ತೆಂಗಿನ ಬೆಳೆಗೆ ಬಾಧಿಸುತ್ತಿರುವ ರುಗೋಸ್ ಬಿಳಿನೊಣ ಇತ್ತೀಚೆಗೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂದ್ರ ಪ್ರದೇಶ ರಾಜ್ಯಗಳಲ್ಲಿ ವರದಿಯಾಗಿದೆ.

ಇದು ಹೊರದೇಶದ ಕೀಟವಾಗಿದ್ದು ಹೆಲಿಕೋನಿಯ, ಪೇರು, ಗೋರಂಟಿ, ಮಾವು, ಅಡಿಕೆ, ತಾಳೆ ಮರ, ಅಲಂಕಾರಿಕ ಗಿಡ ಮತ್ತು ಕೆಲವು ಹಣ್ಣಿನ ಗಿಡಗಳಿಗೂ ಬಾಧೆ ಮಾಡುತ್ತದೆ. ಆದರೆ ತೆಂಗು ಮತ್ತು ಬಾಳೆ ಬೆಳೆಗಳು ಅತೀ ಹೆಚ್ಚು ಬಾಧೆಗೊಳಗಾಗುವ ಬೆಳೆಗಳಾಗಿವೆ.

ಬಾಧೆಯ ಲಕ್ಷಣಗಳು:

ಗಿಡದಲ್ಲಿ ಮರಿ ಹಾಗೂ ಪ್ರೌಢ ಬಿಳಿನೊಣಗಳು ಗುಂಪು ಗುಂಪಾಗಿ ಎಲೆಯ ಕೆಳಬಾಗದಲ್ಲಿ ಕೂತುರಸ ಹೀರುತ್ತವೆ. ಈ ಕೀಟಗಳು ಅಂಟಿನ ದ್ರವವನ್ನು ಸ್ರವಿಸುವುದರಿಂದ ಕಪ್ಪು ಶಿಲೀಂದ್ರದ ಬೆಳವಣಿಗೆಯಿಂದ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಡ್ಡಿ ಉಂಟಾಗಿ ಎಲೆಗಳು ಒಣಗುವುದನ್ನು ಕಾಣುತ್ತೇವೆ.

ರುಗೋಸ್ ಬಿಳಿನೊಣದ ಪ್ರೌಢ ಕೀಟವು ಇತರೆ ಸಾಮಾನ್ಯ ಬಿಳಿನೊಣಗಳಿಗಿಂತ ಮೂರು ಪಟ್ಟು ದೊಡ್ಡದಾಗಿರುತ್ತದೆ ಹಾಗೂ ಚಲನವಲನಗಳು ಮಂದಗತಿಯಲ್ಲಿರುತ್ತದೆ. ರುಗೋಸ್ ಹೆಣ್ಣು ಬಿಳಿನೊಣವು ಎಲೆಯ ಕೆಳಬಾಗದಲ್ಲಿ ವೃತ್ತಾಕಾರವಾಗಿ ಸುರುಳಿಯಾಕಾರವಾಗಿ ಮೊಟ್ಟೆಯನ್ನಿಡುವುದರಿಂದ ಇದಕ್ಕೆ ರುಗೋಸ್ ಸುರುಳಿ ಬಿಳಿನೊಣ ಎಂದು ಕರೆಯಲಾಗುತ್ತದೆ.

ತಾತ್ಕಾಲಿಕ ನಿರ್ವಹಣಾ ಕ್ರಮಗಳು:

ಕೀಟನಾಶಕಗಳ ಸಿಂಪರಣೆ ಮಾಡಬಾರದು, ಎಲೆಗಳ ಮೇಲೆ 1% ಸ್ಟಾರ್ಚ್ (ಗಂಜಿ ತಿಳಿ) ಸಿಂಪರಣೆ ಮಾಡುವುದರಿಂದಕಪ್ಪು ಶಿಲೀಂದ್ರ ಉದುರಿ ಹೊಗುವುದು.

ಕಾಂಡದ ಮೇಲೆ ಹಳದಿ ಅಂಟಿನ ಪಟ್ಟಿ ಹಚ್ಚುವುದು ಅಥವಾ ಹಳದಿ ಬಣ್ಣದ ಹಾಳೆಗೆ ಹರಳೆಣ್ಣೆ ಹಚ್ಚಿಕಾಂಡಕ್ಕೆ ಹಚ್ಚುವುದು ಹಾಗೂ ತೆಂಗಿನ ನರ್ಸರಿಗಳಲ್ಲಿ ಮಾತ್ರ ಇಮಿಡಾಕ್ಲೋಪ್ರಿಡ್ 0.2 ಮಿ.ಲೀ/ಲೀ ಅನ್ನು ಸಿಂಪಡಸಿ ರುಗೋಸ್ ಬಿಳಿ ನೊಣವನ್ನು ನಾಶಪಡಿಸಬಹುದು.

ತೋಟದ ಪರಿಸರದ ವ್ಯವಸ್ಥೆಯಲ್ಲಿ ಯಾವುದೇ ಕೀಟನಾಶಕಗಳನ್ನು ಸಿಂಪಡಿಸದೆ, ಪರಾವಲಂಬಿ ಜೀವಿ (ಎನ್ಕಾರ್ಶೀಯಾ ಗ್ವಾಡಿಲೋಪೆ) ಅಥವಾ ಇತರೆ ಪರಭಕ್ಷಕ ಕೀಟಗಳನ್ನು ಸಂರಕ್ಷಿಸಬೇಕು.

ಬಾಧೆಯು ತೀವ್ರವಾದಲ್ಲಿ ಶೇ. 0.5% ಬೇವಿನ ಎಣ್ಣೆ ಪ್ರತೀ ಲೀಟರ್ ನೀರಿಗೆ ಮತ್ತು 10 ಗ್ರಾಂ ಸಾಬೂನು ಪುಡಿ (ಒಂದು ಟ್ಯಾಂಕಿಗೆ) ಬೆರಸಿ ಸಿಂಪಡಿಸಬೇಕು ಎಂದು ದೇವಿಹೊಸೂರು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿನಯಕುಮಾರ್ ಎಂ.ಎಂ.( 9164405294) ಅವರು ತಿಳಿಸಿದ್ದಾರೆ.