ಮಣ್ಣು, ನೀರು, ಗಾಳಿ ಪರಿಸರದ ಅವಿಭಾಜ್ಯ ಅಂಗ. ಇವುಗಳ ಆರೋಗ್ಯ ಚೆನ್ನಾಗಿದ್ದರೆ ಸಕಲ ಜೀವರಾಶಿಗಳ ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಮಣ್ಣಿನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮಣ್ಣು ಸವಳಾಗುತ್ತಿದೆ, ಕರಲಾಗುತ್ತಿದೆ. ಅದಕ್ಕೆ ಕಾರಣ ಮಣ್ಣಿಗೆ ಅವಶ್ಯಕತೆಗಿಂತ ಹೆಚ್ಚಾಗಿ ನೀರು ಕೊಡುವುದು ಮತ್ತು ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ.

ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿಗೆ ಯಾವ ಪೋಸಕಾಂಶ ಹಾಕಬೇಕು? ಎಷ್ಟು ಮತ್ತು ಯಾವ ರಸಾಯನಿಕ ಗೊಬ್ಬರ ಹಾಕಬೇಕು ಎನ್ನುವುದನ್ನು ತಿಳಿದರೆ, ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಅಲ್ಲದೆ, ಅನಗತ್ಯವಾಗಿ ರಾಸಾಯನಿಕ ಗೊಬ್ಬರ ಬಳಕೆ, ಬೇಕಾಬಿಟ್ಟಿ ನೀರುಣಿಸುವ ಸಮಸ್ಯೆಯೂ ತಪ್ಪಲಿದೆ. ಜತೆಗೆ ಉತ್ತಮ ಇಳುವರಿಯನ್ನೂ ಪಡೆಯಬಹುದು ಎನ್ನುತ್ತಾರೆ ತಜ್ಞರು.

ಮಣ್ಣಿ ಬೌತಿಕ, ಜೈವಿಕ, ರಾಸಾಯನಿಕ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳುವುದನ್ನೇ ಮಣ್ಣು ಪರೀಕ್ಷೆ ಎನ್ನುತ್ತೇವೆ. ಜಮೀನಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಲು ಜಮೀನಿನ ಎಲ್ಲ ಮಣ್ಣನ್ನು ಪರೀಕ್ಷೆ ಮಾಡುವುದು ಕಷ್ಟ ಸಾಧ್ಯ. ಅದಕ್ಕೆ ಆ ಜಮೀನಿನ ಕೆಲ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುವುದು ಅವಶ್ಯಕ. ಹೀಗೆ ಸಂಗ್ರಹಿಸಿದ ಮಣ್ಣಿನ ಮಾದರಿಗಳು ನಿಜವಾಗಿ ಜಮೀನಿನ ಆರೋಗ್ಯ ಹೇಗಿದೆ ಎನ್ನುವುದನ್ನು ತಿಳಿಸುತ್ತದೆ.

ಮಣ್ಣಿನ ಮಾದರಿ ತೆಗೆಯುವುದು ಹೇಗೆ?
ಮಣ್ಣಿನ ಮಾದರಿ ಸಂಗ್ರಹಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ಮೊದಲು ಹೊಲದ ತುಂಬ ಓಡಾಡಬೇಕು. ಇಡೀ ಹೊಲದಲ್ಲಿ ಏಕ ಪ್ರಕಾರದ ಮಣ್ಣು ಇದೆಯೋ ಅಥವಾ ಭಿನ್ನವಾಗಿದೆಯೊ ನೋಡಬೇಕು. ಸಾಮಾನ್ಯವಾಗಿ ಹೊಲದಲ್ಲಿ ಕೆಲವು ಕಡೆ ಮಣ್ಣು ಕೆಂಪು, ಕಪ್ಪಾಗಿತ್ತದೆ. ಇನ್ನು ಕೆಲವು ಕಡೆ ಸವಳು, ಕರಲಾಗಿರುತ್ತದೆ. ಹೀಗೆ ಆಯಾ ಗುಣಲಕ್ಷಣ ಕಂಡು ಬರುವ ಪ್ರದೇಶದ ಮಣ್ಣುಗಳ ಮಾದರಿ ತೆಗೆಯಲು ಮೊದಲು ಸ್ಥಳ ಗುರುತು ಹಾಕಬೇಕು.

