ಪಾಲಿ ಹೌಸ್ ಗಳಿಗೆ ಹಾಕಿದ್ದ ಪಾಲಿಥೀನ್ ಶೀಟ್ ಗಳು ಹಾಳಾಗಿದ್ದರೆ, ಅದನ್ನು ಬದಲಾಯಿಸಲು ಮತ್ತು ಪ್ಲಾಂಟಿಂಗ್ ವ್ಯವಸ್ಥೆ ಬದಲಾಯಿಸಲು ಅರ್ಹ ರೈತರಿಗೆ ಬರೋಬ್ಬರಿ ಆರು ಲಕ್ಷ ರೂ.ವರೆಗೆ ಸಹಾಯ ಧನ (ಸಬ್ಸಿಡಿ) ನೀಡುವ ಯೋಜನೆಯೊಂದನ್ನು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ರೂಪಿಸಲಾಗಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್ ಕೆವಿವೈ) ಅಡಿಯಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಎಲ್ಲೆಡೆ ರೈತರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಮಾದರಿಯಲ್ಲಿಯೇ ಈ ಯೋಜನೆ ಜಾರಿಗೆ ತರಲಾಗುತ್ತಿದೆ.

ರೈತರು 10 ಗುಂಟೆಯ ಪಾಲಿಹೌಸ್ ನಿಂದ ಗರಿಷ್ಠ ಒಂದು ಹೆಕ್ಟೇರ್ ವರೆಗಿನ ಪಾಲಿಹೌಸ್ ಗಳ ವರೆಗೆ ಸಹಾಯಧನ ಪಡೆಯಬಹುದು. ಕೇಂದ್ರ ಸರಕಾರದ ಸಹಯೋಗದಲ್ಲಿ ನಡೆಯುವ ಈ ಯೋಜನೆಯಿಂದ ಸಣ್ಣ ಮತ್ತು ದೊಡ್ಡ ರೈತರಿಗೆ ಭಾರೀ ಪ್ರಮಾಣದಲ್ಲಿ ಅನುಕೂಲ ಆಗಲಿದೆ.

ಇದನ್ನೂ ಓದಿ: 1.5 ಎಕರೆಯಲ್ಲಿ ದಿನಕ್ಕೆ 25 ಸಾವಿರ ರೂ. ಗಳಿಸುವ ರೈತ

ಹೇಗಿದೆ ಯೋಜನೆ? ಎಷ್ಟು ಸಬ್ಸಿಡಿ?

ಪ್ರಸಕ್ತ ಸಾಲಿನ ಆರ್ ಕೆವಿವೈ ಯೋಜನೆಯ ಸಂರಕ್ಷಿತ ಬೇಸಾಯದಡಿ ಮೂರು ವರ್ಷ ಹಳೆಯದಾಗಿರುವ ಹಸಿರುಮನೆ ಘಟಕಗಳಲ್ಲಿ ಶಿಥಿಲಗೊಂಡಿರುವ ಪಾಲಿಥೀನ್ ಶೀಟ್‍ಗಳ ಬದಲಾವಣೆಗೆ ಗರಿಷ್ಟ ಶೇ. 50 ರ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: ಬೆಳೆಗಳ ಪುನಃಶ್ಚೇತನಕ್ಕಾಗಿ ರೈತರಿಗೆ ಸಹಾಯಧನ

ಅಂದರೆ 10 ಗುಂಟೆಯ ಪಾಲಿಹೌಸ್ ಗೆ 30 ಸಾವಿರ ರೂ. ನೀಡಲಾಗುತ್ತದೆ. ಗರಿಷ್ಠ ಒಂದು ಹೆಕ್ಟೇರ್ ವರೆಗಿನ ಪಾಲಿಹೌಸ್ ಗಳ ಶೀಟ್ ಬದಲಾಯಿಸಲು 3 ಲಕ್ಷ ರೂ.ವರೆಗೆ ಸಬ್ಸಿಡಿ ಹಣ ಕೊಡಲಾಗುತ್ತದೆ.

