ಸರೀರ ಲೇ…. ನಿಮ್ಮ ಒಂದ … ದೊಡ್ಡ ಗಾಡಿ ಗಾಲಿ ಬಾಯಾಗ ಸಿಕ್ಕ ಸತ್ತೇರಿ…. ಕಲ್ಲಣ್ಣ ಓಣಿಯ ಹುಡುಗರಿಗೆಲ್ಲ ಗದರಿಸುತ್ತಿದ್ದ. ಆಗ ತಾನೆ ಎಚ್ಎಂ-80 (ಎಚ್ಚೆಮ್ಟಿ) ಹೊಸ ಟ್ರ್ಯಾಕ್ಟರ್ ತಂದಿದ್ದ. ಕಲ್ಲಣ್ಣ ಓಣ್ಯಾಗಿನ ಪುಟ್ಟ ಪಿಟ್ಟ ಮಕ್ಕಳಿಗೆ ಗದರಿಸುವ ರಿತಿಯಲ್ಲಿ ಹೇಳಿದಂತಿದ್ದರೂ ಆತನ ಏರು ಧ್ವನಿ ತಾನು ಟ್ರ್ಯಾಕ್ಟರ್ ತಂದಿರುವ ಸುದ್ದಿ ಸುತ್ತಲಿನ ಮಂದಿಗೆ ಗೊತ್ತಾಗಲಿ ಎನ್ನುವಂತಿತ್ತು.

ಕಲ್ಲಣ್ಣನ ತಂದೆ ಮೀಸೆ ದಾನಪ್ಪ ಸತ್ತು ವರ್ಷ ಆಗಿತ್ತು. ಮೂರು ಮಂದಿ ಅಣ್ಣ ತಮ್ಮಂದಿರ ನಡುವೆ ಆಸ್ತಿ ಸಲುವಾಗಿ ಮುಸುಕಿನ ಗುದ್ದಾಟ ಇದ್ದರೂ, ತಾವಷ್ಟೇ ಕೂಡಿಕೊಂಡು ಮೌಖಿಕವಾಗಿ ಆಸ್ತಿ ಹಂಚಿಕೆ ಮಾಡಿಕೊಂಡಿದ್ದರು.

ಕಲ್ಲಣ್ಣ ಬಲು ಚತುರ. ಇದ್ದಿದ್ದರಲ್ಲಿ ಅಲ್ಪ ಸ್ವಲ್ಪ ಅಕ್ಷರ ಕಲಿತಿದ್ದ. ಅಪ್ಪ ಸತ್ತ ಮೇಲೆ ಮನೆಯ ಹಿರಿತನ ಇವನದಾಗಿತ್ತು. ಆಸ್ತಿ ಪಾಲು ಮಾಡುವಾಗಲೂ ಕೂಡ ಅದೇನೋ ಮಸಲತ್ತು ಮಾಡಿ ಊರಂಚಿನ ಹೊಲ ತನ್ನ ಪಾಲಿಗಿರಿಸಿಕೊಂಡಿದ್ದ. ಅಲ್ಲೇ ಒಂದ ಮನೆಯನ್ನೂ ಕಟ್ಟಿದ್ದ.

ಆಗ ತಾನೇ ಮೊಬೈಲ್ ಹಾವಳಿ ಶುರುವಾಗಿದ್ದರಿಂದ ಇಡೀ ಊರಿನಲ್ಲೇ ಮೊದಲಿಗೆ ಮೊಬೈಲ ಹೊಂದಿದ ಕೀರ್ತಿ ಕಲ್ಲಣ್ಣ ಸಾವಕಾರದ್ದಾಗಿತ್ತು. ಅದನ್ನು ಎಲ್ಲರೂ ನೋಡಲಿ ಎಂದು ಕೊರಳಿಗೆ ನಾಯಿ ಹಗ್ಗ ಕಟ್ಟಿಕೊಂಡಂತೆ ಯಾವಾಗಲೂ ಕೊರಳಿಗೆ ಹಾಕಿಕೊಂಡೇ ತಿರುಗುತ್ತಿದ್ದ.

