ಉತ್ಕೃಷ್ಟ ಜ್ಞಾನದ ಗುರುಕುಲ ಸಂಸ್ಕೃತಿಯಿಂದ ಆಧುನಿಕ ಶಿಕ್ಷಣ ಪದ್ಧತಿಗೆ ತೆರೆದುಕೊಂಡಿರುವ ಭಾರತವು ಪರಿಸರ ಶಿಕ್ಷಣದ ಶ್ರೇಷ್ಠತೆಯನ್ನು ಇನ್ನೂ ಉಳಿಸಿಕೊಂಡಿದೆ. ಕೈಗಾರಿಕೆ ಉದ್ಯೋಗದಿಂದ ಕೃಷಿಯಿಂದ ಜನ ವಿಮುಖರಾಗುತ್ತಿರುವ ಬೆಳವಣಿಗೆ ನಡುವೆಯೇ ಸರಕಾರಿ ಶಾಲೆಯೊಂದು ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳ ಮೂಲಕವೇ ಕಾರ್ಮಿಕ ಸಂಸ್ಕೃತಿ, ನೈಜ ಕೃಷಿ ಪಾಠ ಕೈಗೊಳ್ಳುವ ಮೂಲಕ ಭಾರತದ ಗುರುಕುಲ ಸಂಸ್ಕೃತಿಯ ಹಿರಿಮೆ ಮತ್ತು ಅದಮ್ಯ ಕೃಷಿ ಸಂಸ್ಕೃತಿಯನ್ನು ಮರು ಸೃಷ್ಟಿಸುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಹುಲ್ಕುತ್ರಿ ಎನ್ನುವ ಪುಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದಲೇ ಸಮಗ್ರ ಕೃಷಿ ಮಾಡಿಸಿ ನೈಜ ಪಾಠ ಬೋಧನೆ ಮಾಡಲಾಗುತ್ತಿದೆ. ಶಿಕ್ಷಕರ ಈ ಪ್ರಯೋಗ ರಾಜ್ಯದ ಗಮನಸೆಳೆದಿದ್ದು ಭವಿಷ್ಯದ ಯುವ ಪೀಳಿಗೆಗೆ ಕೃಷಿ ಪ್ರೇಮ ಮೂಡಿಸುತ್ತಿದೆ. ಕಲಿಕೆ ನಾಲ್ಕು ಗೋಡೆಯಿಂದಾಚೆಗೂ ಇರಬೇಕು ಎನ್ನುವ ಶಿಕ್ಷಣ ತಜ್ಞರ ಪರಿಕಲ್ಪನೆ ಒಂದು ಪುಟ್ಟ ಹಳ್ಳಿಯಲ್ಲಿ ಸಾಕಾರವಾಗುತ್ತಿರುವುದಕ್ಕೆ ಇಡೀ ಗ್ರಾಮವೇ ಬೆಂಬಲವಾಗಿ ನಿಂತಿದೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹುಲ್ಕುತ್ರಿ ಎನ್ನುವ ಪುಟ್ಟ ಗ್ರಾಮದಲ್ಲಿದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಸದಾ ಪುಸ್ತಕ, ಪೆನ್ನು ಹಿಡಿಯುವ ಮಕ್ಕಳಿಗಿಂತ ಭಿನ್ನವಾಗಿ ಶಿಕ್ಷಣ ಪಡೆಯುವ ಈ ಶಾಲೆಯ ವಿದ್ಯಾರ್ಥಿಗಳು ಎರಡು ವರ್ಷದಿಂದ ತಾವೇ ಕೃಷಿ ಕಾರ್ಮಿಕರಾಗಿ ಭತ್ತ ಬೆಳೆಯುತ್ತಿದ್ದಾರೆ. ಕಲಿಕೆಗೆ ಪೂರಕವಾಗಿ ಅದರ ಅನುಭವವನ್ನೂ ವಿದ್ಯಾರ್ಥಿಗಳು ಪಡೆಯುತ್ತಿರುವುದು ವಿಶೇಷ.
