ಮಾನವ ತ್ಯಾಜ್ಯದಿಂದ ಗೊಬ್ಬರ; 2.5 ಎಕರೆಯಲ್ಲಿ 12 ಲಕ್ಷ ರೂ. ಆದಾಯ

ದನಗಳ ಸಗಣಿ, ಸೊಪ್ಪು ಬಳಸಿ ಗೊಬ್ಬರ, ಗ್ಯಾಸ್ ತಯಾರಿಸುವವರು ಸಾಕಷ್ಟಿದ್ದಾರೆ. ಆದರೆ, ಮಾನವ ತ್ಯಾಜ್ಯ ಬಳಸಿಯೂ ಗೊಬ್ಬರ, ಗ್ಯಾಸ್ ತಯಾರಿಸುವ ಜತೆಗೆ ಲಕ್ಷಾಂತರ ಆದಾಯ ಗಳಿಸಬಹುದು.
ಇಲ್ಲೊಬ್ಬ ಯುವ ರೈತ ಅದನ್ನು ಸಾಬೀತು ಮಾಡಿದ್ದಾರೆ. ಶೌಚಾಲಯದ ಅನಿಲ ಹುಟ್ಟುಹಾಕಬಲ್ಲ ಮಾನಸಿಕ ತಡೆ, ಸಾಮಾಜಿಕ ಸಮಸ್ಯೆಗಳು ಎಲ್ಲವನ್ನೂ ಪರಿಹರಿಸಿ ಅದನ್ನು ಕೃಷಿ ಅಭಿವೃದ್ಧಿಗಾಗಿ ಬಳಸುತ್ತಿರುವ ಆ ಯುವ ರೈತ ಕೇವಲ 2.5 ಎಕರೆಯಲ್ಲಿ 12 ಲಕ್ಷ ರೂ. ಆದಾಯ ಪಡೆಯುವ ಕಲೆಯನ್ನೂ ಹೇಳಿಕೊಡುತ್ತಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದ ಯುವ ಕೃಷಿಕ ದಯಾನಂದ ಅಪ್ಪಯ್ಯನವರಮಠ ಈ ಸಾಧಕ. 2.5 ಎಕರೆ ಜಮೀನಿನಲ್ಲಿ ಗೊಬ್ಬರ ತಯಾರಿಕೆ, ಜೇನು, ಮಿಶ್ರ ಬೆಳೆಯ ಮೂಲಕ ವರ್ಷಕ್ಕೆ 12 ಲಕ್ಷ ರೂ. ನೇರ ಲಾಭ ಗಳಿಸುತ್ತಾರೆ. ಈ ಮಾದರಿ ರೈತ ಕೃಷಿಯಲ್ಲಿ ಬೆಳೆದು ಬಂದ ಹಾದಿಯೇ ರೋಚಕ.
ನೌಕರಿ ಬಿಟ್ಟು ಕೃಷಿಕನಾದ

ಫೈನ್ ಆರ್ಟ್ ಪದವಿ ಪಡೆದಿರುವ ದಯಾನಂದ ಅವರು ಸೇಲಂ ಮೂಲದ ಆರೋಗ್ಯ ಮಿಲ್ಕ ಪ್ರೊಕ್ಯೂರ್ ಮೆಂಟ್ ಆಫೀಸರ್ ಆಗಿ ಬೆಳಗಾವಿಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದರು. ನೌಕರಿಯಿಂದ ಬೇಸತ್ತು ಕೃಷಿ ಮಾಡಲು ಆಸಕ್ತರಾದ ಅವರಿಗೆ ಆರಂಭ ಅಷ್ಟು ಸುಲಭವಾಗಿರಲಿಲ್ಲ. ಸುತ್ತಲಿನ 15-20 ಕುಟುಂಬಗಳು ಶೌಚಕ್ಕೆ ಇವರ ಮನೆ ಪಕ್ಕದ ಹೊಲದ ದಂಡೆಯನ್ನೇ ಆಶ್ರಯಿಸಿದ್ದರು. ಇದರಿಂದಾಗಿ ದಂಡೆಯ ನಾಲ್ಕು ಗುಂಟೆಯಷ್ಟು ಜಮೀನು ಕೃಷಿಕಾರ್ಯ ಬಿಡಿ, ಓಡಾಡಲೂ ಆಗದಷ್ಟು ಕೊಳಕಾಗುತ್ತಿತ್ತು.
