ಪ್ಯಾರಾಚೂಟ್ ಕೈ ಕೊಟ್ಟ ಕಾರಣ ಬರೋಬ್ಬರಿ 17 ಸಾವಿರ ಅಡಿ ಎತ್ತರದಿಂದ ದರ್ರನೆ ನೆಲಕ್ಕುರುಳಿ ಬಿದ್ದು ಸಾವಿನ ಸಮೀಪ ಹೋಗಿ ನಿಂತಿದ್ದ…!

ಅದಾದ ಬಳಿಕ ಚಿಕಿತ್ಸೆಗಾಗಿ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು. ಬಿದ್ದ ಏಟಿಗೆ ಬೆನ್ನು ಮೂಳೆ ಮುರಿದು ಇಡಿ ದೇಹ ಜರ್ಜರಿತಗೊಂಡಿತ್ತು. ಎಷ್ಟರ ಮಟ್ಟಿಗೆ ಅಂದ್ರೆ, ಭರ್ತಿ 18 ತಿಂಗಳು ಆಸ್ಪತ್ರೆಯ ಹಾಸಿಗೆಯಲ್ಲೆ ಕಳೆದಿದ್ದರು. ಆತ ಇನ್ನು ಮುಂದೆ ಜೀವನದಲ್ಲಿ ಕಾಲೆತ್ತಿ ಕೂಡ ನಡೆಯಲಾರ ಎಂದು ವೈದ್ಯರೆ ಷರಾ ಬರೆದಿದ್ರು.

ಆದ್ರೆ, ಆತ ಮಾತ್ರ ವೈದ್ಯರ ಮಾತನ್ನೇ ಸುಳ್ಳು ಮಾಡಿ ನಡೆಯಲಾರ ಎಂದವರ ಎದುರೇ ಸೆಟೆದು ನಿಂತ. ಅದೆಷ್ಟು ಗಟ್ಟಿಯಾಗಿ ಅಂದ್ರೆ, ‌‌ಎದ್ದು ನಿಲ್ಲಲಾರ ಅಂದವರೇ ಅಕ್ಷರಶಃ ಬಾಯ್ಮೇಲೆ ಬೆರೆಳಿಟ್ಟುಕೊಂಡು ಬೆರಗಿನಿಂದ ನೋಡಿದ್ರು. ಹೌದು, ಆತ ಜಗತ್ತಿನ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ನ ತಲೆಯ ಮೇಲೆ ಕಾಲಿಟ್ಟು ನಿಂತು ರಾರಾಜಿದ್ದ. ಆತನೇ ‌‌ಬೇರ್ ಗ್ರೀಲ್ಸ್. ಇವರ ಸಾಹಸ ಗಾಥೆ ಯಾವ ಸಿನಿಮಾಗೂ ಕಮ್ಮಿಯಿಲ್ಲ.

ಜನಪ್ರೀಯ ಸಾಹಸಿ (The famous Adventurer) ಬೇರ್ ಗ್ರೀಲ್ಸ್

ಆಗಾಗ ಟಿವಿಯಲ್ಲಿ ಹುಳ-ಹುಪ್ಪಡಿ ಜಗಿಯುತ್ತಾ, ನೋಡುವವರಿಗೆ ನಡುಕ ಹುಟ್ಟಿಸುವ ಕಾಡಿನಲ್ಲಿ ಜಿಗಿಯುತ್ತಾ ಓಡುವ, ಅಲ್ಲಿಯೇ ಮರದ ತೊಪ್ಪಲನ್ನೇ ಹಾಸಿಗೆ ಮಾಡಿಕೊಂಡು ಮಲಗುವವ. ಹಾವು ಮೊಸಳೆ ತುಂಬಿರುವ ಹಳ್ಳ-ಕೊಂಪೆಗಳಲ್ಲಿ ಯಾವುದೇ ಭಯ, ಹಿಂಜರಿಕೆ ಇಲ್ಲದೆ ದುಬಕ್ಕನೆ ಜಿಗಿಯುವ ಮೂಲಕ ಜನಪ್ರೀಯ ಸಾಹಸಿ (The famous Adventurer) ಎನಿಸಿಕೊಂಡವ ಬೇರೆ ಯಾರು ಅಲ್ಲ. ಆತನೆ ನಮ್ಮ ಕಥೆ ಹೀರೋ ಬ್ರೀಟನ್ ನ ಬೇರ್ ಗ್ರೀಲ್ಸ್.

