ಮುಂಗಾರು ಮಳೆ ಇನ್ನೇನು ಪ್ರಾರಂಭವಾಗಲಿದ್ದು, ಪ್ರತಿ ವರ್ಷದಂತೆ ಕೃಷಿ ಚಟುವಟಿಕೆ ಆರಂಭವಾಗಲಿದೆ. ಆದರೆ, ಬಿತ್ತನೆ ಬಳಿಕ ಬೆಳೆಗಳಿಗೆ ಅನೇಕ ರೋಗ, ಕೀಟ ಬಾಧೆಗಳ ಸಮಸ್ಯೆ ಎದುರಿಸುವುದು ಸಾಮಾನ್ಯವಾಗಿದೆ.

ಅಂಥ ಸಮಸ್ಯೆಗಳಿಗೆ ಪರಿಹಾರವಾಗಿ ಬಿತ್ತನೆ ಹಂತದಲ್ಲಿಯೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್ ಅವರು ಸಲಹೆಗಳನ್ನು ನೀಡಿದ್ದಾರೆ. ಭತ್ತ ಬಿತ್ತನೆಗು ಮೊದಲು ಕೈಗೊಳ್ಳಬೇಕಾದ ವೈಜ್ಞಾನಿಕ ಕ್ರಮಗಳ ಬಗ್ಗೆ ತಜ್ಞರು ಹೇಳಿರುವ ಮಾಹಿತಿ ಇಲ್ಲಿದೆ.

ಭತ್ತ:
ರೋಗ ರಹಿತ ಬಿತ್ತನೆ ಬೀಜಗಳನ್ನು ಮಾತ್ರ ನಾಟಿಗೆ ಉಪಯೋಗಿಸಬೇಕು. ಹೆಚ್ಚಿನ ಪ್ರಮಾಣದ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ ಉಪಯೋಗಿಸಬೇಕು. ಪ್ರತೀ ಕಿ.ಗ್ರಾಂ ಬಿತ್ತನೆ ಬೀಜಕ್ಕೆ ಕಾರ್ಬೆಂಡೆಜಿಮ್ ಪ್ಲಸ್ ಮ್ಯಾಂಕೋಜೆಬ್ ಅಥವಾ ಟ್ರೈಸೈಕ್ಲೋಜೋಲ್ (2 ಗ್ರಾಂ) ಎಂಬ ಶಿಲೀಂದ್ರನಾಶಕದಿಂದ ಕಡ್ಡ್ದಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆಗೆ ಉಪಯೋಗಿಸಬೇಕು.

ಬೀಜೋಪಚಾರ ವಿಧಾನ:
ಪ್ರತಿ ಎಕರೆಗೆ ಶಿಫಾರಸ್ಸು ಮಾಡಿದ 25-30 ಕೆ.ಜಿ ಭತ್ತದ ಬೀಜವನ್ನು ತೆಗೆದುಕೊಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು. ಗಟ್ಟಿಯಾದ ಬೀಜಗಳನ್ನು 2-3 ಬಾರಿ ತಣ್ಣೀರಿನಲ್ಲಿ ತೊಳೆದು ಸುಮಾರು 8-12 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನಸಬೇಕು.

ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25-30 ಕೆ.ಜಿ ಬಿತ್ತನೆ ಬೀಜಕ್ಕೆ 50-60 ಗ್ರಾಂ ಕಾರ್ಬೆಂಡೆಜಿಮ್ + ಮ್ಯಾಂಕೋಜೆಬ್ ಅಥವಾ ಟ್ರೈಸೈಕ್ಲೋಜೋಲ್ ( 2 ಗ್ರಾಂ)  ಎಂಬ ಶಿಲೀಂದ್ರನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಒಂದು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮೊಳಕೆಯೊಡೆಯಲು ಇಟ್ಟು ನಂತರ ಸಸಿಮಡಿಗೆ ಉಪಯೋಗಿಸಬೇಕು.

