ಆಡು ಸಾಕಾಣಿಕೆ ಮಾಡುವ ಯೋಜನೆ ಇದ್ದರೆ ಈ ಮಾಹಿತಿ ತಿಳಿಯವುದು ಅಗತ್ಯ. ಆಡು ಸಾಕಾಣಿಕೆ ಕೇವಲ ಹೈನುಗಾರಿಕೆಯ ಭಾಗವಾಗಿ ಉಳಿದಿಲ್ಲ. ಅಡು ಸಾಕಾಣಿಕೆಯೂ ಉದ್ಯಮವಾಗಿ ಬದಲಾಗುತ್ತಿದೆ. ಅದರಲ್ಲಿ ಲಕ್ಷಾಂತರ ಆದಾಯ ಗಳಿಕೆ ಇರುವ ಕಾರಣಕ್ಕೆ ಹೆಚ್ಚಿನ ಜನರು ಕೃಷಿ ಜತೆಗೆ ಆಡು ಸಾಕಾಣಿಕೆ ಮಾಡುತ್ತಿದ್ದಾರೆ. ಕೆಲವರು ಆಡಿನ ಹಾಲಿಗಾಗಿ ಸಾಕಿದರೆ, ಇನ್ನು ಕೆಲವರು ಮಾಂಸಕ್ಕಾಗಿ ಸಾಕುತ್ತಾರೆ.

ಅದೇನೆ ಇರಲಿ ಉದ್ಯಮ ಆರಂಭಿಸುವ ಮೊದಲು ಆಡಿನ ಹಾಲಿಗಾಗಿ ಹೈನುಗಾರಿಕೆ ಮಾಡುತ್ತಿದ್ದರೆ ಯಾವ ಆಡಿನ ತಳಿ ಉತ್ತಮ. ಮಾಂಸಕ್ಕಾಗಿ ಆಡು ಸಾಕುತ್ತಿದ್ದರೆ ಅದಕ್ಕೆ ಯಾವ ತಳಿ ಬೇಕು ಎನ್ನುವ ಬಗ್ಗೆ ಪೂರ್ಣ ವಿವರ ಇಲ್ಲಿದೆ. ಆಡಿನ ಸಾಮರ್ಥ್ಯ ಆಧರಿಸಿ ಆಡು ಸಾಕಾಣಿಕೆಗೆ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಆಡಿನ ಮುಖ್ಯ ತಳಿಗಳು

ಜಮುನಾಪಾರಿ
ಈ ಜಾತಿಯ ಆಡುಗಳನ್ನು ಉತ್ತಮ ಜಾತಿಯ ಹಾಲಿನ ಆಡುಗಳೆಂದು ಪರಿಗಣಿಸುತ್ತಾರೆ. ಕೆಚ್ಚಲು ಹಾಲಿನಿಂದ ತುಂಬಿಕೊಂಡು, ಎರಡು ಉದ್ದವಾದ ಮತ್ತು ದಪ್ಪನಾದ ಮೊಲೆಗಳಿಂದ ಕೂಡಿದೆ. ದಿನ ಒಂದಕ್ಕೆ ಸುಮಾರು 2 ರಿಂದ 2.5 ಲೀಟರ್ ಹಾಲು ಕೊಡುತ್ತವೆ.
ಸಾಮಾನ್ಯ ಆಡುಗಳು 40ರಿಂದ 50 ಕೆ.ಜಿ. ತೂಗುತ್ತವೆ. ಜಮುನಾಪಾರಿ ತಳಿ ಆಡುಗಳು ಐದು ಅಡಿಗೂ ಹೆಚ್ಚು ಬೆಳೆಯುವುದಲ್ಲದೆ 80 ಕೆ.ಜಿ. ವರೆಗೂ ತೂಗುತ್ತವೆ.

ಇವುಗಳ ಕಿವಿಗಳು ಉದ್ದವಾಗಿ ಕೆಳಗೆ ಜೋಲು ಬಿದ್ದು ನೇತಾಡುತ್ತಿರುತ್ತವೆ. ಮುಖವು ಬಿಲ್ಲಿನಾಕಾರವಿರುತ್ತದೆ. ನಿಲುವಿನಲ್ಲಿ ಎತ್ತರವಾದ ದೊಡ್ಡ ಆಕಾರದ ಆಡುಗಳು. ಕಾಲುಗಳು ಉದ್ದವಾಗಿರುತ್ತವೆ. ಕೋಡುಗಳು ಸಾಧಾರಣವಾಗಿ ಮೇಲಕ್ಕೆ ಎದ್ದು ನೆಟ್ಟಗಿರುತ್ತವೆ ಮತ್ತು ಮುರಿಗೆ ಮುರಿಗೆಯಾಗಿ ತಿರುವಿಕೊಂಡಿರುತ್ತವೆ. ಮೈಮೇಲೆ ನುಣಪಾದ, ಮೃದುವಾದ ಮತ್ತು ಹೊಳಪಾದ ಕೂದಲು ತುಂಬಿಕೊಂಡಿರುತ್ತದೆ. ಮೈಬಣ್ಣ ಶುದ್ಧ ಕಪ್ಪು ಅಥವಾ ಕೆಂಪು ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತದೆ.