ಹೌದು, ತನ್ನ 23 ನೇ ವಯಸ್ಸಿಗೆ ಮೌಂಟ್ ಎವರೆಸ್ಟ್ ಏರುವ ಮೂಲಕ, ಎವರೆಸ್ಟ್ ಏರಿದ ಅತೀ ಕಿರಿಯ ಇಂಗ್ಲೆಂಡಿಗನೆಂಬ ದಾಖಲೆ ಬರೆದು ತನ್ನ ಬಾಲ್ಯದ ಕನಸನ್ನು ಈಡೇರಿಸಿಕೊಂಡಿದ್ದ. ಈತನ ಜೊತೆ ಮೌಂಟ್ ಎವರೆಸ್ಟ್ ಏರಲು ಜೊತೆಯಾಗಿ ಹೋದ ನಾಲ್ವರು ಮಂಜಿನ ಹೊಡೆತಕ್ಕೆ ಸಿಲುಕಿ ಜೀವ ಕಳೆದುಕೊಂಡರು. ಆಗ ಒಂದು ಕ್ಷಣ ಸಾವು ಗ್ರೀಲ್ಸ್ ನ ಪಕ್ಕ ರಪ್ಪನೆ ಹಾದುಹೋಗಿತ್ತು.

ಕಂದಕದಲ್ಲಿ ಜಾರಿ ಬೀಳುತಿದ್ದ ಇವನನ್ನು ಕಾಪಾಡಿದವರು ಗೆಳೆಯ ಮೈಕ್ ಮತ್ತು ನೇಪಾಳಿ ಸೇರ್ಪಾಗಳು. ಅದರಲ್ಲೂ ಭಯಾನಕ ಎಂದೇ ಪರಿಗಣಿಸಲ್ಪಟ್ಟ ಅಮಾ ಡಬ್ಲಾಮ್ ಪರ್ವತ ಏರುವ ಮೂಲಕ ಎಡ್ಮಂಡ್ ಹಿಲರಿ ಕೂಡ ಮಾಡದ ದುಸ್ಸಾಹಸ ಮಾಡಿ ಎಲ್ಲರಲ್ಲಿ ಬೆರಗು ಮೂಡಿಸಿದ್ದ.

ಸಕಲ ಕಲಾ ವಲ್ಲಭ

ಪರ್ವತ ಏರುವುದು, ದಟ್ಟಾರಣ್ಯ ಸುತ್ತುವುದು ಮತ್ತು ಹಾಯಿ ದೋಣಿಯಲ್ಲಿ ಪಯಣಿಸುವುದು ಇವನಿಗೆ ನೀರು ಕುಡಿದಷ್ಟೇ ಸುಲಭ. ಇದೆಲ್ಲವನ್ನು ತಂದೆ ಮೈಕಲ್ ಗ್ರೀಲ್ಸ್ ನಿಂದ ಚಿಕ್ಕಂದಿನಿಂದಲೇ ಕಲಿತುಕೊಂಡಿದ್ದ. ಯುವಕನಿರುವಾಗಲೆ ಸ್ಕೈ ಡೈವಿಂಗ್ ಕರಗತ ಮಾಡಿಕೊಂಡ. ಜನಪ್ರಿಯ ಕರಾಟೆ ಪಟು ಶೇಮನ ಯಹಾನ್ ಮೂಲಕ ಕರಾಟೆ ಕಲಿತ ಈತ ಶೊಟೊಕನ್ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದ. ಇಂಥಹ ಹತ್ತು ಹಲವು ಸಾಹಸಗಳಿಗೆ ಭದ್ರ ಬುನಾದಿ ಹಾಕಿದ್ದು ಇವರ ಕಠಿಣ ಮಿಲಿಟರಿ ಜೀವನ.

ಮಿಲಿಟರಿ ಆಸಕ್ತಿ ಹುಟ್ಟಿದ್ದು ಹೇಗೆ..?

