ಅಂಕೋಲಾ ತಾಲೂಕಿನಲ್ಲಿ 93 ಎಕರೆ ಭೂಸ್ವಾಧೀನಕ್ಕೆ ಜಿಲ್ಲಾಧಿಕಾರಿ ಆದೇಶ: ಮೊದಲ ಹಂತದಲ್ಲಿ 7.88 ಕೋಟಿ ರೂ. ಬಿಡುಗಡೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ಈಗಾಗಲೇ ಗೊತ್ತು ಮಾಡಿರುವ ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 93 ಎಕರೆ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲು 7.88 ಕೋಟಿ ರೂ. ಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ.

ಭಾರತದ ಅತೀ ದೊಡ್ಡ ನೌಕಾನೆಲೆಯಾಗಿರುವ ಕಾರವಾರ-ಅಂಕೋಲಾ ಭಾಗದಲ್ಲಿರುವ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಈ ಮೊದಲೇ ರಕ್ಷಣಾ ಇಲಾಖೆ ಕ್ರಮ ವಹಿಸಿತ್ತು. ಈ ವಾಯುನೆಲೆಗೆ ತಕ್ಕಂತೆ ಅವಶ್ಯಕ ಜಮೀನು ಇಲಾಖೆಯ ಬಳಿ ಇತ್ತು.

ಆ ಮಧ್ಯೆ ಇದೇ ವಾಯುನೆಲೆಯನ್ನು ನಾಗರಿಕ ವಿಮಾನ ನಿಲ್ದಾಣಕ್ಕಾಗಿಯೂ ಬಳಸಲು ರಾಜ್ಯ ಸರಕಾರ ತೀರ್ಮಾನಿಸಿತ್ತು. ಹೀಗಾಗಿ ಇದಕ್ಕೆ ರಕ್ಷಣಾ ಇಲಾಖೆಯು ಒಪ್ಪಿ ಹೆಚ್ಚುವರಿ ಭೂಪ್ರದೇಶದ ಅವಶ್ಯಕತೆ ಇದ್ದು ಅದನ್ನು ನೀಡಿದರೆ ನಾಗರಿಕ ವಿಮಾನ ನಿಲ್ದಾಣ ಸಾಧ್ಯ ಎಂದು ಹೇಳಿತ್ತು.

ಅದರಂತೆ ವಾಯುನೆಲೆ ನಿರ್ಮಿಸಲು ಉದ್ದೇಶಿಸಿದ್ದ ಅಂಕೋಲಾ ತಾಲೂಕಿನ ಅಲಗೇರಿ ಬಳಿಯ ನೌಸೇನಾ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ನಿಶ್ಚಯಿಸಲಾಗಿತ್ತು. ಈ ಬಗ್ಗೆ ಅಲಗೇರಿ ಗ್ರಾಮದಲ್ಲಿ ಸರ್ವೇ ಮಾಡಿ ಬಳಿಕ ಅಧಿಕಾರಿಗಳ ತಂಡ ಹಾಗೂ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇನ್ನು ಆಗಸ್ಟ್ ನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಸಚಿವ ಸಂಪುಟದ ಒಪ್ಪಿಗೆಯೂ ದೊರೆತಿತ್ತು. ಇದೀಗ ಭೂಸ್ವಾಧೀನ ಪ್ರಕ್ರಿಯೆಯನ್ನು ಹಂತ ಹಂತವಾಗಿ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು ಈ ಕುರಿತು ಮಂಗಳವಾರ ಸುತ್ತೋಲೆ ಹೊರಡಿಸಿದೆ.

ಅದರಂತೆ ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮದ 70 ಎಕರೆ, ಬೆಲೇಕೆರಿ ಗ್ರಮದ 21 ಎಕರೆ ಹಾಗೂ ಭಾವಿಕೆರಿ ಗ್ರಾಮದ ಮೂರುವರೆ ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾದಿಕಾರಿ ಡಾ. ಹರೀಶಕುಮಾರ ಅವರು ಕುಮಟಾ ಉಪವಿಭಾಗಾಧಿಕಾರಿಗಳಿಗೆ ಆದೇಶ ಹೊರಡಿಸಿ ಸೂಚಿಸಿದ್ದಾರೆ.

ಪಾರದರ್ಶಕತೆ ಸೂಕ್ತ ಪರಿಹಾರದ ಹಕ್ಕು ಮತ್ತು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ ಅಡಿಯಲ್ಲಿ ಭೂಸ್ವಾಧೀನಕ್ಕೆ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರವನ್ನು ಚಲಾಯಿಸಲು ಕುಮಟಾ ಸಹಾಯಕರು ಹಾಗೂ ಭೂಸ್ವಾಧೀನಾಧಿಕಾರಿಗಳಿಗೆ ಅಧಿಕೃತವಾಗಿ ನಿಯೋಜಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.