹಾರಾಷ್ಟ್ರ ಗಡಿ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಎರಡೂ ರಾಜ್ಯಗಳ ಗಡಿಯಲ್ಲಿ ಭಾಷಾ ವೈಷಮ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಈ ವಿವಾದ ಕನ್ನಡ, ಮರಾಠಿಗರ ಭಾವನಾತ್ಮಕ ವಿಷಯವಾಗಿರುವ ಕಾರಣಕ್ಕೆ ಶಿವಸೇನೆ ಇದನ್ನು ಬಿಜೆಪಿ ವಿರುದ್ಧದ ರಾಜಕೀಯ ಅಸ್ತ್ರವಾಗಿ ಪ್ರಯೋಗಿಸಲು ಹವಣಿಸುತ್ತಲೇ ಇದೆ. ಅದರ ಪರಿಣಾಮ ಕರ್ನಾಟಕದ ಬೆಳಗಾವಿ ಜಿಲ್ಲೆಯನ್ನು ಬಾಧಿಸುತ್ತಿದ್ದು, ಅಧಿಕಾರ ಕಳೆದುಕೊಂಡು ಸುಮ್ಮನಾಗಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಕೂಡ ಮತ್ತೆ ಬೆಳಗಾವಿಯಲ್ಲಿ ಚುರುಕಾಗಿದೆ.
ಇದರಿಂದ ಎರಡೂ ರಾಜ್ಯಗಳ ಗಡಿಯಲ್ಲಿ ಪ್ರತಿಭಟನೆಯ ಆಕ್ರೋಶ ಆಗಾಗ ಸಿಡಿಯುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಭಾಷಾ ವೈಷಮ್ಯ ತ್ವೇಷಮಯ ಸ್ಥಿತಿಗೆ ತಲುಪಿತ್ತು. ಮಹಾರಾಷ್ಟ್ರದಲ್ಲಿ ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕರ್ನಾಟಕದಲ್ಲಿ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಪ್ರತಿಕೃತಿ ದಹಿಸಿದ್ದರಿಂದ 2019ರ ಡಿ.29 ರಂದು ಎರಡೂ ರಾಜ್ಯಗಳ ಮಧ್ಯೆ ಸರಕಾರಿ ಸಾರಿಗೆ ಬಸ್‍ಗಳ ಓಡಾಟವೇ ಬಂದ್ ಆಗಿತ್ತು. ಬೆಳಗಾವಿ ಮತ್ತು ಮಹಾರಾಷ್ಟ್ರದ ಕೊಲ್ಲಾಪುರ ಮಧ್ಯೆ ನಿತ್ಯ ಎರಡೂ ರಾಜ್ಯಗಳ 400ಕ್ಕೂ ಹೆಚ್ಚು ಬಸ್‍ಗಳು ಸಂಚರಿಸುತ್ತವೆ. ಆ ಬಸ್‍ಗಳು ಒಂದು ದಿನ ಸಂಚಾರವನ್ನೇ ನಿಲ್ಲಿಸಿದ್ದವು. ಶಿವಸೇನೆ ಕನ್ನಡ ಫಲಕಗಳ ಮೇಲೆ ಕನ್ನಡಿಗ ಸಂಘಟನೆಗಳು ಮರಾಠಿ ಫಲಕಗಳ ತೆರವಿಗೆ ಪ್ರತಿಭಟನೆಗೆ ಇಳಿದಿದ್ದವು. ಅಷ್ಟರ ಮಟ್ಟಿಗೆ ವಿವಾದ ಜೋರಾಗಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ.

