ಕಾರವಾರ: ಗೋವಾದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ದಿನಕ್ಕೆ 12 ಸಾವಿರ ರೂ. ದಿಂದ 25 ಸಾವಿರ ರೂ.ವರೆಗೆ ಪಾವತಿಸಬೇಕು. ಔಷಧಗಳಿಗೆ ಪ್ರತ್ಯೇಕ ಬಿಲ್.

ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಗೋವಾ ಸರ್ಕಾರ ಮಂಗಳವಾರ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಗೆ ದರ ನಿಗದಿ ಮಾಡಿದೆ. ಅದರ ಪ್ರಕಾರ ಸಾಮಾನ್ಯ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯಬೇಕಿದ್ದರೆ ಪ್ರತಿ ದಿನಕ್ಕೆ 12 ಸಾವಿರ ರೂ., ಖಾಸಗಿ ಪ್ರತ್ಯೇಕ ಕೊಠಡಿ ಬೇಕಿದ್ದರೆ ದಿನಕ್ಕೆ 18 ಸಾವಿರ ರೂ. ಮತ್ತು ಐಸಿಯು ಹಾಗೂ ವೆಂಟಿಲೇಟರ್ ಇರುವ ಕೊಠಡಿಗೆ ದಿನಕ್ಕೆ 25 ಸಾವಿರ ರೂ. ನಿಗದಿ ಮಾಡಲಾಗಿದೆ.

ಇದೆಲ್ಲ ಕೊಠಡಿಗಳ ಬಿಲ್. ವಿಶೇಷ ವೈದ್ಯರ ಸೇವೆ ಮತ್ತು ಔಷಧ, ಕೊರೊನಾ ತಪಾಸಣೆ ಸೇರಿದಂತೆ ಉಳಿದೆಲ್ಲ ಸೇವೆಗಳಿಗೆ ಪ್ರತ್ಯೇಕ ಬಿಲ್ ಪಾವತಿಸಬೇಕಾಗುತ್ತದೆ. ಅಂದರೆ, ಒಬ್ಬ ಕೊರೊನಾ ಸೋಂಕಿತ ವ್ಯಕ್ತಿ ಚಿಕಿತ್ಸೆ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಲಕ್ಷಾಂತರ ರೂ. ಖರ್ಚು ಮಾಡಲೇ ಬೇಕು.

25 ಸಾವಿರ ಸಮೀಪಿಸಿದ ಕೇಸ್

ಗೋವಾದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ವ್ಯಾಪಕವಾಗಿದೆ. ಉತ್ತರ ಕನ್ನಡ ಜಿಲ್ಲೆಯಷ್ಟೇ ಇರುವ ಗೋವಾ ರಾಜ್ಯದಲ್ಲಿ ಸುಮಾರು 15 ಲಕ್ಷ ಜನಸಂಖ್ಯೆ ಇದೆ. ಅದರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 25 ಸಾವಿರ ಸಮೀಪಿಸಿದೆ. ಅದರಲ್ಲಿ 19,648 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಈವರೆಗೆ 304 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಸಾವಿನ ಪ್ರಕರಣ ವಿಶ್ಲೇಷಿಸಿದರೆ, ಭಾರತದ ಯಾವುದೇ ರಾಜ್ಯದಲ್ಲಿ ಕೊರೊನಾದಿಂದ ಇಷ್ಟೊಂದು ಸಾವಿನ ಪ್ರಕರಣಗಳು ದಾಖಲಾಗಿಲ್ಲ.