ಕ್ರಿಕೆಟ್ ಮೈದಾನದಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಥ್ರಿಲ್ ಸೃಷ್ಟಿಸುತ್ತಿದ್ದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಹೆಸರು ಕೇಳಿದರೇನೆ ರೋಮಾಂಚನವಾಗುತ್ತದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಕ್ರಿಕೆಟ್ ನಲ್ಲಿ ಮಾಡಿದ ಸಾಧನೆಯೇ ಅಂಥದ್ದು.

ಮೈದಾನದಲ್ಲಿ ತಾಳ್ಮೆಯಿಂದ ಎದುರಾಳಿಗಳ ಹೆಡೆಮುರಿಕಟ್ಟುತ್ತಿದ್ದ ಎಂ.ಎಸ್. ಧೋನಿ ಕಳೆದ ವಿಶ್ವಕಪಕ್ ಕ್ರಿಕೆಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಕ ಕ್ರಿಕೆಟ್ ನಿಂದ ಸ್ವಲ್ಪ ದೂರ ಉಳಿದಿದ್ದರು. ಅವರು ಕ್ರಿಕೆಟ್ ನಿವೃತ್ತಿ ಹೊಂದುತ್ತಾರೆ. ಮರಳಿ ತಂಡಕ್ಕೆ ಬರುತ್ತಾರೆ ಎನ್ನುವ ಊಹಾಪೋಹಗಳ ಮಧ್ಯೆಯೇ ಕ್ಯಾಪ್ಟನ್ ಕೂಲ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ.

ತಮ್ಮ ತವರೂರಿನಲ್ಲಿ ಕೃಷಿಕನಾಗಿ ಕಾಣಿಸಿಕೊಳ್ಳುವ ಮೂಲಕ ಕೃಷಿ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಾಂಚಿಯಲ್ಲಿ ಸಾವಯವ ಕೃಷಿ ಮಾಡಲು ಮುಂದಾಗಿರುವ ಧೋನಿ ಕೃಷಿ ಆರಂಭಕ್ಕೂ ಮೊದಲು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಬೀಜ ಭಿತ್ತನೆ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ನಾಯಕತ್ವದಲ್ಲಿ 2011ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಎಂ.ಎಸ್. ಧೋನಿ ಕಳೆದ ವರ್ಷ ಜುಲೈ 25ರಂದು ಭಾರತೀಯ ಸೇನೆಗೆ ಸೇರಿದ್ದರು. ಅಲ್ಲದೆ, 15ದಿನಗಳ ಕಾಲ ಕಾಶ್ಮೀರ ಕಣಿವೆಯಲ್ಲಿ ಗುಸ್ತು ತಿರುಗುವ ಮೂಲಕ ಸೈನಿಕರಲ್ಲಿ ಚೈತನ್ಯ ತುಂಬಿದ್ದರು. ಅಭಿಮಾನಿಗಳಲ್ಲಿ ದೇಶಾಭಿಮಾನದ ಸ್ಪೂರ್ತಿ ತುಂಬಿದ್ದರು.

ಹೀಗೆ ಒಂದೊಂದೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಧೋನಿ ಬಾಲ್ಯದಲ್ಲಿ ಫುಟ್ ಬಾಲ್ ನಿಂದ ತಮ್ಮ ಕ್ರೀಡಾ ಜೀವನ ಆರಂಭಿಸಿ ಇಂದು ಕ್ರಿಕೆಟ್ ಇತಿಹಾಸ ಪುಟದಲ್ಲಿ ಹೊಳೆಯುತ್ತಿದ್ದಾರೆ. ಈಗ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ಹೊಸ ಮತ್ತೊಂದು ಅಧ್ಯಾಯ ಆರಂಭಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಮಹೇಂದ್ರ ಸಿಂಗ್ ಧೋನಿ ಅವರು ಕೃಷಿ ಮಾಡುವ ಸಲುವಾಗಿ ತಮ್ಮ ತವರೂರಾದ ರಾಂಚಿಯಲ್ಲಿ ಹತ್ತಾರು ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಅಲ್ಲಿ ಕಲ್ಲಂಗಡಿ ಹಣ್ಣು ಬೆಳೆಯುವ ಮೂಲಕ ಸಾವಯವ ಕೃಷಿ ಆರಂಭಿಸಿದ್ದೇನೆ. ಮುಂದಿನ 20 ದಿನಗಳಲ್ಲಿ ಪಪ್ಪಾಯ (ಪರಂಗಿ) ಗಿಡಗಳನ್ನು ನಡೆಲಿದ್ದೇನೆ. ಈ ಮೊದಲ ಪ್ರಯತ್ನದ ಸಾಕಷ್ಟು ಉತ್ಸಕಗೊಳಿಸಿದೆ ಎಂದು ಧೋನಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಆ ವಿಡಿಯೊದಲ್ಲಿ ಧೋನಿ ಭೂ ತಾಯಿಗೆ ಪೂಜೆ ಸಲ್ಲಿಸಿ ಬೀಜ ಭಿತ್ತನೆ ಮಾಡಿದ್ದಾರೆ. ಅವರ ಸ್ನೇಹಿತರು ಸಹ ಧೋನಿಗೆ ಸಾತ್ ನೀಡಿದ್ದಾರೆ. ಮಾರ್ಚ್ 1ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಧೋನಿ ಮೈದಾನಕ್ಕಿಳಿಯಲಿದ್ದಾರೆ.