ಸೈನ್ಯ ಸೇರಬೇಕು ಎಂಬುದು ಹಲವರಿಗೆ ಬಾಲ್ಯದ ಕನಸು. ಆದರೆ, ಎಲ್ಲರಿಗೂ ಸೈನಿಕ ಶಾಲೆಯಲ್ಲಿ ಪ್ರವೇಶ ಸಿಗುವುದಿಲ್ಲ. ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದಲೇ ಸೈನಿಕ ತರಬೇತಿ ಪಡೆಯುತ್ತಿದ್ದಾರೆ. ಆ ಪುಟಾಣಿ ಸೈನಿಕರ ಖಡಕ್ ಮಾತು, ಕವಾಯತ್ತು, ಗತ್ತು ನೋಡಿದರೆ ಮೈ ರೋಮಾಂಚನವಾಗುತ್ತದೆ.

ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂಥದ್ದೊಂದು ವಿಶೇಷತೆಯಿಂದ ಗಮನ ಸೆಳೆಯುತ್ತಿದೆ. ಈ ಶಾಲೆಯಲ್ಲಿ ಒಬ್ಬ ಶಿಕ್ಷಕರು ಸರ್ಕಾರಿ ಶಾಲೆಯನ್ನೇ ಸೈನಿಕ ಶಾಲೆಯಾಗಿ ಪರಿವರ್ತಿಸಿದ್ದಾರೆ. ಬಾಲ್ಯದಲ್ಲಿಯೇ ಮಕ್ಕಳು ಸೈನಿಕ ತರಬೇತಿ ಪಡೆಯುತ್ತಿರುವುದಕ್ಕೆ ಊರಿನವರು ಹೆಮ್ಮೆಯಿಂದ ಬೀಗುತ್ತಿದ್ದಾರೆ.

ರಮೇಶ ಪೂಜಾರಿ ಎನ್ನುವ ಶಿಕ್ಷಕ ಪುಟಾಣಿ ಮಕ್ಕಳಿಗೆ ಸೈನಿಕ ತರಬೇತಿ ನೀಡುತ್ತಿದ್ದಾರೆ. ಸೇನೆಯಲ್ಲಿರುವಂತೆಯೇ ಉಡುಪು ತೊಡಿಸಿ ಕವಾಯತ್ತು ಮಾಡಿಸುತ್ತಾರೆ. 1-5ನೇ ತರಗತಿಗಳು ಇರುವ ಈ ಶಾಲೆಯಲ್ಲಿ ಸದ್ಯ 180 ವಿದ್ಯಾರ್ಥಿಗಳು ಇದ್ದಾರೆ. ಅದರಲ್ಲಿ 4, 5 ನೇ ತರಗತಿ ವಿದ್ಯಾರ್ಥಿಗಳಿಗೆ ಸೈನಿಕ ತರಬೇತಿ ನೀಡಲಾಗುತ್ತಿದೆ. ಅಂದಹಾಗೆ ರಮೇಶ ಪೂಜಾರಿ ಅವರು ಸಾಮಾನ್ಯ ವಿಷಯ ಶಿಕ್ಷಕ.

ಇದನ್ನೂ ಓದಿ: ಗದ್ದೆಯಲ್ಲಿ ಉತ್ತಿ, ಬಿತ್ತಿ, ಕೃಷಿ ಮಾಡಿ ಕಲಿಸುವ ಸರ್ಕಾರಿ ಶಾಲೆ

ಬೈಲಹೊಂಗಲ ತಾಲೂಕಿನ ಚಿಕ್ಕ ಬಾಗೇವಾಡಿಯ ರಮೇಶ ಪೂಜಾರಿ ಅವರು 20 ವರ್ಷಗಳ ಕಾಲ (1985-2005) ಭಾರತೀಯ ಸೈನ್ಯದ ಮದ್ರಾಸ್ ರೆಜಿಮೆಂಟ್ ನಲ್ಲಿ ಕೆಲಸ ಮಾಡಿದ್ದಾರೆ. ಕಾರ್ಗಿಲ್ ಯುದ್ಧ ಸಂದರ್ಭದಲ್ಲಿಯೂ ಇವರು ಕೆಲಸ ಮಾಡಿದ್ದಾರೆ. 1999ರಲ್ಲಿ ಕಾರ್ಗಿಲ್ ಯುದ್ಧದ ಬಳಿಕ ಪಾಕಿಸ್ತಾನಿ ಸೈನ್ಯವು ಮೃತ ಸೈನಿಕರನ್ನು ಯುದ್ಧ ಭೂಮಿಯಲ್ಲಿ ಬಿಟ್ಟು ಹೋಗಿತ್ತು. ಆಗ ಮೃತ ದೇಹಗಳನ್ನು  ದಪನ್ (ಅಂತ್ಯ ಸಂಸ್ಕಾರ) ಮಾಡಿದ್ದೇವೆ ಎಂದು ರಮೇಶ ಪೂಜಾರಿ ಅವರು ನೆನಪಿಸುತ್ತಾರೆ.

