ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ
ಧಾರವಾಡ: ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ವಜೀದಾ ಬಾನು ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಶ್ವವಿದ್ಯಾಲಯ ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ಆಯೋಜಿಸಿದ ಹತ್ತು ದಿನಗಳ ಆನ್ ಲೈನ್ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನ ಮತ್ತು ಸಂವೇದನಾ ತರಬೇತಿ ಕಾರ್ಯಕ್ರಮದಲ್ಲಿ ‘ ಎನ್.ಇ.ಪಿ ಹಾಗೂ ಉನ್ನತ ಶಿಕ್ಷಣದಲ್ಲಿ ಬಹು ಅಂತರ ಶಿಸ್ತಿನ ಪರಿವರ್ತನೆ’, ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಕೇವಲ ಕ್ಲಾಸ್ ರೂಮ್ ಬೋಧನೆಗೆ ಸೀಮಿತವಾಗಿದೆ, ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಕಲಿಕೆಗೆ ಹೆಚ್ಚು ಮಹತ್ವವನ್ನು ನೀಡಬೇಕಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಸೃಜನಶೀಲತೆ, ಅನ್ವೇಷಣೆ, ನಾಯಕತ್ವದ ಗುಣಗಳನ್ನು ಬೆಳಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಾಂಪ್ರದಾಯಿಕವಾಗಿ ಶಿಕ್ಷಕರು ಕೇವಲ ಮಾಹಿತಿಯನ್ನು ಒದಗಿಸುವ ರಾಯಭಾರಿಗಳಾಗಬಾರದು ಅವರು ಸಮಗ್ರವಾದ
ಜ್ಞಾನ, ಪರಂಪರೆ, ಮೌಲ್ಯಗಳನ್ನು ಹೊಂದಿರುವ ಶಿಕ್ಷಣವನ್ನು ನೀಡಬೇಕಾದ ಅಗತ್ಯವಿದೆ.
ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೋತ್ಸಾಹಿಸುವದರ ಜೊತೆಗೆ ಕೌಶಲ್ಯ ಯುಕ್ತ ತರಬೇತಿ ನೀಡವ ಅವಶ್ಯಕತೆ ಇದೆ ಎಂದ ಅವರು ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಐದು ವರ್ಷಗಳಲ್ಲಿ ಯುಜಿಸಿ ಎಮ್.ಎಮ್.ಟಿ.ಸಿ.ಕೇಂದ್ರಗಳ ಮೂಲಕ 1.5 ಮಿಲಿಯನ್ ಶಿಕ್ಷಕರಿಗೆ ಹೊಸ ಶಿಕ್ಷಣ ನೀತಿಯ ಕುರಿತು ತರಬೇತಿ ನೀಡಲು ಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ಮಾನವೀಯ ವಿಷಯಗಳ ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತದ ಪರಿಕಲ್ಪನೆಯನ್ನು ನೀಡುವುದು ಪ್ರಮುಖವಾದ ಉದ್ದೇಶವಾಗಿದ್ದು, ಮುಂಬರುವ ದಿನಗಳಲ್ಲಿ ‘ಸ್ಕಿಲ್ ಹಬ್’ ಗಳನ್ನು ಸ್ಥಾಪಿಸುವುದು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಹೆಚ್ಚಿಸಲು ಸಂಶೋಧನೆ ಸೇರಿದಂತೆ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಆಧುನಿಕತೆ ಪಠ್ಯಕ್ರಮವನ್ನು ಅಳವಡಿಸುವುದು ಎನ್.ಇ.ಪಿ ಯ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿಗಳು
ಜಾಗತಿಕ ಮಟ್ಟದ ಸ್ಪರ್ಧೆಯನ್ನು ಎದುರಿಸಲು ಎಐ, ವರ್ಚುವಲ್ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದ ವಿಶೇಷ ಜ್ಞಾನವನ್ನು ನೀಡುವುದರ ಜೊತೆಗೆ ಸರ್ವತೋಮುಖ ಬೆಳವಣಿಗೆಗೆ ಹೊಸ ಕೋರ್ಸ್ಗಳ ಅಳವಡಿಕೆ, ವಿದ್ಯಾರ್ಥಿಗಳಿಗೆ ಭಾರತೀಯ ಜ್ಞಾನ ಪರಂಪರೆಯ ಕುರಿತು ಎನ್.ಇ.ಪಿ ಅಡಿಯಲ್ಲಿ ಸರ್ಕಾರವು ಅನುದಾನವನ್ನು ಒದಗಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯ, ಕಾಲೇಜುಗಳ 95 ಶಿಕ್ಷಕರು, ಸಂಶೋಧಕರು, ಉದ್ಯಮ ಪರಿಣಿತರು ಸಂಪನ್ಮೂಲ ವ್ಯಕ್ತಿಯೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವವಿದ್ಯಾಲಯ ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ನಿರ್ದೇಶಕ ಡಾ.ಬಿ.ಎಚ್.ನಾಗೂರ ವಹಿಸಿದ್ದರು ಕಾರ್ಯಕ್ರಮದಲ್ಲಿ ಪ್ರೊ.ನವ್ಯಶ್ರೀ, ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ಸಿಬ್ಬಂದಿಗಳಾದ ದೀಪಾ ಮಟ್ಟಿ, ಶಕೀಲಾ, ಶಹಜಾನ್ ಸೇರಿದಂತೆ ಇತರರು ಇದ್ದರು.