ಪರ್ವತ ಏರುವ ಹುಚ್ಚಿಗೆ ಬಿದ್ದ ಗ್ರೀಲ್ಸ್ ಭಾರತದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಕಡೆ ತರಬೇತಿ ಪಡೆಯ ತೊಡಗಿದ್ದ. ಆಗ ಭಾರತೀಯ ಸೇನೆ ಕಡೆ ಆಕರ್ಷಿತನಾಗಿ, ‌ಮಿಲಿಟರಿ ಸೇರುವ ಬಯಕೆ ಹೊಂದಿದ್ದ. ಸೇನೆ ಸೇರಲಕ ಪೌರತ್ವದ ಸಮಸ್ಯೆ ಎದುರಾದ ಹಿನ್ನೆಲೆ ಅದರಿಂದ ವಿಮುಖನಾದ.

ಆದ್ರೆ, ಮಿಲಿಟರಿ ಸೇರುವ ಹುಚ್ಚನ್ನ ಅಲ್ಲಿಗೆ ಕೈ ಬಿಡದೆ ಮುಂದೆ ಬ್ರಿಟಿಷ್ ಸೈನ ಸೇರಿದ. ಇನ್ನು ಇವರ ಮಿಲಿಟರಿ ಜೀವನ ಸಾಹಸ – ಅವಘಡದಿಂದಲೇ ಕೂಡಿತ್ತು. 21 ನೇ ಸ್ಪೇಸ್ ಏರ್ ಸರ್ವಿಸ್ ರೆಜಿಮೆಂಟ್ ನಲ್ಲಿ ಉತ್ತರ ಆಫ್ರೀಕಾದಲ್ಲಿ ಕೆಲಸ ಮಾಡುತ್ತಿರುವಾಗ ಆಗಸದಿಂದ ಜಿಗಿಯುವಾಗ ಪ್ಯಾರಾಚೂಟ್ ಕೈ ಕೊಟ್ಟು ನೆಲಕ್ಕುರುಳಿದ.

ಆಸ್ಪತ್ರೆಯಿಂದ ಹೊರಟವ ಕಂಡದ್ದೇಲ್ಲಿ..?

ಪ್ಲಾಸ್ಟರಿಂಗ್ ಮಾಡಿಸಿಕೊಂಡು ‌ಸುಮಾರು ‌‌18 ತಿಂಗಳುಗಳ ಕಾಲ ಹಾಸಿಗೆಯಲ್ಲೇ ಕಳೆದಿದ್ದರು. ಇನ್ಯಾರೋ ಆಗಿದ್ದಿದ್ದರೆ ಅದೇ ಅವರ ಜೀವನದ ಕೊನೆಯ ಸಾಹಸವಾಗುತ್ತಿತ್ತೇನೊ..! ಆದ್ರೆ, ಗ್ರೀಲ್ಸ್ ಹಾಗಲ್ಲ. ಆ ಘಟನೆಯೆ ಅವರ ಸಾಹಸ ಕಾರ್ಯಕ್ಕೆ ಮುನ್ನುಡಿ ಬರೆದಿತ್ತು ಅಂದ್ರೆ ತಪ್ಪಾಗಲಾರದು. ಬೆನ್ನು ಮೂಳೆ ಮುರಿದುಕೊಂಡ ನಂತರ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಟವ ಸೀದಾ ಹೋಗಿ ನಿಂತು ರಾರಾಜಿಸಿದ್ದು ಮೌಂಟ್ ಎವರೆಸ್ಟ್ ನ ತುತ್ತ ತುದಿಯ ಮೇಲೆ.

ಈತ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಎಂದೂ ಹಿಂಜರಿಯಲಿಲ್ಲ. ಹಲವು ಬಾರಿ ಸಾವಿನ ಬೆನ್ನು ತಟ್ಟಿ ಬಂದಿದ್ದ. ಆಗ ಎಲ್ಲರಂತೆ ಗಾಬರಿಯಾಗಿದ್ದಾನೆ. ಕುಸಿದು ಕುಳಿತಿದ್ದಾನೆ. ಆದ್ರೆ ‌ಗ್ರೀಲ್ಸ್ ಗೆ ಹಾಗೂ ಬೇರೆಯವರಿಗೆ ಇರುವ ವ್ಯತ್ಯಾಸವೆಂದರೆ, ಇತ ಯಾವತ್ತೂ ಸಾಹಸದಿಂದ ವಿಮುಖನಾಗಲಿಲ್ಲ ( He kept on moving towards the risk and adventures ).

