ಬಿರು ಬೇಸಿಗೆಯಲ್ಲಿ ರಸ್ತೆಗಳೆಲ್ಲ ಕಾದ ಕೆಂಡದಂತಾಗಿದ್ದವು. ದೂರದಿಂದ ನೋಡಿದರೆ, ರಸ್ತೆಗೇ ಬೆಂಕಿ ಬಿದ್ದಿರುವ ರೀತಿ ಡಾಂಬರು ಸುಡುತ್ತಿತ್ತು. ಅಂಥ ದಾರಿಯಲ್ಲಿ ಮಂಜು ಬರಿ ಗಾಲಿನಲ್ಲಿಯೇ ಓಡುತ್ತಿದ್ದ. ಕಾಲು ಸುಡುತ್ತಿದ್ದರೂ ಎದೆಯೊಳಗಿದ್ದ ಆತಂಕ, ಭಯ ಅವನನ್ನು ನೋವಿನಾಚೆ ಬಂಧಿಸಿತ್ತು. ಕಣ್ಣಿಂದ ಒಸರುತ್ತಿದ್ದ ನೀರು ಒರೆಸುಕೊಳ್ಳುತ್ತಲೇ ವಿಶ್ರಮಿಸದೆ ಓಡುತ್ತಿದ್ದ.

ಆ ದಿನ ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ನನಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ. ಸಂಧ್ಯಾ ಇಲ್ಲದೆ ಮುಂದೆ ಹೇಗೆ ಜೀವಿಸಲಿ. ಅವಳನ್ನು ಪಡೆದುಕೊಳ್ಳುವುದಾದರು ಹೇಗೆ? ಪ್ರೀತಿ ಅಂದ್ರೆ ಇಷ್ಟೇನಾ? ಕ್ಷಮೆ ಎನ್ನುವುದು ಇಲ್ಲವೇ? ನನ್ನ ಪ್ರೀತಿಯನ್ನು ಅವಳು ಇಷ್ಟೊಂದು ತಿರಸ್ಕರಿಸುವಷ್ಟು ನಾನೇನು ಮಾಡಿದೆ ಎಂದು ಯೋಚಿಸುತ್ತಲೇ ಮಂಜು ಓಡುತ್ತಿದ್ದ.

ಕಾಲುಗಳು ಗುಳ್ಳೆ ಏಳಲು ಶುರುವಾದವು. ನೋವಿನ ಅನುಭವ ಅವನನ್ನು ವಾಸ್ತವಕ್ಕೆ ಕರೆಯಿತು. ಅಷ್ಟೊತ್ತಿಗೆ ಮಂಜು ತಾನು ಸೇರಬೇಕಿದ್ದ ಸ್ಥಳ ಸಮೀಪಿಸಿದ್ದನು. ದೂರದಲ್ಲಿ ಮರದ ಸುತ್ತಲೂ ಹತ್ತಾರು ಜನರು ಸೇರಿದ್ದು ಕಂಡಿತು. ಇವನಲ್ಲಿ ಭಯ ಹೆಚ್ಚಿತು. ಕುಂಟುತ್ತಲೋ, ನಿಲ್ಲುತ್ತಲೋ ಮರದ ಕಡೆಗೆ ಓಡಿದ.

ಮರದ ಕೆಳಗೆ ಸಂಧ್ಯಾಳನ್ನು ನೆಲದ ಮೇಲೆ ಮಲಗಿಸಿದ್ದರು. ಮರದ ಮೇಲೆ ಹಗ್ಗವೊಂದು ನೇತಾಡುತ್ತಿತ್ತು. ಎಲ್ಲರೂ ಯಾರ್ಯಾರಿಗೋ ಫೋನ್ ಮಾಡುತ್ತಿದ್ದರು. ದೂರದಲ್ಲಿ ಅಂಬುಲೆನ್ಸ್ ಬರುವ ಸದ್ದು ಕೇಳಿಸುತ್ತಿತ್ತು. ಪರಿಸ್ಥಿತಿ ನೋಡುತ್ತಿದ್ದಂತೆಯೇ ಮಂಜು ಕುಸಿದು ಬಿದ್ದ. ಏನು ಮಾಡಬೇಕು ಎನ್ನುವುದೇ ತಿಳಿಯದಾಯಿತು.

