
ಬೆನ್ನು ನೋವು ನಿವಾರಣೆಗೆ ಪರಿವ್ರತ್ತ ಜಾನು ಶೀರ್ಷಾಸನ

ಪರಿವ್ರತ್ತ ಜಾನು ಶೀರ್ಷಾಸನ ನಮ್ಮ ದೇಹವನ್ನು ತಿರುಗಿಸಿ ಹಣೆಯಭಾಗವನ್ನು ಮಂಡಿಗೆ ತಾಗಿಸುವಂತಹ ಯೋಗದ ಭಂಗಿ. ಪರಿವ್ರತ್ತ ಜಾನು ಶೀರ್ಷಾಸನ ಸಂಸ್ಕೃತ ಶಬ್ದದಿಂದ ಬಂದಿದೆ. ಪರೀವ್ರತ್ತ ಎಂದರೆ ” ತಿರುಗಿದ” ಜಾನು ಎಂದರೆ ” ಮಂಡಿ” ಶಿರ್ಷ ಎಂದರೆ “ತಲೆ” ಎಂಬರ್ಥ ನೀಡುತ್ತದೆ.
ಮಾಡುವ ವಿಧಾನ:
1) ಮಂಡಿ ಮುಂದೆ ಚಾಚಿ ಬೆನ್ನು ಮತ್ತು ಕತ್ತು ನೇರವಾಗಿರಿಸಿ ದಂಡಾಸನದಲ್ಲಿ ಕುಳಿತುಕೊಳ್ಳಿ.
2) ಎಡ ಮಂಡಿಯನ್ನು ಮಡಚಿ ಎಡ ಪಾದ ಬಲ ತೊಡೆಯ ಪಕ್ಕ ತೆಗೆದುಕೊಂಡು ಬನ್ನಿ.
3) ಬಲಹಸ್ತದಿಂದ ಬಲಪಾದದ ಒಳಭಾಗವನ್ನು ಹಿಡಿದುಕೊಳ್ಳಿ. ಬಲ ಮೊಣಕೈ ಮಡಚಿ ನೆಲದ ಮೇಲೆ ಇಡಿ.
4) ಈಗ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎಡಗೈಯನ್ನು ತಲೆಯ ನೇರ ಮೇಲಕ್ಕೆತ್ತಿ.
5) ಉಸಿರನ್ನು ಹೊರ ಹಾಕುತ್ತಾ (ರೇಚಕ) ನಿಧಾನವಾಗಿ ನಿಮ್ಮ ಬಲಬದಿಗೆ ಬಾಗಿ. ಎಡಹಸ್ತದಿಂದ ಬಳಪಾದದ ಹೊರಭಾಗವನ್ನು ಹಿಡಿದುಕೊಳ್ಳುತ್ತಾ ನಿಮ್ಮ ಎದೆಯ ಭಾಗ ಮೇಲಕ್ಕೆ ತಿರುಗಿಸಿ. ಮೇಲಕ್ಕೆ ನೋಡುತ್ತಾ ಐದು ಬಾರಿ ಆಳವಾಗಿ ಉಸಿರಾಟ ಮಾಡಿ.
6) ನಂತರ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎಡಹಸ್ತ ಬಿಡಿಸಿ ನಿಧಾನವಾಗಿ ಮೇಲಕ್ಕೆ ಬಂದು ಮತ್ತೆ ಉಸಿರನ್ನು ಹೊರ ಹಾಕುತ್ತಾ ಕೈಯನ್ನು ಕೆಳಗೆ ಇಳಿಸಿ. ಹಾಗೆಯೇ ಕಾಲು ನೇರಮಾಡಿ ಇನ್ನೊಂದು ಬದಿಗೆ ಪುನರಾವರ್ತಿಸಿ.
ಓದಿ: ಬಿಪಿ ನಿಯಂತ್ರಿಸಲು ಉಪಯುಕ್ತ ಜಾನು ಶೀರ್ಷಾಸನ
ಓದಿ: ಬೆನ್ನು ಬಲಗೊಳ್ಳಲು ಪೂರ್ವೋತ್ತಾನಾಸನ
ಉಪಯೋಗಗಳು:
1) ಬೆನ್ನೆಲುಬು ಮತ್ತು ಭುಜಗಳ ಹಿಗ್ಗುವಿಕೆಗೆ ನೆರವಾಗುತ್ತದೆ.
2) ಬೆನ್ನು ನೋವಿನಿಂದ ನರಳುವವರಿಗೆ ಆರಾಮ ನೀಡುತ್ತದೆ.
3) ಆಯಾಸ ನಿವಾರಣೆಗೆ ಸಹಾಯಕ.
4) ಎದೆಯಭಾಗ ಮತ್ತು ಪಕ್ಕೆಲುಬು ಹಿಗ್ಗಲ್ಪಡುತ್ತದೆ.
5) ಉಸಿರಾಟದ ಕ್ರಿಯೆ ದೀರ್ಘವಾಗುತ್ತದೆ.
ಓದಿ: ಮಧುಮೇಹ ನಿಯಂತ್ರಣಕ್ಕೆ ಉಪಯುಕ್ತ ಪಶ್ಚಿಮೋತ್ತಾಸನ
ಸೂಚನೆಗಳು:
ಸೊಂಟ ಮತ್ತು ಜಠರಗಳ ಸಮಸ್ಯೆ, ಕೆಳಬೆನ್ನಿನ ನೋವು, ಮೊಣಕಾಲು, ಸೊಂಟ ಅಥವಾ ಪಕ್ಕೆಲುಬು ಗಾಯ ಮತ್ತು ಅಸ್ತಮಾ ಸಮಸ್ಯೆ ಇದ್ದವರು ಈ ಆಸನ ಮಾಡಬಾರದು.