ವಿಶ್ವದಲ್ಲೇ ಅತಿ ಎತ್ತರದಲ್ಲಿ ನಡೆದ ಡಿನ್ನರ್ ಪಾರ್ಟಿ

ಸಾಹಸವನ್ನೇ ಸಹವಾಸ ಮಾಡಿಕೊಂಡ ಈತ 2005 ರಲ್ಲಿ ಹಾಟ್ ಏರ್ ಬಲೂನ್ ಗೆ ಒಂದು ಟೇಬಲ್ ಇಳಿಬಿಟ್ಟು ಪರ್ವತಾರೋಹಿ ಡೆವಿಡ್ ಅಡಮ್ಸ್ ಮತ್ತು ಲಿಪ್ಟಿನಂಟ್ ಕಮಾಂಡರ್ ಅಲೇನ್ ವೀಲ್ ಜೊತೆ ಸೇರಿ 24 ಸಾವಿರ ಅಡಿ ಎತ್ತರದಲ್ಲಿ 50 ಡಿಗ್ರಿ ಉಷ್ಣಾಂಶದಲ್ಲಿ ಆರಾಮವಾಗಿ ಕುಳಿತು ನಗುತ್ತಲೇ ಕಾಫಿ ಹೀರುತ್ತಾ ನಮಗೆಲ್ಲ ಮುದ ನೀಡಿದ್ದ. ಇದು ವಿಶ್ವದಲ್ಲೇ ಅತಿ ಎತ್ತರದಲ್ಲಿ ನಡೆದ ಡಿನ್ನರ್ ಪಾರ್ಟಿಯೆಂದು ಕರೆಯಲ್ಪಟ್ಟಿದೆ.

2003 ರಲ್ಲಿ 4 ಜನ ಸಾಹಸಿಗಳೊಂದಿಗೆ ಉತ್ತರ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಲು ಹೊರಟ, ಮಂಜಿನ ಗಾಳಿ, ಪರ್ವತಾಕಾರದ ಅಲೆಗಳ ಹೊಡೆತಕ್ಕೆ ಚಿಕ್ಕ ಬೋಟ್ ಮುಳುಗಡೆಯಾಗಿ ಜೀವಕ್ಕೆ ಕುತ್ತು ಬಂದಿತಂತೆ. ಅದನ್ನೆಲ್ಲ ಮೆಟ್ಟಿ ನಿಂತು ಗ್ರೀಲ್ಸ್ ಸಾಹಸ ಯಾತ್ರೆ ಮುಗಿಸಿ ಬಂದಿದ್ದ. ಹಾಗೆ ಈತ ಅಂತಿಂಥ ಆಸಾಮಿ ಅಲ್ಲ. ಪರ್ವತಾರೋಹಣದಲ್ಲಿ ಕಾಲು ಕಳೆದುಕೊಂಡ ಗೆಳೆಯನ ಚಿಕಿತ್ಸೆಗಾಗಿ ಹಣ ಸಂಗ್ರಹಿಸಲು ಬಾತ್ ಟಬ್ ನಂತಹ ಚಿಕ್ಕ ಬೋಟ್ ನಲ್ಲಿ ಭಯಾನಕವಾದ ಥೇಮ್ಸ್ ನದಿ ಪೂರ್ತಿ ಸಂಚಾರ ನಡೆಸಿದ್ದ.

ನೀರಿಲ್ಲದೆಯೂ ಬದುಕ ಬಲ್ಲವ

ಜೀವನದಲ್ಲಿ ಸಾಹಸ, ರಿಸ್ಕ್ ಇದನ್ನೇ ಮೂಲ ಕಸುಬಾಗಿಸಿಕೊಂಡ ಈತನಿಗೆ ಇದೆಲ್ಲ ಮಾಮೂಲು. ಜಗತ್ತಿನ ಸಂಪರ್ಕವಿಲ್ಲದ ಮನುಷ್ಯರೇ ಇಲ್ಲದ ವಿದ್ಯುತ್ ಸಂಪರ್ಕ, ನೀರಿನ ಸೌಲಭ್ಯವಿಲ್ಲದ ಬರೊಬ್ಬರಿ 20 ಎಕರೆ ವಿಸ್ತಾರವುಳ್ಳ ಅಜ್ಞಾತ ವೇಲ್ಸ್ ದ್ವೀಪದಲ್ಲಿ ಜೀವಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಿಂದೊಮ್ಮೆ ಸುನಾಮಿ ಅಪ್ಪಳಿಸಿ ಕುಖ್ಯಾತಿ ಪಡೆದ ಭಯಾನಕವಾದ ಇಂಡೊನೇಷಿಯಾದ ಸುಮಾತ್ರಾದ ಕಪ್ಪು ತಗ್ಗು ಪ್ರದೇಶದಲ್ಲಿ ತನ್ನ ಬದುಕುಳಿಯುವ ಕೌಶಲ್ಯವನ್ನ (Survival skill) ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದ. ಬದುಕುಳಿಯುವ (Survival) ಕ್ಷೇತ್ರದಲ್ಲಿ ಈತನನ್ನೆನ್ನಾದರೂ ಮೀರಿಸುವವರಿದ್ದರೆ ಅದು ಕೆನಡಾದ ಲೀ ಸ್ಟ್ರೌಡ್ ಮಾತ್ರ.