ಯಾವುದಾರು ಫೋನ್ ಬಂದರಂತೂ ಮುಗಿಯಿತು. ಎಲ್ಲಿಂದ ಪೋನ್ ಮಾಡಿದ್ದರೋ ಅಲ್ಲಿಗೆ ಕೇಳುವಹಾಗೆ ಮಾತನಾಡುತ್ತಿದ್ದ. ಅವನ ಮನೆ ಎದುರು ಕಲ್ಲಾಪುರಕ್ಕೆ ಹೋಗುವ ಮುಖ್ಯ ರಸ್ತೆ ಇತ್ತು. ಆ ರಸ್ತೆಯ ಮೇಲೆಯೇ ಒಂದು ಅಂಚಿಗೆ ಬೀದಿ ದೀಪದ ವಿದ್ಯುತ್ ಕಂಬವೂ ಇತ್ತು.

ಆ ಲೈಟ್ ಕಂಬವೇ ಈ ಕಥೆಯ ಮೂಲ. ಲೈಟ್ ಕಂಬ ಮನೆ ಪಕ್ಕವೇ ಇದ್ದಿದ್ದರಿಂದ ಕಲ್ಲಣ್ಣನಿಗೆ ಬಹಳ ಉಪಯೋಗ ಇತ್ತು. ತನ್ನ ಪಾಲಿಗೆ ಬಂದ ಒಂದು ಆಕಳನ್ನು ಆ ಕಂಬಕ್ಕೆ ದಿನಾ ಕಟ್ಟತ್ತಿದ್ದ ಕಲ್ಲಣ್ಣ. ಸಂಜೆ ಆಗುತ್ತಿದ್ದಂತೆಯೇ ಕೊಕ್ಕೆ ಮಾಡಿದ ಎರಡು ವೈರುಗಳನ್ನು ಬಿದಿರು ಗಳಕ್ಕೆ ಸಿಕ್ಕಿಸಿ ಆ ಕಂಬದಿಂದ ವಿದ್ಯುತ್ ಕದಿಯುತ್ತಿದ್ದ.

ಅದು ಊರ ಹೊರಗಿನ ಮನೆಯಾಗಿದ್ದರಿಂದ ಊರಿನ ಹೆಣ್ಣಮಕ್ಕಳೆಲ್ಲ ಕತ್ತಲಾಗುತ್ತಲೇ ಕೈಯಲ್ಲಿ ತಂಬಿಗೆ ಹಿಡಿದು ಪಿಸು ಪಿಸು ಮಾಡುತ್ತಾ ಬಯಲು ಶೌಚಕ್ಕೆ ಬರುವ ತಾಣವಾಗಿತ್ತು. ಕಲ್ಲಣ್ಣನ ಹೆಂಡತಿಗೆ ಇದರಿಂದ ಬಹಳ ಕಿರಿಕಿರಿಯಾಗುತ್ತಿತ್ತು. ಸಂಜೆ ಆರರಿಂದ ಕತ್ತಲಾಗುವವರೆಗೆ ಆ ಮನೆ ಸುತ್ತ ಮುತ್ತ ಶೌಚಕ್ಕೆ ಬರುವವರನ್ನು ಕಾಯುವುದೇ ಅವಳಿಗೆ ಒಂದು ಕೆಲಸವಾಗಿತ್ತು.

ಒಂದು ದಿನ ಊರಿಗೆ ಸ್ಥಳೀಯ ಶಾಸಕರು ಬರುವ ಕಾರ್ಯಕ್ರಮ ಇತ್ತು. ಕಲ್ಲಣ್ಣನ ಮನೆಯಿದ್ದ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ಇತ್ತು. ಊರಿಗೆ ಬರುವ ಶಾಸಕರಿಗೂ ಕಲ್ಲಣ್ಣನಿಗೂ ಬಹಳ ವರ್ಷಗಳ ಸಂಬಂಧ. ಆತ್ಮೀಯತೆ ಇರುವುದರಿಂದಲೋ ಏನೋ ಈ ಸುದ್ದಿ ಕಲ್ಲಣ್ಣನ ಮೀಸೆ ನೆಟ್ಟಗಾಗಲು ಒಂದು ನೆಪವಾಗಿತ್ತು.

ಊರಿನ ಜನ ರಸ್ತೆಯ ಪೂಜಾ ಕಾರ್ಯಕ್ಕೆ ಗುದ್ದಲಿ ತಂದು ಇಟ್ಟಿದ್ದರು. ಮುಖ್ಯ ಎಂಜಿನಿಯರ್ ಬಂದು ಯೋಜನೆ ಬಗ್ಗೆ ತನ್ನ ಗುತ್ತಿಗೆದಾರರಿಗೆ ಸಲಹೆ ಕೊಡುತ್ತಿದ್ದ. ‘ನೋಡ್ರೀಪಾ ಈ ರಸ್ತೆ ಮಾಡಬೇಕಂದ್ರ ರಸ್ತೆಯ ಮಧ್ಯದ ಈ ಲೈಟ್ ಕಂಬ ತೆಗೀಬೇಕಾಗ್ತದ’. ಅವರ ಮಾತು ಕಲ್ಲಣ್ಣನ ಹೆಂಡತಿ ವಿಮಲಮ್ಮಳ ಕಿವಿಗೆ ಬಿದ್ದಿದ್ದೇ ತಡ, ತನ್ನ ಮಗ ಸಂಗನಗೌಡನ ಕರೆದು “ಏ ಸಂಗ್ಯಾ… ಲಗೂನನ ಹೋಗಿ ನಿಮ್ಮಪ್ಪನ ಕರೆದ ಬಾರಲಾ…” ಅಂದಳು. “ಬೇ ಎವ್ವಾ ಅಪ್ಪಾ ರಸ್ತೆ ಪೂಜಾ ಮಾಡಾಕ ಗುದ್ದಲಿ ತಗೊಂಡ ಹೋಗ್ಯಾನ ಈಗ ಹೆಂಗ ಬರ್ತಾನು? ಮಗ ಅಂದ.

“ಅಯ್ಯೋ ಅದರ ಹೆಣಾ ಎತ್ಲೀ, ಎಲ್ಲಿ ಹಾಳಾಗಿ ಹೋಗೈತಿ ನೋಡ. ಇಲ್ಲಿ ಮನಿಗೆ ಬೆಂಕಿ ಬಿದ್ದೈತಿ. ಅಂವಾ ಗುದ್ದಲಿ ತಗೊಂಡ ಹೋಗ್ಯಾನಂತ. ಏ ಸಂಗ್ಯಾ ಅವ ಎಲ್ಯಾರ ಇರವಲ್ಯಾಕ ಅವನ್ನ ಲಗೂನ ಕರದ ಬಾ” ಅಂದ್ಲು. ಮಗ ಸಂಗ್ಯಾ ಓಡಿ ಹೋಗಿ “ಏ ಅಪ್ಪಾ ಅವ್ವ ನಿನಗ ಲಗೂನ ಬಾ ಅನ್ನಾತಾಳ. ಮನಿಗೆ ಬೆಂಕಿ ಬಿದೈತಿ ಅಂತೆ’ ಎಂದು ಅಪ್ಪನ ಕಿವಿಯಲ್ಲಿ ಹೇಳಿದ.

ಸುದ್ದಿ ಕೇಳಿ ಕಲ್ಲಣ್ಣ ಬೆಚ್ಚಿ ಬಿದ್ದ. ಆ ಕೂಡಲೇ ಗುದ್ದಲಿ ನೆಲಕ್ಕೆ ಎಸೆದು, ತಲೆಗೆ ಸುತ್ತಿದ್ದ ಟವೆಲ್ ಬಿಚ್ಚಿದವನೆ ಓಡಲು  ಶುರು ಮಾಡಿದ. ಇಡೀ ಮನೆಯೇ ಬೆಂಕಿಗೆ ಆಹುತಿ ಆದರೆ ನನ್ನ ಗತಿ ಏನು ಎಂಬ ಚಿಂತೆ ಕಾಲಿಗೆ ಇನ್ನಷ್ಟು ಬುದ್ದಿ ಹೇಳಿತು. ಓಡೋಡಿ ಬಂದ ಕಲ್ಲಣ್ಣ ತಲೆ ಮೇಲೆ ಕೈ ಇಟ್ಟುಕೊಂಡು ಕಟ್ಟೆ ಮೇಲೆ ಕುಳಿತ. ಹೆಂಡತಿಯ ಮುಖ ನೋಡಿ ಇನ್ನಷ್ಟು ಗಾಬರಿಯಾಗಿದ್ದ.

