ಉತ್ತರ ಕನ್ನಡ: ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನೌಕಾಪಡೆಯನ್ನು ರಕ್ಷಿಸಲು ಸತ್ಯಾಂಶ ಮರೆಮಾಚಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್‍ನ ಅಧ್ಯಕ್ಷ ಗಣಪತಿ ಮಾಂಗ್ರೆ ಆರೋಪಿಸಿದ್ದಾರೆ.

ಬುಧವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿ ಏಳು ಮೀನುಗಾರರ ಸಹಿತ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಘಡದ ಬಗ್ಗೆ ನಿಜ ಹೇಳಲು ಮುಂದೆ ಬಂದ ಅಧಿಕಾರಿಗಳು ಕೊನೆ ಕ್ಷಣದಲ್ಲಿ ಒಪ್ಪಿಕೊಂಡಿಲ್ಲ. ಬೋಟ್ ಅವಘಡದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.

ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ಯಾರು ಕಾರಣ ಎನ್ನುವುದು ಗೊತ್ತಿದೆ. ನೌಕಾಪಡೆಯ ಬೋಟ್‍ನ್ನು ರಿಪೇರಿ ಮಾಡಿರುವ ಎಲ್ಲಾ ವಿಚಾರವೂ ತಿಳಿದಿದೆ. ಅವಘಡ ಮಾಡಿರುವ ತಪ್ಪನ್ನು ಒಪ್ಪಿಕೊಂಡರೆ, ಏಳು ಮಂದಿ ಮೀನುಗಾರರ ರಕ್ಷಣೆ ಮಾಡಲಾಗದವರು ದೇಶದ ರಕ್ಷಣೆ ಹೇಗೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಹೆದರಿ ಹಿಂದೇಟು ಹಾಕುತ್ತಿದ್ದಾರೆ ಎಂದರು.

ಮೃತ ಮೀನುಗಾರರ ಕುಟುಂಬಕ್ಕೆ ರಾಜ್ಯದಿಂದ ಪರಿಹಾರ ಸಿಕ್ಕಿದೆ. ಕೇಂದ್ರದ ಹಣ ಬಂದಿಲ್ಲ. ಬೋಟ್ ಅವಘಡವಾಗಿರುವ ಸ್ಥಳ ಗುರುತಿಸಿದ್ದಾರೆ. ಆದರೆ, ಬೋಟ್ ಮೇಲೆತ್ತುವ ಕೆಲಸ ಮಾಡಿಲ್ಲ. ಬೋಟ್‍ನಲ್ಲಿದ್ದ ಮೀನುಗಾರರ ಮೃತದೇಹವನ್ನು ತೆಗೆದು ಮೋಕ್ಷ ನೀಡಲು ಮೀನುಗಾರರಿಗೆ ಅವಕಾಶ ಕೊಡಿ ಎಂದು ಪರಿ ಪರಿಯಾಗಿ ಕೇಳಿಕೊಂಡರೂ ಬಿಟ್ಟಿಲ್ಲ. ಕಡಲ ಕಿನಾರೆಯಲ್ಲಿ ನಮಗೆ ಆ ದೇಹದ ಆಕ್ರಂದನ ಕೇಳುತ್ತಿದೆ ಎಂದರು.

ಮೀನುಗಾರಿಕೆ ವೇಳೆ ಮೃತರಾದ ಮೀನುಗಾರರಿಗೆ ಸಂಕಷ್ಟ ಪರಿಹಾರ ಸರ್ಕಾರದ ಕೈಯಿಂದ ಕೊಡುತ್ತಿಲ್ಲ. ಅದು ಮೀನುಗಾರರ ಹಣ. ನಮ್ಮಿಂದ ತೆರಿಗೆ ಸೇರಿ ನಾನಾ ರೂಪದಲ್ಲಿ ಸಂಗ್ರಹಿಸಿದ ಹಣದಿಂದ ನೀಡಲಾಗುತ್ತಿದೆ. ಮೀನುಗಾರರ ವಿಚಾರದಲ್ಲಿ ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್ ನಿರ್ಜೀವವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಕಾರವಾರ ಪರ್ಸಿನ್ ಬೋಟ್ ಮೀನುಗಾರರ ಸಂಘದ ಮುಖಂಡ ನಿತಿನ್ ರಮಾಕಾಂತ್ ಗಾಂವ್ಕರ್, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಹಾಜರಿದ್ದರು.