ವರದಿ: ರವಿತೇಜ ಕಾರವಾರ
ಕಾರವಾರ: ಎಲ್ಲೆಡೆ ಸ್ಯಾಂಡಲ್ ವುಡ್ನಲ್ಲಿನ ಡ್ರಗ್ಸ್ ಮಾಫಿಯಾದ ಸುದ್ದಿಯೇ ಹೆಚ್ಚು ಸದ್ದು ಮಾಡುತ್ತಿದೆ. ಈ ಸ್ಯಾಂಡಲ್ ವುಡ್ ಲಿಂಕ್ಡ್ ಡ್ರಗ್ಸ್ ಮಾಫಿಯಾವನ್ನು ಬಯಲಿಗೆಳೆಯಲು ಸಿಸಿಬಿ ವಿಚಾರಣೆ ಕೈಗಿತ್ತಿಕೊಂಡಿದೆ. ಈ ವೇಳೆ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಉತ್ತರ ಕನ್ನಡ ಮೂಲದ ಖಡಕ್ ಮಹಿಳಾ ಪೊಲೀಸ್ ಅಧಿಕಾರಿ ಅಂಜುಮಾಲ ನಾಯಕ ಅವರದ್ದು.

ಡ್ರಗ್ಸ್ ಮಾಫಿಯಾದ ಬಗ್ಗೆ ಆಳವಾದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಶುಕ್ರವಾರ ಮಾದಕ ನಟಿಯೆಂದೇ ಖ್ಯಾತಿ ಪಡೆದಿರುವ ರಾಗಿಣಿ ದ್ವಿವೇದಿಯವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದು ರಾಜ್ಯ ಮಾತ್ರವಲ್ಲದೇ ದೇಶದೆಲ್ಲೆಡೆ ತೀರಾ ಸಂಚಲನವನ್ನು ಉಂಟು ಮಾಡಿದೆ.

ಈ ನಟಿಯ ನಿವಾಸದ ಮೇಲೆ ಆರು ಮಂದಿ ಸಿಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಈ ದಾಳಿಯ ನೇತೃತ್ವವನ್ನು ಮುಖ್ಯ ಪೊಲೀಸ್ ಅಧಿಕಾರಿ ಅಂಜುಮಾಲಾ ನಾಯಕ ಅವರು ವಹಿಸಿದ್ದರು. ಹೀಗಾಗಿ ಅಂಜುಮಾಲಾ  ಅವರ ಬಗ್ಗೆ ಎಲ್ಲೆಡೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅವರ ಕಾರ್ಯಕ್ಕೆ ಅಪಾರ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ಕೆಲ ವರ್ಷಗಳ ಹಿಂದೆಯಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಗೆ ಐಎಎಸ್ ಅಧಿಕಾರಿಯೊಬ್ಬರ ಪತ್ನಿಯು ಮದ್ಯಪಾನ ಸೇವಿಸಿ ಒಳ ಪ್ರವೇಶಿಸುತ್ತಿರುವಾಗ ಅಂಜುಮಾಲಾ ನಾಯಕ, ಅವರನ್ನು ತಡೆದಿದ್ದರು.

ಆಗ ಆಕೆ ಇವರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ನಡೆದಿತ್ತು. ಅದಕ್ಕೆ ಜಗ್ಗದ ಅಂಜುಮಾಲಾ ಅವರು ಆಕೆಯನ್ನು ಬಂಧಿಸಿ, ಠಾಣೆಗೆ ಕರೆದುಕೊಂಡು ಹೋಗಿದ್ದರು. ಆ ಸಮಯದಲ್ಲಿ ರಾಜ್ಯಾದ್ಯಂತ ಇವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆಯು ವ್ಯಕ್ತವಾಗಿತ್ತು.

ಈಗ ಚಂದನವನದ ಮಾದಕ ಜಾಲದ ಕುರಿತು ಖ್ಯಾತ ನಟಿ ರಾಗಿಣಿ ದ್ವಿವೇದಿಯನ್ನು ಬಂಧಿಸಿ, ವಿಚಾರಣೆ ಮಾಡುತ್ತಿರುವ ಅಂಜುಮಾಲಾ ಮತ್ತೆ ಸುದ್ದಿಯಲ್ಲಿದ್ದಾರೆ.

ಎಲ್ಲಿಯವರು?

ಅಂಜುಮಾಲಾ ನಾಯಕ ಮೂಲತಃ ಅಂಕೋಲಾ ತಾಲೂಕಿನವರು. ಅಂಕೋಲಾ ಶಿರಗುಂಜಿಯ ನಿವೃತ್ತ ಶಿಕ್ಷಕ ತಿಮ್ಮಣ್ಣ ನಾಯಕ ಹಾಗೂ ಶಾಂತಿ ನಾಯಕ ದಂಪತಿಯ ಪುತ್ರಿ. ಅಂಜುಮಾಲ ಅವರು 2000ನೇ ಸಾಲಿನಲ್ಲಿ ಜಿಲ್ಲೆಯ ಮೊದಲ ಮಹಿಳಾ ಪಿ.ಎಸ್.ಐ. ಆಗಿ ಪೊಲೀಸ್ ಇಲಾಖೆಯನ್ನು ಪ್ರವೇಶಿಸಿದ್ದರು.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿಸಲು ಸಿದ್ಧತೆ

ಬೆಳಗಾವಿ ಜಿಲ್ಲೆಯ ಕಾಕತಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಪ್ರಾರಂಭಿಸಿದ ಇವರು ಬಳಿಕ ಹುಬ್ಬಳ್ಳಿಯ ಸಬ್ಬರಬನ್ ಅಪರಾಧ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಗಲಬೆ ನಡೆದ ಜಾಲಹಳ್ಳಿ, ಮಲ್ಲೆಶ್ವರಂ, ಹಲಸೂರು ಪೊಲೀಸ್ ಠಾಣೆಗಳಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಪ್ರವಾಹ ಭೀತಿ: ಶರಾವತಿ ನದಿ ತೀರದಲ್ಲಿ ಹೈ ಅಲರ್ಟ್

ಅಂಜುಮಾಲಾ ಅವರು ಪೊಲೀಸ್ ಇಲಾಖೆಗೆ ಸೇರಿ 19 ವರ್ಷಗಳಾಗಿದ್ದು ಇದುವರೆಗೆ ಹಲವಾರು ಅಪರಾಧ ಪ್ರಕರಣಗಳನ್ನು ಬೇಧಿಸಿದ್ದಾರೆ. ಇವರ ವೃತ್ತಿಪರತೆಯನ್ನು ಗುರುತಿಸಿದ ರಾಜ್ಯ ಸರ್ಕಾರ 2015 ರಲ್ಲಿ ಮುಖ್ಯಮಂತ್ರಿ ಬಂಗಾರದ ಪದಕ ನೀಡಿ ಗೌರವಿಸಿದೆ. ಜೊತೆಗೆ 2018 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ರಾಜ್ಯದ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ.