“ಫೇಸ್ ಬುಕ್ ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂ.1, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಂ.2. ಎಂದು ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ತಿಳಿಸಿದ್ದಾರೆ’ ಎನ್ನುವ ಟ್ರಂಪ್ ಅವರ ಟ್ವೀಟ್ ಜಗತ್ತನ್ನೇ ನಿಬ್ಬೆರಗಾಗಿಸಿದೆ.

ಭಾರತ ಭೇಟಿ ಹಿನ್ನೆಲೆಯಲ್ಲಿ ಟ್ರಂಪ್ ಈ ರೀತಿ ಟ್ವೀಟ್ ಮಾಡಿದ್ದು, ವಿವಾದದೊಳಗೆ ಸಿಲುಕಿದ್ದಾರೆ. ಅಲ್ಲದೆ ಅವರ ಟ್ವೀಟ್ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಹಾಗಿದ್ದರೆ ಫೇಸ್ ಬುಕ್ ನಲ್ಲಿ ಡೊನಾಲ್ಡ್ ಟ್ರಂಪ್ ನಿಜವಾಗಿಯೂ ನಂ.1 ಸ್ಥಾನದಲ್ಲಿ ಇದ್ದಾರಾ?  ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನದಲ್ಲಿ ಇರುವುದು ನಿಜವೇ? ಜಗತ್ತಿನಲ್ಲಿ ಅತಿ ಹೆಚ್ಚು ಜನರು ಹಿಂಬಾಲಿಸುತ್ತಿರುವ ಫೇಸ್ ಬುಕ್ ಖಾತೆ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

https://twitter.com/realDonaldTrump/status/1228463577335554049

ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಕುರಿತು ತನಿಖೆ ಮಾಡಿದಾಗ ಟ್ರಂಪ್ ಮತ್ತು ಮೋದಿ ಇವರಲ್ಲಿ ಯಾರೂ ಫೇಸ್ ಬುಕ್ ನಲ್ಲಿ ನಂ.1 ಅಲ್ಲವೇ ಅಲ್ಲ. ಇವರಿಗಿಂತ ಹತ್ತು ಪಟ್ಟು ಹೆಚ್ಚು ಪ್ರಸಿದ್ಧ ಖಾತೆ ಫೇಸ್ ಬುಕ್ ನಲ್ಲಿದೆ.  ನಂ.1 ಸ್ಥಾನದಲ್ಲಿರುವ ಆ ವ್ಯಕ್ತಿ ಯಾರು ಎನ್ನುವುದನ್ನು ನಂತರ ನೋಡೋಣ. ಅದಕ್ಕಿಂತ ಮೊದಲು ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ನ ಸತ್ಯ ಪರಿಶೀಲಿಸೋಣ.

ವಾಸ್ತವ ತನಿಖೆ:
ಟ್ರಂಪ್ ಅವರು ಫೇಸ್ ಬುಕ್ ನಲ್ಲಿ ತಾವೇ ನಂ.1 ಎಂದು ಫೆ.15ರಂದು ಭಾರತೀಯ ಕಾಲಮಾನ ಸಂಜೆ 5ಕ್ಕೆ ಟ್ವೀಟ್ ಮಾಡಿದ್ದಾರೆ. ಆ ಪ್ರಕಾರ ಅವರ ಫೇಸ್ ಬುಕ್ ಖಾತೆ ಪರಿಶೀಲಿಸಿದಾಗ 2.59 ಕೋಟಿ ಜನರು ಟ್ರಂಪ್ ಅವರ ಖಾತೆ ಲೈಕ್ ಮಾಡಿದ್ದಾರೆ. 4.46 ಕೋಟಿ ಜನರು ನರೇಂದ್ರ ಮೋದಿ ಅವರ ಫೇಸ್ ಬುಕ್ ಖಾತೆಯನ್ನು ಲೈಕ್ ಮಾಡಿದ್ದಾರೆ. ಅದರ ಪ್ರಕಾರ ಟ್ರಂಪ್ ಅವರಿಗಿಂತ ನರೇಂದ್ರ ಮೋದಿ ಅವರೇ ಫೇಸ್ ಬುಕ್ ನಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ.

ನಂ.1 ಯಾರು?
ಫೇಸ್ ಬುಕ್, ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣಗಳ ಸಮೀಕ್ಷೆ ನಡೆಸುವ www.socialbakers.com ತ್ರಾಂಶವನ್ನು ಪರಿಶೀಲಿಸಿದಾಗ ಫುಟ್ ಬಾಲ್ ಆಟಗಾರ ಕ್ರಿಸ್ಟಿನೊ ರೊನಾಲ್ಡೊ ಫೇಸ್ ಬುಕ್ ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ. 12.24 ಕೋಟಿ ಜನರು ಅವರ ಖಾತೆಯನ್ನು ಲೈಕ್ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಕೂಡ ಇದೇ ರೀತಿಯ ಸರ್ವೆ ಮೂಲಕ ಸತ್ಯಾಂಶ ಬಯಲು ಮಾಡಿದೆ.