ಉತ್ತರ ಕನ್ನಡ ಜಿಲ್ಲೆಯ ಉಳವಿಯ ಬಗ್ಗೆ ಎಲ್ಲರಿಗೂ ಗೊತ್ತು. ಅಲ್ಲಿಯೇ ದೂರದ ದಟ್ಟಾರಣ್ಯದಲ್ಲಿ ಶರಣರ ವಚನಗಳ ಕಟ್ಟು ಸಿಕ್ಕಿದ ಆ ಜಾಗಕ್ಕೆ ಹೋಗಲು ದೇಹವಿದ್ದರೆ ಸಾಲದು, ಗುಂಡಿಗೆಯೂ ಗಟ್ಟಿ ಇರಬೇಕು. ವಚನಗಳನ್ನು ತಮ್ಮ ತೆಲೆಯ ಮೇಲೆ ಹೊತ್ತು ಹೋರಾಡಿ ಅವುಗಳನ್ನು ರಕ್ಷಿಸುತ್ತಾ ಹೋದ ಶರಣರ ಆ ಮಾರ್ಗಗಳನ್ನು ಹುಡುಕುತ್ತಾ ದಟ್ಟ ಕಾಡಿನಲ್ಲಿ ಹೋದಾಗ ನಮಗೆ ಕಲ್ಪನೆಗೂ ಸಿಗದ ಅಚ್ಚರಿಗಳು ಎದುರಾದವು.

ದಟ್ಟಾರಣ್ಯದ  ಆ ಕಿರಿದಾದ ದಾರಿಯಲ್ಲಿಸಾಗುತ್ತಿದ್ದರೆ ಸತ್ತ ಪ್ರಾಣಿಗಳ ವಾಸನೆ ಮೂಗಿಗೆ ಬಡಿಯುತ್ತದೆ. ಎಂದೂ ಅನುಭವಿಸದಂತ ಹೂವು, ಹಣ್ಣಿನ ಪರಿಮಳ ನಮ್ಮನ್ನು ಆಕರ್ಷಿಸುತ್ತದೆ. ಹಕ್ಕಿಗಳ ಕೂಗು ವಿಶೇಷವಾಗಿ ಕೇಳಿಸುತ್ತದೆ. ಈ ಕುತೂಹಲಗಳನ್ನು ಅರಿಯುತ್ತಲೇ ಆ ಗುಹೆಯನ್ನು ತಲುಪಬೇಕೆಂಬ ಹಠ ನಮ್ಮದಾಗಿತ್ತು.

ಅಂಥ ಕಾಡಿನೊಳಗೆ ಚಾರಣ ಹೋಗುವ ಸಾಹಸ ಮಾಡಿದ ನಮಗೆ ದಾರಿ ಆರಂಭವಾದ ಕೆಲವೇ ಹೊತ್ತಿನಲ್ಲಿಯೇ ಮೂರು ಅಚ್ಚರಿಗಳು ಎದುರಾದವು. ಮಾನವ ಸಹಜ ಜೀವಿಯಾದ ನಾವು ಎಂದಿಗೂ ಅಂಥ ಅಚ್ಚರಿ ಕಂಡಿಯೇ ಇಲ್ಲ. ಶರಣರ ಪವಾಡವೇ ಇರಬಹುದೇನೋ ಎನ್ನುವ ಭಾವೋದ್ವೇಗವೂ ನಮ್ಮಲ್ಲಿ ಮೂಡಿದ್ದು ಸತ್ಯ.

ಕಾಡಿನ ದಾರಿ ಮಧ್ಯೆ ಎದುರಾದ ಆ ಮೂರು ನಾಯಿಗಳು ಅದು ಹೇಗೆ ನಮ್ಮನ್ನು ಗುರುತಿಸಿದವೋ ಗೊತ್ತಿಲ್ಲ. ನಾವು ಹೋಗುವ ದಾರಿ ಅವುಗಳಿಗೆ ಹೇಗೆ ಗೊತ್ತಾಯಿತೋ ತಿಳಿಯದು. ಅಂಥ ಕಾನನದಲ್ಲಿ ನಮಗೇ ಹೋಗಲು ಭಯ. ಅಂಥದ್ದರಲ್ಲಿ ಆ ನಾಯಿಗಳು ಗೊತ್ತಿಲ್ಲದೆ ಜತೆಯಾಗಿ ನಮಗೆ ದಾರಿ ತೋರಿಸಿದವು.

ನಾಯಿಗಳು ಒಂದು ರೊಟ್ಟಿಯ ಉಪಕಾರವನ್ನು ಯಾವತ್ತು ಮರೆಯುದಿಲ್ಲ. ಆ ಋಣವನ್ನು ತನ್ನ ಪ್ರಾಣ ತೆತ್ತಾದರೂ ಉಳಸಿಕೊಳ್ಳುವ ಗುಣ ನಾಯಿಗಿದೆ. ನಿಯತ್ತು ಎನ್ನುವ ಪದದ ಹಿಂದೆ ಈ ನಾಯಿ ಸುಳಿದಾಡದೆ ಇರದು. ಇಂತಹ ನಾಯಿಗಳು ನಾವು ರೊಟ್ಟಿ ಕೊಡದೇ ಇದ್ದರೂ ನಮ್ಮೊಂದಿಗೆ ಕಾಡಿನುದ್ದಕ್ಕೂ ಜತೆಯಾಗಿದ್ದು ಪವಾಡವೆನಿಸಿತು.

