ಸದಾ ಒಂದಿಲ್ಲೊಂದು ಸುದ್ದಿಗಳನ್ನು ಪರಿಶೀಲಿಸದೆ ಪಾರ್ವರ್ಡ್ ಮಾಡುವ ವಾಟ್ಸ ಆ್ಯಪ್ ಬಳಕೆದಾರರ ಬುಡಕ್ಕೇ ಬೆಂಕಿ ಇಡುವಂತ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ವಾಟ್ಸ್ ಆ್ಯಪ್ ಗಳನ್ನು ಸರ್ಕಾರ ಗಮನಿಸುತ್ತಿದೆ. ಸುಳ್ಳು ಸುದ್ದಿ ಹರಡಿದರೆ ಕ್ರಮ ಕೈಗೊಳ್ಳುತ್ತದೆ ಎನ್ನುವ ಮಾಹಿತಿಯುಳ್ಳ ಸಂದೇಶ ವೈರಲ್ ಆಗಿದೆ.

ವಾಟ್ಸ್ ಆ್ಯಪ್ ನಲ್ಲಿ ಯಾರಿಗಾದರು ಸಂದೇಶ ಕಳುಹಿಸಿದರೆ ಟಿಕ್ ಮಾರ್ಕ್ ಬರುವುದನ್ನು ಎಲ್ಲರೂ ನೋಡಿರುತ್ತೀರಿ. ಮೆಸೇಜ್ ಸೆಂಡ್ ಆದರೆ ಒಂದು ಟಿಕ್, ಮೆಸೇಜ್ ತಲುಪಿದರೆ ಎರಡು ಟಿಕ್ ಮತ್ತು ಮೆಸೇಜ್ ಓದಿದರೆ ಎರಡು ನೀಲಿ ಟಿಕ್ ಬರುವುದನ್ನು ಎಲ್ಲರೂ ಗಮನಿಸಿದ್ದೀರಿ.

ಆದರೆ, ಕಳುಹಿಸಿದ ಸಂದೇಶದ ಬಗ್ಗೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎನ್ನುವ ಬಗ್ಗೆ ತಿಳಿಸಲು ವಾಟ್ಸ್ ಆ್ಯಪ್ ಹೊಸ ವ್ಯವಸ್ಥೆಯೊಂದನ್ನು ಆರಂಭಿಸಿದೆ ಎನ್ನುವ ಸಂದೇಶವೊಂದು ಹರಿದಾಡುತ್ತಿದೆ. ಅದರ ಅಸಲಿಯತ್ತು ಏನು ಎನ್ನುವುದನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ.

ಏನಿದು ಸಂದೇಶ?
ವಾಟ್ಸ್ ಆ್ಯಪ್ ಮೆಸೇಜ್ ಗಳನ್ನು ಸರ್ಕಾರ ಗಮನಿಸುತ್ತಿದೆ. ಸುಳ್ಳು ಸುದ್ದಿಗಳೂ ವಾಟ್ಸಆ್ಯಪ್ ಗಳಲ್ಲಿ ಹರಡುತ್ತಿರುವುದರಿಂದ ಟಿಕ್ ಮಾರ್ಕ್ ಗಳ ಮೂಲಕ ತಕ್ಷಣ ತಿಳಿಸುತ್ತದೆ.
ಇನ್ನು ಮುಂದೆ ಹಲವು ಕಡೆ ಶೇರ್ ಆಗಿ ಬಂದ ಮೆಸೇಜ್ ಕಳುಹಿಸಿದ ಬಳಿಕ ಮೂರು ನೀಲಿ ಟಿಕ್ ಗಳು ಕಾಣಿಸಿದರೆ ನಿಮ್ಮ ಸಂದೇಶ ಸರ್ಕಾರದ ಗಮನಕ್ಕೆ ಬಂದಿದೆ ಎಂದರ್ಥ.

PIB twitter link

ಎರಡು ನೀಲಿ ಮತ್ತು ಒಂದು ಕೆಂಪು ಟಿಕ್ ಎಂದರೆ ಸರ್ಕಾರವು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ಎಂದರ್ಥ.
ಒಂದು ನೀಲಿ ಮತ್ತು ಎರಡು ಕೆಂಪು ಟಿಕ್ ಎಂದರೆ ಸರ್ಕಾರವು ನಿಮ್ಮ ವಿರುದ್ಧ ಕ್ರಮ ಆರಂಭಿಸಿದೆ ಎಂದರ್ಥ.
ಮೂರು ಕೆಂಪು ಟಿಕ್ ಎಂದರೆ ಸರ್ಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ನೀವು ನ್ಯಾಯಾಲಯದ ಸಮನ್ಸ್ ಸ್ವೀಕರಿಸುತ್ತೀರಿ ಎಂದು ಸಂದೇಶ ಹೇಳುತ್ತದೆ.

ಸತ್ಯ ಶೋಧನೆ:
ವೈರಲ್ ಆಗಿರುವ ಈ ಮೆಸೇಜ್ ನ  ಅಸಲಿಯತ್ತನ್ನು ಪರಿಶೀಲಿಸಿದಾಗ ಅದಕ್ಕೆ ಯಾವುದೇ ಆಧಾರಗಳು ಇಲ್ಲ ಎನ್ನುವುದು ಗೊತ್ತಾಯಿತು. ವಾಟ್ಸ್ ಆ್ಯಪ್ ಕೂಡ ಹೊಸ ಟಿಕ್ ಗಳ ಬಗ್ಗೆ ಎಲ್ಲಿಯೂ ಹೇಳಿಲ್ಲ. ಈ ಹಿಂದೆ ಇರುವಂತೆಯೇ ಟಿಕ್ ಗುರುತುಗಳ ಚಿಹ್ನೆಯನ್ನೇ ಮುಂದುವರಿಸಿದೆ.

ಅಲ್ಲದೆ, ಕೇಂದ್ರ ಸರ್ಕಾರದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ ಸಹ ವೈರಲ್ ಸಂದೇಶ ಸುಳ್ಳು ಎಂದು ಖಚಿತಪಡಿಸಿದೆ. ಸರ್ಕಾರ ಇಂಥ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ, ವಾಟ್ಸ್ ಆ್ಯಪ್ ಗಳಲ್ಲಿ ಸುಳ್ಳು ಸುದ್ದಿ ಹರಡುವುದು ಮತ್ತು ಕಾನೂನು ಸೂವ್ಯವಸ್ಥೆ ಹಾಳು ಮಾಡುವ ಸಂದೇಶಗಳನ್ನು ಹಂಚಿಕೊಳ್ಳುವಂತಿಲ್ಲ. ಅಂಥ ಸಂದೇಶಗಳನ್ನು ಹಂಚಿಕೊಂಡರೆ ತನಿಖೆ ಕೈಗೊಂಡು ಸಂದೇಶ ರವಾನಿಸಿದವರು ಮತ್ತು ಆ ವಾಟ್ಸ್ ಆ್ಯಪ್ ಗ್ರೂಪ್ ನ ಅಡ್ಮಿನ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.