ದೀರ್ಘಾವಧಿ ತಳಿಗಳ ನಾಟಿಯನ್ನು ಜುಲೈ ತಿಂಗಳ ಎರಡನೆ ವಾರದೊಳಗೆ ಕಡ್ಡಾಯವಾಗಿ ಮಾಡಬೇಕು. ದೀರ್ಘಾವಧಿ ತಳಿಗಳನ್ನು ತಡವಾಗಿ ನಾಟಿ ಮಾಡಿದರೆ ಬೆಂಕಿ ರೋಗದ ಭಾದೆ ತೀವ್ರವಾಗುತ್ತದೆ. ಸಸಿಯನ್ನು ನಾಟಿ ಮಾಡುವುದಕ್ಕಿಂತ ಮುಂಚಿತವಾಗಿ ಸಸಿ ಮಡಿಯ ಪೈರುಗಳ ತುದಿ ಭಾಗವನ್ನು ಕತ್ತರಿಸಿ ನಂತರ ನಾಟಿಗೆ ಉಪಯೋಗಿಸಬೇಕು. ಇದರಿಂದ ಕಾಂಡಕೊರೆಯುವ ಹುಳುವಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೊಡಬೇಕು. ಪ್ರತಿ ಎಕರೆಗೆ 65 ಕೆ.ಜಿ ಯೂರಿಯ, 150 ಕೆ.ಜಿ ಶಿಲಾರಂಜಕ ಮತ್ತು 60 ಕೆ.ಜಿ ಮ್ಯೂರೇಟ್ ಆಪ್ ಪೊಟ್ಯಾಷ್ ಮಾತ್ರ ಕೊಡಬೇಕು.  ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದ ಯೂರಿಯ ಕೊಡಬಾರದು. ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದ ಯೂರಿಯವನ್ನು ಕೊಟ್ಟರೆ ಬೆಂಕಿ ರೋಗ ಬರುವ ಸಂಭವ ಉಂಟು.

ಬೆಳೆಗಳ ಪುನಃಶ್ಚೇತನಕ್ಕಾಗಿ ರೈತರಿಗೆ ಸಹಾಯಧನ

ಶಿಫಾರಸ್ಸಿನ 1/3 ಭಾಗ ಯೂರಿಯ, ಪೂರ್ತಿ ಶಿಲಾರಂಜಕ ಮತ್ತು ಅರ್ಧ ಭಾಗ ಪೊಟ್ಯಾಷನ್ನು ನಾಟಿ ಸಮಯದಲ್ಲಿ ಭೂಮಿಗೆ ಸೇರಿಸಬೇಕು. ನಾಟಿ ಮಾಡಿದ 30 ದಿನಗಳ ಮತ್ತೊಮ್ಮೆ ಯೂರಿಯ ಹಾಗೂ ಪೊಟ್ಯಾಷ್ ಗೊಬ್ಬರವನ್ನು ಕೊಡಬೇಕು. ನಾಟಿಗೆ 21 ರಿಂದ 28 ದಿನಗಳ ಸಸಿಗಳನ್ನೆ ಉಪಯೋಗಿಸಬೇಕು.

ಹಣ್ಣು, ತರಕಾರಿ ನಷ್ಟಕ್ಕೆ ಪರಿಹಾರ

ಪ್ರತೀ ಮೂರು ಬೆಳೆಗೆ ಒಂದು ಸಾರಿಯಂತೆ ಎಕರೆಗೆ 8 ಕೆ.ಜಿ. ಸತುವಿನ ಸಲ್ಫೇಟನ್ನು 25 ಕೆ.ಜಿ ಮರಳಿನ ಜೊತೆಯಲ್ಲಿ ಮಿಶ್ರಣಮಾಡಿ ನಾಟಿ ಮಾಡುವ ಸಂದರ್ಭದಲ್ಲಿ ಮಣ್ಣಿಗೆ ಸೇರಿಸಬೇಕು. 2.0 ಕೆ.ಜಿ ಬೋರಾಕ್ಸ್‍ನ್ನು 5 ಕೆ.ಜಿ ಕೊಟ್ಟಿಗೆ ಗೊಬ್ಬರದ ಜೊತೆಯಲ್ಲಿ ಮಿಶ್ರಣಮಾಡಿ ನಾಟಿಗೆ ಮುನ್ನ, ಇತರೆ ರಸಗೊಬ್ಬರಗಳ ಜೊತೆ ಬೆರೆಸದಂತೆ ಪ್ರತ್ಯೇಕವಾಗಿ ಮಣ್ಣಿಗೆ ಸೇರಿಸಿ. ಇದರಿಂದ ಭತ್ತದಲ್ಲಿ ಜಳ್ಳಿನ ಪ್ರಮಾಣ ಕಡಿಮೆಯಾಗುತ್ತದೆ.