ಸರಕಾರಿ ಕನ್ನಡ ಶಾಲೆಯ 5 ನೇ ತರಗತಿಯ ಪರಿಸರ ಅಧ್ಯಯನದಲ್ಲಿ ‘ಕೃಷಿ’ ಪಾಠ ಮತ್ತು Englishನ ‘Dignity of Labour’ ಹಾಗೂ 7ನೇ ತರಗತಿಯ ‘ಸೀನ ಶೇಟ್ಟರು ನಮ್ಮ ಟೀಚರು’ ಎನ್ನುವ ಕನ್ನಡ ಪಾಠ ಕೃಷಿಗೆ ಸಂಬಂಧಿಸಿದೆ. ಆ ಪಾಠಕ್ಕೆ ಪೂರಕವಾಗಿ ಮಕ್ಕಳಿಂದ ಕೃಷಿ ಮಾಡಿಸಿ ವಿಭಿನ್ನ ರೀತಿಯಲ್ಲಿ ತಿಳಿವಳಿಕೆ ನೀಡುವುದು ಶಾಲೆಯ ಮುಖ್ಯ ಶಿಕ್ಷಕ ದರ್ಶನ ಹರಿಕಂತ್ರ ಅವರ ಯೋಜನೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ ಪ್ರಮುಖ ಕೃಷಿ ಬೆಳೆ. ಹಾಗಾಗಿ ಮಕ್ಕಳ ಸಮಗ್ರ ಕೃಷಿ ಅಧ್ಯಯನಕ್ಕೆ ಭತ್ತ ಕೃಷಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಜೂನ್‍ನಲ್ಲಿ ಶಾಲೆಗಳು ಆರಂಭವಾಗುತ್ತವೆ. ಅದೇ ವೇಳೆಗೆ ಕೃಷಿ ಚಟುವಟಿಕೆಗಳು ಶುರುವಾಗುತ್ತವೆ. ಜುಲೈ ತಿಂಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಹೊಲಗಳಿಗೆ ಇಳಿಯುತ್ತಾರೆ. ಮಕ್ಕಳ ಈ ಕೃಷಿ ಪ್ರಯೋಗಕ್ಕೆ ರೈತ ಕೆರಿಯಾ ಗಣಪ ಗೌಡ ಎನ್ನುವವರು ತಮ್ಮ ಹೊಲ ಕೊಟ್ಟಿದ್ದಾರೆ.
ಮಣ್ಣು ಹದವಾಗಿರುವ ಹೊಲದಲ್ಲಿ ವಿದ್ಯಾರ್ಥಿಗಳು ನಾಟಿಗೆ ಇಳಿಯುತ್ತಾರೆ. ಕೃಷಿ ಕಾರ್ಮಿಕರಂತೆ ಮಳೆಯಲ್ಲಿಯೂ ಪ್ಲಾಸ್ಟಿಕ್ ಹೊದಿಕೆ ಹೊದ್ದು, ಕೆಸರಿನಲ್ಲಿ ಇಳಿದು ಸಸಿ ನಾಟಿ ಮಾಡುತ್ತಾರೆ. ಎಸ್‍ಡಿಎಂಸಿ ಸದಸ್ಯರು, ರೈತರು ವಿದ್ಯಾರ್ಥಿಗಳಿಗೆ ಹೊಲ ಹದ ಮಾಡುವುದು, ನಾಟಿ ಮಾಡುವ ಬಗ್ಗೆ ತರಬೇತಿ ನೀಡುತ್ತಾರೆ. ವಿದ್ಯಾರ್ಥಿಗಳು ‘ಸಿಂಧು’ ಎನ್ನುವ ಭತ್ತದ ತಳಿ ಬೆಳೆಯುತ್ತಾರೆ. ಇತರ ಭತ್ತದ ತಳಿಗಳ ಬಗ್ಗೆಯೂ ಈ ವಿದ್ಯಾರ್ಥಿಗಳಿಗೆ ಜ್ಞಾನ ಉಂಟು.

ನಾಟಿ ಮಾಡಿದ 24ನೇ ದಿನ
ನಾಟಿ ಮಾಡಿದ ಸಸಿಗಳು ಮೂರು ವಾರಗಳ ಬಳಿಕ ಚೆನ್ನಾಗಿ ಬೇರೂರಿ ನಿಧಾನವಾಗಿ ಬೆಳವಣಿಗೆ ಹೊಂದುತ್ತವೆ. ಆ ತಿಳಿವಳಿಕೆಯೊಂದಿಗೆ ಮತ್ತೆ ವಿದ್ಯಾರ್ಥಿಗಳು ಹೊಲ ವೀಕ್ಷಣೆ ಮಾಡುತ್ತಾರೆ. ಹೊಲದಲ್ಲಿ ಎಷ್ಟು ನೀರು ಇರಬೇಕು. ಗೊಬ್ಬರ ಯಾವಾಗ ಹಾಕಬೇಕು. ಕಳೆ (ಬೇಡವಾದ ಗಿಡ) ಎಂದರೇನು ಎನ್ನುವ ಬಗ್ಗೆ ಸಮಗ್ರ ತಿಳಿವಳಿಕೆ ಪಡೆಯುತ್ತಾರೆ.