*****

ಮಂಜು ಮತ್ತು ಸಂಧ್ಯಾ ಹೈ ಸ್ಕೂಲ್ ನಿಂದಲೂ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಪ್ರೀತಿಸುತ್ತಲೇ ಕಾಲೇಜು ಸಹ ಮುಗಿಸಿದ್ದರು. ಇಬ್ಬರ ಪ್ರೀತಿ ಅದೆಷ್ಟು ಘಾಡವಾಗಿತ್ತು ಎಂದರೆ, ಶಾಲೆ, ಕಾಲೇಜುಗಳಿಗೆ ರಜೆ ಇರಲಿ, ಇಲ್ಲದಿರಲಿ ಒಬ್ಬರಿಗೊಬ್ಬರು ಹೇಗಾದರು ಮಾಡಿ ಮುಖ ನೋಡಿ ನಗು ಹಂಚಿಕೊಂಡ ಬಳಿಕವೇ ಆವತ್ತಿನ ದಿನ ಕಳೆಯುತ್ತಿದ್ದರು.

ಸಂಧ್ಯಾಳ ತಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ. ಹಾಗಾಗಿ ರಾಜಕೀಯ ಪ್ರಭಾವ ಸ್ವಲ್ಪ ಬೆಳೆಸಿಕೊಂಡಿದ್ದ. ಮಂಜು, ಅವರ ಪಕ್ಕದ ಮನೆಯವ. ಸ್ವಲ್ಪ ಬಡವ. ಮಂಜು, ಸಂಧ್ಯಾ ಮತ್ತು ಓರಿಗೆಯವರೆಲ್ಲ ಒಟ್ಟಿಗೇ ಆಡಿ ಬೆಳೆದಿದ್ದರಿಂದ ಇವರಿಬ್ಬರಲ್ಲಿ ಮಾತ್ರ ಅದು ಹೇಗೊ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು.

ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಕೊಡುವ ನೆಪದಲ್ಲೋ, ಏನೋ ಕೆಲಸದ ನೆಪದಲ್ಲಿ ಮಂಜು ಆಗಾಗ ಅಧ್ಯಕ್ಷರ ಮನೆಗೆ ಬಂದು ಹೋಗುತ್ತಿದ್ದ. ಅಧ್ಯಕ್ಷರೊಂದಿಗೆ ಸ್ವಲ್ಪ ಸಲಿಗೆಯನ್ನೂ ಸಾಧಿಸಿದ್ದ. ಮಂಜು, ಸಂಧ್ಯಾಳಿಗಿಂತ ಒಂದು ವರ್ಷ ದೊಡ್ಡವನು. ಹಾಗಾಗಿ ಕಾಲೇಜಿಗೆ ಹೋಗುವಾಗ ಉತ್ತರ ತಿಳಿಯಲಿಲ್ಲ ಎಂದು ಮಂಜುನ ಬಳಿ ಕೇಳುವುದು, ಹೀಗೆ ಕದ್ದು ಮುಚ್ಚಿ ಪ್ರೀತಿಯ ಪರಿಪಾಠ ನಡೆದಿತ್ತು.