ಇದನ್ನೂ ಓದಿ: ಭಾರತದಲ್ಲಿ ಕೃಷಿ ಮಾಡಲು ಮಲೇಶಿಯಾ ಬಿಟ್ಟು ಬಂದ ದಂಪತಿ

ಹೇಗಿದೆ ಮಕ್ಕಳ ತರಬೇತಿ
ಪತ್ರಿ ದಿನ ಶಾಲೆ ತರಗತಿ ಅವಧಿ ಮುಗಿದ ನಂತರ ಮತ್ತು ಶನಿವಾರ ಮಕ್ಕಳಿಗೆ ವ್ಯಾಯಾಮ, ರನ್ನಿಂಗ್, ಪುಲಪ್ಸ್ ಹೀಗೆ ದೈಹಿಕ ಕಸರತ್ತುಗಳು ಕಲಿಸುತ್ತಾರೆ. ರೈಫಲ್ ಕವಾಯತ್, ರಾಷ್ಟ್ರ ಧ್ವಜ ವಂದನೆ. ಗೌರವ ವಂದನೆ, ಗಣ್ಯರಿಗೆ ಸಲಾಮಿ ಹೀಗೆ ಎಲ್ಲ ರೀತಿಯ ಸೈನಿಕ ತರಬೇತಿಗಳನ್ನುಕಲಿಸಲಾಗುತ್ತದೆ. ಇದಕ್ಕೆ ಬಾಲಕ, ಬಾಲಕಿಯರು ಎನ್ನುವ ಬೇಧ ಇಲ್ಲ. ಇಬ್ಬರಿಗೂ ಸಮಾನ ತರಬೇತಿ ನಡೆಯುತ್ತದೆ. ಬಂದೂಕು ಹಿಡಿದು ಧ್ವಜಕ್ಕೆ ಗೌರವ ಸಲ್ಲಿಸುವ ತರಬೇತಿಯೂ ನಡೆಯುತ್ತದೆ.

ಕೃಷಿಕನಾದ ಎಂ.ಎಸ್. ಧೋನಿ: ವಿಡಿಯೊ ಸಹಿತ ನೋಡಿ

ಪುಟಾಣಿ ಸೈನಿಕರೊಂದಿಗೆ ಶಿಕ್ಷಕ ರಮೇಶ ಪೂಜಾರಿ.

ರಾಷ್ಟ್ರೀಯ ಹಬ್ಬಗಳ ದಿನ ಶಾಲೆ ಆವರಣದಲ್ಲಿ ಮಕ್ಕಳು ಸೈನಿಕ ಸಮವಸ್ತ್ರ ಧರಿಸಿ ವಿಶೇಷ ಕವಾಯತ್ತು ನಡೆಸುತ್ತಾರೆ. ಅದನ್ನು ನೋಡಲು ಇಡೀ ಊರೇ ನೆರೆದಿರುತ್ತದೆ. ಇದು ದೆಹಲಿಯಲ್ಲಿ ನಡೆಯುವ ಕವಾಯತ್ತು ಮಾದರಿಯಲ್ಲಿಯೇ ಇರುತ್ತದೆ.

ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು

16ರಿಂದ 60 ವಿದ್ಯಾರ್ಥಿಗಳು
ಶಿಕ್ಷಕ ರಮೇಶ ಅವರು ಹೇಳುವಂತೆ, ನಾಲ್ಕು ವರ್ಷಗಳ ಹಿಂದೆ ಅವರು ಸೈನಿಕ ತರಬೇತಿ ಆರಂಭಿಸಿದಾಗ ತರಬೇತಿಯಲ್ಲಿ ಕೇವಲ 6 ವಿದ್ಯಾರ್ಥಿಗಳಿದ್ದರು. ಅವರಿಗೆ ಸಮವಸ್ತ್ರ ಕೊಡಿಸಿ ತರಬೇತಿ ನೀಡಿದರು. ಬಟ್ಟೆ, ತರಬೇತಿಗಾಗಿ ಒಂದಷ್ಟು ಸ್ವಂತ ಹಣವನ್ನೂ ಖರ್ಚು ಮಾಡಿದರು. ಈಗ ತರಬೇತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 60ಕ್ಕೆ ಏರಿದೆ. ಕೆಲ ದಾನಿಗಳು ಸಹ ತರಬೇತಿಗೆ ಬೇಕಾದ ಪರಿಕರಗಳನ್ನು ಕೊಡಿಸಿದ್ದಾರೆ. ಕೆಲ ಯುವಕರು ಸೈನ್ಯ ಸೇರಲು ಬೇಕಾದ ಮಾಹಿತಿಯನ್ನು ಇವರಿಂದ ಪಡೆದುಕೊಳ್ಳುತ್ತಾರೆ. ಅಂಥವರಲ್ಲಿ ಒಬ್ಬರು ಅಧಿಕಾರಿ ಆಗಿದ್ದರೆ, ಐವರು ಈಚೆಗೆ ಸೈನ್ಯಕ್ಕೆ ಆಯ್ಕೆಯಾಗಿದ್ದಾರೆ.

ಚಿತ್ರ, ಲೇಖನ, ವಿಡಿಯೊ:
ವಿನೋದ ಪಾಟೀಲ್, ಚಿಕ್ಕಬಾಗೇವಾಡಿ.