ಭಾರತದ ಬಗ್ಗೆ ಹೆಮ್ಮೆ ಪಡುವ ಪ್ರತಿಯೊಬ್ಬರು ಓದಲೇ ಬೇಕಾದ ಲೇಖನ ಇದು. ಕೃಷಿ ಪ್ರಧಾನವಾದ ಭಾರತದಲ್ಲಿ ನಾವು ಅನೇಕ ಕ್ಷೇತ್ರಗಳ ವಸ್ತು ಸಂಗ್ರಹಾಲಯಗಳನ್ನು ಕಾಣುತ್ತೇವೆ. ನಮ್ಮನ್ನೇ ಗುಲಾಮರಂತೆ ಆಳಿದ ಬ್ರಿಟೀಷರ ವಸ್ತುಗಳಿಗೂ ಒಂದು ಸಂಗ್ರಹಾಲಯವಿದೆ. ಭಾರತ ದೇಶವನ್ನೇ ಲೂಟಿ ಮಾಡಿದ ವಿದೇಶಿ ಅರಸರ ಕಾಲದ ವಸ್ತುಗಳನ್ನೂ ಸರ್ಕಾರವೇ ಸಂಗ್ರಹಿಸುತ್ತಿದೆ.

ದೇಶಕ್ಕೇ ಅನ್ನ ನೀಡಿದ ಕೃಷಿಗೆ ಒಂದೇ ಒಂದು ವಸ್ತು ಸಂಗ್ರಹಾಲಯ ಇಲ್ಲ ಎನ್ನುವ ಕೊರಗು ಇನ್ನು ದೂರವಾಗಲಿದೆ. ನಮ್ಮ ಕನ್ನಡ ನೆಲದ ಯುವಕನೊಬ್ಬ ದೇಶದ ಮೊದಲ ಕೃಷಿ ವಸ್ತುಸಂಗ್ರಹಾಲಯ ನಿರ್ಮಿಸಿದ್ದಲ್ಲದೆ, ತಮ್ಮ ಹೊಲವನ್ನೇ ಕೃಷಿ ವಿಜ್ಞಾನ ಕೇಂದ್ರದಂತೆ ರೂಪಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕೃಷಿ ಮಾಡಲು ಮಲೇಶಿಯಾ ಬಿಟ್ಟು ಬಂದ ದಂಪತಿ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ರೈತ ಸೈಯದ್ ಘನಿಖಾನ್ ಅವರ ಹೊಲಕ್ಕೆ ಹೋದರೆ ದೊಡ್ಡದೊಂದು ಕೃಷಿ ವಿಜ್ಞಾನವೇ ನಮ್ಮೆದುರು ತೆರೆದುಕೊಳ್ಳುತ್ತದೆ. ಭಾರತೀಯ ಕೃಷಿ ಸಂಸ್ಕೃತಿಯ ಬಹುದೊಡ್ಡ ಇತಿಹಾಸವೇ ಅಲ್ಲಿ ಗೂಡು ಕಟ್ಟಿದೆ.

ಒಂದಲ್ಲ, ಎರಡಲ್ಲ ಬರೋಬ್ಬರಿ 1300 ಭತ್ತದ ತಳಿಗಳು, ಅದರಲ್ಲಿ 230ಕ್ಕೂ ಹೆಚ್ಚು ಕರ್ನಾಟಕದ ತಳಿಗಳು. 120ಕ್ಕೂ ಹೆಚ್ಚು ಮಾವಿನ ತಳಿಗಳು, 120 ರಾಗಿ ತಳಿಗಳು, 50 ರಿಂದ 60 ತರಕಾರಿ ತಳಿಗಳು ಇವೆ. ಇವೆಲ್ಲವೂ ದೇಶೀಯ ಮೂಲ ತಳಿಗಳು. ಒಂದೇ ಒಂದು ಹೈಬ್ರೀಡ್ ಬೀಜ ತಳಿಗಳಲ್ಲ. ಹೀಗೆ ಅಪ್ಪಟ ಭಾರತೀಯ ಬೀಜ ತಳಿಯ ವಿಶ್ವವಿದ್ಯಾಲಯವನ್ನೇ ರೂಪಿಸಿಕೊಂಡಿದ್ದಾರೆ. ಎಲ್ಲವನ್ನೂ ಸಾವಯವ ಪದ್ಧತಿಯಲ್ಲಿಯೇ ಬೆಳೆಯುತ್ತಾರೆ.

ಸೈಯದ್ ಘನಿಖಾನ್ ಸಂಗ್ರಹಿಸಿರುವ ಇಷ್ಟೊಂದು ಬೀಜ ತಳಿಗಳನ್ನು ದೇಶದಲ್ಲಿ ಮತ್ತೆಲ್ಲಿಯೂ ನೋಡಲು ಸಾಧ್ಯವಿಲ್ಲ. ಅವರು ಬೀಜಗಳ ರಕ್ಷಣೆಗಾಗಿಯೇ ಒಂದು ಎಕರೆ ಜಮೀನು ಮೀಸಲಿಟ್ಟಿದ್ದಾರೆ. ವರ್ಷ 60ರಿಂದ 70 ಸಾವಿರ ರೂ. ಅದಕ್ಕಾಗಿಯೇ ಖರ್ಚು ಮಾಡುತ್ತಿದ್ದಾರೆ.

ಗಮನಿಸಿ: ಮತ್ತಷ್ಟು ಕೃಷಿಕರ  ಸಾಧನೆ ಓದಿ

ಪ್ರಾಚ್ಯವಸ್ತು ಸಂಗ್ರಹಾಲಯದ ನೌಕರಿ ಮಾಡಬೇಕು ಎಂಬ ಆಸೆ ಹೊತ್ತಿದ್ದ ಸೈಯದ್ ಘನಿಖಾನ್ ಅವರು ತಮ್ಮ ಹೊಲವನ್ನೇ ಬೀಜ ತಳಿಗಳ ವಸ್ತು ಸಂಗ್ರಹಾಲಯ ಮಾಡುವ ಮೂಲಕ ಭಾರತದ ಕೃಷಿ ಸಂಸ್ಕೃತಿಯ ಕುರುಹುಗಳನ್ನು ಜೀವಂತಾಗಿ ಇರಿಸಿದ್ದಾರೆ. ಇಂಥ ಮಾದರಿ ಕೃಷಿಕ ಕನ್ನಡಿಗ ಎನ್ನುವುದು ಮತ್ತೊಂದು ಹೆಮ್ಮೆ.

ಈಗ ಕೃಷಿ ತಳಿಗಳ ಜಗತ್ತಿನ ಮೊದಲ ವಸ್ತುಸಂಗ್ರಹಾಲಯ ಮಾಡಲು ಹೊರಟಿದ್ದಾರೆ. ಅದಕ್ಕೆ ನಬಾರ್ಡ್ ನೆರವು ಸಹ ಸಿಕ್ಕಿದೆಯಂತೆ. ಅದೊಂದು ಯಶಸ್ವಿಯಾದರೆ ಸೈಯದ್ ಘನಿಖಾನ್ ಅವರ ಹೊಲ ಪ್ರವಾಸಿ ಕೇಂದ್ರವಾಗಿ ಕೃಷಿ ತಳಿ ಸಂಶೋಧನೆಯ ಶ್ರೀಮಂತ ದಾಖಲೆಯಾಗಲಿದೆ. ಮಾರ್ಚ್ ತಿಂಗಳಲ್ಲಿ ಅದನ್ನು ಉದ್ಘಾಟನೆ ಮಾಡಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕೃಷಿ ಮಾಡಲು ಮಲೇಶಿಯಾ ಬಿಟ್ಟು ಬಂದ ದಂಪತಿ

ರಾಜರ ಕಾಲದ ತಳಿಗಳೂ ಉಂಟು
1996ರಿಂದ ಬೀಜ ಸಂಗ್ರಹದಲ್ಲಿ ತೊಡಗಿರುವ ಸೈಯದ್ ಅವರ ಬಳಿ ಈಗ ಮೈಸೂರು ಮಹಾರಾಜರು ಊಟಕ್ಕೆ ಬಳಸುತ್ತಿದ್ದ ರಾಜಮಡಿ, ರಾಜಭೋಗ ದಂಥ ವಿಶೇಷ ಭತ್ತದ ತಳಿಗಳು ಇವೆ. ಥೈಲ್ಯಾಂಡ್, ಶ್ರೀಲಂಕಾ, ಪಾಕಿಸ್ತಾನ್, ಭರ್ಮಾ ದೇಶದ ಭತ್ತದ ಸಾಂಪ್ರದಾಯಿಕ ತಳಿಗಳೂ ಇವರ ಬಳಿ ಸಂಗ್ರಹವಿದೆ.