ಶಿವಸೇನೆ ಅಸ್ತಿತ್ವಕ್ಕೆ ಗಡಿ ಅಸ್ತ್ರ
ಈಗ ಸೃಷ್ಟಿಯಾಗಿರುವ ಗಡಿ ವಿವಾದದ ಬಗ್ಗೆ ಬೆಳಗಾವಿ ಅಥವಾ ಮಹಾರಾಷ್ಟ್ರದ ಸಾರ್ವಜನಿಕರು ಪಾಲ್ಗೊಂಡಿಲ್ಲ. ಇದೊಂದು ಪೂರ್ಣ ರಾಜಕೀಯ ಪ್ರೇರಿತವಾಗಿ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ದೋಸ್ತಿ ಬಿಟ್ಟು ತನ್ನದೇ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಶಿವಸೇನೆ ಈ ಗಡಿ ಅಸ್ತ್ರ ಪ್ರಯೋಗಿಸುತ್ತಿದೆ.
ಮಹಾರಾಷ್ಟ್ರದಲ್ಲಿ ಕರ್ನಾಟಕ ಗಡಿ ವಿಚಾರ ಮುಂದಿಟ್ಟುಕೊಂಡು ಅನೇಕ ಚುನಾವಣೆಗಳು ನಡೆದಿದೆ. ಶಿವಸೇನೆ ಸೇರಿ ಅಲ್ಲಿನ ಪಕ್ಷಗಳು ಬೆಳಗಾವಿ ಗಡಿಯನ್ನು ತಮ್ಮ ಅನಕೂಲಕ್ಕೆ ತಕ್ಕಂತೆ ಬಳಿಸಿಕೊಳ್ಳುತ್ತಿರುವುದು ಅನೇಕ ದಶಕಗಳಿಂದ ನಡೆದುಕೊಂಡು ಬಂದಿದೆ. ಈ ಬಾರಿ ಕಿಚ್ಚನ್ನು ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಹೊತ್ತಿಸಿದ್ದಾರೆ. ಬಿಜೆಪಿ ಸಖ್ಯ ತೊರೆದ ಶಿವಸೇನೆಯ ಅಸ್ತಿತ್ವವೇ ಈ ವಿವಾದದಲ್ಲಿ ಅಡಗಿದೆ.
ಹಾಗಾಗಿ ಸಿಎಂ ಆದ ಕೆಲವೆ ದಿನಗಳಲ್ಲಿ ಗಡಿ ಪ್ರಕರಣವನ್ನು ಜೀವಂತವಾಗಿ ಇಡೋ ಎಲ್ಲಾ ಯತ್ನ ಆರಂಭಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಅನೇಕ ದಶಕಗಳಿಂದ ರಾಜಕೀಯ ಮಾಡಿವೆ. ಈ ಬಾರಿ ಹಳೆಯ ಗೆಳೆಯನ್ನು ಬಿಟ್ಟು ಶಿವಸೇನೆ ಸೈದಾಂತಿಕ ವಿರೋಧಿಗಳಾದ ಕಾಂಗ್ರೆಸ್, ಎನ್‍ಸಿಪಿ ಜತೆಗೆ ಸೇರಿ ಸರ್ಕಾರ ರಚನೆ ಮಾಡಿದೆ.
ಸಖ್ಯ ಬಿಟ್ಟ ಬಳಿಕ ಉದ್ಧವ ಠಾಕ್ರೆ ಅವರಿಗೆ ಮರಾಠಿಗರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳಬೇಕಿದೆ. ಹಿಂದೂತ್ವ ಅಜೆಂಡಾ ಬಳಸಿದರೆ ಮರಾಠಿಗರ ಮೊದಲ ಆಯ್ಕೆ ಬಿಜೆಪಿ ಆಗುತ್ತದೆ. ಹಾಗಾಗಿ ಮರಾಠಿಗರನ್ನು ಭಾವನಾತ್ಮವಾಗಿ ಹಿಡಿದಿಡಲು ಉದ್ದವ ಠಾಕ್ರೆ ಅವರು ಗಡಿ ಅಸ್ತ್ರವನ್ನು ಬಳಕೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಗಡಿ ವಿಚಾರ ಸುಂಪುಟ ವಿಸ್ತರಣೆಗಿಂತ ಹೆಚ್ಚು ಸದ್ದು ಮಾಡಿತ್ತು.
ಗಡಿ ಪ್ರಕರಣ ಸುಪ್ರಿಂ ಕೋರ್ಟ್ ಅಂಗಳದಲ್ಲಿ ಇದೆ ಎನ್ನುವುದು ಮರೆತು ಮನಸ್ಸಿಗೆ ಬಂದ ಹಾಗೇ ವರ್ತಿಸುತ್ತಿದ್ದವರು ಈಗಲೂ ವಿವಾದ ಕೆದಕಲು ಕಾಯುತ್ತಲೇ ಇದ್ದಾರೆ.