ನಾಟಿ ಮಾಡಿದ 40ನೇ ದಿನ
ನಾಟಿ ಮಾಡಿದ 40ನೇ ದಿನಕ್ಕೆ ವಿದ್ಯಾರ್ಥಿಗಳ ಉತ್ಸಾಹಕ್ಕೆ ಮತ್ತೊಂದು ಗರಿಮೆ ಬಂದಿರುತ್ತದೆ. ನಾಟಿ ಮಾಡಿದ ಸಸಿಗಳು ಬೆಳೆದು ಪೈರು ಬರಲಾರಂಭಿಸಿರುತ್ತವೆ. ಶ್ರಮದ ಪ್ರತಿಫಲದಂತೆ ಗದ್ದೆಯು ಸೋಂಪಾಗಿ ಬೆಳೆದು ಅಲ್ಲಲ್ಲಿ ಪೈರು ಕಂಡಾಗ ಕೃಷಿಯ ಖುಷಿ ವಿದ್ಯಾರ್ಥಿಗಳಲ್ಲಿ ನೋಡುವುದೇ ಆನಂದ.
ನಾಟಿ ಮಾಡಿದ 68ನೇ ದಿನಕ್ಕೆ ಗದ್ದೆಯಲ್ಲಿ ಪೈರಿನ ಸಂಭ್ರಮ ಕಳೆಗಟ್ಟಿರುತ್ತದೆ. ಭತ್ತದ ಸಸಿಗಳು ಸೊಂಪಾಗಿ ಬೆಳೆದು ಪೈರು ಪಕ್ವವಾಗುವ ಗಳಿಗೆ. ಸಸಿಯಲ್ಲಿ ತೆನೆ ತುಂಬಿ ನೆಲದ ಕಡೆ ಬಾಗಿದಾಗ ಸುಗ್ಗಿಯ ಸಂಭ್ರಮ ಮೈದಳೆಯುತ್ತದೆ.
ನಾಟಿಮಾಡಿದ 90 ದಿನ
ನಾಟಿ ಮಾಡಿದ ಮೂರು ತಿಂಗಳ (90 ದಿನ) ಬಳಿಕ ಹೊಲದಲ್ಲಿ ಬೆಳೆದ ಭತ್ತದ ಸಸಿಯಲ್ಲಿ ತೆನೆ ಪಕ್ವವಾಗಿ ಕೊಯ್ಲಿಗೆ ಸಿದ್ಧವಾಗಿರುತ್ತವೆ. ಆಗ ಗ್ರಾಮದಲ್ಲಿ ವಿಶೇಷ ದಿನ. ಗ್ರಾಮಸ್ಥರು, ಪಾಲಕರು ಗದ್ದೆಗೆ ಪೂಜೆ ಸಲ್ಲಿಸಿ ಮಕ್ಕಳಿಗೆ ಬೆಳೆ ಕಟಾವಿಗೆ ತರಬೇತಿ ನೀಡುತ್ತಾರೆ. ಕುಡಗೋಲು (ಕತ್ತಿ) ಹೇಗೆ ಹಿಡಿಯಬೇಕು. ‘ಮೆದೆ’ (ತೆನೆ ಜೋಡಿಸುವುದು) ಹಾಕುವ ಕ್ರಮವನ್ನು ತಿಳಿಸುತ್ತಾರೆ. ಆರಂಭದಲ್ಲಿ ನಿಧಾನವಾಗಿ ನಡೆಯುವ ಕೊಯ್ಲು ನಂತರ ವೇಗವಾಗುತ್ತದೆ. ಗದ್ದೆಯಲ್ಲಿಯೇ ಸಹ ಭೋಜನ ಸಹ ನಡೆಯುತ್ತದೆ. ಕೊಯ್ಲು ಮುಗಿದ ಬಳಿಕ ಭತ್ತದ ತೆನೆಯನ್ನು ವಿದ್ಯಾರ್ಥಿಗಳೇ ಹೊತ್ತುಕೊಂಡು ಕುತ್ರಿ (ಬಣವೆ) ಹಾಕುತ್ತಾರೆ.

ಬೆಳೆ ಬೇರ್ಪಡಿಸುವ ಖುಷಿ
ಕೃಷಿ ಸಮಗ್ರ ಅಧ್ಯಯನದ ಕೊನೆಯ ಭಾಗವಾದ ಭತ್ತ ಬೇರ್ಪಡಿಸುವ ಕಾರ್ಯಕ್ಕೂ ವಿಶೇಷ ದಿನ ನಿಗದಿಯಾಗುತ್ತದೆ. ಬಹುತೇಕ ಜನವರಿಯಲ್ಲಿ ಬೆಳೆ ಬೇರ್ಪಡಿಸುವ ಕೆಲಸ ನಡೆಯುತ್ತದೆ. ಆಗ ಚಳಿಗಾಲ ಆರಂಭವಾಗಿರುತ್ತದೆ.
ಮೊದಲು ಮಕ್ಕಳು ರೈತರ ಸೂಚನೆಯಂತೆ ಭತ್ತದ ತೆನೆಯ ಹೊರೆಯನ್ನು ಕಟ್ಟುತ್ತಾರೆ. ಅದನ್ನು ಬಿದಿರಿನ ತಟ್ಟಿಯ (ಭತ್ತ ಸೆಳೆಯುವ ಮಂಚದ) ಮೇಲೆ ಬಡಿದು ಭತ್ತ ಬೇರ್ಪಡಿಸುತ್ತಾರೆ. ಅಲ್ಲಿಗೆ ಭತ್ತ ಕೃಷಿ ಅಧ್ಯಯನ ಮುಗಿಯುತ್ತದೆ. ಈ ಸಂಭ್ರಮಕ್ಕೆ ಪಾಲಕರು, ಊರಿನವರೂ ಸಾಕ್ಷಿಯಾಗುತ್ತಾರೆ. ವಿದ್ಯಾರ್ಥಿಗಳ ಪಾಲಿಗಂತೂ ಆ ದಿನ ಬಹುದೊಡ್ಡ ಸಂಭ್ರಮ.

ಭಾರತ ಕೃಷಿ ಪ್ರಧಾನ ದೇಶ. ಕೃಷಿ ಬಗ್ಗೆ ಪುಸ್ತಕದಲ್ಲಿ ಓದುವುದಕ್ಕಿಂತ ಮಾಡಿ ತಿಳಿಯುವ ಅನುಭವ ಪದಗಳಲ್ಲಿ ವಿಸ್ತರಿಸಲಾಗದು. ಮಕ್ಕಳು ಕೃಷಿ ಚಟುವಟಿಕೆಯೊಂದಿಗೆ ತಮ್ಮ ಕಲಿಕೆ ಅನುಭವ ಪಡೆಯುತ್ತಾರೆ. ಇದರಿಂದ ಮಕ್ಕಳಲ್ಲಿ ಕಲಿಕೆಯ ಉತ್ಸಾಹವೂ ಹೆಚ್ಚಾಗಿದೆ. ಪಾಲಕರ ಶ್ರಮವೂ ಅರಿವಾಗುತ್ತದೆ.
ದರ್ಶನ ಹರಿಕಂತ್ರ, ಹುಲ್ಕುತ್ರಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ.

ನಮ್ಮ ಅಪ್ಪ, ಅವ್ವ ಗದ್ದೆಯಲ್ಲಿ ಕೆಲಸ ಮಾಡುವುದು ನೋಡಿದ್ದೆವು. ನಾವೂ ಅದೇ ಕೆಲಸ ಮಾಡಿದಾಗ ಕೃಷಿಯ ಬಗ್ಗೆ ಹೆಚ್ಚು ತಿಳಿವಳಿಕೆ ಪಡೆದವು. ಇದೊಂದು ವಿಶೇಷ ಅನುಭವ. ಭತ್ತ ಹೇಗೆ ಬೆಳೆಯಬೇಕು ಎನ್ನುವ ಸಂಪೂರ್ಣ ಜ್ಞಾನ ಸಿಕ್ಕಿದೆ.
ವಿನೂತ ನಾಯ್ಕ, ವಿದ್ಯಾರ್ಥಿ.