ಕೊರೊನಾ ಲಾಕ್ ಡೌನ್ ನಿಂದ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆತ್ಮ ನಿರ್ಭರ ಎನ್ನುವ ಘೋಷಣೆಯೊಂದಿಗೆ ಅನೇಕ ರೀತಿಯಲ್ಲಿ ನೆರವು ನೀಡುತ್ತಿದೆ. ಒಂದೊಂದು ಯೋಜನೆಗೂ ಒಂದೊಂದು ಹೆಸರು ನೀಡಿ ಯೋಜನೆ ಜಾರಿ ಮಾಡಲಾಗುತ್ತಿದೆ.

ಅದೇ ರೀತಿ ಇಲ್ಲೊಂದು ಯೋಜನೆ ದೇಶದಲ್ಲಿ ಭಾರೀ ವೈರಲ್ ಆಗಿದೆ. ಲಕ್ಷಾಂತರ ರೈತರು ಈ ಯೋಜನೆ ಬಗ್ಗೆ ತಿಳಿದುಕೊಳ್ಳಲು ಹಾತೊರೆಯುತ್ತಿದ್ದಾರೆ. ಅದುವೇ “ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ’. ಅಸಲಿಗೆ ಈ ಯೋಜನೆ ಏನು?, ಯಾಕಿಷ್ಟು ವೈರಲ್ ಆಗಿದೆ ಎನ್ನುವ ಪೂರ್ಣ ವಿವರ ಇಲ್ಲಿದೆ.

ಕೇಂದ್ರ ಸರಕಾರ ರೈತರಿಗೆ ಅರ್ಧ ಬೆಲೆಗೆ ಟ್ರ್ಯಾಕ್ಟರ್ ಕೊಡುತ್ತಿದೆ. ಅಂದರೆ, ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ ಕೇಂದ್ರ ಸರಕಾರ ಐದು ಲಕ್ಷ ರೂ.ವರೆಗೆ ನೆರವು ನೀಡಲಿದೆ. ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ರೈತರಿಗೆ ಈ ಸೌಲಭ್ಯ ನೀಡಲಾಗುತ್ತಿದೆ. ಆಸಕ್ತ ರೈತರು ಕೂಡಲೇ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆಯಬಹುದು ಎನ್ನುವ ಸುದ್ದಿ ವೈರಲ್ ಆಗಿದೆ.

ಟ್ರ್ಯಾಕ್ಟರ್ ಖರೀದಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ಸರ್ಕಾರ ಕೊಡುತ್ತದೆ ಎಂದರೆ ನಂಬುವುದಾದರೂ ಹೇಗೆ? ಇದೇ ವಿಚಾರದೊಂದಿಗೆ ದಿ ಸ್ಟೇಟ್ ನೆಟ್ವರ್ಕ್ ವೈರಲ್ ಚೆಕ್ ತಂಡ ಈ ಯೋಜನೆಯ ಕುರಿತು ತನಿಖೆ ನಡೆಸಿದೆ.

ತನಿಖೆಯಲ್ಲಿ ಕಂಡಿದ್ದು:

ಇಂಥದ್ದೊಂದು ಯೋಜನೆ ಬಗ್ಗೆ ದಕ್ಷಿಣ ಭಾರತದಲ್ಲಿ ಹೆಚ್ಚು ವೈರಲ್ ಆಗಿದೆ. ಅಲ್ಲಿನ ಯುಟ್ಯೂಬ್ ಚಾನೆಲ್ ಗಳು ರೈತರನ್ನು ಸೆಳೆಯುವ ಸಲುವಾಗಿ ಈ ರೀತಿಯ ಸುದ್ದಿ ಹಬ್ಬಿಸಿವೆ. ಈ ಸುದ್ದಿ ಯುಟ್ಯೂಬ್ ಗಳಲ್ಲಿ ಸಿಕ್ಕಾಪಟ್ಟೆ ಜನ ನೋಡಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ಗುಡ್ಡ ಕುಸಿತ ಎಂದು ಇಂಡೋನೇಶಿಯಾ ವಿಡಿಯೊ ವೈರಲ್

ಆದರೆ, ಕೇಂದ್ರ ಸರಕಾರ ಇಂಥ ಯಾವುದೇ ಯೋಜನೆಯನ್ನು ಜಾರಿ ಮಾಡಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ. ಸಣ್ಣ ಪ್ರಮಾಣದ ಕೃಷಿ ಯಂತ್ರ ಖರೀದಿಸಲು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕೆಲ ಸಬ್ಸಿಡಿಗಳಿವೆ. ಆದರೆ, ಅರ್ಧ ಬೆಲೆಗೆ ಟ್ರ್ಯಾಕ್ಟರ್ ಕೊಡುವ ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ ದೇಶದಲ್ಲಿ ಇಲ್ಲ.

ಇದನ್ನೂ ಓದಿ: ನೌಕರರ ನಿವೃತ್ತಿ ವಯಸ್ಸು 50 ವರ್ಷಕ್ಕೆ ಇಳಿಕೆ ಸುಳ್ಳು: ಕೇಂದ್ರ ಸರ್ಕಾರ ಹೇಳಿದ್ದೇನು?

ಕೇಂದ್ರ ಸರಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯರೊ ನೀಡಿರುವ ಸ್ಪಷ್ಟನೆ

ಇದನ್ನೂ ಓದಿ: ವೈರಲ್: ಉಚಿತವಾಗಿ ₹ 5,000 ಕೊಡುವ ವೆಬ್ ಸೈಟ್ ನ ನಿಜ ಬಣ್ಣ ಬಯಲು

ಕೇಂದ್ರ ಸರ್ಕಾರದ ಪ್ರೆಸ್ ಇನ್ಫಾರ್ಮೆಷನ್ ಬ್ಯೂರೊ ಇದನ್ನು ಖಚಿತಪಡಿಸಿದೆ. ಕೇಂದ್ರ ಸರ್ಕಾರದಿಂದ ಇಂಥ ಯಾವುದೇ ಯೋಜನೆಗಳು ಚಾಲ್ತಿಯಲ್ಲಿ ಇಲ್ಲ. ಇದು ಸುಳ್ಳು ಸುದ್ದಿ ಎಂದು ಹೇಳಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಎಲ್ಲಿಯೂ ಇಂಥ ಯೋಜನೆ ಕುರಿತು ಹೇಳಿರುವ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ: ರಿಷಿ ಕಪೂರ್ ಸಾವಿನಲ್ಲೂ ಹರಿದಾಡಿತು ಸುಳ್ಳು ಸುದ್ದಿ; ಅದು ಕೊನೆಯ ವಿಡಿಯೊ ಅಲ್ಲ

ತೀರ್ಮಾನ:

ಕೃಷಿ ಉಪಕರಣ ಖರೀದಿಗೆ ಸಬ್ಸಿಡಿ ಯೋಜನೆಗಳು ಇವೆ. ಆದರೆ, ಟ್ರ್ಯಾಕ್ಟರ್ ಖರೀದಿಗೆ ಪ್ರಧಾನ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಎನ್ನುವ ಯಾವುದೇ ಯೋಜನೆ ಇಲ್ಲ.