ದಕ್ಷಿಣ ಭಾರತದಲ್ಲಿ ಎಲ್ಲಿಯೇ ಹೋದರು ತೆಂಗಿನ ಮರಗಳು ಕಾಣುತ್ತೇವೆ. ಭಾರತದಲ್ಲಿ ತೆಂಗಿನ ಮರಕ್ಕೆ ಕಲ್ಪವೃಕ್ಷ ಎಂದು ಕರೆಯುತ್ತೇವೆ. ತೆಂಗು ಅಷ್ಟು ಪವಿತ್ರ ಮತ್ತು ಶ್ರೇಷ್ಠ ಎನ್ನುವ ಭಾವನೆ ಇದೆ. ಆ ತೆಂಗಿನ ಮೂಲದ ಬಗ್ಗೆ ತಿಳಿಯಲು ಹೋದರೆ ಆಶ್ಚರ್ಯ ಎನಿಸುತ್ತದೆ.
ಥೈಲೆಂಡ್ ಮೂಲದ್ದು ಎಂದು ನಂಬಲಾದ ತೆಂಗು ನಮ್ಮ ದೇಶದ ದಕ್ಷಿಣ ಭಾರತೀಯರ ಬದುಕಿಗೆ ಆಸರೆ. ದೇವಸ್ಥಾನದಲ್ಲಿ ತೆಂಗಿನ ಕಾಯಿ ಇಟ್ಟು ಪೂಜೆ ಮಾಡುವ ಸಂಪ್ರದಾಯ ಹಿಂದೂ ಧರ್ಮದಲ್ಲಿ ರೂಢಿಯಾಗಿದೆ. ಬಯಲು ಸೀಮೆ, ಮಲೆನಾಡು, ಕರಾವಳಿ ಎಲ್ಲಾ ಕಡೆ ಬೆಳೆಯುವ ಏಕೈಕ ಬೆಳೆ ತೆಂಗು ಎಂದರೆ ತಪ್ಪಾಗಲಾರದು.
ಪ್ರವಾಸಿಗರಾದ ಮಾರ್ಕೋಫೋಲೋ, ಬುಕಾನನ್ ಮುಂತಾದವರು ತಮ್ಮ ಅನುಭವ ಕಥನದಲ್ಲಿ ತೆಂಗಿನ ಮರದ ಎಳನೀರಿನ ಕುರಿತು ಪ್ರಸ್ತಾಪಿಸಿದ್ದಾರೆ. ಚಾರ್ಲ್ಸ್ ಡಾರ್ವಿನ್ ಬೆಳ್ಳಂ ಬೆಳಿಗ್ಗೆ ತಂಪು ಹೊತ್ತಿನಲ್ಲಿ ತಂಪಾಗಿ ಎಳನೀರು ಕುಡಿದರೆ ಅದರ ಮಹತ್ವ ಏನೆಂಬುದು ಗೊತ್ತಾಗುತ್ತದೆ’ ಎಂದಿದ್ದಾನೆ.
ತೆಂಗಿನ ಮರ ಹಲವಾರು ಬೇಡಿಕೆಗಳನ್ನು ಈಡೇರುತ್ತದೆ. ಆಹಾರ, ಪಾನೀಯ, ಇಂಧನ, ಎಣ್ಣೆ, ಕಾರ್ಪೆಟ್, ಹಾಸಿಗೆ, ಸೂರು… ಹೀಗೆ ಮನುಷ್ಯನ ಹಲವಾರು ಬೇಡಿಕೆಗಳನ್ನು ಪೂರೈಸುತ್ತದೆ. ಆ ಎಳೆ ನೀರಿಯಲ್ಲಿಯೂ ಅನೇಕ ತಳಿಗಳು ಇವೆ.
ತಿಪಟೂರು ಟಾಲ್, ಗಂಗಾಪಾಣಿ, ಚೌಗಾಟ್ ಹಳದಿ ಗಿಡ್ಡ ತಳಿ, ಚೌಗಾಟ್ ಹಸಿರು, ಶ್ರೀಲಂಕಾ ಗೋಲ್ಡನ್ ಕಿಂಗ್, ಮಲೇಷಿಯನ್ ಹಸಿರು ಗಿಡ್ಡ ತಳಿ, ಮಲೇಷಿಯನ್ ಕೆಂಪು ಗಿಡ್ಡ ತಳಿ, ಮಲೇಷಿಯನ್ ಟಾಲ್ ಹೀಗೆ ದೊಡ್ಡ ಪಟ್ಟಿ ಸಿಗುತ್ತದೆ.