ಆದರೆ, ಪರೀಕ್ಷೆಗೆ ಹೊಲದ ಬದು ಬಳಿ, ಮರದ ಕೆಳಗೆ, ರಸ್ತೆ ಬಳಿ, ನೀರಾವರಿ ಕಾಲುವೆ, ಕೊಳವೆ ಬಾವಿ, ತೆರೆದ ಬಾವಿ ಹೀಗೆ ನೀರಿನ ಮೂಲ ಇರುವ ಸ್ಥಳ, ವಿದ್ಯುತ್ ಕಂಬ ಇರುವ ಕಡೆ ಮಾದರಿ ತೆಗೆಯಬಾರದು. ಜತೆಗೆ ಹೊದಲ್ಲಿ ಸಾವಯವ ಗೊಬ್ಬರ ರಾಶಿ ಹಾಕಿದ ಜಾಗದ ಮಣ್ಣಿನ ಮಾದರಿಯನ್ನೂ ತೆಗೆಯಬಾರದು. ಇ ಸ್ಥಳ ಬಿಟ್ಟು ಉಳಿದ ಕಡೆ ಅಲ್ಲಲ್ಲಿ ಮಾದರಿ ತೆಗೆಯಬೇಕು.

ಒಂದು ಎಕರೆಗೆ 4-5 ಸ್ಥಳ ಗುರುತು ಮಾಡಿ ಮಾದರಿ ಸಂಗ್ರಹಿಸಬೇಕು. ಹೆಚ್ಚು ಮಾದರಿ ಸಂಗ್ರಹಿಸಿದರೂ ತೊಂದರೆ ಇಲ್ಲ. ಗುರುತು ಮಾಡಿದ ಸ್ಥಳದಲ್ಲಿ 20-25 ಸೆ.ಮೀ. ಆಳದಲ್ಲಿ ಗುಂಡಿ ತೆಗೆಯಬೇಕು. ಎಷ್ಟು ಆಳ ಗುಂಡಿ ತೆರೆದಿರುತ್ತೇವೆಯೋ ಅಷ್ಟೇ ಆಳ ಮತ್ತು ಅಷ್ಟೇ ಅಗಲದಲ್ಲಿ ಒಂದು ಸೆಂ.ಮೀ. ದಪ್ಪ ಮಣ್ಣನ್ನು ಕೆರೆಯಬೇಕು. ಕೆರೆದ ಮಣ್ಣನ್ನು ತುಂಬಿಕೊಳ್ಳಬೇಕು. ಏಕ ಪ್ರಕಾರದ ತುಣುಕುಗಳಲ್ಲಿ ನಾಲ್ಕೈದು ಸ್ಥಳದ ಮಣ್ಣನ್ನು ಸಂಗ್ರಹಿಸಿ ಒಂದು ಪ್ಲಾಸ್ಟಿಕ್ ಚೀಲದ ಮೇಲೆ ಹರಡಿ ಬೆರೆಸಬೇಕು. ಅದರಲ್ಲಿರುವ ಕಸ, ಕಡ್ಡಿ ಗಳನ್ನು ತೆಗೆಯಬೇಕು.

ಬಳಿಕ ಆ ಮಣ್ಣನ್ನು ವೃತ್ತಾಕಾರದಲ್ಲಿ ಹರಡಬೇಕು. ನಂತರ ನಾಲ್ಕು ಭಾಗ ಮಾಡಬೇಕು. ವಿರುದ್ಧ ಧಿಕ್ಕಿನಲ್ಲಿರುವ ಎರಡು ಭಾಗವನ್ನು ತೆಗೆದು ಹಾಕಬೇಕು. ಉಳಿದ ಎರಡು ಭಾಗದ ಮಣ್ಣನ್ನು ಮಿಕ್ಸ್ ಮಾಡಬೇಕು. ಹೀಗೆ ಮಿಕ್ಸ್ ಮಾಡಿದ ಮಣ್ಣು 250 ರಿಂದ 300 ಗ್ರಾಂ ಆಗಬೇಕು. ಅದನ್ನು ಪ್ಲಾಸ್ಟಿಕ್ ಅಥವಾ ಬಟ್ಟೆ ಚೀಲದಲ್ಲಿ ಹಾಕಬೇಕು. ಈ ಚೀಲಗಳು ಹೊಸದಾಗಿರಬೇಕು. ರಸಗೊಬ್ಬರ, ಔಷಧ ಇನ್ನೇನೂ ಹಾಕಿದ್ದಾಗಿರಬಾರದು.