ಅಧ್ಯಯನಕ್ಕೆ ಬಂದ ವಿದೇಶಿಗರೊಂದಿಗೆ ಘನಿಖಾನ್ (ಬಲಬದಿಯಲ್ಲಿ)

ಸೈಯದ್ ಅವರ ಪ್ರಕಾರ ಭಾರತದಲ್ಲಿ 18 ಸಾವಿರ ಭತ್ತದ ತಳಿಗಳು ಇವೆಯಂತೆ. ಅದರಲ್ಲಿ ಅರ್ಧದಷ್ಟು ತಳಿಗಳ ಬಗ್ಗೆ ಮಾತ್ರ ಅಧ್ಯಯನ ನಡೆದಿವೆ. ನಮ್ಮ ದೇಶೀಯ ತಳಿಗಳು ರೋಗ ನಿರೋಧಕ ಶಕ್ತಿಗಳನ್ನು ಹೊಂದಿವೆ. ಆದರೆ, ಈಗ ಎಲ್ಲರೂ ಸೋನಾಮುಸುರಿ ಎನ್ನುವ ಒಂದೇ ತಳಿಗೆ ಅಂಟಿಕೊಂಡಿದ್ದರಿಂದ ಇಲ್ಲದ ರೋಗಗಳನ್ನು ಎದುರಿಸುತ್ತಿದ್ದೇವೆ ಎನ್ನುತ್ತಾರೆ ಸೈಯದ್ ಘನಿಖಾನ್.

ಕೃಷಿಕನಾದ ಎಂ.ಎಸ್. ಧೋನಿ: ವಿಡಿಯೊ ಸಹಿತ ನೋಡಿ

ಉಚಿತವಾಗಿ ಕೊಡುತ್ತಾರೆ
ದೇಶೀಯ ಭತ್ತದ ತಳಿಗಳನ್ನು ಉಳಿಸುವುದಕ್ಕಾಗಿ ಸೈಯದ್ ಅವರು ದೇಶೀಯ ಭತ್ತದ ಬೀಜಗಳನ್ನು ಆಸಕ್ತರಿಗೆ ಉಚಿತವಾಗಿ ನೀಡುತ್ತಾರೆ. ಮಾವು ಇತರ ತಳಿಗಳ ಬೀಜಕ್ಕೆ ಕನಿಷ್ಠ ದರ ನಿಗದಿ ಮಾಡಿದ್ದಾರೆ. ಇವರಿಂದ ಭಿತ್ತನೆ ಬೀಜ ಪಡೆದವರು ತಮ್ಮ ಹೊಲದಲ್ಲಿ ಭಿತ್ತನೆ ಮಾಡಿ ಬೀಜ ಸಂಗ್ರಹಿಸಿಕೊಳ್ಳಬೇಕು.

ಮೋಸಂಬಿ ರುಚಿಯ ಮಾವು
ಸೈಯ್ಯದ್ ಅವರ ಬಳಿ ಇರುವ ಮಾವುಗಳ ಸಹ ವಿಶೇಷವಾಗಿವೆ. ಸೇಬು ಆಕಾರದ ಮಾವು, ಕಿತ್ತಳೆ ರುಚಿಯ ಮಾವು, ಸಪ್ಪೆ ಮಾವು ಸಹ ಅವರ ತೋಟದಲ್ಲಿವೆ. ಸುಮಾರು 15 ತಳಿಯ ಕಿರುಧಾನ್ಯಗಳ ಸಂಗ್ರಹವೂ ಅವರ ಬಳಿ ಇವೆ. ಸೈಯ್ಯದ್ ಸೈಯ್ಯದ್ ಘನಿಖಾನ್ ಅವರ ಸಂಪರ್ಕಕ್ಕೆ: 9901713351.