ಗಡಿ ಉಸ್ತುವಾರಿಗೆ ಇಬ್ಬರು ಸಚಿವರು
ಶಿವಸೇನೆ, ಎನ್‍ಸಿಪಿ ಎರಡೂ ಪಕ್ಷಗಳ ರಾಜಕೀಯ ವಿಚಾರ ಏನೇ ಇದ್ದರೂ ಗಡಿ ವಿಷಯದಲ್ಲಿ ಇಬ್ಬರದ್ದೂ ಒಂದೇ ನಡೆ. ಗಡಿ ವಿಷಯದಿಂದಲೇ ಎನ್‍ಸಿಪಿ ಅಸ್ತಿತ್ವ ಕಂಡಿದೆ. ಬಿಜೆಪಿಯ ಹಿಂದುತ್ವದ ಪ್ರಭಾವದಿಂದ ಶಿವಸೇನೆಯೂ ಈಗ ಗಡಿ ವಿಚಾರವೇ ಪ್ರಧಾನವಾಗಿ ಪರಿಗಣಿಸಿದೆ. ಈ ಭಾವನಾತ್ಮಕ ವಿಷಯದಿಂದ ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಮೀರಜ್, ಸೊಲ್ಲಾಪುರ, ಅಕ್ಕಲಕೋಟೆ, ಕೊಲ್ಲಾಪುರ, ಸಾಂಗ್ಲಿ, ಜತ್, ಚಂದಗಡ ಜಿಲ್ಲೆಗಳಲ್ಲಿ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳಬಹುದು ಎಂಬುದು ಶಿವಸೇನೆ ಲೆಕ್ಕಾಚಾರ.
ಅದಕ್ಕಾಗಿಯೇ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಗಡಿ ವಿಚಾರದಲ್ಲಿ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಗಡಿ ವಿಚಾರಕ್ಕಾಗಿಯೇ ಉಸ್ತುವಾರಿಯನ್ನಾಗಿ ಇದೇ ಮೊದಲ ಬಾರಿಗೆ ಏಕನಾಥ ಶಿಂಧೆ, ಛಾಗನ್ ಬುಜಬಾಲ್ ಎಂಬ ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಚುರುಕು ನೀಡಿವುದು, ಗಡಿಯನ್ನು ಮರಾಠಿಗ ಅಸ್ಮಿತೆ ವಿಚಾರವಾಗಿ ಹಿಡಿದಿಡಲು ಪ್ರಯತ್ನ ಆರಂಭಿಸಿದ್ದಾರೆ.
ಈ ವಿಷಯ ಗಂಭೀರವಾದರೆ ಹಿಂದುತ್ವದ ಅಜೆಂಡಾ ಮೇಲೆ ಬಿಜೆಪಿ ಬೆಂಬಲಿಸಿರುವ ಮರಾಠಿಗರು ಮತ್ತೆ ದೂರಾಗುತ್ತಾರೆ ಎನ್ನುವ ಕಾರಣಕ್ಕೆ ಮರಾಠಿ ಪ್ರಭಾವಿ ಕ್ಷೇತ್ರದ ಬೆಳಗಾವಿ ರಾಜಕಾರಣಿಗಳು ಸುಮ್ಮನಾಗಿದ್ದಾರೆ. ಬದಲಾಗಿ ತಮ್ಮ ಪ್ರಚಾರ ಫಲಕಗಳನ್ನೂ ಮರಾಠಿಯಲ್ಲೇ ಹಾಕಿ ಆ ವರ್ಗವನ್ನು ಓಲೈಸಿಕೊಳ್ಳುವ ತಂತ್ರ ಅನುಸರಿಸುತ್ತಿದ್ದಾರೆ.

