ಕಾರವಾರ: ಕೊರೊನಾ ಲಾಕ್ ಡೌನ್ ನಿಂದ ಮನೆಯಲ್ಲೇ ಇದ್ದು ಈಗ ಪ್ರಕೃತಿಯ ಮಡಿಲಲ್ಲಿ ಮಿಂದೇಳುವವರಿಗಾಗಿ ಕೈ ಬೀಸಿ ಕರೆಯುತ್ತಿದೆ ಗೋಲಾರಿ ಜಲಪಾತ. ಗದ್ದಲ, ಗಲಾಟೆ ಇಲ್ಲದೆ ಸ್ವಚ್ಛಂದವಾಗಿ ಪ್ರಕೃತಿಯ ಸೌಂದರ್ಯ ಉಣಬಡಿಸುತ್ತಿರುವ ಈ ಜಲಪಾತ ಕೆಲವೇ ವರ್ಷಗಳಲ್ಲಿ ಜನಪ್ರೀಯವಾಗಿದೆ.

ಕಾರವಾರ ತಾಲೂಕು ವ್ಯಾಪ್ತಿಗೆ ಒಳಪಡುವ ಗೋಲಾರಿ ಜಲಪಾತ ಸಹ್ಯಾದ್ರಿ ಪರ್ವತದ ಮಧ್ಯೆ ಇರುವ ಈ ಆಕರ್ಷಕ ಪ್ರವಾಸಿ ತಾಣ. ತೀರಾ ಇತ್ತೀಚಿನ ವರ್ಷಗಳ ಹಿಂದೆಯಷ್ಟೇ ಇದು ಬೆಳಕಿಗೆ ಬಂದಿದೆ. ಅಂದಿನಿಂದ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚು.

ಎಲ್ಲಿದೆ ಜಲಪಾತ?

ಕಾರವಾರ ತಾಲೂಕಿನ ತೋಡೂರು ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಈ ಜಲಪಾತ ಧುಮ್ಮಿಕ್ಕುತ್ತದೆ. ಕಾರವಾರ ನಗರದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಂಕೋಲಾ ಮಾರ್ಗವಾಗಿ 15 ಕಿ.ಮೀ. ಚಲಿಸಿದರೆ ತೋಡೂರು ಗ್ರಾಮ.

ಹೆದ್ದಾರಿಯಿಂದ ಎಡಕ್ಕೆ ಗುಡ್ಡದತ್ತ ಗಮನಿಸಿದರೆ ದೂರದ ಬೆಟ್ಟದ ಮೇಲಿನಿಂದ ಸುಮಾರು ನೂರು ಅಡಿಗಿಂತಲೂ ಎತ್ತರದಿಂದ ಧುಮುಕವ ಜಲಧಾರೆಯನ್ನು ಕಾಣಬಹುದು. ಹೆದ್ದಾರಿಯಿಂದ ಎಡಕ್ಕೆ ಸುಮಾರು 3 ಕಿ.ಮೀ. ಕಚ್ಚಾ ರಸ್ತೆಯಲ್ಲಿ ಸಾಗಬೇಕು. ಬೈಕ್, ಕಾರುಗಳು ಹೋಗುತ್ತವೆ.

ಅಲ್ಲಿಂದ ಕಾಲು ದಾರಿಯಲ್ಲಿ ಸುಮಾರು 2 ಕಿ.ಮೀ. ಗುಡ್ಡವನ್ನು ಏರಬೇಕು. ಟ್ರೆಕ್ಕಿಂಗ್ ಆಸಕ್ತರಿಗೆ ಹೆಚ್ಚು ಖುಷಿ ಕೊಡುತ್ತದೆ. ಮಧ್ಯೆ ಸಿಗುವ ಹಳ್ಳಗಳನ್ನು ಸಾಹಸದಿಂದ ದಾಟುತ್ತ ಸಾಗಿದರೆ ಭೋರ್ಗರೆದು ಧುಮುಕುವ ಗೋಲಾರಿ ಜಲಪಾತ ನಮ್ಮನ್ನು ಸ್ವಾಗತಿಸುತ್ತದೆ. ಬೆಟ್ಟದ ದಾರಿಯಾದ್ದರಿಂದ ಹೊಸದಾಗಿ ಬರುವವರು ಸ್ಥಳೀಯರ ನೆರವು ಪಡೆಯುವುದು ಉತ್ತಮ.