ತೆಂಗಿನ ಕಾಯಿ ಬೆಳೆಯುವ ಪರಿ ಹೇಗೆ?
ತೆಂಗಿನ ಮರ ಪ್ರತಿ ತಿಂಗಳು ಗರ್ಭ ಕಟ್ಟುತ್ತದೆ. ಪ್ರತಿ ತಿಂಗಳು ಹೆರುತ್ತದೆ. ಸರಿಯಾರಿ ಹನ್ನೆರಡು ತಿಂಗಳಿಗೆ ಗೊನೆ ಕೊಯ್ಲಿಗೆ ಬರುತ್ತದೆ. ಅದಕ್ಕಾಗಿಯೇ ತೆಂಗಿನ ಮರಕ್ಕೆ “ಸದಾ ತಾಯಿ” ಎನ್ನುವ ಹೆಸರಿದೆ. ಹೂ ಬಿಟ್ಟ ಆರು ತಿಂಗಳಿಗೆ ಎಳನೀರು ರೂಪ ಪಡೆಯುತ್ತದೆ. 180 ರಿಂದ 220 ದಿನಗಳ ವರೆಗಿನ ಎಳನೀರು ಕುಡಿಯಲು ಯೋಗ್ಯವಾಗಿರುತ್ತದೆ. ಎಳನೀರನ್ನು ಕುರುಬು (ತೀರಾ ಎಳೆಯದು), ಹದವಾದದ್ದು (ಪೇಪರ್ ಗಂಜಿ), ದೋಸೆಯಷ್ಟು ದಪ್ಪ ಎಳೆಗಾಯಿ ಸಿಗುವ ಬಲಿತ ಎಳನೀರು- ಹೀಗೆ ಮೂರು ವಿಧದಲ್ಲಿ ಕೊಯ್ಲು ಮಾಡುತ್ತಾರೆ.
ತೆಂಗಿನಕಾಯಿಯನ್ನು ವರ್ಷಕ್ಕೆ ನಾಲ್ಕು ಬಾರಿ ಮಾತ್ರ ಕೊಯ್ಲು ಮಾಡಬಹುದು. ಎಳನೀರನ್ನು ಆರು ಬಾರಿ ಕೊಯ್ಲು ಮಾಡಬಹುದು. ಎಳನೀರು ಮಾರುವುದರಿಂದ ತೆಂಗಿನ ಮರದಲ್ಲಿ ಕಾಯಿ ಕಚ್ಚುವ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಎಳನೀರು ಮಾರಾಟಕ್ಕಿಳಿದರೆ ಏಳು ತಿಂಗಳಿಗೆ ಹಣ ರೈತರ ಕೈ ಸೇರುತ್ತದೆ. ಆದೇ ಕೊಬ್ಬರಿ ಮಾರಿದರೆ 20 ರಿಂದ 22 ತಿಂಗಳವರೆಗೆ ಕಾಯಬೇಕು. ಸದ್ಯದ ಎಳನೀರು ಮಾರುಕಟ್ಟೆಯಲ್ಲಿ 25ರಿಂದ 30 ರೂ ಆಗಿದೆ. ತೆಂಗಿನಕಾಯಿ ದರ ಸಹ ಇಷ್ಟೇ ಆಗಿದೆ. ಇತ್ತೀಚೆಗಂತೂ ಎಳನೀರು ಬೇಡಿಕೆ ಹೆಚ್ಚಾಗಿದ್ದರಿಂದ ತೆಂಗಿನಕಾಯಿ ಕೊರತೆ ಸೃಷ್ಟಿಯಾಗಿ ದರ ಏರಿದೆ.

ಔಷಧಿಯ ಗುಣ:
ಎಳನೀರು ಅಮೃತಕ್ಕೆ ಸಮಾನ ಎನ್ನುವ ಮಾತಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಿಶ್ಯಕ್ತರಾದ ಸೈನಿಕರ ರಕ್ತದ ಧಮನಿಗೆ ನೇರವಾಗಿ ಸೇರಿಸಿದ್ದರು ಎಂದು ಉಲ್ಲೇಖ ಇದೆ. ಕಾರಣ ಎಳ ನೀರಿನಲ್ಲಿರುವ ಗ್ಲುಕೋಸ್ ಅಂಶ.
