ರೈತ ಬಂಧುವಾಗಿರುವ ಗೋವುಗಳು ಇತ್ತೀಚೆಗೆ ದೇಶದ ಪ್ರಮುಖ ಚರ್ಚಾ ವಿಷಯಗಳಲ್ಲಿ ಒಂದಾಗಿವೆ. ಗೋ ರಕ್ಷಣೆ, ಕಳ್ಳ ಸಾಗಣೆ ಹೀಗೆ ವಿವಿಧ ರೀತಿಯಲ್ಲಿ ಗೋವುಗಳು ಸುದ್ದಿಯಾಗುತ್ತಲೇ ಇರುತ್ತವೆ.
ಮಾಂಸಕ್ಕಾಗಿ ಪ್ರತಿ ದಿನ ಸಾವಿರಾರು ಮೇಕೆ, ಹಸುಗಳನ್ನು ಕಳ್ಳ ಸಾಗಣೆ ಮಾಡಲಾಗುತ್ತದೆ. ಜಾನುವಾರುಗಳನ್ನು ಕದ್ದು ಕಾರುಗಳಲ್ಲಿ ಕ್ರೂರವಾಗಿ ಸಾಗಿಸುವ ಪ್ರಕರಣಗಳೂ ಅನೇಕ ಕಡೆ ಪತ್ತೆಯಾಗಿವೆ.
ರೈತರ ಬದುಕಿಗೆ ಆಸರೆಯಾಗುವ ಗೋವುಗಳನ್ನು ರಕ್ಷಣೆ ಮಾಡಲು ತಮಿಳುನಾಡಿನ ರೈತನೊಬ್ಬ ಮಾಡಿದ ಉಪಾಯ ವೈರಲ್ ಆಗುತ್ತಿದೆ. ಜತೆಗೆ ಆ ಗೋವಿನ ಫೋಟೊ ಸಹ ವೈರಲ್ ಆಗುತ್ತಿದೆ.
ನಮ್ಮಲ್ಲಿಯೂ ಅನೇಕ ರೈತರು ಮೇಕೆ, ಎಮ್ಮೆ, ಹಸುಗಳನ್ನು ಗುರುತಿಸಲು ಅನೇಕ ಉಪಾಯಗಳನ್ನು ಮಾಡುತ್ತಾರೆ. ಬಹುತೇಕರು ಜಾನುವಾರುಗಳ ಕಿವಿಯನ್ನು ಭಿನ್ನಾಕೃತಿಯಲ್ಲಿ ಕತ್ತರಿಸಿ ಅದನ್ನು ಗುರುತು ಹಿಡಿಯುತ್ತಾರೆ. ಹಂದಿ ಸಾಕಣೆ ಮಾಡುವವರು ಕೂಡ ಹೀಗೆಯೇ.

ತಮಿಳು ನಾಡಿನ ತಿರುಕ್ಕೊಟ್ಟೂರಿನ ಶಿವಗಂಗೈ ಜಿಲ್ಲೆಯ ಜಾನುವಾರು ಕೃಷಿಕ ಜಯರಾಮ ಪೆರೆ ಎನ್ನುವವರು ತಮ್ಮ ಬುಲ್ ಹಸುವಿನ ಹೊಟ್ಟೆಯಲ್ಲಿ ತಮ್ಮ ಮೊಬೈಲ್ ಫೋನ್ ಸಂಖ್ಯೆಅನ್ನು ಹಚ್ಚೆ ಹಾಕಿಸಿದ್ದಾರೆ. ಆ ಹಸು ದಾರಿ ತಪ್ಪಿತಪ್ಪಿ ಎಲ್ಲಿಯೇ ಹೋದರು ಅದನ್ನು ಪತ್ತೆ ಮಾಡಬಹುದು. ಅದನ್ನು ಕಳ್ಳತನ ಮಾಡಿದರೂ ಪತ್ತೆ ಮಾಡಲು ಒಂದು ಕುರುಹು ಇರಲಿ ಎನ್ನುವ ಕಾರಣಕ್ಕೆ ದೊಡ್ಡದಾಗಿ ಮೊಬೈಲ್ ಸಂಖ್ಯೆ ಬರೆದಿದ್ದಾರೆ.
ಕೃಷಿಕ ಜಯರಾಮ ಪೆರೆ ಅವರ ಯೋಚನೆ ಆ ಭಾಗದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದು ಜಾನುವಾರುವಿಗೆ ಆರಂಭದಲ್ಲಿ ತುಸು ನೋವು ಅನಿಸಿದರೂ ಅದರ ಪ್ರಾಣ ರಕ್ಷಣೆಗೆ ಉತ್ತಮ ಉಪಾಯ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.