ಇವನನ್ನ ನೋಡಿದ್ದೆ ತಡ ಹೆಂಡತಿ “ಏನ್ರಿ ಇಷ್ಟ ದಿನ ನಮ್ಮ ಮನಿ ಮುಂದಿನ ಲೈಟ್ ಕಂಬ ನಮ್ಮ ಮನಿ ಕಾಯತ್ತಿತ್ತ. ಇಂದ ರಸ್ತಾ ಮಾಡೋ ನೆಪದಾಗ ಯಾವದೋ ಭಾವಾಗೊಳ ಅದನ್ನ ತಗೆದ ಬ್ಯಾರೆ ಕಡೆ ಹುಗಿತಾರ” ಎಂದಳು. ಇದನ್ನು ಕೇಳಿದ ಕಲ್ಲಣ್ಣ ಸಿಟ್ಟಿನಿಂದ “ಏನಂದಿ? ಆ ಲೈಟ್ ಕಂಬ ಹಿಡಿಯೋ ಧೈರ್ಯ ಯ್ಯಾರಗೇತಿ. ನಾ ಇರೂಗಂಟ ಅದ ಆಗುದಿಲ್ಲ ಬಿಡ’ ಅಂದ.

ಶಾಸಕರು ರಸ್ತೆ ಪೂಜೆಯ ನಂತರ ಕಲ್ಲಣ್ಣನ ಮನೆಗೆ ಬರುವ ಮಾಹಿತಿ ತಿಳಿದಿದ್ದ ಕಲ್ಲಣ್ಣ, ಅವರನ್ನ ಪೂಜೆಗೆ ಮೊದಲೇ ಮನೆಗೆ ಕರೆಯಿಸಬೇಕು ಎಂದು ಕೊರಳಲ್ಲಿದ್ದ ಮೊಬೈಲ್ ತಗೆದು ಬಟನ್ ಒತ್ತಿದನೇ ಕಿವಿಗಿರಿಸಿಕೊಂಡು “ಸಾಹೇಬ್ರ ವಿಮಲವ್ವ ತಣ್ಣನ ಮಜ್ಜಿಗೆ ಮಾಡಿದಾಳ. ಕುಡಕೊಂಡ ಹೋಗುವೀರಿ ಅಂತ. ಮೊದಲ ಮನಿ ಕಡೀಗಿನ ಬರ್ರಲಾ ಅಂದ”. ಶಾಸಕರೂ ಕಲ್ಲಣ್ಣನ ಮಾತು ಮೀರಲಾರದೆ ಆತನ ಮನೆ ಜಗಲಿ ಮೇಲೆ ಕುಳಿತುಕೊಂಡರು.

ತಂಪಾದ ಮಜ್ಜಿಗೆ ಕುಡಿಸಿ ಮಾತಿಗೆಳೆದ ಕಲ್ಲಣ್ಣ “ಸಾಯಬ್ರ ಈ ಲೈಟ ಕಂಬ ಮಾತ್ರ ನನಗ ಇಲ್ಲೇ ಇರಬೇಕ ನೋಡ್ರೀ” ಅಂದ. ಶಾಸಕರು ಆಗಲಿ ಬಿಡೋ ಈರಣ್ಣ ಅಂದರವೇ ಕಣ್ಸನ್ನೆಯಲ್ಲೇ ಏಂಜಿನೀಯರ್‍ನ ಕರೆಯಲು ಸೂಚಿಸಿದರು. “ನೋಡ್ರೀ ಎಂಜಿನಿಯರ್.. ಕಲ್ಲಣ್ಣನ ಮನೀ ಮುಂದಿನ ಈ ಲೈಟ್ ಕಂಬಾ ಇಲ್ಲೇ ಇರಬೇಕ ನೋಡಪಾ” ಅಂದರು.