ಕರ್ನಾಟಕ ಗಡಿ ಉಸ್ತುವಾರಿ ಸಚಿವ ಸ್ಥಾನ ಖಾಲಿ
ಗಡಿ ವಿವಾದ ಮುನ್ನಲೆಗೆ ಬರುತ್ತಿದ್ದಂತೆಯೇ ಕರ್ನಾಟಕ ಗಡಿ ಉಸ್ತುವಾರಿ ಸಚಿವರ ನೇಮಕ ಮಾಡಬೇಕು ಎನ್ನುವ ಕೂಗು ದಟ್ಟವಾಗಿದೆ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಚ್.ಕೆ.ಪಾಟೀಲ್ ಗಡಿ ಉಸ್ತುವಾರಿ ಸಚಿವರಾಗಿದ್ದರು. ಅದರ ನಂತರ ಯಾರನ್ನೂ ಗಡಿ ಸಚಿವರನ್ನಾಗಿ ನೇಮಿಸಿಲ್ಲ. ಜತೆಗೆ ಗಡಿ ಸಂರಕ್ಷಣಾ ಆಯೋಗ, ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಳಗಾವಿಗೆ ಸ್ಥಳಾಂತರಿಸಬೇಕು ಎನ್ನುವ ಕೂಗು ಸಹ ಅನೇಕ ವರ್ಷಗಳಿಂದ ಇದೆ.

ಬೆಳಗಾವಿ ಪಾಲಿಕೆ ಮೇಲೆ ಕಣ್ಣು
ಮಹಾರಾಷ್ಟ್ರದಲ್ಲಿ ಗಡಿ ವಿಚಾರದಲ್ಲಿ ರಾಜಕೀಯ ನೆಲೆ ಹುಡುಕುವ ಶಿವಸೇನೆ ರೀತಿಯಲ್ಲಿಯೇ ಬೆಳಗಾವಿಯಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಗಡಿ, ಭಾಷೆ ವಿಷಯದಲ್ಲಿ ಪ್ರತಿ ವರ್ಷ ವಿವಾದ ಸೃಷ್ಟಿಸುತ್ತಿದೆ. ಒಂದು ಕಾಲದಲ್ಲಿ ಐದಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದ ಎಂಇಎಸ್ ಕಳೆದೊಂದು ದಶಕದಿಂದ ಅವಸಾನದತ್ತ ಸಾಗಿದೆ.
ಬೆಳಗಾವಿ ತಾಲೂಕಿನ ಮೂರು, ಖಾನಾಪುರದ ಒಂದು ವಿಧಾನಸಭಾ ಕ್ಷೇತ್ರಗಳು ಎಂಇಎಸ್‍ನ ಪ್ರಭಲ ವೋಟ್‍ಬ್ಯಾಂಕ್. 2018ರ ಚುನಾವಣೆಗೂ ಮುನ್ನ ಎಂಇಎಸ್ ಖಾನಾಪುರ ಮತ್ತು ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿತ್ತು. ಬೆಳಗಾವಿ ಪಾಲಿಕೆ ಸಹ ಎಂಇಎಸ್ ಆಡಳಿತದಲ್ಲಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ ಹಿಂದೂತ್ವದ ಅಸ್ತ್ರ ಪ್ರಯೋಗಿಸಿದ್ದರಿಂದ ಮರಾಠಾ ಮತಗಳು ವಿಭಜನೆ ಆದರು. ಎಂಇಎಸ್‍ನಲ್ಲಿಯೂ ಆಂತರಿಕ ಒಡಕು ಮೂಡಿ ಬೆಳಗಾವಿ ಉತ್ತರ, ದಕ್ಷಿಣ ಕ್ಷೇತ್ರ ಬಿಜೆಪಿ ಪಾಲಾಯಿತು. ಖಾನಾಪುರ ಮತ್ತು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಪಾಲಾಯಿತು. ಅದಾದ ಬಳಿಕ ಇದ್ದ ಏಕೈಕ ಎಂಇಎಸ್ ಪ್ರಭಾವಿ ವ್ಯಕ್ತಿ, ಮಾಜಿ ಶಾಸಕ ಸಂಭಾಜಿ ಪಾಟೀಲ್ 2019ರಲ್ಲಿ ನಿಧನರಾದರು. ಬಳಿಕ ಮಹಾನಗರ ಪಾಲಿಕೆ ಅಧಿಕಾರ ಅವಧಿಯೂ ಮುಗಿದಿದ್ದರಿಂದ ಎಂಇಎಸ್ ಬಲಹೀನವಾಗಿತ್ತು.
ಈ ಮಧ್ಯೆ ಬೆಳಗಾವಿ ಪಾಲಿಕೆಯ ವಾರ್ಡ್‍ಗಳ ಮರು ವಿಂಗಡಣೆ ಮಾಡಲಾಯಿತು. ಇದರಿಂದ ಮರಾಠಾ ಮತಗಳು ಒಡೆಯುತ್ತವೆ ಎನ್ನುವುದನ್ನು ಅರಿತ ಎಂಇಎಸ್ ವಾರ್ಡ್ ಮರು ವಿಂಗಡಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ ಕಳೆದ 9 ತಿಂಗಳಿಂದ ಬೆಳಗಾವಿ ಪಾಲಿಕೆಯಲ್ಲಿ ಆಡಳಿತಾಧಿಕಾರಿಯಿಂದ ನಡೆಯುತ್ತಿದೆ.
ಇಂಥ ಸ್ಥಿತಿಯಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಶಿವಸೇನೆ ಗಡಿ ವಿಚಾರ ಕೆದಕಿದ್ದರಿಂದ ಎಂಇಎಸ್ ಯುವ ಘಟಕ ಮತ್ತೆ ಚುರುಕಾಗಿದೆ. ಸನ್ಮಾನದ ನೆಪದಲ್ಲಿ ಮಹಾರಾಷ್ಟ್ರ ಸರಕಾರದ ನಾಯಕರನ್ನು ಬೆಳಗಾವಿಗೆ ಕರೆಯಿಸಿ ವಿವಾದಕ್ಕೆ ಜೀವ ಕೊಡುವ ಯತ್ನ ಮಾಡುತ್ತಲೇ ಇದೆ.

