ಭಾರತದ ನೆಲವೇ ಅಂತದ್ದು. ಎಲ್ಲಿಯೇ ಹೋದರೂ ಇಲ್ಲಿನ ಮಣ್ಣಿನ ಸೆಳೆತ ಎಂಥವರನ್ನೂ ಆಕರ್ಷಿಸಿ ಮಡಿಲಲ್ಲಿಟ್ಟು ಸಲಹುತ್ತದೆ. ಇಲ್ಲಿರುವ ಕೃಷಿ ಕತೆಯೂ ಅಂಥದ್ದೇ.  ಭಾರತಾಂಬೆಯ ನೆಲದಲ್ಲಿ ಕೃಷಿ ಮಾಡಬೇಕು ಎಂದು ಆ ದಂಪತಿ ಮಲೇಶಿಯಾದಿಂದ ಸ್ವದೇಶಕ್ಕೆ ಬಂದು ಇಂದು ಯಶಸ್ವಿ ಕೃಷಿಕರಾಗಿದ್ದಾರೆ. ಈ ಅಪರೂಪದ ಕೃಷಿಕ ದಂಪತಿಯ ಕತೆ ಇಲ್ಲಿದೆ.

ಮಲೇಶಿಯಾದಲ್ಲಿ ಕೈತುಂಬಾ ಸಂಬಳ,  ಸ್ವಂತ ಮನೆಯಿತ್ತು.  ಸತಿಪತಿಗಳಿಬ್ಬರು 20 ವರ್ಷ ಪ್ರೊಪೆಸರ್ ಆಗಿ ಕೆಲಸ ಮಾಡುತ್ತಿದ್ದರೂ ಮಣ್ಣಿನ ಸೆಳೆತ ಅವರನ್ನು ಭಾರತದತ್ತ ಕರೆ ತಂದಿದೆ. ಅವರೇ ಬೆಳಗಾವಿಯ ನಿವಾಸಿ ಜ್ಯೋತಿ ಮತ್ತು ವಿಶ್ವನಾಥ ಕಳ್ಳಿಮನಿ ದಂಪತಿ.
ಮಲೇಶಿಯಾದಲ್ಲಿದ್ದಾಗಲೇ ಕೃಷಿ ಯೋಜನೆ ರೂಪಿಸಿದ ದಂಪತಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪಕ್ಕ ಸಂತಿಬಸ್ತವಾಡ ಎನ್ನುವ ಗ್ರಾಮದಲ್ಲಿ ಮೂರು ವರ್ಷದ ಹಿಂದೆ ಐದು ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ಸಮಗ್ರ ಕೃಷಿ ಮಾಡುತ್ತಿದ್ದಾರೆ.
ಇವರಿಗೆ ಖಾನಾಪುರದ ನಂದಹಳ್ಳಿಯಲ್ಲಿ 12 ಎಕರೆ ಜಮೀನು ಇದೆ. ಅಲ್ಲಿ ಕಬ್ಬು ಮತ್ತು ಮರ ಆಧಾರಿತ ಕೃಷಿ ಮಾಡುತ್ತಿದ್ದಾರೆ. ಇವರ ಪತಿ ವಿಶ್ವನಾಥ ಅವರು ಕೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿದ್ದಾರೆ. ಜ್ಯೋತಿ ಅವರು ಕೃಷಿ ನೋಡಿಕೊಳ್ಳುತ್ತಾರೆ. ಇವರಿಬ್ಬರು ಎಂಜಿನಿಯರ್ ಪದವೀಧರರು.

ಆಡುಗಳೊಂದಿಗೆ ಜ್ಯೋತಿ ಕಳ್ಳಿಮನಿ ಅವರು.

ಸಮಗ್ರ ಕೃಷಿಯೇ ಆಧಾರ
ಬಹುಬೆಳೆ,  ಉಪಕಸಬುಗಳು, ನಾವಿನ್ಯತೆಯ ಪ್ರಯೋಗ , ವನಾಧಾರಿತ ಬೇಸಾಯ ಇವೆಲ್ಲವೂ ಇವರ ಜಮೀನಿನಲ್ಲಿ ಕಾಣಬಹುದು. ಬಹಳ ಆಸಕ್ತಿಯಿಂದ ದಂಪತಿ ಕೃಷಿಯಲ್ಲಿನ ಸುತ್ತಮುತ್ತಲಿನ ಸಾಧಕರನ್ನು ಹಾಗೂ ಅಧ್ಯಯನ ಪ್ರವಾಸಗಳನ್ನು ನೋಡಿಕೊಂಡು ಸೂಕ್ತವಾದವುಗಳನ್ನು ಅಳವಡಿಸಿಕೊಂಡಿದ್ದಾರೆ. ಇವರ ತೋಟದಲ್ಲಿ 100 ಮಾವು, 60 ತೆಂಗು, ಬಾಳೆ, ನೇರಳೆ, ನೆಲ್ಲೆ, ಪೇರಲ, ಹುಣಸೆ, ಬಿದಿರು ಹೀಗೆ ವೈವಿಧ್ಯಮಯ ಮರಗಳನ್ನು ಕಾಣಬಹುದಾಗಿದೆ. ಬೆಳೆಗಳಿಗೆ ಜೀವಾಮೃತವನ್ನು ಹಾಗೂ ಔಷಧಿಯಾಗಿ ಬೇವಿನ ಲೇಪವನ್ನು ನೀಡುತ್ತಾರೆ. ಹನಿ ನೀರಾವರಿ ಮೂಲಕ ನೀರೂಣಿಸುತ್ತಾರೆ.