ಅದಕ್ಕೆ ಮನೆಯ ಪಕ್ಕದಲ್ಲಿಯೇ ನಾಲ್ಕು ಸ್ವಯಂ ಸೇವಾ ನಿರ್ವಹಣೆ ಶೌಚಾಲಯ ನಿರ್ಮಿಸಿದರು. ಅದಕ್ಕೆ ಒಟ್ಟು 2.10 ಲಕ್ಷ ರೂ. ವೆಚ್ಚವಾಯಿತು. ಆರಂಭದಲ್ಲಿ ಶೌಚಾಲಯ ಬಳಸಲು ಜನರು ಹಿಂದೇಟು ಹಾಕಿದರು. ಕ್ರಮೇಣ ಈಗ ಎಲ್ಲರೂ ಶೌಚಾಲಯ ಬಳಸುತ್ತಿದ್ದಾರೆ. ಆ ಶೌಚಾಲಯದಲ್ಲಿ ಉತ್ಪತ್ತಿಯಾಗುವ ಮಾನವ ತ್ಯಾಜ್ಯವನ್ನೇ ಗೊಬ್ಬರವಾಗಿ ಮಾರ್ಪಡಿಸಿದರು.
ಈಗ ಕುಟುಂಬದ ಶೌಚಾಲಯವನ್ನು ಸಹ ಗೋಬರ್ ಪ್ಲಾಂಟ್ ಗೆ ಜೋಡಿಸಿದ್ದಾರೆ. ಪ್ಲಾಂಟ್ ಗೆ ಪ್ರತಿದಿನ ಎರಡು ಬುಟ್ಟಿ (ಅಂದಾಜು 20 ಕಿಲೋ) ಸಗಣಿ ನೀರನ್ನು ಮಿಶ್ರಣ ಮಾಡಿ ಸೇರಿಸುವುದರಿಂದ ಯಾವುದೇ ದುರ್ವಾಸನೆ ಬರುವುದಿಲ್ಲ. ಇದರಿಂದ ದಿನಕ್ಕೆ 20 – 22 ಕಿಲೋ ಮಿಥೇನ್ ಗ್ಯಾಸ್ ಸಿಗುತ್ತದೆ.
ಅಲ್ಲದೆ, ಎರೆಹುಳು ಗೊಬ್ಬರ, ಕಾಂಪೋಸ್ಟ್ ತಯಾರಿಸುತ್ತಾರೆ. ವರ್ಷಕ್ಕೆ 50-70 ಬುಟ್ಟಿ ಗೊಬ್ಬರ, ಅಷ್ಟೇ ಪ್ರಮಾಣದ ಕಾಂಪೋಸ್ಟ್ ಸಿಗುತ್ತದೆ ಎನ್ನುತ್ತಾರೆ ದಯಾನಂದ. ಜೀವಸಾರ ಘಟಕದೊಂದಿಗೆ – ಬಯೋಡೈಜೆಸ್ಟರ್ – ಜೋಡಿಸಿ ದೊರೆಯುವ ಸಾರವನ್ನು ಮೋಟಾರ್ ಬಳಸಿ ಹನಿ ನೀರಾವರಿ ಮೂಲಕ ಬೆಳೆಗಳಿಗೆ ಒದಗಿಸುತ್ತಾರೆ. ಆ ಮೋಟಾರು ಸಹ ಅವರು ತಯಾರಿಸುವ ಗ್ಯಾಸ್‌ನಿಂದಲೇ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಶೇ. 20 ಡಿಸೆಲ್ ಹಾಕಿದರೆ ಸಾಕು.