ಎಂಇಎಸ್ ಉಗಮ:
ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿರುವ ಮರಾಠಿ ಬಾಹುಳ್ಯದ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕೆಂಬ ಗುರಿ ಮುಂದಿಟ್ಟುಕೊಂಡು ಮಹಾರಾಷ್ಟ್ರ ಏಕೀಕರಣ ಸಮಿತಿ 1948ರಲ್ಲೇ ಹುಟ್ಟಿಕೊಂಡಿತ್ತು. ಮುಂದೆ ಗಡಿಯಲ್ಲಿನ ಬೇಡಿಕೆಗಳನ್ನು ವಿವಾದದ ರೂಪಕ್ಕೆ ತಿರುಗಿಸಿದ ಎಂಇಎಸ್ ರಾಜಕೀಯೇತರವಾಗಿರದೆ ಸಕ್ರಿಯ ಪ್ರಾದೇಶಿಕ ಪಕ್ಷವಾಗಿ ರೂಪುಗೊಂಡು ಗಡಿ ವಿವಾದವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತ ಒಂದು ಹಂತದಲ್ಲಿ ಬೃಹತ್ ರೂಪ ಪಡೆಯತೊಡಗಿತು.

1957ರ ಜೂ.23ರಂದು ಮಹಾರಾಷ್ಟ್ರ ಸರಕಾರ ಸಲ್ಲಿಸಿದ ಮನವಿ ಮೇರೆಗೆ ಕೇಂದ್ರ ಸರಕಾರ 1960ರ ಜೂ.5ರಂದು ನಾಲ್ವರು ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿತು. ಇದರಲ್ಲಿ ಮಹಾರಾಷ್ಟ್ರದ ಹಾಗೂ ಮೈಸೂರು ರಾಜ್ಯದ ತಲಾ ಇಬ್ಬರು ಸದಸ್ಯರಿದ್ದರು. ಆದರೆ ಈ ಸಮಿತಿ ಒಪ್ಪಂದಕ್ಕೆ ಬರಲು ಸಾಧ್ಯವಾಗದೇ ವಿಫಲಗೊಂಡಿತು.