ಈ ಜಲಪಾತವು ಹಂತ ಹಂತವಾಗಿ ಧುಮುಕುತ್ತದೆ. ಸ್ಥಳಕ್ಕೆ ಹೋದಾಗ ಸುಮಾರು 20 ಅಡಿಯ ಒಂದು ಜಲಪಾತದ ಹಂತ ಮಾತ್ರ ಕಾಣಲು ಸಿಗುತ್ತದೆ. ಸಾಹಸಿಗಳು, ಚಾರಣಪ್ರಿಯರು ಈ ಜಲಪಾತದ ತುತ್ತತುದಿಯವರೆಗೂ ಏರುತ್ತಾರೆ.

ಪ್ರವಾಸಿಗರ ಆಗಮನ ಆರಂಭ:

ಪ್ರತಿವರ್ಷ ಜೂನ್ ಆರಂಭವಾಗುತ್ತಿದ್ದಂತೆ ಇಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯವರಷ್ಟೇ ಅಲ್ಲ ಹೊರಜಿಲ್ಲೆ, ನೆರೆ ರಾಜ್ಯ ಗೋವಾದಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಪ್ರಾಸಿಗರು ಬರುತ್ತಿದ್ದರು. ಕೊರೋನಾ ವೈರಸ್ ಭೀತಿಯಿಂದ ದೂರದೂರಿನ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಸದ್ಯ ಕಾರವಾರದವರು ಮಾತ್ರ ಕುಟುಂಬ ಸಮೇತ ಅಥವಾ ಸ್ನೇಹಿತರೊಂದಿಗೆ ಬಂದು ಎಂಜಾಯ್ ಮಾಡುತ್ತಿದ್ದಾರೆ.

ಜಲಧಾರೆಗೆ ಮೈಯೊಡ್ಡುವುದೇ ರೋಮಾಂಚಕ:

ಮಳೆ ನಿಂತ ಮೇಲೆ ಈ ಜಲಪಾತ ನೋಡುವುದೇ ಆನಂದ. ಮಳೆ ಜೋರಾಗಿದ್ದಾಗ ದಾರಿಯ ಮಧ್ಯೆ ಹಳ್ಳಗಳು ರಭಸವಾಗಿ ಹರಿಯುವುದರಿಂದ ಅದನ್ನು ದಾಟಿ ಹೋಗುವುದೂ ಕಷ್ಟವೇ. ಈಗಂತೂ ಜಲಪಾತ ವೀಕ್ಷಣೆಗೆ ತೆರಳಲು ಪ್ರಶಸ್ತವಾಗಿದೆ.

ಸುಮಾರು 20 ಅಡಿ ಎತ್ತರದಿಂದ ಧುಮುಕುವ ಜಲಧಾರೆಯ ಅಡಿಯಲ್ಲಿ ಮೈಯೊಡ್ಡುವುದು ರೋಮಾಂಚನ. ಜಲಪಾತದ ಅಡಿಯಲ್ಲಿ ಆಳವಾದ ಹೊಂಡವಿಲ್ಲ. ಹಾಗಾಗಿ ಮಕ್ಕಳು, ಮಹಿಳೆಯರೆನ್ನದೆ ಎಲ್ಲ ಪ್ರವಾಸಿಗರು ಒಮ್ಮೆ ಜಲಪಾತದ ಅಡಿಗೆ ನಿಂತು ಮೋಜು ಅನುಭವಿಸುತ್ತಾರೆ.

ಸ್ಥಳೀಯರೇ ಹೇಳುವಂತೆ ರಭಸವಾಗಿ ಬೀಳುವ ನೀರಿಗೆ ಮೈಯೊಡ್ಡಿದರೆ ಮಾಂಸಖಂಡದಲ್ಲಿ ಇರುವ ನೋವು ನಿವಾರಣೆಯಾಗುತ್ತದೆಯಂತೆ.

ಚಿತ್ರ, ಲೇಖನ, ವಿಡಿಯೊ: ರವಿತೇಜ ಕಾರವಾರ