ಹೈನುಗಾರಿಕೆ ಉಪಕಸಬು
ಇವರು ಉಪಕಸಬುಗಳಾಗಿ ಆಡು  ಮತ್ತು ಕೋಳಿ ಸಾಕಾಣಿಕೆಯನ್ನು ಮಾಡಿಕೊಂಡಿದ್ದಾರೆ. 16 ಆಡುಗಳನ್ನು 50 ಸಾವಿರಕ್ಕೆ ಕೊಂಡುತಂದಿದ್ದಾರೆ. ಆಡಿನಿಂದ ಪಡೆದ ಗೊಬ್ಬರವನ್ನು ಸಹ ಇವರು ಆದಾಯವಾಗಿ ಮಾರ್ಪಡಿಸಿಕೊಂಡಿದ್ದಾರೆ. 50 ಕೆ.ಜಿಗೆ 300 ರೂಪಾಯಿಯಂತೆ ಆಡಿನ ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ಒಟ್ಟಾರೆ ಆಡಿನಿಂದ ವರ್ಷಕ್ಕೆ 40 ಸಾವಿರ ರೂ. ಆದಾಯ ಬರುತ್ತಿದೆ.
ಕಡಕನಾಥ ಕೋಳಿ ಸಾಕಿದ್ದು ಒಂದು ಮೊಟ್ಟೆಗೆ 10 ರೂ. ಒಂದಕ್ಕೆ 100 ರೂಪಾಯಿಯಂತೆ ತಂದ ಕೋಳಿಯನ್ನು ಐದು ತಿಂಗಳ ನಂತರ 300 ರೂಪಾಯಿಗೆ ಒಂದರಂತೆ ಆದಾಯದ ನೀರಿಕ್ಷೆಯಲ್ಲಿದ್ದಾರೆ.

ಎರೆ ಹುಳು ತೊಟ್ಟಿ
ಫಾರ್ಮ ಹೌಸ ಪಕ್ಕದಲ್ಲಿ ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಸಾವಯವ ಗೊಬ್ಬರ ತಯಾರಿಸುತ್ತಿದ್ದಾರೆ. ಅದನ್ನು ತಮ್ಮ ಜಮೀನುಗಳಿಗೆ ಬಳಸಿಕೊಳ್ಳುತ್ತಿದ್ದಾರೆ.  ಮಲೇಶಿಯಾದಲ್ಲಿ ಪ್ರೊಪೆಸರ್ ಆಗಿದ್ದರೂ ಈ ಯಾವ ಕೆಲಸದಲ್ಲಿಯೂ ಅವರಿಗೆ ಹಿಂಜರಿಕೆ ಇಲ್ಲ.

ಇವರು ಒಂದು ಕುಟುಂಬ ಬದುಕಲು ಬೇಕಾದ ಜೀವನೋಪಯೋಗಿ ಕೃಷಿ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ . ಇವರ ಉತ್ಸಾಹ ಕೃಷಿ ಯಾವ ಉನ್ನತ ಹುದ್ದೆಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸುತ್ತದೆ.
ಒಟ್ಟಾರೆ ಅವರು ಜಮೀನು ಸಮತಟ್ಟು, ಸಸಿ ನಾಟಿ ಎಲ್ಲ ಸೇರಿ ಕೃಷಿಗೆ 25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಅದರಿಂದ ಅವರಿಗೆ ವಾರ್ಷಿಕ ಎಂಟು ಲಕ್ಷ ರೂ. ಆದಾಯ ಬರುತ್ತಿದೆ. ಇನ್ನೂ ಹಲವು ಯೋಜನೆಗಳನ್ನು ಅವರು ಕೃಷಿಯಲ್ಲಿ ಅಳವಡಿಸುತ್ತಿದ್ದಾರೆ.

ನಾವು ಆರೋಗ್ಯವಂತರಾಗಿರಲು ಈ ಕೃಷಿಯೇ ನಮಗೆ ಬೆನ್ನೆಲಬು.ಇದರಮೂಲವೇ ನಾವು ಜೀವನ ಕಂಡುಕೊಳ್ಳಬೇಕು ಎನ್ನುವ ಹಠ ನಮ್ಮನ್ನು ಇಂದು ಈ ಕೃಷಿ ಮಾಡಿಸಿದೆ. ಇನ್ನೂ ಅನೇಕ ಯೋಜನೆಗಳು ಹಂತಹಂತವಾಗಿ ಮಾಡಬೇಕಿದೆ.

ಜ್ಯೋತಿ ಕಳ್ಳಿಮನಿ, ಮಲೇಶಿಯಾದಿಂದ ಬಂದು ಕೃಷಿ ಮಾಡುತ್ತಿರುವ ಪ್ರೊ.

ಚಿತ್ರ ಲೇಖನ:  ರುದ್ರ ವಿ.ಪಿ.