ನಾವು ನೋಡಲು ಹೊರಟ ಸ್ಥಳ ಸಹ ಹಾಗೆಯೇ ಇದೆ. ಶರಣರ ವಚನಗಳ ಗಂಟು ಸಿಕ್ಕ ಆ ಗುಹೆಯ ಬಗ್ಗೆ ಹೊರ ಪತ್ರಪಂಚಕ್ಕೆ ಅಷ್ಟೊಂದು ಪರಿಚಯ ಇಲ್ಲ. ಉಳವಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿ ಆ ಗುಹೆ ಇದೆ. ನಮ್ಮ ಐವರು ಸ್ನೇಹಿತರ ತಂಡ ಆ ಗುಹೆ ಕಾಣಲು ನಿರ್ಧರಿಸಿದಾಗ ಅಲ್ಲಿನ ಚಮತ್ಕಾರಗಳ ಅರಿವು ಇರಲಿಲ್ಲ.

ಎಚ್ಚರಿಕೆಯ ಕಾಲ್ನಡಿಗೆಯಲ್ಲಿ ನಾಯಿಗಳ ದೋಸ್ತಿ
ಕಾರಿನಲ್ಲಿ ಉಳವಿ ವರೆಗೆ ಹೊರಟ ನಾವು ಮುಂದೆ ಜೀಪ್ ಮೂಲಕ ಶಿವಪುರಕ್ಕೆ ಹೋಗಬೇಕು. ಅಲ್ಲೊಂದು ಆಶ್ರಮ ಇದೆ. ಅಲ್ಲಿ ದಾಸೋಹದ ಭೋಜನ ಸವಿಯಬಹುದು. ಅಲ್ಲಿಂದ ಕಾಲ್ನಡಿಗೆ ಆರಂಭವಾಗುತ್ತದೆ. ಆಶ್ರಮದಿಂದ ಸುಮಾರು 5 ಕಿ.ಮೀ. ದೂರದಲ್ಲಿ ಕಾಡಿನೊಳಗೆ ಶರಣರ ವಚನಗಳ ಗಂಟು ಸಿಕ್ಕ ಗುಹೆ ಇದೆ.

ಕಾಲ್ನಡಿಗೆಯಲ್ಲಿ ಅರ್ಧ ಕಿ.ಮೀ. ಕ್ರಮಿಸುತ್ತಿದ್ದಂತೆಯೇ ಮೂರು ನಾಯಿಗಳು ಜತೆಯಾಗಿಯೇ ನಮಗೆ ಎದುರಾದವು. ಅಲ್ಲೊಂದು ರೈತರ ಮನೆಯೂ ಇದೆ. ನಾಯಿ ಮೂರು. ನಾವು ಐವರು. ಹೋರಾಡಿದರೂ ಕನಿಷ್ಠ ಹಾನಿಯಂತೂ ನಮಗೆ ಖಚಿತ ಎಂದು ಕೈಯಲ್ಲಿದ್ದ ಬೆತ್ತ ಗಟ್ಟಿ ಹಿಡಿದಿದ್ದೆವು. ನಮ್ಮ ಯಾವ ಬೆದರಿಕೆ ಕೂಗಿಗೂ ಅವು ಅಲ್ಲಾಡಲಿಲ್ಲ.

ಬದಲಿಗೆ ಬಾಲ ಅಲ್ಲಾಡಿಸುತ್ತ ಸ್ನೇಹದ ಸಂದೇಶ ತೋರಿದಾಗ ಅರ್ಧ ಧೈರ್ಯ ಬಂತು. ಮುಂದೆ ಸಾಗುತ್ತಿದ್ದಂತೆಯೇ ನಾಯಿಗಳೂ ನಮ್ಮನ್ನು ಹಿಂಬಾಲಿಸಿದವು. ನಾವು ಹೋಗಬೇಕಿದ್ದ ದಾರಿಯಲ್ಲಿ ನಮಗಿಂತ ಮೊದಲೇ ಹೋಗಿ ದಾರಿ ತೋರಿಸಿದವು.

ದಾರಿ ನಡುವೆ ಸಿಗುವ ವಿಶೇಷ ಹೂವು

ಅಪರಿಚಿತರಾದ ನಾವು ವಿರುದ್ದ ದಿಕ್ಕಿನಲ್ಲಿ ಹೋದಾಗ ನಮ್ಮ ಎದರು ಬಂದು ನಿಂತು ನೀವು ದಾರಿತಪ್ಪಿದ್ದೀರಿ ಎಂದು ಎಚ್ಚರಿಸಿದವು. ತೊರೆಯ ಬದಿಯ ಕಿರಿದಾದ ಏರಿಳಿತದ ದಾರಿಯಲ್ಲಿ ನಮ್ಮ ಜೊತೆಯಾಗಿ ಸಾಗುವಾಗ ಮೂಕ ಪ್ರಾಣಿಯೊಂದಿಗಿನ ಸ್ನೇಹ ನಿಜಕ್ಕೂ ಧನ್ಯತಾ ಭಾವನೆ ಮೂಡಿಸಿತು.