ಓದಿ: ಟಗರು ಸಾಕಿ ತಿಂಗಳಿಗೆ ಲಕ್ಷ ರೂ. ಆದಾಯ ಗಳಿಸುವ ರೈತ

ಬಾರ್ ಬಾರಿ:
ಈ ಆಡುಗಳಲ್ಲಿ ಕಂಡುಬರುವ ವಿಶೇಷ ಗುಣವೆಂದರೆ, ಇವುಗಳನ್ನು ಹೊರಗೆ ಮೇಯಲು ಬಿಡದೆ ಮನೆಯಲ್ಲಿಯೇ ತಿಂಡಿ, ಮೇವು, ಸೊಪ್ಪು ಕೊಟ್ಟು ಸಾಕಬಹುದು. ಮೇಯಲು ಜಾಗವಿಲ್ಲದ ಪಟ್ಟಣಗಳಲ್ಲೂ ಸಾಕಬಹುದು.

ಇವುಗಳ ಕಾಲುಗಳು ಸಣ್ಣವಿದ್ದು ಮೇಲಕ್ಕೆ ನೆಟ್ಟಗೆ ಎದ್ದು ನಿಂತಿರುತ್ತವೆ. ಗಡುತರವಾಗಿ ಬಲವಾದ ಎಲುಬುಗಳಿಂದ ಕೂಡಿದ್ದು ಗಿಡ್ಡವಾಗಿರುತ್ತದೆ. 12 ರಿಂದ 15 ತಿಂಗಳಲ್ಲಿ ಎರಡು ಬಾರಿ ಮರಿ ಹಾಕುತ್ತವೆ. ಆಡು 20 ರಿಂದ 30 ಕಿ.ಗ್ರಾಂ ತೂಕವಿರುತ್ತವೆ. 210 ರಿಂದ 282 ಹಾಲು ಹಿಂಡುವ ದಿವಸಗಳಲ್ಲಿ 101 ರಿಂದ 228 ಕಿ.ಗ್ರಾಂ ಹಾಲು ಕೊಡುತ್ತವೆ.

ಬೀಟಲ್:
ಹೆಣ್ಣು ಆಡು 45 ರಿಂದ 50 ಕಿ.ಗ್ರಾಂ. ಮತ್ತು ಗಂಡು ಆಡು (ಹೋತ) 50 ರಿಂದ 80 ಕಿ. ಗ್ರಾಂ. ತೂಕವಿರುತ್ತವೆ. ಈ ಆಡುಗಳು ದಿನಕ್ಕೆ 1 ಕಿ.ಗ್ರಾಂ ಹಾಲು ಕೊಡುತ್ತವೆ. 160 ರಿಂದ 244 ದಿವಸಗಳಲ್ಲಿ 207 ರಿಂದ 286 ಕಿ.ಗ್ರಾಂ ಹಾಲು ಕರೆಯಬಹುದು. ಕಣ್ಣುಗುಡ್ಡೆಯ ಸುತ್ತಲೂ ಬಿಳಿಯ ಅಥವಾ ಕಂದು ಬಣ್ಣದ ರೇಖೆಗಳಿರುತ್ತವೆ. ಕಿವಿ ಉದ್ದವಿದ್ದು ಕೆಳಗೆ ಜೋತು ಬಿದ್ದಿರುತ್ತವೆ. ಮುಖವು ಉಬ್ಬಿಕೊಂಡು ಬಾಗಿರುತ್ತದೆ. ಗುಂಡು ಆಡುಗಳಿಗೆ (ಹೋತಕ್ಕೆ) ಗದ್ದದ ಕೆಳಗೆ ಗೊಂಚಲ ಗಡ್ಡ ಬೆಳೆದಿರುತ್ತದೆ.

ಮಲಬಾರಿ
ದಾಡಿ ಇರುವುದು ಇವುಗಳಲ್ಲಿ ವಿಶೇಷ. ಸುರುಳಿಯಂತಿರುವ ಚಿಕ್ಕ ಕೋಡುಗಳು, ದುಂಡಾದ ಚಿಕ್ಕ ಕೆಚ್ಚಲು ಮತ್ತು ಸಣ್ಣ ಮೊಲೆಗಳನ್ನು ಹೊಂದಿರುತ್ತವೆ. ಭಾರತಕ್ಕೆ ಬಂದ ಅರಬರು ಹಡಗಿನಲ್ಲಿ ಹಾಲಿಗಾಗಿ ಈ ಆಡುಗಳನ್ನು ತಂದರೆಂದು ತಿಳಿದು ಬಂದಿದೆ. ದಿನಕ್ಕೆ ಸರಾಸರಿ 3 ಲೀ. ಹಾಲನ್ನು ಉತ್ಪಾದಿಸಬಲ್ಲವು. ಇವು ಹಾಲು ಮತ್ತು ಮಾಂಸೋತ್ಪಾದನೆಯ ಉಭಯ ಯದ್ದೇಶಗಳಿಗೆ ಸೂಕ್ತವಾದ ತಳಿಗಳು.