ಮಹಾಜನ ಆಯೋಗ ರಚನೆ:
ಮಹಾರಾಷ್ಟ್ರದ ಧುರೀಣ ಸೇನಾಪತಿ ಬಾಪಟ್ ಅವರು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಆಯೋಗವೊಂದನ್ನು ರಚಿಸುವಂತೆ ಒತ್ತಾಯಿಸಿ ನಿರಶನ ಆರಂಭಿಸಿದ್ದರು. ಮಹಾರಾಷ್ಟ್ರದ ಒತ್ತಾಯವನ್ನು ಮನ್ನಿಸಿ 1966ರ ಅ.25ರಂದು ಸುಪ್ರೀಂ ಕೋರ್ಟ್‍ನ 3ನೇ ಮುಖ್ಯನ್ಯಾಯಾಧೀಶರಾಗಿದ್ದ ಮೆಹರ್‍ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಅಂದಿನ ಕೇಂದ್ರ ಸರಕಾರ ಆಯೋಗ ನೇಮಿಸಿತು. ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ವಿ.ಪಿ.ನಾಯಕ್ ಅವರು ಮಹಾಜನ್ ಆಯೋಗದ ವರದಿಯನ್ನು ಒಪ್ಪಿಕೊಳ್ಳಲು ತಾವು ಬದ್ಧ ಎಂದು ಘೋಷಿಸಿದ್ದರು.

ಮಹಾಜನ ಆಯೋಗ 2240 ಮನವಿಗಳನ್ನು ಸ್ವೀಕರಿಸಿ 7572 ಜನರನ್ನು ಸಂದರ್ಶಿಸಿ ವರದಿ ಸಿದ್ಧಪಡಿಸಿತು. ಬೆಳಗಾವಿ ಕರ್ನಾಟಕದಲ್ಲಿ ಮುಂದುವರಿಯಬೇಕು, ಜತ್ತ, ಅಕ್ಕಲಕೋಟ, ಸೋಲಾಪುರ ಸೇರಿದಂತೆ 247 ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕು. ನಂದಗಡ, ನಿಪ್ಪಾಣಿ, ಖಾನಾಪುರ ಸೇರಿದಂತೆ 264 ಗ್ರಾಮಗಳು ಮಹಾರಾಷ್ಟ್ರದ ಭಾಗ. ಕಾಸರಗೋಡು ಕರ್ನಾಟಕದ ಭಾಗವಾಗಬೇಕು ಎಂಬುದು ಮಹಾಜನ ಆಯೋಗದ ಶಿಫಾರಸಿನ ಮುಖ್ಯ ಅಂಶಗಳಾಗಿದ್ದವು.

ಮಹಾರಾಷ್ಟ್ರದ ಬೇಡಿಕೆಯಂತೆ ಉಭಯ ರಾಜ್ಯಗಳ ಗಡಿ ಪ್ರದೇಶದ ಊರುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪ್ರಸ್ತಾಪ ಪುರಸ್ಕರಿಸಿದ ಆಯೋಗ ಬೆಳಗಾವಿ ನಗರವನ್ನು ಮಹಾರಾಷ್ಟ್ರಕ್ಕೆ ನೀಡಬೇಕೆಂಬ ವಾದವನ್ನು ತಳ್ಳಿಹಾಕಿತ್ತು. ಬೆಳಗಾವಿಗೆ ಹೊಂದಿಕೊಂಡ ಮರಾಠಿ ಬಾಹುಳ್ಯದ ನಿಪ್ಪಾಣಿ, ಖಾನಾಪುರ, ನಂದಗಡ ಸಹಿತ 814 ಗ್ರಾಮಗಳನ್ನು ಮಹಾರಾಷ್ಟ್ರ ತನಗೆ ನೀಡುವಂತೆ ಕೇಳಿತ್ತು. ಮೈಸೂರು ರಾಜ್ಯ ಮಹಾರಾಷ್ಟ್ರದಲ್ಲಿದ್ದ ಕನ್ನಡ ಬಾಹುಳ್ಯದ 516 ಗ್ರಾಮಗಳನ್ನು ಕೇಳಿತ್ತು. ಇವುಗಳಲ್ಲಿ 260 ಗ್ರಾಮಗಳು ಕನ್ನಡ ಭಾಷಿಕ ಗ್ರಾಮಗಳೆಂದು ಸ್ವತಃ ಮಹಾರಾಷ್ಟ್ರ ಒಪ್ಪಿತ್ತು. ಬೆಳಗಾವಿಗಾಗಿಯೇ ಹಠ ಹಿಡಿದ ಮಹಾರಾಷ್ಟ್ರ ಗಡಿ ವಿವಾದವನ್ನು ಮುಂದಿಟ್ಟುಕೊಂಡುಸುಪ್ರೀಂ ಕೋಟ್ ಮೆಟ್ಟಿಲೇರಿದೆ.