ಬಾರ್ನ್ ಸರ್ವೈವರ್ (Born Survivor)

ಬರಹಗಾರ, ಟಿವಿ ನಿರೂಪಕ, ಪರ್ವತಾರೋಹಿ, ಸಾಹಸಿ, ಹಾಗೆ ಒಂದು ಕಾಲದಲ್ಲಿ ಸೈನಿಕ, ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನದೆ ಆದ ಚಾಪನ್ನು ಮೂಡಿಸಿದ್ದ ಗ್ರೀಲ್ಸ್ ರದ್ದು ಟಿವಿ ಕಾರ್ಯಕ್ರಮಗಳ ಜಗತ್ತಿನಲ್ಲಿ ಬಹುದೊಡ್ಡ ಹೆಸರು. ಮ್ಯಾನ್ ವರ್ಸಸ್ ವೈಲ್ಡ್ , ಬಾರ್ನ್ ಸರ್ವೈವರ್ (Born Survivor) ಅಂತಲೂ ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕಾರ್ಯಕ್ರಮ. ಹಾಗೆ ದಿ ವೈಲ್ಡ್ ವಿಥ್ ಬೇರ್ ಗ್ರೀಲ್ಸ್ ಕೂಡ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು. ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಪ್ರಧಾನಿ ನರೇಂದ್ರಮೋದಿ, ನಟ ರಜನಿಕಾಂತ್ ಹೀಗೆ ಹತ್ತು ಹಲವು ಗಣ್ಯರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆಂದರೆ ಆ ಪ್ರೋಗ್ರಾಮ್ ನ ಪ್ರಾಮುಖ್ಯತೆಯ ಅರಿವಾಗುವುದು.

ಗ್ರೀಲ್ಸ್ ಗೆ ಭಾರತದಲ್ಲೂ ಇದ್ದಾರೆ ಅಪಾರ ಅಭಿಮಾನಿಗಳು

ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ, ಅಮೇರಿಕಾ ಸೇರಿದಂತೆ ಭಾರತದಲ್ಲ ಸಹ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು ಗ್ರೀಲ್ಸ್ ಗೋಸ್ಕರವೇ ಕಾರ್ಯಕ್ರಮ ನೋಡುವವರಿದ್ದಾರೆ. ಕುಕ್ಕರಗಾಲಿನಲ್ಲಿ ಕೂತು, ಕೆಲವೊಂದು ಸನ್ನಿವೇಶವನ್ನು ನೋಡಲಾಗದೆ ಚಡಪಡಿಸುವಂತೆ ಮಾಡಿ ಎಲ್ಲರನ್ನು ಒಂಥರಾ ಹುಚ್ಚು Adventure ನ ಗುಂಗಿಗೆ ತಳ್ಳಿದವ ಗ್ರೀಲ್ಸ್. ಮಕ್ಕಳಂತೂ ಹೆದರುತ್ತಲೇ ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ.

