ಕಾರವಾರ: ಉತ್ತರ ಕನ್ನಡ ಜಿಲ್ಲೆ ಪೊಲೀಸರು ಫೇಸ್ ಬುಕ್ ಹ್ಯಾಕರ್ ಗಳ ಟಾರ್ಗೆಟ್ ಆಗುತ್ತಿರುವುದು ಪದೇ ಪದೆ ವರದಿಯಾಗುತ್ತಿದೆ.

ಒಂದೇ ವಾರದಲ್ಲಿ ನಾಲ್ಕೈದು ಪೊಲೀಸ್ ಅಧಿಕಾರಿಗಳ ಫೇಸ್ ಬುಕ್ ಖಾತೆಗಳು ಹ್ಯಾಕರ್ ಗಳ ದುರುಪಯೋಗಕ್ಕೆ ಒಳಗಾವೆ. ಕೆಲವರ ಫೇಸ್ ಬುಕ್ ಖಾತೆಗಳನ್ನು ನಕಲು ಮಾಡಿ ವಂಚಿಸುವ ಯತ್ನಗಳು ನಡೆದಿವೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಐಪಿಎಸ್ ಅಧಿಕಾರಿಯನ್ನೂ ಯಾಮಾರಿಸಲು ಯತ್ನಿಸಿದ್ದು ವಿಷಯ ಗಂಭೀರವಾಗಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ನಿಖಿಲ್ ಬುಲ್ಲಾವರ್ ಅವರ ಫೇಸ್ ಬುಕ್ ಖಾತೆಯ ಫೋಟೊ ಕದ್ದು ನಕಲಿ ಖಾತೆ ಸೃಷ್ಟಿಸಿ ಹಣ ಕೀಳುವ ಯತ್ನ ನಡೆದಿದೆ. ಅದರಿಂದ ತಕ್ಷಣ ಎಚ್ಚೆತ್ತಿರುವ ಎಎಸ್ಪಿ ನಿಖಿಲ್ ಬುಲ್ಲಾವರ್ ತಮ್ಮ ಫೇಸ್ ಬುಕ್ ಖಾತೆಯನ್ನು ಮತ್ತಷ್ಟು ಭದ್ರ ಮಾಡಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯ ಪ್ರೊಫೈಲ್ ಮಾಹಿತಿಯನ್ನು ಲಾಕ್ ಮಾಡಿಸಿದ್ದಾರೆ. ಅಂದರೆ, ಅವರ ಫೇಸ್ ಬುಕ್ ಮಾಹಿತಿಯನ್ನು ಅವರ ಫೇಸ್ ಬುಕ್ ಫ್ರೆಂಡ್ಸ್ ಮಾತ್ರ ನೋಡುವಂತೆ ವಿನ್ಯಾಸ ಮಾಡಿಕೊಂಡಿದ್ದಾರೆ. ಇದರಿಂದ ಫೇಸ್ ಬುಕ್ ಹ್ಯಾಕರ್ ಗಳಿಂದ ತಕ್ಕಮಟ್ಟಿಗೆ ಬಚಾವಾಗಬಹುದು.

ಏನಾಗಿತ್ತು?

ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯ ಪೊಲೀಸರ ಫೇಸ್ ಬುಕ್ ಖಾತೆಯನ್ನು ಹ್ಯಾಕರ್ ಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಫೇಸ್ ಬುಕ್ ಫ್ರೆಂಡ್ ಗಳಿಗೆ 10 ಸಾವಿರ ರೂ. ಹಣ ಕೊಡುವಂತೆ ಮೆಸೇಜ್ ಕಳುಹಿಸಿ ಹಣ ದೋಚುವ ಯತ್ನ ನಡೆದಿದೆ.

ಕೆಲ ದಿನಗಳ ಹಿಂದೆ ಯಲ್ಲಾಪುರ ಠಾಣೆಯ ಸಬ್ ಇನ್ ಸ್ಪೆಕ್ಟರ್, ಕಾರವಾರ ಗ್ರಾಮೀಣ ಠಾಣೆ ಸಬ್ ಇನ್ ಸ್ಪೆಕ್ಟರ್ ಈಗ ಕಾರವಾರ ಎಎಸ್ಪಿ ಫೇಸ್ ಬುಕ್ ಖಾತೆಯನ್ನು ದುರ್ಬಳಕೆ ಮಾಡುವ ಯತ್ನ ನಡೆದಿದೆ. ಆ ಹಿನ್ನೆಲೆಯಲ್ಲಿ ಎಎಸ್ಪಿ ತಮ್ಮ ಫೇಸ್ ಬುಕ್ ಖಾತೆಯ ಪ್ರೊಫೈಲ್ ಬ್ಲಾಕ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಇದೊಂದು ಸುರಕ್ಷಿತ ಕ್ರಮವಾಗಿದೆ.