ಇಷ್ಟೆಲ್ಲ ಆಗುತ್ತಿರುವಾಗ ಸಹಜವಾಗಿ ಜನರಿಂದ ಆಕ್ಷೇಪ, ಅವಮಾನ, ಪ್ರಶ್ನೆಗಳು ಎದುರಾದವು. ಮಾನವ ತ್ಯಾಜ್ಯದಿಂದ ತಯಾರಿಸಿದ ಗ್ಯಾಸ್ ಅಡುಗೆ ಮಾಡಲು ಬಳಸುತ್ತಿರುವುದಕ್ಕೆ ನಿಂದನೆಗಳು, ವಾದಗಳನ್ನು ದಯಾನಂದ ಎದುರಿಸಬೇಕಾಯಿತು.
ಈಗ ಅವರ ಯಶಸ್ಸು ಕಂಡು ಸುತ್ತಲಿನ ರೈತರೆಲ್ಲ ಬೆರಗಾಗಿದ್ದಾರೆ. ಒಂದಷ್ಟು ಜನರಿಗೂ ಮಾನವ ತ್ಯಾಜ್ಯ ಬಳಸುವ ಗೋಬರ್ ಗ್ಯಾಸ್ ಪ್ಲಾಂಟ್ ತಯಾರಿಸಿಕೊಟ್ಟಿದ್ದಾರೆ. ಹಿಂದೆ ಇದ್ದ ಪ್ರಶ್ನೆಗಳ ಬದಲು ಈಗ ಹೊಗಳಿಕೆಗಳು ಬರುತ್ತಿವೆ. ರಾಜ್ಯ ಮಟ್ಟದ ಸಾಕಷ್ಟು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಗೋಬರ್ ಗ್ಯಾಸ್ ಅವರ ವಿದ್ಯುತ್ ಬಳಕೆಯ ಶೇ. 90 ರಷ್ಟು ಅನಿವಾರ್ಯತೆಯನ್ನು ನೀಗಿಸಿದೆ.
2.5 ಎಕರೆಯಲ್ಲಿ 12 ಲಕ್ಷ ಆದಾಯ
ದಯಾನಂದ ಅವರ ಮನೆಯಿಂದ ಸುಮಾರು 600 ಮೀ. ದೂರದಲ್ಲಿ ಅವರ 2.5 ಎಕರೆ ಹೊಲ ಇದೆ. ಮನೆಯ ಪಕ್ಕದ ಸ್ವಲ್ಪ ಜಮೀನಿನಲ್ಲಿ ಚಿಕ್ಕು, ನುಗ್ಗೆ ಬೆಳೆಸಿದ್ದಾರೆ. ಅಲ್ಲಿಯೇ ಜೇನು ಕೃಷಿಯನ್ನೂ ನಡೆಸುತ್ತಾರೆ. ಈ ಜೇನು ಕೃಷಿಗೂ ಹೊಲದ ಕೃಷಿಗೂ ಅವಿನಾಭಾವ ಸಂಬಂಧ ಇದೆ ಎನ್ನುತ್ತಾರೆ ದಯಾನಂದ.
ಕಡಿಮೆ ಜಾಗದಲ್ಲಿ ಅಧಿಕ ಲಾಭ ಪಡೆಯಲು ದಯಾನಂದ ಅವರು ಹೇಳುವ ತಂತ್ರವೇನೆಂದರೆ, 2.5 ಎಕರೆ ಹೊಲದಲ್ಲಿ ನಾಲ್ಕು ಅಡಿ ಅಂತರದಲ್ಲಿ ಮಣ್ಣಿನ ದಿಬ್ಬದ ಸಾಲು ಮಾಡಬೇಕು. ದಿಬ್ಬದ ಕೆಳಗೆ ಕಬ್ಬು ನಾಟಿ ಮಾಡಬೇಕು. ಅದರ ಮಧ್ಯ ಕಲ್ಲಂಗಡಿ ನೆಡಬೇಕು. ದಿಬ್ಬದ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿ ರಂದ್ರ ಮಾಡಿ ಒಂದು ಸಾಲಿನಲ್ಲಿ ಬೀಟರೂಟ್ ಮತ್ತೊಂದು ಸಾಲಿನಲ್ಲಿ ಮೆಣಸು ನಾಟಿ ಮಾಡಬೇಕು. ದಿಬ್ಬದ ಮೇಲೆ ಹನಿ ನೀರಾವರಿ ಒಂದು ಪೈಪ್ ಅಳವಡಿಸಿದರೆ ಸಾಕು. ಕಬ್ಬು ಸೇರಿ ಎಲ್ಲ ಬೆಳೆಗೂ ಅಷ್ಟು ನೀರು ಸಾಕಾಗುತ್ತದೆ.