ಕಿಸಾನ್ ಕಾರ್ಡ್ ಇದ್ದರೆ 3 ಲಕ್ಷ ರೂ.ವರೆಗೆ ಸಾಲ; ಕಾರ್ಡ್ ಪಡೆಯುವುದು ಹೇಗೆ?

ಈ ಮಾಹಿತಿ ಇರಲಿ
ಬಳಿಕ ಅದನ್ನು ಹತ್ತಿರದ ಮಣ್ಣು ಪರೀಕ್ಷೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು. ಅದಕ್ಕೂ ಮೊದಲು ಮಣ್ಣಿನ ಮಾದರಿ ಜತೆ ರೈತರು ಕೆಲವು ಮಾಹಿತಿ ಕೊಡಬೇಕು. ರೈತರ ಹೆಸರು, ಹೊಲದ ಸರ್ವೆ ನಂಬರ್, ಗ್ರಾಮ, ಹೋಬಳಿ, ಹಿಂದೆ ಯಾವ ಬೆಳೆ ಬೆಳೆಯಲಾಗುತ್ತಿತ್ತು, ಹಸಿರೆಲೆ ಗೊಬ್ಬರ ಬಳಸಿದ್ದರೆ, ಸುಣ್ಣ, ಜಿಪ್ಸಂ ಇವುಗಳನ್ನು ಬಳಕೆ ಮಾಡಿದ್ದರಾ, ಇಲ್ಲವಾ, ಭೂಮಿ ಕುಷ್ಕಿಯಲ್ಲಿದೆಯೋ, ನೀರಾವರಿ ಅಡಿಯಲ್ಲಿ ಇದೆಯೇ ಇಲ್ಲವೊ ತಿಳಿಸಬೇಕು.

ಇದನ್ನೂ ಓದಿ: ಹೊಲದಲ್ಲಿ ಮರ ಬೆಳೆಸಿ 40 ಸಾವಿರ ರೂ.ವರೆಗೆ ಪ್ರೋತ್ಸಾಹ ಪಡೆಯಿರಿ.

ಜಮೀನು ನೀರಾವರಿ ಅಡಿಯಲ್ಲಿ ಇತ್ತು ಎಂದರೆ, ನೀರು ತೆರೆದ ಬಾವಿಯಿಂದ ಬಳಸುತ್ತಾರೊ, ಕೊಳವೆ ಬಾವಿಯ ನೀರೊ, ಕಾಲುವೆ ನೀರೊ ಎನ್ನುವುದನ್ನು ಬರೆದು ಮಣ್ಣು ಪರೀಕ್ಷೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು. ಪರೀಕ್ಷೆ ಬಳಿಕ ಮಣ್ಣಿಗೆ ಪೊಟ್ಯಾಶಿಯಂ, ರಂಜಕ, ಸಸಾರಜನಕ ಎಷ್ಟು ಕೊಡಬೇಕು? ಏನು ಮಾಡಬೇಕು ಎಂದು ಹೇಳುತ್ತಾರೆ. ಅದನ್ನು ಅನುಸರಿಸಬೇಕು.

ಓದಿ: ಮುಂಗಾರಿಗೆ ಭತ್ತ, ನವಣೆ, ತೊಗರಿ ಬೆಳೆಯಲು ಯಾವ ತಳಿ ಬೆಸ್ಟ್

ಮುಖ್ಯವಾಗಿ ಬೆಳೆ ಕಟಾವು ಆದ ಮೇಲೆ ಉಳುಮೆ ಮಾಡುವುದಕ್ಕಿಂತ ಮೊದಲು ಮಣ್ಣಿನ ಮಾದರಿ ತೆಗೆಯಬೇಕು. ಮಣ್ಣು ಪರೀಕ್ಷೆ ಮಾಡಿ ಅಗತ್ಯ ಪೋಶಕಾಂಶವನ್ನು ಬೆಳೆಗೆ ಹಾಕುವುದರಿಂದ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ರಾಸಾಯನಿಕ ಹೆಚ್ಚು ಬಳಕೆಯಿಂದ ಭೂಮಿ ಫಲವತ್ತತೆ ಹಾಳಾಗುತ್ತದೆ. ಆಗ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹಾಗಾಗಿ ಮಣ್ಣು ಪರೀಕ್ಷೆ ಬಹಳ ಮುಖ್ಯ ಎನ್ನುವುದು ಕೃಷಿ ತಜ್ಞರ ಸಲಹೆ.