ಜತೆಗೆ ಪಾಲಿಹೌಸ್ ಗಳಲ್ಲಿರುವ ಹಳೆಯ ಹಾಗೂ ಅನುತ್ಪಾದಕ ಗಿಡಗಳ ಮರುನಾಟಿಗೆ 10 ಗುಂಟೆಯ ಪಾಲಿ ಹೌಸ್ ಗೆ 50 ಸಾವಿರ ರೂ. ಕೊಡಲಾಗುತ್ತದೆ. ಒಂದು ಹೆಕ್ಟೇರ್ ಪಾಲಿಹೌಸ್ ಇದ್ದರೆ 2.50 ಲಕ್ಷ ರೂ. ಹಾಗೂ ತರಕಾರಿ ಗಿಡಗಳ ಮರುನಾಟಿಗೆ 1.25 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: ಮೇಘಧೂತ್-ಹವಾಮಾನಾಧರಿತ ಕೃಷಿ ಮಾರ್ಗದರ್ಶಿ

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ರೈತರು ಸಮೀಪದ ತೋಟಗಾರಿಕೆ ಇಲಾಖೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಈ ಹಿಂದೆ ಪಾಲಿಹೌಸ್ ಪಡೆದ ದಾಖಲೆಗಳು, ಹಿಂದೆ ಪಡೆದ ಸಬ್ಸಿಡಿ ರಶೀದಿಗಳು ಸೇರಿದಂತೆ ಪಾಲಿಹೌಸ್ ವಿಸ್ತ್ರೀರ್ಣ, ಬೆಳೆಯುತ್ತಿರುವ ಬೆಳೆ, ಎಷ್ಟು ವರ್ಷದ ಹಿಂದೆ ಪಾಲಿಹೌಸ್ ಹಾಕಲಾಗಿದೆ ಎನ್ನುವ ಪೂರ್ಣ ವಿವರವುಳ್ಳ ಅರ್ಜಿಯನ್ನು ತೋಟಗಾರಿಕೆ ಇಲಾಖೆಗೆ ಸಲ್ಲಿಸಬೇಕು.

ಇದನ್ನೂ ಓದಿ: ಅಧಿಕ ಲಾಭ ಕೊಡುವ ಮುದ್ದಿನ ಮೊಲಗಳು

ಹಣ ಯಾವಾಗ ಸಿಗುತ್ತದೆ?

ಈ ಹಿಂದೆಯೂ ತೋಟಗಾರಿಕೆ ಇಲಾಖೆಯಿಂದ ಇದೇ ರೀತಿ ಸಹಾಯಧನಗಳನ್ನು ನೀಡಲಾಗುತ್ತಿತ್ತು. ಅದು ರಾಜ್ಯ ಸರ್ಕಾರದ ಯೋಜನೆಯಾಗಿತ್ತು. ಆರ್ ಕೆವಿವೈ ಅಡಿ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಸದ್ಯ ಇದು ಪ್ರಾಥಮಿಕ ಹಂತದಲ್ಲಿದೆ.

ಇದನ್ನೂ ಓದಿ: ಅಡಿಕೆ, ಶುಂಠಿ ಬೆಳೆಗೆ ಕೊಳೆ ರೋಗದಿಂದ ಮುಕ್ತಿ

ರೈತರಿಂದ ಮೊದಲು ಅರ್ಜಿಗಳನ್ನು ಆಹ್ವಾನಿಸಿ ಅದರ ಪ್ರಮಾಣದ ಮೇಲೆ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದ ತಕ್ಷಣ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿದೆ. ಸದ್ಯ ತೋಟಗಾರಿಕೆ ಇಲಾಖೆ ರೈತರಿಂದ ಅರ್ಜಿ ಸ್ವೀಕರಿಸುತ್ತಿದೆ. ಯೋಜನೆ ಅನುಷ್ಠಾನ ಹಂತದಲ್ಲಿ ಇದೇ ರೈತರನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಟಾರ್ಪಾಲಿನ (ತಾಡಪತ್ರಿ)ಗಾಗಿ ರೈತರಿಂದ ಅರ್ಜಿ ಆಹ್ವಾನ

ಈ ಕುರಿತ ಯಾವುದೇ ಮಾಹಿತಿಗೆ 0821-2430450 (ಮೈಸೂರು)  ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.  ಉಳಿದ ಜಿಲ್ಲೆಗಳ ರೈತರು ತಮ್ಮ ಸಮೀಪದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.