ಮಾನವರ ಜನ್ಮದಿನಾಚರಣೆ ಸಾಮಾನ್ಯವಾಗಿ ಕಾಣುತ್ತೇವೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಬೆಕ್ಕುಗಳು ಮತ್ತು ನಾಯಿಗಳಂತಹ ಸಾಕುಪ್ರಾಣಿಗಳ ಜನ್ಮದಿನವನ್ನೂ ಆಚರಿಸುತ್ತಾರೆ. ಆದರೆ, ರೈತನ ಗೆಳೆಯನಾಗಿ ದುಡಿಯುವ ಹೋರಿಗೆ ಎಂದಾದರೂ ಜನ್ಮ ದಿನ ಆಚರಿಸಿದ್ದೀರಾ?.
ದನಗಳನ್ನೂ ಗೆಳೆಯರಂತೆ ಭಾವಿಸುವ ಇಲ್ಲಿನ ಯುವಕರ ಗುಂಪು ಹೋರಿಯ ಜನ್ಮ ದಿನ ಆಚರಿಸಿದೆ. ರಾಜಾ ಹೆಸರಿನ ಹೋರಿಯು ಇತ್ತೀಚೆಗೆ ತನ್ನ ಮಾನವ ಸ್ನೇಹಿತರೊಂದಿಗೆ 4 ನೇ ಜನ್ಮದಿನವನ್ನು ಆಚರಿಸಿಕೊಂಡಿದೆ.

ಈ ‘ರಾಜಾ’ ಹೋರಿ ಓಟಕ್ಕೆ ನಿಂತರೆ ಬಾಹುಬಲಿ. ಆ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಕಡೋಲಿ ಎನ್ನುವ ಗ್ರಾಮದ ರೈತ ಸುನೀಲ್ ದೇಸಾಯಿ ಅವರ ಹೋರಿ ಊರಿನ ಹುಡುಗರಿಗೆ ನೆಚ್ಚಿನ ಸ್ನೇಹಿತನಾಗಿದ್ದಾನೆ. ಈ ಯುವಕರು ಹೋರಿಯನ್ನು ಸ್ನೇಹಿತನಂತೆ ನೋಡಿಕೊಳ್ಳುವುದರ ಜೊತೆಗೆ ಅದರೊಂದಿಗೆ ಸಲುಗೆ ಹೊಂದಿದ್ದಾರೆ.

ಈಚೆಗೆ ಆ ಹೋರಿಯ ಜನ್ಮದಿನವನ್ನು ಆ ಯುವಕರೇ ಸೇರಿ ಆಚರಿಸಿದ್ದಾರೆ. ರಾತ್ರಿ ಕೇಕ್ ಕತ್ತರಿಸಿ, ಹುಟ್ಟು ಹಬ್ಬದ ಹಾಡುಗಳನ್ನು ಹಾಡಿ ಪಟಾಗಿ ಸಿಡಿಸಿ ಸಂಭ್ರಮಿಸಿದ್ದಾರೆ. ಹೋರಿ ಸಹ ಆ ಹುಡುಗರೊಂದಿಗೆ ಸ್ನೇಹದಿಂದಲೇ ಬೆರೆತು ಜನ್ಮದಿನದ ಆಚರಣೆಗೆ ಸಹಕರಿಸಿದೆ.

ಓಟದ ವಿನ್ನರ್ ರಾಜಾ
ಬೆಳಗಾವಿಯಿಂದ 10 ಕಿಲೋಮೀಟರ್ ದೂರದಲ್ಲಿರುವ ಕಡೋಲಿ ಗ್ರಾಮದಲ್ಲಿರುವ ಸುನಿಲ್ ದೇಸಾಯಿ (32) ಮತ್ತು ಅವರ ಕುಟುಂಬವು ತಲೆಮಾರುಗಳಿಂದ ಎತ್ತಿನ ಗಾಡಿ ಓಟಕ್ಕಾಗಿ ಗುಣಮಟ್ಟದ ಜೋಡಿ ಎತ್ತುಗಳನ್ನು ಸಾಕುತ್ತಿದೆ.

