ಕಾರವಾರ: ಕೋವಿಡ್ ಸೋಂಕು ತಗುಲಿ ಗುಣಮುಖರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ವೈದ್ಯರಲ್ಲೊಬ್ಬರಾಗಿದ್ದ ಅಂಕೋಲಾ ತಾಲೂಕಿನ ಡಾ. ಅವಿನಾಶ್ ತಿನೇಕರ್ (65) ಅವರು ಚಿಕಿತ್ಸೆ ಫಲಿಸದೇ ಇಂದು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಮೃತಪಟ್ಟಿದ್ದಾರೆ.

ಅಂಕೋಲಾ ತಾಲೂಕಿನ ಆರ್ಯ ಮೆಡಿಕಲ್ ಸೆಂಟರ್‌ನ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಸುಮಾರು 30 ವರ್ಷಗಳಿಂದ ವೈದ್ಯವೃತ್ತಿಯಲ್ಲಿದ್ದ ಅವರು ಅಂಕೋಲಾ ತಾಲೂಕು ಮಾತ್ರವಲ್ಲದೇ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗದ ಸಾವಿರಾರು ಮಂದಿಯ ಜೀವ ಉಳಿಸಿ ಪ್ರಸಿದ್ಧಿ ಪಡೆದವರಾಗಿದ್ದರು. ಅಂಕೋಲಾ ರೋಟರಿ ಕ್ಲಬ್ ಸದಸ್ಯರಾಗಿ ವಿದ್ಯಾರ್ಥಿಗಳಿಗೆ ನೆರವು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ಗಮನ ಸೆಳೆದಿದ್ದರು.

ಇತ್ತೀಚೆಗಷ್ಟೇ ಕೋವಿಡ್-19 ಸೋಂಕು ತಗುಲಿದ್ದ ಇವರಿಗೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ನೀಡಿದ ಬಳಿಕ ಕೊರೋನಾದಿಂದ ಗುಣಮುಖರಾಗಿದ್ದರು. ಕೋವಿಡ್ ನೆಗೆಟಿವ್ ಬಂದ ಬಳಿಕ ಅವರನ್ನು ಸಾಮಾನ್ಯ ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ಮುಮದುವರೆಸಲಾಗಿತ್ತಾದರೂ ಇಂದು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದರು ಎಂದು ಕಿಮ್ಸ್ ಮೂಲಗಳಿಂದ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಡಾ. ಅವಿನಾಶ ಅಂಕೋಲಾದ ಸಂಜೀವಿನಿಯಾಗಿದ್ದು ಹೇಗೆ?

ಡಾ. ಅವಿನಾಶ ಅವರ ಸಾವಿನ ಸುದ್ದಿ ಕೇಳಿ ಅಂಕೋಲಾ ಜನತೆ ಕಂಬನಿ ಮಿಡಿಯುತ್ತಿದ್ದು ಹಲವಾರು ಗಣ್ಯರು ಅವರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.