ಹೆದರಿಕೆಯಿಂದಲೇ ಎಂಜಿನೀಯರ್ರು “ಹಂಗಲ್ರೀ ಸರ್ ಇದ ನಡು ರಸ್ತಾದಾಗ ಐತಿ ಅದಕ್ಕ…’ ಎಂದು ತಡವರಿಸಿದ. ಕೂಡಲೇ ಮಾತು ನಿಲ್ಲಿಸಿದ ಶಾಸಕರು “ಅದ ಅಲ್ಲೇ ಇರಲಿ ಬಿಡಲಾ ನಿನಗೇನ ತೊಂದರಿ ಮಾಡತೈತಿ’ ಅಂದಿದ್ದಕ್ಕೆ ತುಟಿ ಪಿಟಕ್ಕೆನ್ನದೇ ಎಂಜಿನೀಯರ್ ಸುಮ್ಮನಾಗಿದ್ದ. ಕಲ್ಲಣ್ಣ ಮುಖದೊಳಗೆ ಸಣ್ಣ ನಗೆ ಬೀರಿ ಗೆದ್ದ ಹುಮ್ಮಸ್ಸಿನಲ್ಲಿದ್ದ. 

ಈ ಸುದ್ದಿ ಊರೊಳಗಿನ ಒಂದಿಷ್ಟು ಕಿಡಗೇಡಿ ಹುಡುಗರ ಕಿವಿಗೆ ಬಿತ್ತು. ಸಂಜೆ ಮುಸುಕು ಹಾಕೊಂಡು ದಿನಾ ಒಬ್ಬೊಬ್ಬರಂತೆ ಕಂಬದ ಲೈಟಿಗೆ ಕಲ್ಲು ಹೊಡೆದು ಬಲ್ಬ್ ಒಡೆಯುವುದಕ್ಕೆ ಶುರು ಮಾಡಿದರು. ಇದರಿಂದ ಬೇಸತ್ತ ಕಲ್ಲಣ್ಣ ಪಂಚಾಯ್ತಿ ಅಧ್ಯಕ್ಷರಿಗೆ ಹೇಳಿ ಲೈಟ್ ಕಂಬ ಕಾಯುವುದಕ್ಕೆ ಒಬ್ಬ ಹುಡಗನನ್ನ ನೇಮಿಸಿಕೊಂಡ.

ಆ ಹುಡುಗ ಕೇರಿಯವನಾದ್ದರಿಂದ ಮುಂಜಾನೆ, ಸಂಜೆ ಲೈಟ್ ಆನ್ ಮಾಡೋದು, ಆಫ್ ಮಾಡೋದು ಮಾಡುತ್ತಿದ್ದ. ಕಲ್ಲಣ್ಣನ ಹೆಂಡತಿ ವಿಮಲವ್ವ ಮಡಿ ಮೈಲಿಗೆ ನಂಬಿದ್ದ ಹೆಣ್ಣಮಗಳು. ಆ ಕೇರಿ ಹುಡುಗ ಒಂದು ದಿನ ಲೈಟ್ ಬಂದ ಮಾಡಿ ಹೋದವನು ಸಂಜೆ ಜ್ವರ ಬಂದಿದ್ದರಿಂದ ಲೈಟ್ ಆನ್ ಮಾಡಲು ಬರಲೇ ಇಲ್ಲ.