ಎತ್ತುಗಳನ್ನು ಕುಟುಂಬದ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಎತ್ತಿನ ಜೋಡಿಗಳನ್ನು ನೋಡಿಕೊಳ್ಳುವಲ್ಲಿ ಮತ್ತು ಅವುಗಳನ್ನು ಓಟಕ್ಕೆ ಸಿದ್ಧಪಡಿಸುವಲ್ಲಿ ಗ್ರಾಮದ ಕೆಲ ಯುವಕರು ಸಹ ದೇಸಾಯಿ ಕುಟುಂಬವನ್ನು ಬೆಂಬಲಿಸುತ್ತಿದ್ದಾರೆ.

ಸುನೀಲ ದೇಸಾಯಿ ಒಂದು ವರ್ಷದ ಹಿಂದೆ ಸೌದತ್ತಿ ತಾಲ್ಲೂಕಿನ ಹೂಲಿ ಗ್ರಾಮವೊಂದರಿಂದ ಕೇವಲ 2.5 ಲಕ್ಷ ರೂ. ಕೊಟ್ಟು ‘ರಾಜ’ ಎಂಬ ಹೋರಿಯನ್ನು ಖರೀದಿಸಿದ್ದರು. ಅವರು ಅದನ್ನು ಓಟ ಸ್ಪರ್ಧೆಗಾಗಿ ‘ಕ್ರಿಷ್ಣ್ಯಾ’ ಎಂಬ ಮತ್ತೊಂದು ಹೋರಿಯೊಂದಿಗೆ ಜೋಡಿಸಿದ್ದರು.

ರಾಜಾ ಹೋರಿಯು ಈವರೆಗೆ 25 ರೇಸ್ ಗಳಲ್ಲಿ ಪಾಲ್ಗೊಂಡಿದೆ. ಅದರಲ್ಲಿ ಎಂಟು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಉಳಿದ ರೇಸ್ ಗಳಲ್ಲಿ ರನ್ನರ್ ಅಪ್ ಬಹುಮಾನಗಳನ್ನು ಗೆದ್ದಿದೆ. ಹಾಗಾಗಿ ಈ ಹೋರಿಯು ದೇಸಾಯಿ ಮನೆಯವರಿಗೆ ಹಾಗೂ ಯುವಕರಿಗೆ ಅದೃಷ್ಟದ ಸ್ನೇಹಿತನಾಗಿದೆ.

‘ನಾನು ಪದವೀಧರನಾಗಿದ್ದರೂ ಉದ್ಯೋಗಕ್ಕೆ ಹೋಗಲಿಲ್ಲ. ಸ್ಪರ್ಧೆಗಳಿಗಾಗಿ ಗುಣಮಟ್ಟದ ಎತ್ತುಗಳನ್ನು ಸಾಕುವ ಕುಟುಂಬದ ಸಂಪ್ರದಾಯವನ್ನು ಮುಂದುವರಿಸಲು ನಿರ್ಧರಿಸಿದೆ. 20 ರಿಂದ 25 ಹುಡುಗರು ರೇಸ್ ಗಾಗಿ ಎತ್ತುಗಳನ್ನು ಸ್ಥಳಕ್ಕೆ ಕೊಂಡೊಯ್ಯಲು ಮತ್ತು ಅವುಗಳನ್ನು ನಿರ್ವಹಿಸಲು ನನಗೆ ನೆರವಾಗುತ್ತಾರೆ. ಅವರೇ ರಾಜಾ ಹೋರಿಯ ಜನ್ಮ ದಿನವನ್ನು ಉತ್ಸಾಹದಿಂದ ಆಚರಿಸಿದ್ದಾರೆ ಎಂದು ಹೋರಿಯ ಮಾಲೀಕ ಸುನಿಲ್ ದೇಸಾಯಿ ಸಂತಸ ಹಂಚಿಕೊಂಡರು.