ಈ ಬಾರಿ ವಾಡಿಕೆ ಮಳೆ ಉತ್ತಮವಾಗಿ ಬರಲಿದೆ ಎನ್ನುವ ಶುಭ ಸುದ್ದಿ ವಿಜ್ಞಾನಿಗಳಿಂದ ಬಂದಿದೆ. ಈ ಬಾರಿಯ ಮುಂಗಾರು ರೈತರಿಗೆ ಅದೃಷ್ಟ ತರಲಿದೆ. ಅದರ ಮುನ್ಸೂಚನೆ ಭಾಗವಾಗಿ ಈಗಾಗಲೇ ಪೂರ್ವ ಮುಂಗಾರು ಮಳೆ ಬರುತ್ತಿದೆ. ರೈತರು ಈಗಾಗಲೇ ಕೃಷಿ ಚಟುವಟಿಕೆಯನ್ನೂ ಆರಂಭಿಸಿದ್ದಾರೆ ಎಂದು ವಿಜ್ಞಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ದಕ್ಷಿಣ ಕರ್ನಾಟಕದ ರಾಜ್ಯಗಳ ರೈತರು ಹೆಚ್ಚು ಅದೃಷ್ಟವಂತರು. ಪೂರ್ವ ಮುಂಗಾರು ಚೆನ್ನಾಗಿ ಆಗುತ್ತಿದೆ. ಏಪ್ರಿಲ್, ಮೇ ನಲ್ಲಿ ರೇವತಿ, ಅಶ್ಚಿನಿ, ಭರಣಿ, ಕೃತಿಕ, ರೋಹಿಣಿ ಮಳೆಗಳು ಉತ್ತಮವಾಗಿ ಸುರಿಯುವ ಆಶಾ ಭಾವನೆ ಇದೆ ಎಂದು ವಿಜ್ಞಾನಿ ಡಾ. ಷಡಕ್ಷರಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಏಪ್ರಿಲ್, ಮೇ ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 220 ಮಿ.ಮೀ. ದಿಂದ 250 ಮಿ.ಮೀ. ಮಳೆ ಬೀಳುತ್ತದೆ. ಉಳಿದ ಜಿಲ್ಲೆಗಳಲ್ಲಿ 150 ಮಿ.ಮೀ. ಮಳೆ ಬೀಳಲಿದೆ. ಹಾಗಾಗಿ ರೈತರು ಮುಂಗಾರಿನವರೆಗೆ ಕಾಯಬೇಕಿಲ್ಲ. ಈಗಲೇ ಬಿತ್ತನೆ ಆರಂಭಿಸಬಹುದು. ಈ ಪೂರ್ವ ಮುಂಗಾರಿನಲ್ಲಿ ಇಳಿಜಾರಿಗೆ ಅಡ್ಡಲಾಗಿಯೇ ಅಗಲಸಾಲುಗಳಲ್ಲಿ ಬಿತ್ತನೆ ಮಾಡುವುದು ಒಳ್ಳೆಯದು ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ.

ಪೂರ್ವ ಮುಂಗಾರಿಗೆ ಬೆಳೆಯಬಹುದಾದ ಉತ್ತಮ ತಳಿಗಳು.
ಅಲಸಂದಿ– ಕೆಬಿಸಿ, 1, 2, 9, ಕೆಎಂ 5, ಸಿ 152 ತಳಿ ಬೆಳೆಯಬಹುದು.
ಉದ್ದು– ರಶ್ಮಿ ಎಲ್ ಬಿಜಿ 625, ಸುರಕ್ಷಾ ಎಲ್ ಬಿಜಿ 791 ತಳಿ.
ಹೆಸರು– ಕೆಕೆಎಂ 3, ಪಿಡಿಎಂ 84-178, ಪಿಎಸ್ 16, ಪೂಸಾಬೈಸಾಕ್ ತಳಿ.
ಬಿಳಿ ಎಳ್ಳು– ಜಿಟಿ 1, ಟಿಎಂಇ 3, ನವಿಲೆ-1, ಟಿ 7 ತಳಿ.
ಹುರುಳಿ– ಪಿಎಚ್ ಜೆ 9, ವಿಜಿಎಂ 1 ತಳಿ.
ನೆಲಗಡಲೆ– ಹಸಿಕಾಯಿಗೆ ಜೆಎಲ್ 24, ಐಸಿಜೆವಿ 91114.

ಈ ಬಾರಿಯ ಮುಂಗಾರಿಗೆ ಯೋಗ್ಯ ಮಿಶ್ರ ಬೆಳೆ ಪದ್ಧತಿ (ಕೆಂಪು ಮಣ್ಣು)
ರಾಗಿ (8 ಅಥವಾ 10 ಸಾಲು)+ ತೊಗರಿ (2 ಸಾಲು) ಅಥವಾ ಮಣಿ ಅವರೆ (1 ಸಾಲು).
ಮುಸುಕಿನ ಜೋಳ (1 ಸಾಲು)+ ತೊಗರಿ (1 ಸಾಲು).
ನೆಲಗಡಲೆ (8 ಸಾಲು) + ತೊಗರಿ (2 ಸಾಲು) ಅಥವಾ ನೆಲಗಡಲೆ (4 ಸಾಲು) + ತೊಗರಿ (1 ಸಾಲು).
ಎಳ್ಳು (8-10 ಸಾಲು) + ತೊಗರಿ (2 ಸಾಲು) – ನಾಟಿ ರಾಗಿ ಅಥವಾ ಹುರುಳಿ.
ಸೂರ್ಯಕಾಂತಿ (4-6 ಸಾಲು) + ತೊಗರಿ (1 ಸಾಲು).
ಹುರುಳಿ (8 ಸಾಲು) + ಹುಚ್ಚೆಳ್ಳು (2 ಸಾಲು).
ತೊಗರಿ (1 ಸಾಲು) + ಅಲಸಂದೆ /ಹುರುಳಿ /ಮೇವಿನ ಜೋಳ (ಒಂದು ಸಾಲು).
ಮಣಿ ಅವರೆ (8 ಸಾಲು) + ಹರಳು (1 ಸಾಲು).
ರಾಗಿ (8-10 ಸಾಲು) + ಅಕಡಿ (1 ಸಾಲು).

ತೊಗರಿ ಬೆಳೆ ಜತೆಗೆ ಬೇರೆ ಏಕ ದಳ ಅಥವಾ ದ್ವಿದಳ ಬೆಳೆ ಬೆಳೆಯುವುದು ಬಹಳ ಉತ್ತಮ. ಹೀಗೆ ಮಾಡುವುದರಿಂದ ಮಳೆ ಬರಲಿ, ಬರದೆ ಇರಲಿ ಸುಸ್ತಿರ ಆದಾಯ ಪಡೆಯಲು ಸಾಧ್ಯ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಎಚ್. ಎಸ್. ಶಿವರಾಮು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮೂಲ: ಡಿಡಿ ಚಂದನ