ಇದನ್ನೂ ಓದಿ: ಗೌಡಶ್ಯಾನಿ ಹಿರೇತನ; ಬಡೇಸಾಬರ ಗಡಿಬಿಡಿ

ಹೊತ್ತು ಜಾರುವುದನ್ನೇ ಕಾಯುತ್ತಿದ್ದ ವಿಮಲವ್ವ ಕೇರಿ ಹುಡುಗ ಬರದೇ ಇರುವ ಸುದ್ದಿ ಕೇಳಿ ತಾನೇ ಲೈಟ್ ಹಚ್ಚಲು ಮುಂದಾದಳು. ಕಂಬದ ಕಡೆ ಹೋಗುತ್ತಿದ್ದಂತೆಯೇ ಆಕೆ ತಲೆಯಲ್ಲಿ ಒಂದು ವಿಚಾರ ಹೊಳೆಯಿತು. ಕೇರಿ ಹುಡುಗ ಮುಟ್ಟಿದ ಲೈಟ್ ಕಂಬ ಮತ್ತು ಈ ಬಟನ್ ತಾನು ಮುಟ್ಟಬೇಕಾಗುತ್ತದಲ್ಲ ಎಂದುಕೊಂಡು ಒಂದ ತಂಬಿಗೆ ನೀರು ತಂದು ಅದಕ್ಕೆ ಸ್ವಲ್ಪ ಗೋ ಮೂತ್ರ ಹಾಕಿ ಕಂಬದ ಬುಡ ಮತ್ತು ಬಟನ್ ಮೇಲೆ ಎರಚಿದಳು.

ಬಳಿಕ ಬಟನ್ ಚಾಲೂ ಮಾಡಲು ಕೈ ಹಾಕಿದ ವಿಮಲವ್ವಳಿಗೆ ಗರ್ರ… ಅಂತ ಕರೆಂಟ್ ಹೊಡೆದು ಗಟಾರದಲ್ಲಿ ದೊಪ್ಪಂತ ಬಿದ್ದಳು. ಆಕೆಯ ಪುಣ್ಯ ಆ ದಿನ ಬಯಲು ಶೌಚಕ್ಕೆ ಬಂದ ಹೆಣ್ಣಮಕ್ಕಳು ಓಡಿ ಬಂದು ವಿಮಲವ್ವನನ್ನ ಸರಕಾರಿ ಆಸ್ಪತ್ರೆ ಸೇರಿಸಿದ್ರು. 

ಇದನ್ನೂ ಓದಿ: ಸಂಗ್ಯಾ ಬಾಳ್ಯಾ ಹಾಡು ಹೇಳಿ ಸಿಕ್ಕಾಕೊಂಡ ಗಡ್ಡದ ಸ್ವಾಮಿ

ತುಂಬಾ ಗಾಢವಾಗಿ ಕರೆಂಟ ಹೊಡೆದ ಪರಿಣಾಮ ವಿಮಲವ್ವಳ ಬಲಗೈ ಊಣವಾಗಿತ್ತು. ಊರಲ್ಲಿನ ಜನ ವಿಮಲವ್ವಳನ್ನ ನೋಡಲು ಬರುವುದಕ್ಕೆ ಶುರು ಮಾಡಿದರು. ಸುದ್ದಿ ತಿಳಿದ ಕಲ್ಲಣ್ಣ ಗಾಬರಿಯಾ ಓಡಿ ಬಂದು ಹೆಂಡತಿ ಸ್ಥಿತಿ ನೋಡಿ ಜರ್ಜರಿತನಾಗಿ ಹೋದನು. ಆತನಿಗೆ ತನ್ನ ತಪ್ಪಿನ ಅರಿವಾಗಿತ್ತು. ಕೂಡಲೇ ಶಾಸಕರಿಗೆ ಫೋನಾಯಿಸಿ ಲೈಟ್ ಕಂಬ ತೆಗೆಯಲು ಮನವಿ ಮಾಡಿಕೊಂಡ. ವಿಮಲವ್ವ ಮನೆಗೆ ಬಂದ ಕೂಡಲೇ ಲೈಟ್ ಇಲ್ಲದ ಮನೆ ನೋಡಿ ಹಳಹಳಿಸಿದಳು. ಜಾತಿ ಕರೆಂಟ್ ಹೊಡೆಸಿಕೊಂಡಿದ್ದು ನೆನಪಾಗಿ ಬುದ್ದಿ ಕಲಿತಳು.

ಬರಹ: ವಿನೋದ ಪಾಟೀಲ,
ಚಿಕ್ಕಬಾಗೇವಾಡಿ. ಬೈಲಹೊಂಗಲ.