ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯುವದನ್ನು ಪುನರಾಂಭಿಸುವ ಕುರಿತು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

ಈ ಸಂಬಂಧ ಚರ್ಚಿಸಲು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮಾರ್ಚ್ 12 ರಂದು ನೀಡಿರುವ ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರದ ಷರತ್ತಿನಂತೆ ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಮಯದಲ್ಲಿ ಮೀನು ಮತ್ತು ಇತರೆ ಜಲಚರಗಳು ಮೊಟ್ಟೆ ಇಡುವ ಹಾಗೂ ಸಂತಾನೋತ್ಪತ್ತಿ ಸಮಯವಾದ್ದರಿಂದ ಉತ್ತರಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ ನದಿಪಾತ್ರಗಳಲ್ಲಿ ಮರಳು ದಿಬ್ಬಗಳಿಂದ ಮರಳನ್ನು ತೆಗೆಯುವಿಕೆ ಮತ್ತು ಸಾಗಾಣಿಕೆಯನ್ನು ಜೂ.20 ರಿಂದ ಸ್ಥಗಿತಗೊಳಿಸಲಾಗಿತ್ತು.

ಪ್ರಸ್ತುತ ಮುಂಗಾರು ಮಳೆ ಕ್ಷಿಣಿಸುತ್ತಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳಿಗೆ ಹಾಗೂ ಜನ ಸಾಮಾನ್ಯರ ಮನೆ ನಿರ್ಮಾಣ ಕಾಮಗಾರಿಗಳಿಗೆ ಮರಳಿನ ಅವಶ್ಯಕತೆ ಇದೆ. ಹಾಗಾಗಿ ಸೆ.21 ರಿಂದ CRZ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಪದ್ದತಿಯಲ್ಲಿ ಮರಳು ತೆರವುಗೊಳಿಸುವುದನ್ನು ಪ್ರಾರಂಭಿಸುವುದಕ್ಕಾಗಿ ಅನುಮತಿ ನೀಡಲು ಸಿದ್ದತೆ ಮಾಡಿಕೊಳ್ಳಲು ಗಣಿ ಮತ್ತು ವಿಜ್ಞಾನ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.

2020-21 ನೇ ಸಾಲಿನಲ್ಲಿ ತಾತ್ಕಾಲಿಕ ಮರಳು ಪರವಾನಿಗೆ ಕೋರಿ ಅನೇಕ ಅರ್ಜಿಗಳು ಸಲ್ಲಿಕೆಯಾಗಿರುತ್ತವೆ. ಈ ಅರ್ಜಿಗಳನ್ನು ನ್ಯಾಯಯುತವಾಗಿ ಇತ್ಯರ್ಥ ಪಡಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ, ಪರಿಸರ ಅಧಿಕಾರಿ (CRZ) , ಸಂಬಂಧಿಸಿದ ಉಪವಿಭಾಗಾಧಿಕಾರಿಗಳು ಹಾಗೂ ಗಣಿ ಇಲಾಖೆಯ ಉಪ ನಿರ್ದೇಶಕರನ್ನೊಳಗೊಂಡ ಉಪ ಸಮಿತಿ ರಚಿಸಲಾಗಿದೆ.

ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳ ಕುರಿತು ಈ ಉಪ ಸಮಿತಿಯ ವರದಿ ಬಂದ ನಂತರ ಕಾನೂನಾತ್ಮಕವಾಗಿ  ಪರಿಶೀಲಿಸಿ ಕ್ರಮ ಜರುಗಿಸಲಾಗುವದು ಎಂದು ಅವರು ತಿಳಿಸಿದರು.