****

ಮಂಜು, ಸಂಧ್ಯಾ ಪ್ರೀತಿ ಸ್ವಚ್ಛಂದವಾಗಿರುವ ಹೊತ್ತಿನಲ್ಲಿಯೇ ಸಂಧ್ಯಾಳಿಗೆ ಮದುವೆ ಮಾಡಲು ತಯಾರಿ ನಡೆಯಿತು. ಮಂಜು ಆಗಿನ್ನೂ ದುಡಿಮೆ ಆರಂಭಿಸಿರಲಿಲ್ಲ. ಹಾಗಾಗಿ ತಮ್ಮ ಪ್ರೀತಿ ವಿಷಯವನ್ನು ಹೇಳಿಕೊಳ್ಳಲು ಇಬ್ಬರ ಬಳಿ ಧೈರ್ಯ ಸಾಲಲಿಲ್ಲ. ಆದರೆ, ಬಾಯಿ ಹೇಳದಿದ್ದರೂ ಮನಸ್ಸು ಎಲ್ಲವನ್ನೂ ಹೊರಹಾಕುತ್ತದೆ.

ಮದುವೆ ಪ್ರಸ್ತಾವ ಬರುತ್ತಿದ್ದಂತೆಯೇ ಸಂಧ್ಯಾಳ ಕಣ್ಣುಗಳು ಎಲ್ಲವನ್ನೂ ಹೊರಹಾಕಿದವು. ಮಗಳು ಅಳುವುದನ್ನು ನೋಡಿ ತಂದೆಗೆ ಸಂಶಯ ಬಂದಿತು. ಮಗಳು ಪ್ರೀತಿಯಲ್ಲಿ ಬಿದ್ದಿದ್ದಾಳೆ ಎನ್ನುವುದು ಸ್ಪಷ್ಟವಾಯಿತು. ಆದರೆ, ಆತಂಕಕ್ಕೆ ಒಳಗಾಗಲಿಲ್ಲ. ಪ್ರೀತಿಸಿದವನ ಜತೆಯಲ್ಲಿಯೇ ಸಂಧ್ಯಾಳ ಮದುವೆ ಮಾಡಲು ಮನೆಯವರು ನಿರ್ಧರಿಸಿದರು.

ಆದರೆ, ಅವರಿಗೆ ಸಂಧ್ಯಾ ಪ್ರೀತಿಸುತ್ತಿರುವುದು ಮಂಜುವನ್ನು ಎನ್ನುವುದು ಗೊತ್ತಿರಲಿಲ್ಲ. ಮಗಳಿಗೆ ಧೈರ್ಯ ತುಂಬಿ ಪ್ರೀತಿಸಿದವನ ಹೆಸರು ಹೇಳಲು ಒತ್ತಾಯ ಮಾಡಿದರು. ಪ್ರೀತಿಸಿದವನೊಂದಿಗೆ ಮದುವೆ ಮಾಡಲು ಒಪ್ಪಿರುವ ಅಪ್ಪ ಮಂಜುವನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳುತ್ತಾನೆ ಎನ್ನವ ವಿಶ್ವಾಸ ಸಂಧ್ಯಾಳಿಗೆ ಇರಲಿಲ್ಲ.

ಆದರೂ ತಾಯಿ ಬಳಿ ಪ್ರೀತಿಯ ಎಲ್ಲ ವಿಷಯವನ್ನು ಹೇಳಿದಳು. ಮಗಳು ಪ್ರೀತಿಸಿದ್ದು, ಪಕ್ಕದ ಮನೆಯ ಬಡಪಾಯಿ ಮಂಜು ಎನ್ನುವುದು ತಿಳಿಯುತ್ತಿದ್ದಂತೆಯೇ ಸಂಧ್ಯಾಳ ತಂದೆಗೆ ಸಹಿಸಲು ಆಗಲಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷನ ಮಗಳು ಕೂಲಿಯವನ ಮಗನನ್ನು ಮದುವೆಯಾದರೆ ಜನರು ಆಡಿಕೊಳ್ಳುವುದಿಲ್ಲವೇ ಎಂದುಕೊಂಡು ಸಿಟ್ಟಿನಲ್ಲಿ ಬಂದೂಕು ಹಿಡಿದು ಮಗಳ ಕೋಣೆಯೊಳಗೆ ಹೋದ.

ಮುಂದುವರಿಯುತ್ತದೆ….
ಮುಂದೇನಾಯಿತು 24-5-2020 ಸಂಚಿಕೆ ಓದಿ.