ಉತ್ತರ ಕನ್ನಡ: ಕರಾವಳಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಪ್ರವಾಹ ಬಂದಿದೆ. ಎಲ್ಲೆಂದೆರಲ್ಲಿ ನೀರು ನುಗ್ಗಿ ಜನರ ಕಂಗಾಲಾಗಿದ್ದಾರೆ.

ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೆ.20 ರಿಂದ ಸೆ. 22 ರ ವರೆಗೆ ಗುಡುಗು ಸಹಿತ ಭಾರೀ ಮಳೆ ನಿರೀಕ್ಷೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ನಡುವೆಯೇ ಉಡುಪಿ ಅಕ್ಷರಶಃ ಜಲಾವೃತವಾಗುತ್ತಿದ್ದು, ಕರಾವಳಿ ತೀರದುದ್ದಕ್ಕೂ ಆತಂಕ ಆವರಿಸಿದೆ.

ಉಡುಪಿಯಲ್ಲಿ ಶನಿವಾರ ಮಧ್ಯಾಹ್ನದಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಕೆರೆ, ಕಾಲುವೆಗಳೆಲ್ಲ ತುಂಬಿ ಹರಿಯುತ್ತಿವೆ. ಅರಬ್ಬಿ ಸಮುದ್ರದಲ್ಲಿಯೂ ಅಲೆಗಳ ಅಬ್ಬರ ಜೋರಾಗಿದೆ. ಶ್ರೀಕೃಷ್ಣ ಮಠದ ರಾಜಾಂಗಣ, ಪಾರ್ಕಿಂಗ್ ಏರಿಯಾ, ನಿಟ್ಟೂರು ಕೊಡಂಕೂರು ಚಿಟ್ಪಾಡಿ, ಮಠದ ಬೆಟ್ಟು ಸೇರಿದಂತೆ ನಾನಾ ಪ್ರದೇಶಗಳಿಗೆ ನೆರೆ ನುಗ್ಗಿದೆ.

ನೆರೆಯಲ್ಲಿ ಸಿಲುಕಿರುವ ಅನೇಕರನ್ನು ಅಗ್ನಿಶಾಮಕದಳ, ಪೊಲೀಸರು ರಕ್ಷಿಸುತ್ತಿದ್ದಾರೆ. ಮಳೆ ಜೋರಾಗುತ್ತಲೇ ಇದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ನೆರೆಯಲ್ಲಿ ಸಿಲುಕಿದ 50 ಕುಟುಂಬಗಳನ್ನು ಈಗಾಗಲೇ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

ರಕ್ಷಣೆಗಾಗಿ ಎನ್‌ಡಿಆರ್‌ಎಫ್ ಪಡೆಯನ್ನು ಕೂಡ ಕರೆಸಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ನಗರದ  ಅಂಗಡಿ, ಮುಂಗಟ್ಟು ಸೇರಿದಂತೆ ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಮನೆಯೊಳಗೆ ನೀರು ನುಗ್ಗಿ ಗೋಡೆ ಕುಸಿದು ಬಿದ್ದಿದೆ‌. ಮಳೆ ಜೋರಾಗುತ್ತಲೇ ಇದ್ದು, ಹಾನಿ ಪ್ರಮಾಣವೂ ಹೆಚ್ಚುತ್ತಲೇ ಇದೆ.