ಆ ಮೂರು ನಾಯಿಗಳು ಅನೋನ್ಯತೆಯಿಂದ ಸಾಗುವಾಗ ಎಂತವರಿಗೂ ಅವುಗಳ ನೋಡಿ ಮುಂದೆ ಸಾಗಲು ಧೈರ್ಯ ಬರುವುದು. ನಾವೇ ಏನಾದರೂ ಕೊಟ್ಟರೆ ತಿಂದು ಮತ್ತೆ ನಮ್ಮ ಜೊತೆಯಾಗಿ ಹಿಂತಿರುಗಿ ಮೂಲ ಸ್ಥಳಕ್ಕೆ ನಮ್ಮನ್ನು ತಲುಪಿಸಿ ವಿದಾಯ ಹೇಳುತ್ತವೆ. ಆ ನಾಯಿಗಳು ನಮ್ಮೊಂದಿಗೆ ಬಂದು ಗುಹೆ ನೋಡಿ ನಮ್ಮೊಂದಿಗೇ ಮರಳಿದ್ದು ಅದನ್ನು ವರ್ಣಿಸುವುದಕ್ಕಿಂತ ಒಮ್ಮೆ ನೀವೂ ಅಲ್ಲಿ ಚಾರಣ ಮಾಡಿ ನಾಯಿಯ ಸ್ನೇಹ ಅನುಭವಿಸಿ.

ನಾಯಿಗಳ ಬಗ್ಗೆ ಹೇಳುವಾಗಲೆಲ್ಲ ಕೆಜಿಎಫ್ ಸ್ಟೋರಿ ರೀತಿ ಕತೆ ಮುಂದೆ ಹೋಗಿರುತ್ತದೆ. ಕ್ಷಮಿಸಿ, ನಾವು ಹೋದ ಆ ಗುಹೆ ಅದೆಂಥ ಇತಿಹಾಸ ಹೊಂದಿದೆ ಎಂದರೆ ಶರಣರ ಹೋರಾಟದ ಧೈರ್ಯವನ್ನು ಅಲ್ಲಿನ ಗುಹೆಗಳು ಪರಿಚಯಿಸುತ್ತವೆ. ಹರಳಯ್ಯನ ಚಿಲುಮೆ, ಆಕಳಗವಿ, ಪಂಚಲಿಂಗೇಶ್ವರ ಗುಹೆ, ಅಕ್ಕನಾಗಮ್ಮನ ಗುಹೆ ಹೀಗೆ ಶರಣರ ಹೋರಾಟದ ಬದುಕಿನ ಕುರುಹುಗಳು ಕಾಣುತ್ತವೆ.

12ನೇ ಶತಮಾನದಲ್ಲಿ ಆರಂಭವಾದ ವಚನ ಸಾಹಿತ್ಯ ಇಂದು ಪವಿತ್ರ ಗ್ರಂಥಗಳಾಗಿವೆ. ಶರಣರು ತಮ್ಮ ಜೀವದ ಹಂಗನ್ನು ತೊರೆದು ಅವುಗಳನ್ನು ರಕ್ಷಣೆಮಾಡಿದ್ದಾರೆ. ಅಂದು ಬಿಜ್ಜಳನ ಸೈನಿಕರೊಂದಿಗೆ ಹೋರಾಡುತ್ತಾ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಉಳವಿಗೆ ಬಂದು ತಲುಪಿದ ಬಸವಣ್ಣನ್ನವರ ಸೋದರಳಿಯ ಚೆನ್ನಬಸವಣ್ಣ ಅಲ್ಲಿಯೇ ಐಕ್ಯರಾಗಿದ್ದಾರೆ. ಅದುವೇ ಇಂದು ಪವಿತ್ರ ಸ್ಥಳವಾಗಿದೆ.

ಅಲ್ಲಿಯೇ ಸುತ್ತಮುತ್ತ ಅವರ ವಚನಗಳು ಕಟ್ಟುಗಳು ಸಿಕ್ಕಿವೆ. ಚೆನ್ನಬಸವಣ್ಣ ಅವರ 1503 ವಚನಗಳು ನಮಗೆ ದೊರೆತಿವೆ. ಕಲ್ಯಾಣವನ್ನು ತೊರೆದಾಗ ಚೆನ್ನಬಸವಣ್ಣ ಅವರಿಗೆ ಕೇವಲ 24 ವರ್ಷಗಳಾಗಿದ್ದವು.

ಚಿತ್ರ, ಲೇಖನ:
ವಿನೋದ ರಾ. ಪಾಟೀಲ