ಓದಿ: ಟಗರು ಸಾಕಿ ತಿಂಗಳಿಗೆ ಲಕ್ಷ ರೂ. ಆದಾಯ ಗಳಿಸುವ ರೈತ

ಉಸ್ಮಾನಾಬಾದಿ
ಮಾಂಸೋತ್ಪಾದನೆಗೆ ಸೂಕ್ತವಾಗಿದೆ. ಎತ್ತರದ ನಿಲುವಿನ ಈ ಆಡುಗಳು ಸಾಮಾನ್ಯವಾಗಿ ಕಪ್ಪು ಬಣ್ಣ ಹೊಂದಿದ್ದು ಬಿಳಿ, ಕಂದು ಅಥವಾ ಇತರ ಬಣ್ಣದ ಗುರುತುಗಳು ಇರುತ್ತವೆ. ಕೆಚ್ಚಲು ಚಿಕ್ಕದಾಗಿರುತ್ತದೆ. ಇದು ಒಂದು ದಿನಕ್ಕೆ ಸರಾಸರಿ 2 ರಿಂದ 2.5 ಲೀಟರ್ ಹಾಲನ್ನು ಕೊಡುತ್ತದೆ.

ಜತೆಗೆ ಬಾಬಪರಿ, ಬ್ಲಾಕ್ ಬೆಂಗಾಲ್, ಶಿರೋಹಿ ಮುಂತಾದವು ನ್ಮಮ ದೇಶದ ಜನಪ್ರಿಯ ಆಡು ತಳಿಗಳು. ಕರ್ನಾಟಕದ ಅರ್ಧದಷ್ಟು ಕುರಿಗಳು ತಮಿಳುನಾಡು, ಮಹಾರಾಷ್ಟ್ರ, ಕೇರಳ ಮಾರಾಟವಾಗುತ್ತವೆ. ಹಾಗಾಗಿ ಆಡು ಸಾಕಾಣಿಕೆ ಕೈಗೊಳ್ಳಲು ಆತಂಕವೇನಿಲ್ಲ.

ಆಡು ಸಾಕುವ ಮನೆ ಹೀಗಿರಲಿ
ಆಡುಗಳಿಗೆ ಸಾಮಾನ್ಯವಾಗಿ ವಸತಿ ಸೌಕರ್ಯಕ್ಕಾಗಿ ಹೆಚ್ಚು ಖರ್ಚಿನಿಂದ ಕಟ್ಟಿದ ಪಕ್ಕಾ ಮನೆಗಳು ಬೇಕಿಲ್ಲ. ಹಳ್ಳಿಗಳಲ್ಲಿ ಸಿಗುವ ಬಿದಿರುಗಳ ಸಹಾಯದಿಂದ ಚಪ್ಪರ ಅಥವಾ ಹುಲ್ಲಿನ ಜೋಪಡಿಗಳನ್ನು ಕಡಿಮೆ ಖರ್ಚಿನಲ್ಲಿ ಕಟ್ಟಿ, ಅವುಗಳಲ್ಲಿ ಆಡುಗಳನ್ನಿಟ್ಟು ಸಾಕುವುದು ಉತ್ತಮ ಪದ್ಧತಿ.

ಚಪ್ಪರವು ಮಧ್ಯದಲ್ಲಿ 8 ರಿಂದ 10 ಅಡಿ ಎತ್ತರವಿದ್ದು ದಂಡೆಗೆ 4 ಅಡಿ ಎತ್ತರವಾಗಿ ಇಳಿಜಾರಾಗಿರಬೇಕು. ಮೇಲೆ ಬಿದ್ದ ಮಳೆ ನೀರು ಹರಿದು ಹೋಗುವಂತಿರಬೇಕು. ವಸತಿಯ ಸುತ್ತಲು ನೀರು ನಿಲ್ಲದೆ ಹರಿದು ಹೋಗುವಂತಿರಬೇಕು. ಮಣ್ಣಿನ ಗೋಡೆಗಳನ್ನು ಕಟ್ಟಿ ಅದರ ಮೇಲೆ ಛಾವಣಿಯಾಗಿ ಒಣಗಿದ ಹುಲ್ಲನ್ನು ಹೊದಿಸಿ ಆಡುಗಳ ದೊಡ್ಡಿ ನಿರ್ಮಿಸಬಹುದು. ಇದರಲ್ಲಿ ಪ್ರತಿಯೊಂದು ಅಡಿಗೆ 15 ರಿಂದ 20 ಚದರ ಅಡಿ ಸ್ಥಳಾವಕಾಶವಿದ್ದು, ಮಳೆ ನೀರು ಒಳಗೆ ಬೀಳಬಾರದು.

ಇವುಗಳನ್ನೂ ಓದಿ

ಮಾಹಿತಿ: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ವಿವಿಧ ತಜ್ಞರು