ಅಂಧ ಶಿಕ್ಷಕನಿಗೆ ನ್ಯಾಯ ಕೇಳಲು ಶಿಕ್ಷಣ ಸಚಿವರ ಬಳಿ ಬಂದ ಆ ಅಂಧ ವಿದ್ಯಾರ್ಥಿಗಳ ಬಗ್ಗೆ ಭಾವುಕಗೊಂಡ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ತಮ್ಮ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಹದಿನಾರು ಅಂಧ ಯುವಕ, ಯುವತಿಯರು ಶಿಕ್ಷಣ ಸಚಿವರೊಂದಿಗೆ ಕಳೆದ ಗಳಿಗೆ ಬಗ್ಗೆ ಸಚಿವರೇ ಬರೆದ ಅಕ್ಷರ ಇಲ್ಲಿದೆ.

ನನ್ನ ಗೃಹ ಕಛೇರಿಗೆ ಬಂದ ಒಗ್ಗಟ್ಟಿನ ಶಕ್ತಿಯ ಪರಿಚಯವಿದು.
ಸುರೇಶ್ ಎಂಬ ಶಿಕ್ಷಕರ ಪರವಾಗಿ ಬಂದಿದ್ದ ಆ ಹದಿನಾರೂ ಯುವಕ/ತಿಯರು ವಿವಿಧ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಬೆಂಗಳೂರು ವಿ.ವಿ., ತುಮಕೂರು ವಿ.ವಿ. ಮತ್ತು ಮೈಸೂರು ವಿ.ವಿ ವಿದ್ಯಾರ್ಥಿಗಳಿವರು.
ಇವರೆಲ್ಲರ ಸಮಾನ ಅಂಶವೆಂದರೆ ಯಾರಿಗೂ ಕಣ್ಣು ಕಾಣುವುದಿಲ್ಲ. (ಅಂಧರು, ದೃಷ್ಟಿಹೀನರು ಎಂದು ಸಾಮಾನ್ಯವಾಗಿ ನಾವು ಹೇಳುತ್ತೇವೆ). ಒಬ್ಬೊಬ್ಬರೂ ತನ್ನ ಪರಿಚಯ ಹೇಳಿಕೊಳ್ಳುವಾಗ ಸರದಿಯಂತೆ ನಿಂತು‌ ಮಾತನಾಡಿ ತಮ್ಮ‌ ಊರು, ತಮ್ಮ ವಿದ್ಯಾರ್ಹತೆ, ಈಗ ತಾವು ಏನು ಓದುತ್ತಿರುವುದು..‌..ಕುರಿತು ಹೇಳಿದ್ದು ಎಲ್ಲರ ಮನಸೆಳೆಯಿತು.‌
ಓರ್ವ ಅಂಧ ಶಿಕ್ಷಕನಿಗೆ ನ್ಯಾಯ ಕೇಳಲು ಬಂದಿದ್ದ ಎಲ್ಲರ ಧ್ವನಿಯಲ್ಲಿ ಆತ್ಮವಿಶ್ವಾಸ ಕಂಡೆ.
ಅವರೊಡನೆ ಮಾತನಾಡಿದ ಆ 20 ನಿಮಿಷಗಳು ನನ್ನ ಕಛೇರಿಯಲ್ಲಿದ್ದ ಪ್ರತಿಯೊಬ್ಬ ಸಂದರ್ಶಕರಿಗೂ ಒಂದು ಪಾಠ ಕಲಿಸಿತು. ಪ್ರೇರಣೆ ನೀಡಿತು.
ಆ ಶಿಕ್ಷಕ ಸುರೇಶ್ ರಿಗೆ ನ್ಯಾಯ ಒದಗಿಸಲಾಗುವುದು ಎಂದಾಗ ಆ ಹದಿನಾರು ಯುವಕ/ತಿಯರು ಜೋರಾಗಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.