ರೇಷ್ಮೆ ಕೃಷಿಗೆ ಸದ್ಯದಲ್ಲಿಯೇ ಉತ್ತಮ ಬೇಡಿಕೆ ಸೃಷ್ಟಿಯಾಗಲಿದ್ದು, ಬೈವೋಲ್ಟಿನ್ ರೇಷ್ಮೆಗೆ ಬಂಗಾರದ ಬೆಲೆ ದೊರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್-19 ಲಾಕ್ ಡೌನ್ ನಿಂದಾಗಿ ಹಿನ್ನಡೆ ಅನುಭವಿಸಿದ್ದ ರೈತರಿಗೆ ಸದ್ಯದಲ್ಲಿಯೇ ಭರ್ಜರಿ ಆದಾಯ ಸೃಷ್ಟಿಯಾಗಲಿದೆ. ಅದು ಹೇಗೆ ಎನ್ನುವ ಬಗ್ಗೆಯೂ ತಜ್ಞರು ಹೇಳಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ,  ರೇಷ್ಮೆ ಇಲಾಖೆ,  ತೋಟಗಾರಿಕೆ ಮಹಾವಿದ್ಯಾಲಯ  ಹಾಗೂ ರೇಷ್ಮೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ “ದ್ವಿತಳಿ ರೇಷ್ಮೆಹುಳು ಸಾಕಾಣಿಕೆಯಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳು’ ವಿಷಯ ಕುರಿತು ಕೋಲಾರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ತಜ್ಞರು ರೇಷ್ಮೆ ಮಾರುಕಟ್ಟೆ ಬಗ್ಗೆ ಖಚಿತವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉಚಿತವಾಗಿ ತೋಟ ಮಾಡಿ ನರೇಗಾ ಯೋಜನೆಯಡಿ ಹಣ ಗಳಿಸಿ

ಗಗನಕ್ಕೇರಲಿದೆ ದರ
ಹಿಂದಿನ 32 ವರ್ಷಗಳಿಗೆ ಹೋಲಿಸಿದರೆ ರೇಷ್ಮೆಗೂಡಿನ ಧಾರಣೆ ಕಳೆದ ಮೂರು ತಿಂಗಳಿನಲ್ಲಿ ಬಹಳ ಕಡಿಮೆ ಇದೆ. ರೇಷ್ಮೆ ಚಿನ್ನ ಇದ್ದ ಹಾಗೆ. ರೇಷ್ಮೆ ಬೆಳೆಯುವುದರಲ್ಲಿ ಚೀನಾ ದೇಶದ ನಂತರದ ಸ್ಥಾನದಲ್ಲಿ ಭಾರತ ಇದೆ.

ತಯಾರಿಸಿದ ರೇಷ್ಮೆಯನ್ನು ನಮ್ಮ ದೇಶದಲ್ಲಿಯೇ ಹೆಚ್ಚಾಗಿ ಉಪಯೋಗಿಸುತ್ತಿದ್ದು, ಹೆಚ್ಚುವರಿಯಾಗಿ ಬೇಕಾಗುವ ರೇಷ್ಮೆಯನ್ನು ಚೀನಾದಿಂದಲೂ ಸಹ ಆಮದು ಮಾಡಿಕೊಳ್ಳುತ್ತೇವೆ.  ಇತರೆ ದೇಶಗಳು ಸಹ ಚೀನಾದಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತವೆ.

ಇದನ್ನೂ ಓದಿ: ಮಾವು ಬೆಳೆಯಲ್ಲಿ ಇಸ್ರೇಲ್ ತಂತ್ರಜ್ಞಾನ; ಭರ್ಜರಿ ಆದಾಯ

ಆದರೆ ಚೀನಾದ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಈಗ ನಿರ್ಬಂಧವಿರುವುದರಿಂದ ರೇಷ್ಮೆ ಕೃಷಿಯಲ್ಲಿ ಎರಡನೇ ಸ್ಥಾನದಲ್ಲಿರುವ ನಮ್ಮ ದೇಶದ ಕಡೆಗೆ ಎಲ್ಲ ದೇಶಗಳ ದೃಷ್ಟಿ ಬೀಳಲಿದೆ.

ಅಲ್ಲದೆ, ಬೇರೆ ದೇಶಕ್ಕೆ ರಫ್ತು ಮಾಡುವ ಅವಕಾಶವೂ ನಮ್ಮ ದೇಶಕ್ಕೇ ಹೆಚ್ಚಿದೆ. ಹಾಗಾಗಿ ಡಿಸೆಂಬರ್-ಜನವರಿ, 2021ರ ವೇಳೆಗೆ ರೇಷ್ಮೆಗೆ ತುಂಬಾ ಬೇಡಿಕೆ ಬರಲಿದೆ.

ಆಗ ರೇಷ್ಮೆ ಬೆಲೆ ಗಗನಕ್ಕೆ ಏರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ರೈತಬಾಂಧವರು ಹಿಪ್ಪುನೇರಳೆ ತೋಟವನ್ನು ಕಿತ್ತುಹಾಕದೇ ರೇಷ್ಮೆ ಕೃಷಿಯನ್ನು ಮುಂದುವರಿಯುವುದು ಉತ್ತಮ.

ಜತೆಗೆ ರೇಷ್ಮೆಗೆ ಬೇಡಿಕೆ ಬರುವವರೆಗೆ ಹಿಪ್ಪುನೇರಳೆ ಸೊಪ್ಪನ್ನು ಪರ್ಯಾಯ ಜೀವನೋಪಾಯ ಮಾರ್ಗವಾಗಿ ಕುರಿ, ಮೇಕೆ ಸಾಕಾಣಿಕೆಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಅಲ್ಲದೆ, ಸರ್ಕಾರವು ರೇಷ್ಮೆ ಖರೀದಿ ಮಾಡಲು ರೇಷ್ಮೆ ಇಲಾಖೆಗೆ ಸೂಚಿಸಿದೆ. ನರೇಗಾ ಯೋಜನೆಯಡಿ ರೇಷ್ಮೆ ಕೃಷಿ ರೈತರಿಗೆ ಸಹಾಯಧನ ಸಹ ನೀಡಲಾಗಿದೆ.

ಆದ್ದರಿಂದ ರೇಷ್ಮೆ ಕೃಷಿಕರು ಧಾರಣೆ ಕುಸಿತದಿಂದ ಕಂಗಾಲಾಗುವ ಅಗತ್ಯ ಇಲ್ಲ ಎನ್ನುವುದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಎಂ.ಕೆ. ಪ್ರಭಾಕರ್ ಅವರ ಸಲಹೆ.

ಮಡಿವಾಳ ರೇಷ್ಮೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ. ಜೆ.ಬಿ. ನರೇಂದ್ರ ಕುಮಾರ್, ರೇಷ್ಮೆ ಕೃಷಿ ವಿಜ್ಞಾನಿ ಡಾ. ಶಶಿಧರ್ ಕೆ.ಆರ್, ಮಣ್ಣು ವಿಜ್ಞಾನದ ವಿಜ್ಞಾನಿ ಡಾ. ಅನಿಲಕುಮಾರ್. ಡಾ. ಟಿ.ಬಿ. ಬಸವರಾಜು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಅಂಬಿಕಾ ಡಿ.ಎಸ್, ಡಾ. ಜ್ಯೋತಿ ಕಟ್ಟೆಗೌಡರ್ ಈ ಕಾರ್ಯಾಗಾರದಲ್ಲಿದ್ದರು.