ನಾಟಿ ಮಾಡಿದ 45ನೇ ದಿನಕ್ಕೆ ಬೀಟರೂಟ್ ಕಟಾವಿಗೆ ಬರುತ್ತದೆ. ಮೊದಲ ಆದಾಯ ಇಲ್ಲಿಂದಲೇ ಶುರುವಾಗುತ್ತದೆ. ಒಟ್ಟಾರೆ ಕೃಷಿಯ ಖರ್ಚು ಬೀಟರೂಟ್ ನಿಂದ ಬಂದ ಹಣದಲ್ಲಿ ಸರಿ ಹೋಗುತ್ತದೆ.
ಈ ವೇಳೆಗೆ ಕಬ್ಬು ಸುಮಾರು 2 ಅಡಿ ಬೆಳೆದಿರುತ್ತದೆ. ಅದರ ನೆರಳು ಮೆಣಸಿನ ಗಿಡದ ಮೇಲೆ ಬೀಳುವುದರಿಂದ ಮೆಣಸಿಗೆ ರೋಗ ಬರುವುದಿಲ್ಲ. 60ನೇ ದಿನಕ್ಕೆ ಕಲ್ಲಂಗಡಿ ಹಣ್ಣು ಬೆಳೆಯುತ್ತದೆ. ಸುಮಾರು 3 ಲಕ್ಷ ರೂ. ಬೆಲೆಯ ಬೆಳೆ ಕೈ ಸೇರುತ್ತದೆ. ಅದರ ಜತೆಯಲ್ಲಿಯೇ 65ನೇ ದಿನಕ್ಕೆ ಮೆಣಸು ಕಟಾವಿಗೆ ಬರುತ್ತದೆ. ಐದೂವರೆ ತಿಂಗಳವರೆಗೆ ಮೆಣಸಿನ ಫಸಲು ಪಡೆಯಬಹುದು. ಸುಮಾರು ಒಂದು ಲಕ್ಷ ರೂ. ಅದರಿಂದಲೇ ಗಳಿಸಬಹುದು.
ಕೊನೆಯಲ್ಲಿ ಕಬ್ಬು ಕನಿಷ್ಠ 75 ಟನ್ ಆದರೂ ಕೈಸೇರುತ್ತದೆ. ಇದರ ಜತೆಗೆ ಈ ಎಲ್ಲ ಬೆಳೆಗಳು ಹೂ ಬಿಡುವಾಗ ಜೇನುಗಳು ಮಕರಂದ ಹೀರಿ ಜೇನು ಸಂಗ್ರಹಿಸುತ್ತವೆ. ಅದರಿಂದ ಪರಿಸರ ಜೀವ ಚಕ್ರ ನಡೆದು ಬೆಳೆಯೂ ಚೆನ್ನಾಗಿ ಬೆಳೆಯುತ್ತದೆ. ಜೇನು ಚೆನ್ನಾಗಿ ಸಿಗುತ್ತದೆ. ಸಣ್ಣ ನುಸಿಗಳ ಕಾಟ ತಪ್ಪಿಸಲು ಹಳದಿ ಬಣ್ಣದ ಅಂಟು ಹಾಳೆಗಳನ್ನು ಅಲ್ಲಲ್ಲಿ ನಿಲ್ಲಿಸಿದರೆ ಆಯಿತು. ಈ ರೀತಿಯ ಮಿಶ್ರ ಕೃಷಿಗೆ ಕೆಲಸಗಾರರ ಅಗತ್ಯವೂ ಬೇಕಾಗಿಲ್ಲ.

Trackbacks/Pingbacks