ಶಿವಸೇನೆ ಪ್ರತಿ ಬಾರಿಯೂ ಅಧಿಕಾರಕ್ಕೆ ಗಡಿ ವಿಷಯ ಕೆದಕುತ್ತಲೇ ಇದೆ. ಅದಕ್ಕೆ ಅಲ್ಲಿನ ಸರಕಾರ ಬೆಂಲಿಸುತ್ತದೆ. ಆದರೆ, ಕರ್ನಾಟಕ ಸರಕಾರ ಇಂಥದ್ದಕ್ಕೆ ಬೆಂಬಲಿಸುತ್ತಿಲ್ಲ. ಹಾಗಾಗಿ ನಾವು ಮಹಾರಾಷ್ಟ್ರ ಸರಕಾರದ ಜತೆಗೆ ಕರ್ನಾಟಕ ಸರಕಾರವನ್ನೂ ಎದುರಿಸುತ್ತಿದ್ದೇವೆ. ಗಡಿ ವಿಷಯ ಸುಪ್ರೀಂಕೋರ್ಟ್‍ನಲ್ಲಿ ಇರುವಾಗ ಮಹಾರಾಷ್ಟ್ರ ಸರಕಾರ ಈರೀತಿ ಆಕ್ರಮಣಕಾರಿ ವರ್ತನೆ ತೋರುವುದು ಸರಿಯಲ್ಲ.

ಅಶೋಕ ಚಂದರಗಿ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ.

ಶಿವಸೇನೆ, ಎಂಇಎಸ್ ಭಾಷೆ, ಗಡಿ ವಿಚಾರ ಇಟ್ಟುಕೊಂಡು ಪದೇ ಪದೆ ಕ್ಯಾತೆ ತೆಗೆಯುತ್ತಿದೆ. ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚುವುದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಬೆಳಗಾವಿಯಲ್ಲಿಯೂ ಕನ್ನಡದ ಬದಲು ಮರಾಠಿ ಫಲಕಗಳನ್ನೇ ದೊಡ್ಡದಾಗಿ ಹಾಕಲಾಗುತ್ತಿದೆ. ಇಲ್ಲಿನ ಆಡಳಿತ ವ್ಯವಸ್ಥೆಯೂ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಬೆಳಗಾವಿ ಯಾವತ್ತಿದ್ದರೂ ಕನ್ನಡಿಗರ ನಾಡು. ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ.
ದೀಪಕ ಗುಡುಗನಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷ.

ನಮ್ಮ ಹೋರಾಟ ಕರ್ನಾಟಕ ಸರಕಾರದ ವಿರುದ್ಧ ಅಲ್ಲ. ಕೇಂದ್ರ ಸರಕಾರದ ವಿರುದ್ಧ. ಅದಕ್ಕಾಗಿಯೇ ಲೋಕಸಭೆ ಚುನಾವಣೆಯಲ್ಲಿ 50 ಕ್ಕೂ ಹೆಚ್ಚು ನಾಮಪತ್ರ ಸಲ್ಲಿಸಿದ್ದೆವು. ಗಡಿ ವಿಚಾರವನ್ನು ಆದಷ್ಟು ಬೇಗ ಬಗೆಹರಿಸಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಅಥವಾ ಎಲ್ಲ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡಬೇಕು ಎನ್ನುವುದು ನಮ್ಮ ಒತ್ತಾಯ.
ವಿಕಾಸ ಕಲಘಟಗಿ, ಎಂಇಎಸ್ ಮುಖಂಡ.