ಹೌದು, ಆತ ಎಲ್ಲರಲ್ಲಿ ಅಡ್ವೆಂಚರ್ ಬಗ್ಗೆ ಅಷ್ಟೊಂದು ಹುಚ್ಚು ಹತ್ತಿಸಿದ್ದ. ಹಸಿ ಮಾಂಸವನ್ನು ತಿನ್ನಲು, ಹಾವು ಹುಳ ಹಪ್ಪಡಿಗಳನ್ನು ಬಾಯಿಗಿಡಲು ಹೇಸಲ್ಲ. ಹಲವು ಬಾರಿ ತನ್ನ ಮೂತ್ರವನ್ನೇ ಕುಡಿದು ನೋಡುಗರಲ್ಲಿ ಹೇಸಿಗೆ ಹುಟ್ಟಿಸಿದ್ದೂ ಇದೆ. ಅದಕ್ಕೆ ಆತ ಒಮ್ಮೆ ” I never eat worms before Shara ( his Wife), because she would never kiss me ” ಎಂದು ಮಜವಾಗಿ ಹೇಳಿದ್ದ.

ಹತ್ತು ಹಲವು ಪುಸ್ತಕಗಳ ಲೇಖಕ

The kid who climbed the Everest, Mud, Sweat and Tears, Facing the frozen Ocean, Born surviver ಸೇರಿದಂತೆ ತನ್ನ ಜೀವನದ ಸಾಹಸದ ಕುರಿತ ವಿವರಣೆಗಳನ್ನು ಒಳಗೊಂಡ 14 ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಇವನು ಮಾಡಿದ ಒಂದೊಂದು ಸಾಹಸವನ್ನು ನೋಡಿದರೆ ಜೀವನದಲ್ಲಿ ಇದೆಲ್ಲ ಒಬ್ಬರಿಂದಲೇ ಮಾಡಲು ಸಾಧ್ಯವಾ ಎಂಬ ಪ್ರಶ್ನೆ ಕಾಡುತ್ತದೆ. ನಾವು ಕಣ್ಣಿಗೆ ಕಾಣದ, ಪರಿಚಯವಿಲ್ಲದ ಗೊತ್ತು ಗುರಿ ಇಲ್ಲದ ಭಯಾನಕ ಜಗತ್ತಿನ ಚಿತ್ತಾರವನ್ನು ನಮ್ಮ ಕಣ್ಣಿಗೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದ ಗ್ರೀನ್ಸ್. ಆತ ಇರುವುದೇ ಹಾಗೆ. Courrage and Kindness and never give up ಆತನ ಜೀವನದ ಅದ್ಬುತ ಪಾಲಿಸಿ.

ಕಾರಣ ಆತ ಪ್ರತಿಕೂಲ ಹವಾಮಾನದಲ್ಲಿ ಜೀವಿಸುವ ಕಲೆಯನ್ನು ಅದ್ಭುತವಾಗಿ ಕರಗತ ಮಾಡಿಕೊಂಡಿದ್ದ. ಜೀವನ ನೀಗಲು ಹಲವು ಸಾಹಸ ಮಾಡುವ, ಅಗತ್ಯ ಉಪಕರಣವನ್ನು ತಯಾರಿಸಿಕೊಳ್ಳುವ, ಹುಳ-ಹಪ್ಪಡಿಗಳನ್ನು ತಿನ್ನುವಲ್ಲಿನ ನೈಜತೆ ಕುರಿತು ಹಲವರಲ್ಲಿ ತಕರಾರುಗಳಿದ್ದರೂ ಒಂದಲ್ಲ ಒಂದು ಸಾಹಸದಲ್ಲಿ ತನ್ನನ್ನು ಒಗೆದುಕೊಂಡು ಸಾಹಸದ ಹಲವು ಮಜಲುಗಳನ್ನು ನಮ್ಮ ಕಣ್ಣಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಬೇರ್ ಗ್ರಿಲ್ಸ್ ಗೆ ದೊಡ್ಡ ಸೆಲ್ಯೂಟ್ (Big Hats off) ಹೇಳಲೆಬೇಕು. ಕಾರಣ ಹಿ ಇಸ್ ಎ ಬಾರ್ನ್ ಸರ್ವೈವರ್ ( Because, He is a born Surviver ), ಈತ ತನ್ನ ಜೀವದ ಹಂಗು ತೊರೆದು ನಮಗೆಲ್ಲ ಸಂತಸ ಕೊಟ್ಟವ. ಯಾವುದೂ ಅಸಾಧ್ಯವಲ್ಲ… ಎಂದು ತಿಳಿಸಿದ ಸಾಹಸಿ.

ವಿಶೇಷ ಬರಹ: ಬಾಲಕೃಷ್ಣ ನಾಯ್ಕ್, ಚಿಕ್ಕೊಳ್ಳಿ