ವೃದ್ಧರು, ರೋಗಿಗಳಿಗೆ ಹೊಸ ಚೈತನ್ಯ ನೀಡುವ ಶಕ್ತಿ ಎಳನೀರಿಗೆ ಇದೆ. ಶಿಶುವಿಗೆ ಭೇದಿಯಾದಾಗ ಎಳನೀರು ಕುಡಿಸಿದರೆ ಗುಣವಾಗುತ್ತದೆ. ನಿರ್ಜಲೀಕರಣಕ್ಕೆ ಇದು ಮದ್ದು. ಬೆಳವಣಿಗೆಗೆ ಪೂರಕವಾದ ಹಾರ್ಮೋನುಗಳನ್ನು ಇದು ಒದಗಿಸುತ್ತದೆ. ಬೇಸಿಗೆಯಲ್ಲಿ ಶರೀರಕ್ಕೆ ತಂಪು ನೀಡಿ ದೇಹದ ಸಮತೋಲನ ಕಾಪಾಡುವಲ್ಲಿ ಎಳನೀರು ಸಹಕಾರಿ. ಎಳನೀರಿನಲ್ಲಿರುವ ವಿಶೇಷ ಪೋಷಕಾಂಶಗಳಾದ ಅಲ್ಬಮಿನ್ ಮತ್ತು ಸಾಲಿನ್ ಕಾಲರಾ ರೋಗಕ್ಕೆ ಹೇಳಿ ಮಾಡಿಸಿದ ಔಷಧಿ.
ಡಿಹೈಡ್ರೇಷನ್ ಮತ್ತು ಗ್ಯಾಸ್ಟ್ರಿಕ್‍ಗೆ ಎಳನೀರು ಔಷಧಿಯಂತೆ ಕೆಲಸ ಮಾಡುತ್ತದೆ. ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಬಯೋಲಿಸಿಸ್ ಚಿಕಿತ್ಸಾ ವಿಧಾನಕ್ಕೆ ಎಳನೀರು ಅತಿಮುಖ್ಯ. ಎಳನೀರಿನಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಮೆಗ್ನಿಶಿಯಂ, ಫಾಸ್ಪರಸ್, ಕಬ್ಬಿಣ ಮತ್ತು ತಾಮ್ರದ ಅಂಶಗಳಿರುತ್ತವೆ. ಈ ಕಾರಣದಿಂದ ಎಳನೀರನ್ನು ರಕ್ತಕ್ಕೆ ಸಮನಾದ ಜೀವದ್ರವ ಎನ್ನುತ್ತಾರೆ.
ಇದೇ ಎಳೆ ತೆಂಗಿನ ಕಾಯಿಯ ಚಿಪ್ಪನ್ನು ತಾಮ್ರದ ಮೇಲೆ ಇಟ್ಟು ಸುಟ್ಟು ಅದರಿಂದ ಬರುವ ಎಣ್ಣೆಯನ್ನು ಗಾಯಕ್ಕೆ ಹಚ್ಚಿದರೆ ಬೇಗನೆ ವಾಸಿಯಾಗುತ್ತದೆ.
ಕೊಲ್ಕತ್ತಾ, ಬೆಂಗಳೂರು, ಚೆನ್ನೈ ಮುಂತಾದ ಪ್ರವಾಸಿ ಕೇಂದ್ರಗಳು ಎಳನೀರಿನ ಮುಖ್ಯ ಮಾರುಕಟ್ಟೆ. ಮೈಸೂರಿನ ಡಿಫೆನ್ಸ್ ಫುಡ್ ರೀಸರ್ಚ್ ಲ್ಯಾಬೋರೆಟರಿಯು ತೆಂಗು ಮಂಡಳಿಯ ಸಹಕಾರದಿಂದ ಸಂಸ್ಕರಣ ತಂತ್ರವನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಎಳನೀರನ್ನು ಪ್ಲಾಸ್ಟಿಕ್ ಸ್ಯಾಶೆಯಲ್ಲಿ ತುಂಬಲಿಕ್ಕೆ ಸಹಕಾರಿಯಾಗುತ್ತದೆ.

ಕೃಪೆ: ವಿಕಾಸಪೀಡಿಯಾ